ಬಂಟ್ವಾಳದ ತುಂಬೆಗುತ್ತು ಮನೆತನದ ಸುಬ್ಬಯ್ಯ ಆಳ್ವ ಮತ್ತು ತುಂಗಮ್ಮ ದಂಪತಿಗಳ ಹಿರಿ ಮಗಳಾಗಿ 29 ಅಕ್ಟೋಬರ್ 1916ರಂದು ಜನಿಸಿದ ಚಂದ್ರಭಾಗಿ ರೈಯವರು ಸ್ವತಂತ್ರ ಪೂರ್ವದಿಂದಲೇ ಲೇಖಕಿಯಾಗಿ ಗುರುತಿಸಿಕೊಂಡವರು. ಸಾಹಿತ್ಯ ಪ್ರೇಮಿಯಾದ ತಂದೆಯಿಂದಾಗಿ ಚಂದ್ರಭಾಗಿ ರೈಯವರಿಗೆ ಓದುವ ಹವ್ಯಾಸ ಬೆಳೆಯಿತು. ಸಂಗೀತ, ನಾಟಕ, ಆಶು ಕವಿತೆ ರಚನೆಯೂ ಅವರ ಆಸಕ್ತಿಯ ವಿಷಯವಾಗಿತ್ತು. ಬಾಲ್ಯದಲ್ಲಿಯೇ ಸುತ್ತಮುತ್ತಲ ಮಕ್ಕಳನ್ನು ಸೇರಿಸಿ, ತಾನೇ ಬರೆದ ನಾಟಕಗಳನ್ನು, ಹಾಡುಗಳನ್ನು ಕಲಿಸಿ ಪ್ರದರ್ಶನ ಮಾಡುತ್ತಿದ್ದರು ಎಂಬುದನ್ನು ಅವರ ತಮ್ಮ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಸ್ಮರಿಸಿಕೊಳ್ಳುತ್ತಿದ್ದರು. ಸೃಷ್ಠಿಶೀಲ ಪ್ರತಿಭೆಯುಳ್ಳ ಚಂದ್ರಭಾಗಿ ರೈಯವರು ದೇರಾಜೆಯ ಕೃಷ್ಣ ರೈಯವರನ್ನು ವಿವಾಹವಾದರು. ತನ್ನ ವಿವಾಹದ ಆರತಿಯ ಹಾಡನ್ನೂ ತಾನೇ ರಚಿಸಿ, ರಾಗ ಹಾಕಿ ಮದುವೆಯ ದಿನದಂದು ಹಾಡಿಸಿದ್ದರಂತೆ. ಕೃಷ್ಣ ರೈಗಳಿಗೆ ಸಾಹಿತ್ಯ ಸಂಗೀತಗಳಲ್ಲಿ ಆಸಕ್ತಿ ಇಲ್ಲದ ಕಾರಣ ಹೆಚ್ಚಿನ ಪ್ರೋತ್ಸಾಹ ಸಿಗದಿದ್ದರೂ ಕಂಗೆಡದೆ ಚಂದ್ರಭಾಗಿ ರೈಯವರು ಸೀಮಿತ ಅವಕಾಶದೊಳಗೂ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಕವನ, ಲೇಖನ, ಕತೆಗಳು ಆ ಕಾಲದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕುಟುಂಬದೊಳಗಿನ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ ತನ್ನ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ಜಾಣ್ಮೆಯನ್ನು ಮಗಳು ಕಾಂತಿ ರೈ ಕೊಂಡಾಡುತ್ತಾರೆ.
ಅವರ ದೂರದರ್ಶಿತ್ವವು ವಿಶಿಷ್ಟವಾಗಿತ್ತು. ಪರಿಸರ ರಕ್ಷಣೆ, ನೀರಿನ ಮಿತ ಬಳಕೆ, ವೇಸ್ಟ್ ರೀಸೈಕಲ್ ಮುಂತಾದವುಗಳನ್ನು ಕಳೆದ ಶತಮಾನದ ಉತ್ತರಾರ್ಧದಲ್ಲೇ ಅವರು ಜಾರಿಗೆ ತಂದಿದ್ದರು ಎಂಬುದು ವಿಸ್ಮಯದ ವಿಷಯವಾಗಿದೆ. ಕಸದಿಂದ ಕಲೆಯನ್ನು ಸೃಷ್ಟಿಸುವ ಅವರ ಪ್ರತಿಭೆಗೆ ಹಲವು ಪುರಸ್ಕಾರಗಳು ಲಭಿಸಿವೆ. ಪಾಕ ಶಾಸ್ತ್ರದಲ್ಲೂ ಪ್ರವೀಣೆಯಾದುದರಿಂದ ಅನೇಕ ಬಹುಮಾನಗಳನ್ನು ಪಡೆದಿದ್ದರು. ವಿಶೇಷವೆಂದರೆ ಖ್ಯಾತ ನಾಟೀ ವೈದ್ಯೆಯಾಗಿಯೂ ಕೆಲಸ ಮಾಡಿದ್ದರು. ಹೀಗೆ ಸಕಲ ಕಲಾ ಪರಿಣತಿಯುಳ್ಳ ಚಂದ್ರಭಾಗಿ ರೈಯವರಂತಹ ಸಾಧಕಿಯರು ವಿರಳಾತಿವಿರಳರು.
