ತಮ್ಮದೇ ಆದ ವಿಶಿಷ್ಟ ರೀತಿಯ ಬರಹಗಳಿಂದ ಹಾಗೂ ವಿದ್ವತ್ ವಲಯದಲ್ಲಿ ನಾನಾ ರೀತಿಯಾಗಿ ಸ್ಥಾನ ನಿರ್ವಹಿಸಿ ಕನ್ನಡ ಸಾಹಿತ್ಯ ಲೋಕದ ಸಿರಿವಂತಿಕೆಗೆ ಕಾರಣರಾದ ಸಾಹಿತಿಗಳಲ್ಲಿ ಡಾಕ್ಟರ್ ಸೋಮಶೇಖರ್ ಇಮ್ರಾಪುರ ಇವರೂ ಒಬ್ಬರು.
ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮನಭಾವಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳಿಂದ ಅಲಂಕೃತರಾದ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಗುರಪ್ಪ ಮತ್ತು ಸಂಗವ್ವ ದಂಪತಿಗಳ ಸುಪುತ್ರರಾಗಿ 14 ಫೆಬ್ರವರಿ 1940ರಲ್ಲಿ ಜನಿಸಿದರು. ಇವರ ಪ್ರಾರಂಭದ ಶಿಕ್ಷಣ ಅಬ್ಬಿಗೇರಿಯಲ್ಲಿ ಮತ್ತು ಮುಂದಿನ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಸುವರ್ಣ ಪದಕದೊಂದಿಗೆ ಎಂ.ಎ. ಪದವಿ ಪಡೆದವರು. ಮುಂದೆ ‘ಜನಪದ ಒಗಟುಗಳು’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪದವಿಯನ್ನು ಪಡೆದರು.
ತಾವು ಬಿ.ಎ. ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದ ಜೆ.ಎಸ್.ಎಸ್. ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಕೆಲಕಾಲ ಸೇವೆ ಸಲ್ಲಿಸುವ ಭಾಗ್ಯ ಸೋಮಶೇಖರರಿಗೆ ದೊರೆಯಿತು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಸಂಶೋಧಕರಾಗಿ ಅಧ್ಯಾಪಕರಾಗಿ ಜನಪದ ಸಾಹಿತ್ಯದ ರೀಡರ್ ಆಗಿ ಕನ್ನಡ ಅಧ್ಯಯನ ಪೀಠದ ಜಾನಪದ ಪ್ರಾಧ್ಯಾಪಕರಾಗಿ ಹೀಗೆ ವಿವಿಧ ರೀತಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ತಮ್ಮ ಪ್ರಾಮಾಣಿಕ ಹೋರಾಟದಿಂದ ವಿಶ್ವವಿದ್ಯಾಲಯದ ಜಾನಪದ ವಿಭಾಗವನ್ನು ಕಟ್ಟಿ ಬೆಳೆಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾ ಪರಿಷತ್ತಿನ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿಯೂ ಸೇವೆ ಸಲ್ಲಿಸಿದವರು ಸೋಮಶೇಖರ ಇಮ್ರಾಪುರ. ಒಬ್ಬ ಸಂಶೋಧಕ, ಕವಿ, ಪ್ರಾಧ್ಯಾಪಕ, ಅಂಕಣಕಾರ, ಮತ್ತು ಜಾನಪದ ತಜ್ಞರಾಗಿ ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರು ವಿಮರ್ಶೆ, ಸಾಹಿತ್ಯ ಸಂಗ್ರಹ, ವಿಚಾರ ಸಂಕಿರಣ, ಕಲಾ ಪ್ರದರ್ಶನ, ಕನ್ನಡ ಕಾವ್ಯ, ಜಾನಪದ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ 38 ಕೃತಿಗಳನ್ನು ರಚಿಸಿದ್ದಾರೆ. ಆಳವಾದ ಜಾನಪದ ಅಧ್ಯಯನವನ್ನು ಮಾಡಿ ‘ಸಾವಿರ ಒಗಟುಗಳು’, ‘ಜನಪದ ಮಹಾಭಾರತ’, ‘ಜನಪದ ವಿಜ್ಞಾನ’, ‘ಜನಪದ ವ್ಯಾಸಂಗ’, ಚಿತ್ರಕೇತು’, ‘ಹನುಮಂತನ ಲಿಂಗಧಾರಣ’, ‘ಮಹಿಳಾ ಜಾನಪದ’, ’ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ’ ಇವು ಇವರು ಸಂಪಾದಿಸಿದ ಕೃತಿಗಳು. ಹೀಗೆ ವೈವಿಧ್ಯಮಯ ಕೃತಿಗಳನ್ನು ರಚನೆ ಮಾಡಿದ ವಿದ್ವಾಂಸ ಇವರು. ಹಾಗೆಯೇ ಇವರೊಬ್ಬ ಸಮರ್ಥ ಕವಿಯಾಗಿ ‘ಬಿಸಿಲ ಹೂ’, ‘ಬೆಳದಿಂಗಳು’, ‘ಬೆಂಕಿ ಬಿರುಗಾಳಿ’, ‘ಜಲ ತರಂಗ’, ‘ಹುತ್ತಗಳು’, ‘ಬೇವು ಬೆಲ್ಲ’ ಮಾತ್ರವಲ್ಲದೆ ‘ಗಂಡ ಹೆಂಡಿರ ಜಗಳ ಗಂಧ ಹಿಡಿದ್ಹಾಂಗ’ ಇತ್ಯಾದಿ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವು ಇವರ ಸೃಜನಶೀಲ ಸಾಹಿತ್ಯಕ್ಕೆ ಉದಾಹರಣೆಗಳು. ‘ಕನ್ನಡ ಕಾವ್ಯ ಮತ್ತು ಪರಿಸರ’, ‘ಕುವೆಂಪು – ಬೇಂದ್ರೆ’ ಇವರ ರಚನೆಯ ತೌಲನಿಕ ವಿಮರ್ಶೆ.
