Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ಕೃತಿ ವಿಭೂತಿ ಪುರುಷ ಸಾ.ಶಿ. ಮರುಳಯ್ಯ
    Literature

    ವಿಶೇಷ ಲೇಖನ | ಕೃತಿ ವಿಭೂತಿ ಪುರುಷ ಸಾ.ಶಿ. ಮರುಳಯ್ಯ

    January 28, 20251 Comment3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ವಿಜೃಂಭಿಸಿರುವ ಮೇರು ತಾರೆಗಳ ಸಾಲಿನಲ್ಲಿ ಸೇರಿದ ಸಾ.ಶಿ. ಮರುಳಯ್ಯನವರು ಕವಿ, ವಿಮರ್ಶಕ, ಸಂಶೋಧಕ, ಕನ್ನಡದ ಖ್ಯಾತ ಬರಹಗಾರ ವಿದ್ವಾಂಸ, ಶಿಕ್ಷಣತಜ್ಞ, ಉತ್ತಮವಾಗ್ಮಿ ಹಾಗೂ ಆಡಳಿತಗಾರರೆಂದು ಹೆಸರಾಗಿದ್ದವರು. ಇಂತಹ ಬಹುಮುಖ ಪ್ರತಿಭಾನ್ವಿತ ಅಪ್ರತಿಮ ಸಾಹಿತಿಯವರ ಪೂರ್ಣ ಹೆಸರು ಸಾಸಲು ಶಿವರುದ್ರಯ್ಯ ಮರುಳಯ್ಯ ಎಂದು. 1931ರ ಜನವರಿ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಶಿವರುದ್ರಯ್ಯನವರು, ತಾಯಿ ಸಿದ್ಧಮ್ಮನವರು. ಸಾಸಲು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಪಡೆದರು. ಇಂಟರ್ಮೀಡಿಯಟ್ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು. ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ. ಮರುಳಯ್ಯ ಬಿ.ಎ ಆನರ್ಸ್ನಲ್ಲಿ ಡಿ.ಎಲ್.ಎನ್., ತ.ಸು. ಶಮರಾಯ, ಎಸ್.ವಿ. ಪರಮೇಶ್ವರ ಭಟ್ಟ, ಎಸ್.ವಿ. ರಂಗಣ್ಣ, ಕುವೆಂಪು, ದೇಜಗೌರಂಥ ವಿದ್ವಾಂಸರ ಮಾರ್ಗದರ್ಶನ ಪಡೆದರು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರು. ಸಾ.ಶಿ. ಮರುಳಯ್ಯನವರು ರಾಜ್ಯದ ಹಲವೆಡೆಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಮೂವತ್ತು ವರ್ಷಗಳ ಬೋಧನಾನುಭವವನ್ನು, ಆಡಳಿತಾನುಭವವನ್ನು ಹೊಂದಿ ಕಾರ್ಯನಿರ್ವಹಿಸಿದ್ದಾರೆ.