ಸಮಾಜದಲ್ಲಿ ಹೆಣ್ಣಿಗೆ ಆಗುತ್ತಿದ್ದ ಅನ್ಯಾಯ, ಶೋಷಣೆ ಇತ್ಯಾದಿಗಳನ್ನು ಪ್ರತಿಭಟಿಸಿ ಲೇಖನಗಳನ್ನು ಬರೆಯುತ್ತಿದ್ದರು. ಈ ಲೇಖನಗಳ ಸಂಕಲನವು 1996ರಲ್ಲಿ ಕರಾವಳಿ ಲೇಖಕಿಯರು ವಾಚಕಿಯರ ಸಂಘದಲ್ಲಿ ಬಿಡುಗಡೆಗೊಂಡಿದೆ. ‘ಪ್ರೇಮವೇ ದೇವರು’, ಎಂಬ ಕೃತಿಯೂ ಪ್ರಕಟಗೊಂಡಿದೆ. ಕವಿತೆ, ನಾಟಕ, ಕತೆ, ಲೇಖನಗಳ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸುತ್ತಿದ್ದರು. ಅವುಗಳಲ್ಲಿ ಎಷ್ಟೋ ಕೃತಿಗಳು ಪ್ರಕಟವಾಗಲೇ ಇಲ್ಲ. ಹೆಣ್ಣು ಗಂಡಿನೊಡನೆ ಸ್ಪರ್ಧಿಸುವವಳಲ್ಲ. ಅವನ ಜೊತೆ ಸೇರಿ ಪೂರ್ಣತೆಯನ್ನು ಸಾಧಿಸುವವಳು. ಎಂಬುದನ್ನೂ ದೃಢವಾಗಿ ನಂಬಿದ ಚಂದ್ರಭಾಗಿ ರೈಯವರು ನಮ್ಮ ಪೀಳಿಗೆಗೆ ಆದರ್ಶ ಪ್ರಾಯರಾದವರು. ಹೆತ್ತವರು ಬಾಲ್ಯದಲ್ಲಿ ನೀಡಿದ ಸಂಸ್ಕಾರದಿಂದ ಅವರಿಗೆ ಅನಂತವಾದ ಸಹನಶೀಲ ಗುಣ ಪ್ರಾಪ್ತವಾಗಿದೆ. 80ರ ಇಳಿ ವಯಸ್ಸಿನಲ್ಲೂ ಕರಾವಳಿ ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಅಭಿನಯ ಪೂರ್ವಕವಾಗಿ ಮಾತನಾಡಿ ನಮ್ಮನ್ನು ರಂಜಿಸಿದ ಅ ಕ್ಷಣಗಳು ಕಣ್ಣಿಗೆ ಕಟ್ಟಿದಂತಿದೆ. ಮಹಿಳೆ ಸಮಾಜದ ಅರ್ಧಾಂಗ ಅಲ್ಲ ಮುಖ್ಯಾಂಗ’. ಒಬ್ಬ ದೇವನ ಆರಾಧನೆಗೆ ಇಷ್ಟೆಲ್ಲಾ ಕಷ್ಟನಷ್ಟಗಳು ಯಾಕೆ? ಗೊಂದಲಗಳಿಲ್ಲದೆ ಆರಾಧನೆ ಸಾಧ್ಯವಿಲ್ಲವೇ? ಇವು ಅವರದೇ ಮಾತುಗಳು. ಸಾಮಾಜಿಕವಾಗಿ ಮತ್ತು ವೈಚಾರಿಕವಾಗಿ ಸಂಸ್ಕೃತಿಕವಾಗಿ ಚಿಂತಿಸುವ ಶಕ್ತಿ ಅವರಿಗಿತ್ತು. ತುಳುವಿನಲ್ಲೂ ಅನೇಕ ಕವನಗಳನ್ನು ರಚಿಸಿದ ಹೆಗ್ಗಳಿಕೆ ಅವರದು. 1940ರಿಂದಲೇ ಸಾಹಿತ್ಯ ಕೃಷಿ ಮಾಡುತ್ತಾ ಬಂದಿರುವ ಚಂದ್ರಭಾಗಿ ರೈಯವರು ದಿನಾಂಕ 12 ಫೆಬ್ರುವರಿ 2001ರಂದು ನಿಧನರಾಗುವವರೆಗೂ ಸಾಹಿತ್ಯವನ್ನೇ ಧ್ಯಾನಿಸುತ್ತಿದ್ದವರು.
ದಿನಾಂಕ 8 ಫೆಬ್ರುವರಿ 2001ರಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಗೌರವಿಸಲ್ಪಟ್ಟರು. ಕರ್ನಾಟಕ ಲೇಖಕಿಯರ ಸಂಘದ ‘ಅತ್ತಿಮಬ್ಬೆ ಪ್ರಶಸ್ತಿ’ಗೂ ಭಾಜನರಾದರು. ಬಾಳಿನ ಧಾರ್ಮಿಕತೆಯನ್ನೂ, ಪಾವಿತ್ರ್ಯವನ್ನೂ ರಕ್ಷಿಸುವವಳು ಹೆಣ್ಣು. “ಹೆಣ್ಣನ್ನು ಅಬಲೆ ಎಂದು ಕರೆದರೆ ನಿಂದೆ, ಇದು ಗಂಡು ಹೆಣ್ಣಿಗೆ ಮಾಡುವ ಅನ್ಯಾಯ” ಇದು ಗಾಂಧೀಜಿಯ ಮಾತು. ಈ ಮಾತನ್ನು ಸಾರ್ಥಕಗೊಳಿಸಿದವರು ಚಂದ್ರಭಾಗಿ ರೈಯವರು. ಇವರು ಮುಂದಿನ ಪೀಳಿಗೆಗೆ ಪ್ರಾತಃಸ್ಮರಣೀಯರು.
ಶ್ರೀಮತಿ ಬಿ.ಎಂ. ರೋಹಿಣಿ
ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ ಸರಳ ಸ್ವಭಾವದ ಬಿ.ಎಂ. ರೋಹಿಣಿಯವರು ಬಂಟ್ವಾಳದ ತುಂಬೆಯ ಕಾಣೆಮಾರಿನಲ್ಲಿ ತಾಯಿ ದೇವಕಿ ಮತ್ತು ತಂದೆ ಕೊಗ್ಗಪ್ಪ ಅವರ ಸುಪುತ್ರಿ. ಬಡತನದಲ್ಲಿ ಛಲದಿಂದ ಓದು ಮುಗಿಸಿ ಶಾಲಾ ಶಿಕ್ಷಕಿಯಾಗಿ ಅಪಾರ ಸಾಧನೆ ಮಾಡಿದವರು.
ಕರ್ತವ್ಯ, ಗರಿಕೆಯ ಕುಡಿಗಳು, ಒಂದು ಹಿಡಿ ಮಣ್ಣು ಇವರ ಕಥಾ ಸಂಕಲನಗಳು. ಸ್ತ್ರೀ-ಸಂವೇದನೆ, ಸ್ತ್ರೀ ಶಿಕ್ಷಣ ಸಂಸ್ಕೃತಿ, ಸ್ತ್ರೀ ಭಿನ್ನ ಮುಖಗಳು, ಸಾಮಾಜಿಕ ತಲ್ಲಣಗಳು, ಆರಾಧನಾ ರಂಗದಲ್ಲಿ ಸ್ತ್ರೀ, ಪ್ರತಿಸ್ಪಂದನ ಮತ್ತು ಸಮೀಕ್ಷೆ ಅವರ ಲೇಖನ/ವಿಮರ್ಶಾ ಕೃತಿಗಳು. ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ವಿಶಿಷ್ಟ. ಅವಿವಾಹಿತ ಮಹಿಳೆ- ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ ಇವು ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳು. ವೇಶ್ಯಾವಾಟಿಕೆಯ ಕಥೆ-ವ್ಯಥೆ (2022) ಅವರದೇ ಸಂಶೋಧನಾ ಕೃತಿ. ‘ಅಧ್ಯಾಪಕಿಯ ಅಧ್ವಾನಗಳು’ ಅನುಭವ ಕಥನ. ‘ನಾಗಂದಿಗೆಯೊಳಗಿನಿಂದ’ ಜೀವನ ಕಥನ. ಎಪ್ಪತ್ತೊಂಬತ್ತರ ಹರೆಯದಲ್ಲೂ ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ರೋಹಿಣಿಯವರನ್ನು ಹಲವು ಸಂಘ ಸಂಸ್ಥೆಗಳು ಗೌರವಿಸಿವೆ.