ಯಾವುದೇ ಕೆಲಸವನ್ನು ತತ್ಪರತೆಯಿಂದ ಮಾಡುವ ಸೋಮಶೇಖರ ಇಮ್ರಾಪುರ ಇವರು ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ, ಕಮ್ಮಟ, ಕಲಾಮೇಳ ಇವುಗಳಲ್ಲಿ ಉಪನ್ಯಾಸಕರಾಗಿ, ಸಂಚಾಲಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಗೋಷ್ಠಿಯ ಅಧ್ಯಕ್ಷರಾಗಿ, ಮಾತ್ರವಲ್ಲದೆ ಮುಖ್ಯ ಅತಿಥಿಗಳಾಗಿಯೂ ಪಾಲ್ಗೊಂಡ ಮೇಧಾವಿ. ಕರ್ನಾಟಕ ವಿಶ್ವವಿದ್ಯಾಲಯದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಹಾಗೂ ಜಾನಪದ ಸಾಹಿತ್ಯ ಸ್ನಾತಕ ಹಾಗೂ ಸ್ನಾತಕೋತ್ತರ ಕನ್ನಡ ಅಭ್ಯಾಸ ಮಂಡಳಿ ಇವುಗಳ ಅಧ್ಯಕ್ಷರಾಗಿ, ಜನಪದ ವೇದಿಕೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾಗಿ ಮಹತ್ತರ ಕಾರ್ಯನಿರ್ವಹಿಸಿದವರು.
ಕರ್ನಾಟಕ ವಿಶ್ವವಿದ್ಯಾಲಯದ ‘ಕರ್ನಾಟಕ ಭಾರತಿ’, ‘ವಿದ್ಯಾರ್ಥಿ ಭಾರತಿ’, ‘ದಲಿತಪತ್ರಿಕೆ’ ಇವುಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಶೈಕ್ಷಣಿಕ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಂಘಟನೆಗಳ ಮೂಲಕ ಕೆಲಸ ಮಾಡಿದ ಒಬ್ಬ ಕ್ರಿಯಾಶೀಲ ಕಾರ್ಯಕರ್ತ. ಎಲ್ಲಾ ರೀತಿಯ ಅಧಿಕಾರವನ್ನೂ ನಿರ್ವಹಣೆ ಮಾಡುವ ಸಾಮರ್ಥ್ಯವಿರುವ ಇವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾಗಿ ಅನೇಕ ಸಂಘ-ಸಂಸ್ಥೆಗಳ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ.
ಶ್ರೀಯುತರು 28ನೆಯ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆಯ ಪೀಠವನ್ನು ಅಲಂಕರಿಸಿ ಸನ್ಮಾನಕ್ಕೆ ಪಾತ್ರರಾದುದು ಜಾನಪದ ಕ್ಷೇತ್ರದಲ್ಲಿ ಇವರು ಗೈದ ಸಾಧನೆಗೆ ಸಂದ ಗೌರವ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಇವರಿಗೆ ‘ಜಾನಪದ ತಜ್ಞ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡಮಾಡುವ 2022ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಡಾ. ಸೋಮಶೇಖರ ಇಮ್ರಾಪುರ ಭಾಜನರಾಗಿದ್ದಾರೆ. ಇವರ ಪ್ರೀತಿಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಸೇರಿ ‘ಬೇವು ಬೆಲ್ಲ’ ಎಂಬ ಅಭಿನಂದನಾ ಗ್ರಂಥವನ್ನೂ ಸಮರ್ಪಿಸಿದ್ದಾರೆ.
ಡಾ. ಸೋಮಶೇಖರ ಇಮ್ರಾಪುರ ಇವರು ತಮ್ಮ ಬರಹದ ಮೂಲಕ ಜನಪದ ಸಾಹಿತ್ಯಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸಲಿ ಎಂಬ ಶುಭಹಾರೈಕೆ ನಮ್ಮದು.
– ಅಕ್ಷರೀ