ಆರ್. ಆರ್. ಕೇಶವ ಮೂರ್ತಿಯವರು ಪಿಟೀಲು ವಿದ್ವಾಂಸರಲ್ಲಿ ಅಗ್ರಗಣ್ಯರು. ಸಂಗೀತ ಮನೆತನದಲ್ಲಿ ಮೊಳಕೆಯೊಡೆದ ಕುಡಿ ಇದು. ಇವರ ತಾತ ವೆಂಕಟರಾಮಯ್ಯನವರು ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಗಾರರು. ಸಂಗೀತ ಕಾಶಿ ಎನಿಸಿರುವ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ 27 ಮೇ 1914ರಲ್ಲಿ ಇವರ ಜನನವಾಯಿತು. ತಂದೆ ರಾಮಸ್ವಾಮಯ್ಯ ತಾಯಿ ಸುಬ್ಬಮ್ಮ. ಇವರ ಸಂಗೀತದ ಆರಂಭದ ಗುರು ಇವರ ತಂದೆಯೇ ಆಗಿದ್ದಾರೆ.
1923ನೇ ಸವಿಯಲ್ಲಿ ಮೈಸೂರಿಗೆ ಬಂದ ಕೇಶವ ಮೂರ್ತಿಯವರು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಮತ್ತು ಚಿಕ್ಕ ರಾಮರಾಯರಲ್ಲಿ ಗಾಯನ ಅಭ್ಯಾಸ ನಡೆಸಿದರು. ಅಂದಿನ ಗುರುಗಳು ಕಲಿಸುತ್ತಿದ್ದ ಪಾಠ ಬಹಳ ಕಟ್ಟುನಿಟ್ಟು ಆಗಿದ್ದು ದಿನಕ್ಕೆ ಎಂಟು ಗಂಟೆಗಳ ನಿರಂತರ ಅಭ್ಯಾಸವನ್ನು ಮಾಡಲೇಬೇಕಾಗಿತ್ತು. ಮನಸ್ಸಿನ ನಿಗ್ರಹದೊಂದಿಗೆ ಸಾಧನೆ ಮಾಡಿ ಈ ವಿದ್ಯೆಯನ್ನು ಕರಗತಗೊಳಿಸಬೇಕಾಗಿತ್ತು. ಪಿಟೀಲಿನಲ್ಲಿ ಪರಿಣತಿ ಹೊಂದಿದ ಇವರು ಟಿ. ಚೌಡಯ್ಯನವರಂತೆ ಏಳು ತಂತಿಗಳಲ್ಲಿ ಪಿಟೀಲನ್ನುಅಭ್ಯಾಸ ಮಾಡಿದ್ದರೂ, ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮಧ್ಯೆ ನಾಲ್ಕು ತಂತಿ ಇಲ್ಲವೇ ಏಳು ತಂತಿಯ ಪಿಟೀಲನ್ನು ನುಡಿಸುತ್ತಿದ್ದರು.
ಆರ್. ಆರ್. ಕೇಶವಮೂರ್ತಿಯವರು ತೆಲುಗು, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದರು. 1934ರಲ್ಲಿ ಬೆಂಗಳೂರಿನಲ್ಲಿ ವಾಸ ಮಾಡಲಾರಂಭಿಸಿ, ತಮ್ಮ ಗುರುಗಳ ಹೆಸರಿನಲ್ಲಿ “ಗಾನ ವಿಶಾರದ ಬಿಡಾರಂ ಕೃಷ್ಣಪ್ಪ ಸ್ಮಾರಕ ಸಂಗೀತ ವಿದ್ಯಾಲಯ”ವನ್ನು ಸ್ಥಾಪಿಸಿ, ನೂರಾರು ಮಂದಿ ವಿದ್ಯಾರ್ಥಿಗಳನ್ನು ಸಂಗೀತದಲ್ಲಿ ಚೆನ್ನಾಗಿ ಪಳಗಿಸಿ ಯಶಸ್ವೀ ಕಚೇರಿ ನಡೆಸುವ ಮಟ್ಟಕ್ಕೆ ತಂದಿದ್ದರು. ಟಿ. ರುಕ್ಮಿಣಿ, ಆನೂರು ಎಸ್ . ರಾಮಕೃಷ್ಣ, ಜೋತ್ಸ್ನಾ ಶ್ರೀಕಾಂತ್, ಅಂಬಳೆ ಕೃಷ್ಣಮೂರ್ತಿ, ನಳಿನಿ ಮೋಹನ್ ಇತ್ಯಾದಿ ಅನೇಕ ಮಂದಿ ಶಿಷ್ಯರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದವರು. ಗಿಟಾರ್ ವಾದನದಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿ, ಕಚೇರಿ ನೀಡಿ ವಿಸ್ಮಯ ಮೂಡಿಸಿದ ಅಪ್ರತಿಮ ಕಲಾವಿದ ನಿಖಿಲ್ ಜೋಶಿ ಇವರ ವಿದ್ಯಾರ್ಥಿ ಎಂಬುವುದು ಹೆಗ್ಗಳಿಕೆ. ಕೇವಲ ಸಂಗೀತವನ್ನು ಅಭ್ಯಾಸ ಮಾಡಿ ಅಪಾರ ಜ್ಞಾನವಂತರಾಗಿ ಪಿಟೀಲು ನುಡಿಸಿದ್ದು ಮಾತ್ರವಲ್ಲ, ಸಂಗೀತದ ಬಗ್ಗೆ ಗ್ರಂಥ ರಚನೆ ಮಾಡಿದ ಖ್ಯಾತಿವಂತರು ಇವರು. ‘ಬಾಲ ಶಿಕ್ಷಾ’, ‘ವಾಗ್ಗೇಯಕಾರರ ಕೃತಿಗಳು’, ‘ಭಾರತೀಯ ವಾಗ್ಗೆಯಕಾರರು’, ‘ರಾಗಲಕ್ಷಣ ಮತ್ತು ರಾಗಕೋಶ’, ‘ಲಕ್ಷ್ಯ- ಲಕ್ಷಣ ಪದ್ಧತಿ’, ‘ಸಂಗೀತ ಲಕ್ಷ್ಯ ವಿಜ್ಞಾನ’, ‘ಹಿಂದೂಸ್ತಾನಿ ಸಂಗೀತ ರಾಗ ಕೋಶ’, ‘ಮೇಳರಾಗ ಮಾಲಿಕಾ’ ಇತ್ಯಾದಿ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಗಾನ ಸಾಹಿತ್ಯ ಶಿರೋಮಣಿ’, ‘ಸಂಗೀತ ವಿದ್ಯಾಸಾಗರ’, ‘ಸಂಗೀತ ಶಾಸ್ತ್ರ ಪ್ರವೀಣ’, ‘ಸಂಗೀತ ಕಲಾ ರತ್ನ’, ‘ಕರ್ನಾಟಕ ಕಲಾ ತಿಲಕ’, ‘ಸಂಗೀತ ಕಲಾ ಪ್ರಪೂರ್ಣ’, ‘ಕನಕ ಪುರಂದರ ಪ್ರಶಸ್ತಿ’, ‘ವೀಣೆ ಶೇಷಣ್ಣ ಪ್ರಶಸ್ತಿ’, ಹೀಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಈ ಮಹಾನ್ ಚೇತನ ಆರ್. ಆರ್. ಕೇಶವಮೂರ್ತಿಯವರು 23 ಅಕ್ಟೋಬರ್ 2006ರಲ್ಲಿ ಕಲಾಸರಸ್ವತಿಯ ಪಾದವನ್ನು ಸೇರಿದರು.
ಅಗಲಿದ ಆತ್ಮಕ್ಕೆ ಅನಂತ ನಮನ.
– ಅಕ್ಷರೀ.