    ಶಿಕ್ಷಣದಲ್ಲಿ ತಮ್ಮ ಕಾರ್ಯನಿರ್ವಹಣೆಯಲ್ಲದೆ ಕನ್ನಡ ವಿಶ್ವಕೋಶ ಪ್ರಧಾನ ಸಂಪಾದಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಹಾಗೂ 1995-98ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಅವರು ಕಾರ್ಯನಿರ್ವಹಿಸುವುದರೊಂದಿಗೆ ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರ ಕಾರ್ಯವಧಿಯಲ್ಲಿ ಕನ್ನಡ ನಿಘಂಟು ಕೆಲಸ ಪೂರ್ಣಗೊಂಡಿತು. ವೃತ್ತಿಯಲ್ಲಿ ಕನ್ನಡ ಶಿಕ್ಷಕರಾಗಿದ್ದ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಕೃಷಿಗೈದಿದ್ದಾರೆ. ಅವರ ಬರವಣಿಗೆಗಳಲ್ಲಿ ಆಳ ಹರಹುಗಳಿವೆ, ವಿಷಯ ವೈವಿಧ್ಯಮಯವಾಗಿದೆ. ಕಾವ್ಯ, ಪ್ರಹಸನ, ಜೀವನಚಿತ್ರಣ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ, ವ್ಯಾಕರಣ ಮುಂತಾದ ಪ್ರಕಾರಗಳಲ್ಲಿ ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ತಮ್ಮ ಬರಹಗಳಲ್ಲಿ ಪ್ರಕೃತಿ, ಪ್ರೀತಿ, ಸಮಾಜಮುಖಿ ಆಲೋಚನೆ, ಭಕ್ತಿ ಮತ್ತು ತಮ್ಮ ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಡಾ. ರಾಜಕುಮಾರರ ಹಾಡುಗಳನ್ನು ಹಾಡಿದ್ದಾರೆ. ಗಾಂಧಿ, ಅಕ್ಕಮಹಾದೇವಿ ಮೊದಲಾದವರ ಕವಿತೆಗಳನ್ನು ಬರೆದಿದ್ದಾರೆ. ಇವರನ್ನು ‘ಕೃತಿ ವಿಭೂತಿ ಪುರುಷ’ರೆಂದು ಅನೇಕರು ಕರೆಯತ್ತಾರೆ.

    ಅವರ ಕವನ ಸಂಕಲನದ ರಾಸಲೀಲೆಯಲ್ಲಿ ಭಕ್ತಿ ಗೀತೆಗಳಿವೆ. ಬೃಂದಾವನ ಲೀಲೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಜನಪ್ರಿಯವಾಗಿದೆ. ನಾಟಕಗಳಲ್ಲಿ ‘ಸ್ನೋ ವೈಟ್’ ಬಹಳ ಮುಖ್ಯ ನಾಟಕ. ಸ್ನೋ ವೈಟ್ ಒಂದು ನೃತ್ಯ ನಾಟಕ. ಇದನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ. ಭಾಸನ ‘ಸ್ವಪ್ನವಾಸವದತ್ತ’ ಸಂಸ್ಕೃತ ನಾಟಕವನ್ನು ಅನುವಾದಿಸಿದ್ದಾರೆ. ಕೆಂಗನಕಲ್ಲು (ಕವನ ಸಂಕಲನ), ಭಾಸನ ಮಕ್ಕಳು (ವಿಮರ್ಶಾಗ್ರಂಥ) ಕೃತಿಗಳಿಗೆ ಬಹುಮಾನ ಬಂದಿದೆ. ಗ್ರೀಮ್ ಸಹೋದರರ ಕಥೆಯನ್ನು ಆಧರಿಸಿದ ನಾಟಕ ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡು ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚಿಗೆ ಪಡೆದಿದೆ. ‘ಶ್ರೀಮರುಳಸಿದ್ಧೇಶ್ವರ ವಚನ ವೈಭವ’ ಮರುಳಯ್ಯನವರ ಕಥನ ಕವನವಾಗಿದೆ. ಕಾದಂಬರಿಗಳ ಲೋಕದಲ್ಲಿ ‘ನೂಪುರಾಲಸ’, ‘ಪುರುಷಸಿಂಹ’, ‘ಹೇಮಕೂಟ’, ‘ಸಾಮರಸ್ಯಶಿಲ್ಪ’, ‘ಅನುಶೀಲನೆ’ ಅವರ ಕೊಡುಗೆಗಳಾಗಿವೆ. ಅವರ ಹಲವಾರು ಗೀತೆಗಳು ಭಾವಗೀತೆಗಳ ಲೋಕದಲ್ಲಿ ಸಹಾ ಪ್ರಸಿದ್ಧವಾಗಿವೆ.

    ಹೀಗೆ ವಿವಿಧ ರೂಪಗಳಲ್ಲಿ ಕನ್ನಡ ತಾಯಿಯ ಸೇವೆಯನ್ನು ನಡೆಸಿರುವ ಡಾ. ಸಾ.ಶಿ. ಮರುಳಯ್ಯನವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಮನುