ಖ್ಯಾತ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರನ್ನು ಸುಮಾರು ಮೂರು ದಶಕಗಳ ಹಿಂದೆ ಎರಡು ಬಾರಿ ಕವಿಗೋಷ್ಠಿಗಳಲ್ಲಿ ಮುಖತಃ ಭೇಟಿಯಾದಾಗ ಸ್ವಪರಿಚಯ ಹೇಳಿಕೊಂಡಿದ್ದೆ. ನಾನಾಗ ಅಳುಕಿನ ಕೂಸು, ಕಿರಿಯ ಕವಯತ್ರಿ ಎಂಬ ತುಸು ಕೀಳರಿಮೆಯ ಭಾವ ಹೊಂದಿದವಳು ಆಗಿದ್ದೆ. ಆಗಿನ ಅವರ ವಿಶ್ವಾಸದ, ಪ್ರೋತ್ಸಾಹದ ನುಡಿಗಳಿಂದ ಅಳುಕು ಮಂಗಮಾಯವಾಗಿ ಆತ್ಮವಿಶ್ವಾಸದ ಮಟ್ಟ ಹೆಚ್ಚಿತ್ತಾದರೂ ಮುಂದೆ ಕಥಾ ಮಾಧ್ಯಮ ನನ್ನ ಆಯ್ಕೆಯಾಯಿತು. ಆಗೀಗ ಅವರ ಪ್ರಕಟಿತ ಕವನ, ಲೇಖನಗಳನ್ನು ಓದುತ್ತಾ ಬಂದಂತೆ ಚೊಕ್ಕಾಡಿಯವರ ಮೇಲಿನ ಗೌರವವು ಹೆಚ್ಚುತ್ತಲೇ ಹೋಯಿತು.
ಇತ್ತೀಚೆಗೆ ಅವರ ಅಭಿನಂದನಾ ಗ್ರಂಥ ‘ಮುಕ್ತ ಹಂಸ’ (2006)ವನ್ನು ವಿವರವಾಗಿ ಓದತೊಡಗಿದಾಗ ಅದರ ಪುಟ ಪುಟಗಳೂ ಅವರ ಬಹುಮುಖೀ ವ್ಯಕ್ತಿತ್ವಕ್ಕೆ ಪುರಾವೆಗಳನ್ನು ಒದಗಿಸಿದವು. ಅವರು ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ ಎಂಬಂತೆ ಊರು ಪರವೂರುಗಳಲ್ಲಿ ಕನ್ನಡಕ್ಕಾಗಿ ಪರಿಪರಿಯಾಗಿ ಮಿಡಿದು, ದುಡಿದು ಇತರರಿಗೂ ಪ್ರೇರಕ ಶಕ್ತಿಯಾದ ನವಿರಾದ ವಿವರಗಳನ್ನು ಹೊತ್ತ ಹೊತ್ತಗೆಯದು.
ಕವಿ ಚೊಕ್ಕಾಡಿಯವರ ಬಾಲ್ಯವೆಂದರೆ ಕಷ್ಟಕಾರ್ಪಣ್ಯಗಳ ಒಡನಾಟವೇ ಆಗಿತ್ತು. ಆದರೂ ಅವರ ಸ್ಪಂದನವು ಸಕಾರಾತ್ಮಕ ಹಾಗೂ ಜೀವನ್ಮುಖಿ. ಚೊಕ್ಕಾಡಿಯ ಯಕ್ಷಗಾನ ಭಾಗವತರೂ ಪುಸ್ತಕ ಮಾರಾಟಗಾರರೂ ಆದ ಶ್ರೀ ಎ. ಗಣಪಯ್ಯನವರು ಹಾಗೂ ಶ್ರೀಮತಿ ಸುಬ್ಬಮ್ಮ ದಂಪತಿಗಳ ಸುಪುತ್ರರಾಗಿ 29-06-1940ರಲ್ಲಿ ಜನಿಸಿದರು. ಸಿ.