ಎರಡು ವಿಷಯಗಳು ನಮ್ಮನ್ನು ಸಂತೋಷದಿಂದ ದೂರ ಮಾಡುತ್ತವೆ. ಒಂದು ಗತದಲ್ಲಿ ಬದುಕುವುದು. ಇನ್ನೊಂದು ಬೇರೆಯವರಂತೆ ನಾವು ಬದುಕಬೇಕೆಂದು ಆಸೆ ಪಡುವುದು. ಸುಂದರವಾದ ಬದುಕು ಕಟ್ಟಿಕೊಳ್ಳುವಲ್ಲಿ ಇವು ಮುಳ್ಳುಗಳು. ಉತ್ತಮ ಹವ್ಯಾಸಗಳು ಇಂಥಹಾ ಮುಳ್ಳುಗಳ ಮೊನಚಿನ ತೀವೃತೆಯನ್ನು ಕಡಿಮೆ ಮಾಡುತ್ತದೆ. ಓದು, ಜಪ, ಧ್ಯಾನಗಳ ಜೊತೆ ಬಹಳ ಸುಲಭವಾಗಿ ಮನಸ್ಸಿಗೆ ಸಮಾಧಾನ ಕೊಡುವ ಸಾಧನ ಸಂಗೀತ.
ಸ್ವರ, ತಾಳ, ಲಯಗಳ ಮಿಲನದೊಂದಿಗೆ ಭಾವಗಳು ಸಂಗಮಗೊಂಡು ಅಂತರಂಗದ ತುಡಿತಕ್ಕೆ ಕಾರಣವಾಗುವುದನ್ನು ಸಂಗೀತ ಎನ್ನಬಹುದು. ಸಂಗೀತಕ್ಕೆ ಮನ ಸೋಲದವರಿಲ್ಲ. ಮನುಷ್ಯರಲ್ಲದೆ ಪ್ರಕೃತಿಯೂ ಸಂಗೀತಕ್ಕೆ ತಲೆದೂಗುತ್ತದೆ. ಸಸ್ಯಗಳು ಫಲ ಕೊಡುವಲ್ಲಿ, ಹಸುಗಳು ಹಾಲು ಕೊಡುವಲ್ಲಿ ಸಂಗೀತ ಪರಿಣಾಮಕಾರಿಯಾಗಿದೆ ಎಂಬುದು ವಿಜ್ಞಾನಿಗಳ ಸಂಶೋಧನೆಯ ಫಲ. ಪ್ರತೀ ಜೀವಿಯಲ್ಲೂ ಸಂಗೀತ ಇದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಎಳೆಯ ಮಕ್ಕಳು ಶಾಲೆ ಹಾಗೂ ಮನೆ ಎರಡೂ ಕಡೆ ಒತ್ತಡದಿಂದಲೇ ಬೆಳೆಯುತ್ತಿದ್ದರೆ, ಮಕ್ಕಳ ಹೆತ್ತವರೂ ಕೆಲಸ ಕಛೇರಿ ಮತ್ತು ಮನೆ ನಿರ್ವಹಣೆ ಹೀಗೆ ಒತ್ತಡದಿಂದಲೇ ಬದುಕುತ್ತಿದ್ದಾರೆ. ಮಕ್ಕಳಿಗೆ ವಿದ್ಯಾರ್ಜನೆಯಲ್ಲಿ ಶ್ರದ್ಧೆ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕಾದರೆ ‘ಶಾಲೆ’ ಎಂಬುವುದು ‘ಸೆರೆಮನೆ’ ಅನಿಸಿ ಮಕ್ಕಳು ಶಾಲೆಗೆ ಗೈರು ಆಗದಿರಬೇಕಾದರೆ ಪಾಠದಲ್ಲಿ ಸಂಗೀತವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಕ್ರಮದಲ್ಲಿ ಬರುವ ನಲಿ-ಕಲಿ ಇದು ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಿದೆ. ಇಲ್ಲಿ ಪಠ್ಯ ವಿಷಯಗಳನ್ನು ಹಾಡು ಮತ್ತು ಕುಣಿತದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಲಾಗುತ್ತದೆ. ಗಣಿತ, ವಿಜ್ಞಾನ ಹೀಗೆ ಎಲ್ಲಾ ಪಠ್ಯ ವಿಷಯಗಳನ್ನೂ ಸಂಗೀತದ ಮೂಲಕ ನೀಡಿ ಮಕ್ಕಳಲ್ಲಿ ಆಸಕ್ತಿ ಕೆರಳಿಸಿದ ಶಿಕ್ಷಕರೂ ಇದ್ದಾರೆ.
