ಮುಂಬಯಿ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಮೈಸೂರು ಅಸೋಸಿಯೇಷನ್ ಮುಂಬೈ ಇದರ ಸಂಯುಕ್ತ ಆಶ್ರಯದಲ್ಲಿ ‘ಬಂಗಾರದ ಹಬ್ಬ ದತ್ತಿ ಉಪನ್ಯಾಸ ಮಾಲಿಕೆ -2025′ ಕಾರ್ಯಕ್ರಮವು ದಿನಾಂಕ 25 ಜನವರಿ 2025ರಂದು ನಡೆಯಿತು.
‘ರಾಮಾಯಣದಲ್ಲಿ ಮೌಲ್ಯ ಸಂಘರ್ಷ’ ವಿಷಯದ ಕುರಿತು ಕಲಾವಿದರು ಮತ್ತು ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ ಅವರ ಮಾತುಗಳಿಗೆ ಶ್ರೋತೃವಾಗುವ ಸದವಕಾಶವೊಂದು ನನ್ನದಾಯಿತು. ಅವರ ಮಾತು, ವಿಷಯ ಮಂಡನೆ ನಾವೆಲ್ಲ ನಿರೀಕ್ಷಿಸಿದಂತೆ ವಿದ್ವತ್ಪೂರ್ಣವಾಗಿತ್ತು ಅಲ್ಲದೆ ಸರಳವಾಗಿತ್ತು. ನಡುನಡುವೆ ದೈನಂದಿನ ಜೀವನದ ಆಗುಹೋಗುಗಳನ್ನು ಹೇಳುತ್ತಾ, ಲಘು ಹಾಸ್ಯ ಮಿಶ್ರಿತ ಮಾತುಗಳನ್ನು ಆಡುತ್ತಾ ಪ್ರೇಕ್ಷಕರನ್ನು ಹಿಡಿದಿಡುವ ಪರಿ ಹಿತವಾಗಿತ್ತು.
ಒಂದು ಜನಾಂಗದ ಸಂಸ್ಕೃತಿಯನ್ನು ಮಹಾಕಾವ್ಯಗಳು ಹೇಳುತ್ತವೆ ಅನ್ನುತ್ತಲೇ ರಾಮಾಯಣವು ಜನರ ಭಾವನೆಗಳನ್ನು ಹೇಗೆ ಹೇಳ್ತದೆ ಅನ್ನುವುದನ್ನು ಅವರು ರಾಮಾಯಣದಲ್ಲಿ ಬರುವ ಸನ್ನಿವೇಶಗಳನ್ನು ಉದಾಹರಿಸುತ್ತಾ ಹೋದರು. ಸಾವಿರಾರು ವರ್ಷಗಳ ಹಿಂದೆ ವಾಲ್ಮೀಕಿ ಇಂತಹದ್ದೊಂದು ಮಹಾಕಾವ್ಯ ರಚಿಸಿ ರಾಮನ ಪಾತ್ರದ ಸಂಘರ್ಷಗಳನ್ನು ಚಿತ್ರಿಸಿರುವುದು ಅಚ್ಚರಿಯನ್ನು ಉಂಟು ಮಾಡುವಂತಹದ್ದು. ರಾಮಾಯಣದಲ್ಲಿ ಅನೇಕ ಸಂಘರ್ಷದ ಸನ್ನಿವೇಶಗಳು ಬರ್ತವೆ ಅನ್ನುವುದನ್ನು ಉದಾಹರಣೆಗಳ ಮೂಲಕ ಹೇಳಿದ್ದು ರಾಮನ ಮತ್ತು ಇತರ ಪಾತ್ರಗಳ ನಡೆಯನ್ನು ಅರ್ಥೈಸಿಕೊಳ್ಳಲು ಸಹಾಯವಾಯಿತು. ನಡೆ ನುಡಿಗಳ ಮೂಲಕ ಮೌಲ್ಯಗಳನ್ನು ಹೇಗೆ ಎತ್ತಿ ಹಿಡಿಯಬಹುದು ಅನ್ನುವುದೂ ವಿದಿತವಾಯಿತು. ದಶರಥನಿಗೂ ಅಡಿಗಡಿಗೆ ಸವಾಲುಗಳನ್ನು ಎದುರಿಸಬೇಕಾಗಿ ಬಂತು; ಅವನ ಮೊದಲ ಸಂಘರ್ಷ- ಎಳೆ ಪ್ರಾಯದ ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರನೊಂದಿಗೆ ಕಳುಹಿಸಬೇಕಾಗುವ ಸಂದರ್ಭ. ತಾಟಕಿಯ ವಧೆ ಮಾಡಬೇಕಾದಾಗ ರಾಮನಿಗೆ ಸ್ತ್ರೀ ದಾಕ್ಷಿಣ್ಯ. ಪರಶುರಾಮನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ನಿಭಾಯಿಸಬೇಕಾಗುವ ಸಂದರ್ಭ, ಕಾಡಿಗೆ ಹೊರಡುವಾಗ ತಂದೆಯ ಹಾಗೂ ಇತರರ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾದ ಸಂದರ್ಭ, ವಾಲಿ ಸುಗ್ರೀವರಲ್ಲಿ ಯಾರನ್ನು ಆಧರಿಸಬೇಕು, ವಿಭೀಷಣನ ಸ್ನೇಹವನ್ನು ಹೇಗೆ ಸ್ವೀಕರಿಸಬೇಕು ಇತ್ಯಾದಿ ಇತ್ಯಾದಿ..