ಎಸ್. ಲಕ್ಷ್ಮೀ ಎಂಬವರೊಡನೆ ಸುಬ್ರಾಯ ಚೊಕ್ಕಾಡಿಯವರ ಜತೆ ಸಾಂಗತ್ಯವು ಆರಂಭವಾದದ್ದು 1967ರಲ್ಲಿ. ಆದರ್ಶ, ಪ್ರಜ್ಞಾ, ಕವಿತಾ ಹಾಗೂ ಪ್ರತಿಭಾ ಎಂಬ ನಾಲ್ಕು ಕುಡಿಗಳು ಅವರ ಬಾಳವಲ್ಲರಿಯಲ್ಲಿ ಪಲ್ಲವಿಸಿದವು. ಸುಬ್ರಾಯ ಚೊಕ್ಕಾಡಿಯವರು ಎಂ.ಎ. ಪದವಿ ಗಳಿಸಿದ್ದರೂ ಐವರ್ನಾಡಿನ ದೇದರ್ಕಾನ ಶಾಲೆಯಲ್ಲಿ ಅಧ್ಯಾಪನ ವೃತ್ತಿಯನ್ನು ಕೈಗೊಂಡು, ಮನೆಯಿಂದ ಶಾಲೆಯ ಐದಾರು ಕಿ.ಮೀ. ದೂರವನ್ನು ನಡೆದೇ ಕ್ರಮಿಸುತ್ತಿದ್ದರು. 36 ವರ್ಷ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಹಾಯಕ ಹಾಗೂ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದರು. ತರಗತಿಗಳಲ್ಲಿ ಅವರ ಪಾಠಕ್ರಮ ಮಕ್ಕಳಿಗೆಲ್ಲಾ ಪ್ರಿಯವಾಗಿತ್ತು. ಸಹ ಶಿಕ್ಷಕರೊಂದಿಗೂ ಆತ್ಮೀಯತೆ, ಯಕ್ಷಗಾನ, ಶಿಕ್ಷಣ, ನಾಟಕ, ಕವಿತೆ, ದೇಶ ವಿದೇಶ ವ್ಯವಹಾರ .. ಹೀಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಎಂದೂ ಯಾರಿಗೂ ಗದರಿದವರಲ್ಲ. ಮಾತೂ ಸೀದಾ ಸಾದವೇ.
ಕವಿ ಸುಬ್ರಾಯ ಚೊಕ್ಕಾಡಿ ಎಂದಷ್ಟೇ ಹೇಳಿದರೆ, ಅವರ ವ್ಯಕ್ತಿತ್ವದ ಆಂಶಿಕ ಪರಿಚಯವನ್ನಷ್ಟೇ ಎತ್ತಿ ಹಿಡಿದಂತಾಗುತ್ತದೆ. ಅದರೊಂದಿಗೆ ಕಥಾ ಸಂಕಲನ, ಪುಸ್ತಕ ಪ್ರಕಟಣೆ, ವಿಮರ್ಶೆ, ಕ್ಯಾಸೆಟ್ ಹಾಗೂ ಸಿಡಿಗಳು, ಸಾಂಸ್ಕೃತಿಕ ಜವಾಬ್ದಾರಿ ಹೊತ್ತ ವಿಚಾರ ವೇದಿಕೆ ಸ್ಥಾಪನೆ, ನಟನೆ, ನಾಟಕ, ನಿರ್ದೇಶನ . . . . . ಹೀಗೆ ಒಂದರ ಮೇಲೊಂದು ಬಂದು ಸೇರಿಕೊಂಡು ಅವರೊಂದು ಪ್ರತಿಭಾ ಶಿಖರವೇ ಸರಿ.
ಒಟ್ಟು 9 ಕವನ ಸಂಕಲನಗಳು, ಒಂದು ಕಾದಂಬರಿ, ಒಂದು ಕಥಾ ಸಂಕಲನ, ಮೂರು ವಿಮರ್ಶಾ ಗ್ರಂಥಗಳು ಅವರ ಹೆಸರನ್ನು ಹೊತ್ತು ರಾರಾಜಿಸುತ್ತಿವೆ. ಅವರ ‘ಬಂಗಾರದ ಹಕ್ಕಿ’ ಎಂಬುದು 40 ಭಾವಗೀತೆಗಳ ಸಂಕಲನ. ‘ಬೆಟ್ಟವೇರಿದ ಮೇಲೆ’ ಕವನ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ. ‘ಇದಲ್ಲ ಅದು’ ಕವನ ಸಂಕಲನಕ್ಕೆ ಮುದ್ದಣ ಪ್ರಶಸ್ತಿ. ಅಲ್ಲದೆ ಸಾಹಿತ್ಯ ಕಲಾನಿಧಿ, ಕರ್ನಾಟಕ ಶ್ರೀ ಪ್ರಶಸ್ತಿ. ಹೀಗೆ ಹತ್ತಾರು ಪ್ರಶಸ್ತಿಗಳು ಅವರ ಪ್ರತಿಭೆಗೆ ಸಂದಿದೆ. ‘ಮುಕ್ತ ಹಂಸ’ ಎಂಬ ಹೆಸರು ಒಂದು ಕಾಲದಲ್ಲಿ ಅವರ ಕಾವ್ಯನಾಮವಾಗಿದ್ದು, ಮುಂದೆ ಅದೇ ಹೆಸರು ಅವರ ಅಭಿನಂದನ ಗ್ರಂಥಕ್ಕೂ (2006) ಆಯ್ಕೆಯಾದದ್ದೂ ಒಂದು ವಿಶೇಷ ವಿದ್ಯಮಾನವೇ ಸರಿ. ಆತ್ಮೀಯ ಗೆಳೆಯರಿಗೆಲ್ಲ ಅವರು ‘ಸುಚೊ’ ಆದದ್ದೂ ಇದೆ.
‘ವಸಂತ ಸಾಹಿತ್ಯ ಮಾಲೆ’ ಎಂಬ ಪ್ರಕಾಶನ ಸಂಸ್ಥೆಯೊಂದನ್ನು ಪ್ರಾರಂಭಿಸಿದ ಚೊಕ್ಕಾಡಿಯವರು ಅವರ ಕೃತಿಗಳನ್ನು ಪ್ರಕಟಿಸಿದರು. ಕೆ.ಪಿ. ಪುಟ್ಟಸ್ವಾಮಿಯವರ (ಪರಂ ಜ್ಯೋತಿ) ಕಥಾ ಸಂಗ್ರಹ, ಪ್ರೊ. ಬಿ. ನಾಗೇಶರ ಕಾದಂಬರಿ, ಪಿ. ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕ ಇತ್ಯಾದಿಗಳನ್ನು ಬೆಳಕಿಗೆ ತಂದ ಕೀರ್ತಿ ಪಾತ್ರರು. ಆದರೆ ಕ್ರಮೇಣ ಆರ್ಥಿಕ ದುಃಸ್ಥಿತಿ ಕಾಡತೊಡಗಿದಾಗ ಸಾಲ ಮಾಡಬೇಕಾಗಿ ಬಂದಾಗ ಆ ಮಾಲಿಕೆಯನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಿತು.
ಆದರೆ ಅವರು ತಟಸ್ಥರಾಗಿ ಸುಮ್ಮನಿರುವ ಜಾಯಮಾನದವರಲ್ಲ. ತಮ್ಮ ಪರಿಸರದ ಸಾಹಿತ್ಯಾಸಕ್ತ ಯುವಕರನ್ನೆಲ್ಲ ಸಂಘಟಿಸಿ ಸುಮನಸಾ (ಸುಳ್ಯ ಮಧ್ಯದ ನವ್ಯ ಸಾಹಿತ್ಯ) ಎಂಬ ವಿಚಾರ ವೇದಿಕೆಯನ್ನು ಪ್ರಾರಂಭಿಸಿದರು (1974) ಸಾಹಿತ್ಯಾಸಕ್ತರಲ್ಲಿ ಪರಸ್ಪರ ಚರ್ಚೆ, ಚಿಂತನ ಮಂಥನ, ವಿಚಾರ ವಿನಿಮಯಗಳೇ ಅದರ ಪ್ರಮುಖ ಧ್ಯೇಯ. ಭೇಟಿಯಾಗುತ್ತಿದ್ದ ಕಿರಿಯ ಸಾಹಿತಿಗಳಿಗೆಲ್ಲ ಅವರ ಕಿವಿಮಾತು ಸಲಹೆ, ಹಿತವಚನಗಳು ಅಮೂಲ್ಯವಾಗಿತ್ತು. ‘ಸಂಪ್ರದಾಯಕ್ಕೆ ಜೋತು ಬೀಳಬಾರದು. ನಿನಗೆ ಸರಿ ಕಂಡಂತೆ ಮಾಡು, ನಮಗೆ ಕೆಲಸದಲ್ಲಿ ತೃಪ್ತಿ ಮುಖ್ಯ, ನೀನು ಸ್ವಲ್ಪ ಜೋರಾಗಬೇಕು’. ಹೀಗೆಲ್ಲ ಹೇಳುತ್ತ ಬೆನ್ನು ತಟ್ಟುವ ಅವರ ಜಾಯಮಾನ ಆಪ್ಯಾಯಮಾನ. ಆಪ್ತ ಸಮಾಲೋಚಕರೂ ಹೌದು. ಪತ್ನಿ ಲಕ್ಷ್ಮಿಯ ಬಗ್ಗೆಯೂ ಗೌರವ ಭಾವನೆ, ಅಪಾರ ನಂಬಿಕೆ, ಅವಳು ಸರಿಯಾದದ್ದನ್ನು ಮಾಡುತ್ತಾಳೆ ಎಂಬ ಮೆಚ್ಚುಗೆ. ಅದು ನಿಜವೂ ಆಗಿತ್ತು. ಹೀಗೆ ಪರಸ್ಪರ ಗೌರವ, ನಂಬಿಕೆಯ ಭಾವನೆಗಳು ಅವರ ಸಾಹಿತ್ಯ ರಚನೆಗೆ ಇಂಬು ನೀಡಿದ್ದೂ ಅಷ್ಟೇ ನಿಜ.
ಹಾಡುಗಾರರಾಗಿಯೂ ಅವರ ಖ್ಯಾತಿ ಬಲು ಮಧುರ. ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಹಾಡು ಧ್ವನಿ ಸುರುಳಿ ಮೂಲಕ ‘ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ .. ..’ ಎಂದು ಹೊರಹೊಮ್ಮಿದಾಗ ಕೇಳುತ್ತ ತಲೆದೂಗದವರಿಲ್ಲ. ಅಲ್ಲದೆ ಸ್ವತಃ ‘ನಿರುದ್ಯೋಗಿ ಯುವಕನ ಪ್ರೇಮಗೀತೆ’ ಎಂಬ ಪ್ರೇಮಗೀತೆಯನ್ನು ರಚಿಸಿದ್ದಾರೆ. ಹಕ್ಕಿಗಳು ಈ ಕವಿಗೆ ಪ್ರಿಯವಾದ ವಿಷಯ. ಅವರ ಅತಿ ಪ್ರಮುಖ ಗೀತೆಯೊಂದನ್ನು ಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರರು ‘ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೇ . . .’ ಎಂದು ಹಾಡುತ್ತ ತಮ್ಮ ಮೃದು ಮಧುರ ಕಂಠಶ್ರೀಯಿಂದ ಅದನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಈ ಹಾಡನ್ನು ಕೇಳಿ ಮೆಚ್ಚಿಕೊಳ್ಳದ ಕಾವ್ಯ ಪ್ರೇಮಿಗಳಿಲ್ಲ ಎಂಬುದು ವಾಸ್ತವದ ಸಂಗತಿ.