ಬಾಲ್ಯದಲ್ಲಿ ನಾವೆಲ್ಲರೂ ಕಲಿತ ಕಯ್ಯಾರ ಕಿಂಞಣ್ಣ ರೈಯವರ “ಸಂತೆಗೆ ಹೋದನು ಭೀಮಣ್ಣ ಹಿಂಡಿಯ ಕೊಂಡ ಹತ್ತು ಮಣ”, “ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ”, “ಅಳಿಲೇ ಅಳಿಲೇ ಚುಂ ಚುಂ ಅಳಿಲೇ” ಇವೆಲ್ಲ ಹಾಡಿನ ಮೂಲಕ ರಕ್ತಗತವಾಗಿ ಜೀವನದ ಸಂಜೆಯಲ್ಲೂ ಮರೆತು ಹೋಗದೆ ನೆನಪಿನಲ್ಲಿರುವಂತಹುದು. ಆದ್ದರಿಂದ ಸಂಗೀತದಿಂದ ನೆನಪಿನ ಶಕ್ತಿ ವರ್ಧಿಸುವುದು ಸಾಧ್ಯವಿದೆ. ಬಾಲ್ಯದಲ್ಲಿ ಕಲಿತ ಹಾಡುಗಳ ಒಂದು ಸಾಲು ಕಿವಿಗೆ ಬೀಳುತ್ತಲೇ ನಮಗೆ ಇಡೀ ಹಾಡು ನೆನಪಾಗುತ್ತದೆ.
ಸಂಗೀತ ಬರಿ ರಂಜನೆಗಲ್ಲ. ಅದು ನಮ್ಮ ಸೃಜನಶೀಲತೆಗೆ ದಾರಿಯಾಗಿದೆ ಮತ್ತು ಭಾವನೆಗಳನ್ನು ಸಂವಹನೆ ಮಾಡುವ ಒಂದು ಲೋಕ ಭಾಷೆಯೆಂದೇ ಹೇಳಬಹುದು. ಮಗುವಿಗೆ ಹಾಡುವ ಲಯಬದ್ಧವಾದ ಜೋಗುಳ, ತೊಟ್ಟಿಲಿನ ಜೀಕುವ ಮಧುರ ಶಬ್ದದೊಂದಿಗೆ ಮಗು ಸುಖ ನಿದ್ರೆಗೆ ಜಾರುವಲ್ಲಿ ಸಹಾಯಕವಾಗುತ್ತದೆ. ಹಾಡಿನಲ್ಲಿ ಬರುವ ಶಬ್ದಗಳ ಲಯಬದ್ಧ ಉಚ್ಛಾರವನ್ನು ಮತ್ತು ರಾಗದ ಮಾಧುರ್ಯವನ್ನು ಜೋಗುಳದ ಹಾಡಿನ ಮೂಲಕ ಆಲಿಸಿದ ದೊಡ್ಡ ಮಕ್ಕಳು ಅದನ್ನು ಕಲಿತರೆ, ಮನೆಯಲ್ಲಿದ್ದ ವಯೋವೃದ್ಧರು ತಮ್ಮ ಕಳೆದು ಹೋದ ಅ ಮಧುರ ದಿನಗಳನ್ನು ನೆನಪಿಸಿ ಸಂತೋಷ ಪಡಬಹುದು. ಸಮರಸದ ಜೀವನಕ್ಕೆ ಬದುಕಿನಲ್ಲಿ ಸುಖ ನೆಮ್ಮದಿ ಸಂಗೀತದಲ್ಲಿ ಸಿಗುವುದು ಸಾಧ್ಯವಿದೆ. ಜೀವನದ ಸಂಕಷ್ಟ ಸಮಯದಲ್ಲಿ ದೇವರ ಮುಂದೆ ಕುಳಿತು ಭಕ್ತಿಭಾವದಿಂದ ದೇವರಲ್ಲಿ ಕಷ್ಟ ನಿವೇದನೆ ಮಾಡಿಕೊಂಡು ಹಾಡಿತೆಂದರೆ ಮುದುಡಿದ ಮನಸ್ಸು ಚೇತೋಹಾರಿಯಾಗುತ್ತದೆ. ಉತ್ಸಾಹ ಮತ್ತು ಶಿಸ್ತು ಬದ್ಧ, ನೈತಿಕಯುಕ್ತ ಮತ್ತು ಮೌಲ್ಯಯುತ ಜೀವನಕ್ಕೆ ಸಂಗೀತ ಒಂದು ದಿವ್ಯ ಔಷಧಿ. ಹಾಡದಿದ್ದರೂ ಸಂಗೀತವನ್ನು ಆಸ್ವಾದಿಸಿ ತಲೆದೂಗುವ ರಸಿಕತೆ ಪ್ರತೀಯೊಬ್ಬರಲ್ಲೂ ಇದ್ದರೆ ಉತ್ತಮ. ಸಂಗೀತದ ಅಗಾಧ ಶಕ್ತಿಯನ್ನರಿತ ಫ್ರಾನ್ಸ್ ಸರ್ಕಾರ 21-06-1982ರಂದು ಬಹಳ ಸಡಗರದಿಂದ ಸಂಗೀತ ಉತ್ಸವ ನಡೆಸಿತು. ಇದುವೇ ಇಂದಿನ ‘ವಿಶ್ವ ಸಂಗೀತ ದಿನ’ಕ್ಕೆ ಕಾರಣವಾಯಿತು.
ಸಂಗೀತ ಪ್ರೇಮಿ