ರಾಮನಿಗೆ ಬಲಶಾಲಿಗಳಾದ ಮಿತ್ರರು ಬೇಕಿರಲಿಲ್ಲ, ಆತನಿಗೆ ಮೌಲ್ಯವನ್ನು ಅರಿತ ಮಿತ್ರರು ಬೇಕಾಗಿತ್ತು. ಸುಗ್ರೀವ, ವಿಭೀಷಣ, ಹನುಮಂತ ಇವರ ಸ್ನೇಹವನ್ನು ಒಪ್ಪುವ ರಾಮನಿಗೆ ತನ್ನ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸಂಘರ್ಷಗಳು ಎದುರಾದವು ಮತ್ತು ಒಬ್ಬ ಕ್ಷತ್ರಿಯನಾಗಿ, ರಾಜನ ಮಗನಾಗಿ, ಭರತ ಲಕ್ಷ್ಮಣರಿಗೆ ಅಣ್ಣನಾಗಿ, ಸೀತೆಯ ಪತಿಯಾಗಿ, ಪ್ರಜೆಗಳ ಅನುರಾಗಿಯಾಗಿ ತಾನು ನಂಬಿದ ಮೌಲ್ಯಗಳನ್ನು ಹೇಗೆ ಪೋಷಿಸುತ್ತಾ ನಡೆದು; ಪಾಲಿಸಿದ ಎಂಬುದನ್ನು ದೃಷ್ಟಾಂತಗಳ ಜೊತೆಗೆ ಕೊಟ್ಟ ವಿವರಣೆ, ವಿಶ್ಲೇಷಣೆ ಸ್ವಾರಸ್ಯಪೂರ್ಣವಾಗಿತ್ತು.
ರಾಮನಿಗೆ, ಆತನ ಜೀವನದ ಪ್ರತಿ ಹಂತದಲ್ಲೂ ಸವಾಲುಗಳೇ ಸವಾಲುಗಳು. ಆದರೆ ಆತ ದೃಢಚಿತ್ತನು. ತನ್ನ ಮಾತಿಗೆ, ತನ್ನ ನಿಲುವಿಗೆ ಬದ್ಧನಾಗಿ ನಿಂತವನು. ಅರಮನೆಯ ರಾಜಕೀಯವನ್ನಾಗಲೀ ಕೌಟುಂಬಿಕ ರಾಜಕೀಯವನ್ನಾಗಲಿ ಅರಿತು, ಅರ್ಥೈಸಿಕೊಂಡು ಅದಕ್ಕೆ ಸರಿಯಾಗಿ ತನ್ನ ನಡೆಯನ್ನು ನಿರ್ಧರಿಸಿಕೊಂಡವನು.. ಎಂಬಿತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲಿರುವುದು ರಾಮಾಯಣದ ಮರು ಓದಿಗೆ ಪ್ರೇರೇಪಿಸಿದಂತಾಗಿದೆ.
ಯುಗಧರ್ಮವನ್ನು, ಕಾಲಧರ್ಮವನ್ನು ಮೌಲ್ಯಗಳನ್ನು ಕಾವ್ಯದ ಮೂಲಕ ಹೇಳಬೇಕು ಎಂಬ ಮಹಾಕವಿಯ ಆಕಾಂಕ್ಷೆ ಕಾಣುತ್ತದೆ ಎಂಬ ಉಪನ್ಯಾಸಕಾರರ ಮಾತು ಉಲ್ಲೇಖನೀಯ.
ಕಾರ್ಯಕ್ರಮದ ಆರಂಭದಲ್ಲಿ ನಡೆದ ‘ ಮುಂಬೈ ಯಕ್ಷಗಾನ ರಂಗಭೂಮಿ ಪರಂಪರೆ ಮತ್ತು ಸವಾಲುಗಳು ‘ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲಾ ಹಿರಿಯ ಕಲಾವಿದರ ಮಾತು ಸೊಗಸಾಗಿತ್ತು.
ಅಂದಿನ ಕಾರ್ಯಕ್ರಮಗಳ ಆಯೋಜಕರಿಗೂ, ವಿದ್ವಾಂಸರಿಗೂ ಅನಂತ ವಂದನೆಗಳು.
– ಕವಿತಾ ಅರುಣ್ ಶೆಟ್ಟಿ