ಸುಬ್ರಯ ಚೊಕ್ಕಾಡಿಯವರು ಒಳ್ಳೆಯ ವಾಗ್ಮಿ, ಆದರೆ ಚರ್ವಿತ ಚರ್ವಣದ ಜಾಯಮಾನದವರಲ್ಲ. ಹಳ್ಳಿಯ ಕೃಷಿಕ ಕವಿಗೆ ಹಳ್ಳಿಯಲ್ಲೇ ಸಾಹಿತ್ಯ ಸಂಸ್ಕೃತಿಯ ತೋರಣ ಹಸಿರಾಗಿರಲಿ ಎಂಬ ಸದಾಶಯವೇ ಸತತ. ಅದಕ್ಕಾಗಿ ಅಲ್ಲೇ ಅವರ ಕೆಲಸವೂ ಅವಿರತ. ಈ ಪುಟ್ಟ ಲೇಖನ ಅವರ, ಸಿಂಧು ವ್ಯಕ್ತಿತ್ವದಲ್ಲಿನ ಒಂದು ಬಿಂದು ಮಾತ್ರ. ‘Timid thoughts do not afraid of me, I am a poet’. ರವೀಂದ್ರನಾಥ್ ಠಾಗೋರ್ ಒಂದೆಡೆ ಹೇಳಿದಂತೆ, ಕವಿ ಚೊಕ್ಕಾಡಿಯವರ ದೃಷ್ಟಿ, ಸೃಷ್ಟಿ ಎಲ್ಲಾ ವಿಶಾಲವೇ ಎನ್ನಬಹುದು. ಅವರು ಖ್ಯಾತ ಕವಿ, ಸಾಹಿತಿ, ಮಾತ್ರವಲ್ಲ, ಸರಳತೆ, ಸಜ್ಜನಿಕೆಗಳಿಂದ ಎಲ್ಲಾ ಕಾಲಕ್ಕೂ ಎಲ್ಲರಿಗೂ ಸಲ್ಲ ಬಲ್ಲ ಧೀಮಂತ ವ್ಯಕ್ತಿ. ಅವರಿಗೆ ಗೌರವ ಪೂರ್ವಕವಾಗಿ ಶರಣು ಶರಣೆನ್ನುತ್ತಾ ಸರ್ವ ಶುಭ ಕೋರುತ್ತಾ ಈ ಲೇಖನಕ್ಕೆ ಪೂರ್ಣವಿರಾಮದೊಂದಿಗೆ ವಿರಮಿಸುವೆನು.
- ಶ್ರೀಮತಿ ಸುಶೀಲಾ ಆರ್. ರಾವ್ ಉಡುಪಿ
ಶ್ರೀಮತಿ ಸುಶೀಲಾ ಆರ್. ರಾವ್ ಅವರು ಮಂಗಳೂರಿನ ಬೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಹಾಗೂ ಪ್ರಾಂಶುಪಾಲೆಯಾಗಿದ್ದು, ಈಗ ನಿವೃತ್ತರಾಗಿ ಉಡುಪಿಯಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಲೇಖಕಿಯಾಗಿ 5 ಕಥಾ ಸಂಕಲನ, 2 ಕವನ ಸಂಕಲನ ಬದುಕು ಬರಹ, ವೈಚಾರಿಕ ಲೇಖನ, ಲಲಿತ ಪ್ರಬಂಧ, ಸಾಮಾಜಿಕ ನಾಟಕ, ಮಕ್ಕಳಿಗಾಗಿ ಹಾಡುಗಳು ಹೀಗೆ ಒಟ್ಟು 13 ಕೃತಿಗಳು ಪ್ರಕಟವಾಗಿದೆ. ನಾಡಿನ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟವಾಗುತ್ತಿವೆ. ಮಂಗಳೂರು ಆಕಾಶವಾಣಿಯಿಂದ ಚಿಂತನ, ಭಾಷಣ, ಭಾವಗೀತೆಗಳು ಪ್ರಸಾರವಾಗುತ್ತಿದೆ. ಹತ್ತಾರು ಸಂಘ ಸಂಸ್ಥೆಗಳ ಆಜೀವ ಸದಸ್ಯೆ ಹಾಗೂ ಕೆಲವದರ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿಯೂ ಸಕ್ರಿಯರು.
1 Comment
ಸಾಹಿತಿ ಸುಬ್ಬರಾಯ ಚೊಕ್ಕಾಡಿಯವರ ಕುರಿತಾಗಿ ಸಂಕ್ಷಿಪ್ತವಾದ ಲೇಖನ ಚೆನ್ನಾಗಿ ಬರೆದಿದ್ದಿರಿ. ಅಕ್ಕಾ ಧನ್ಯವಾದಗಳು ರೀ ಶರಣು ಶರಣಾರ್ಥಿಗಳು💐🙏🙏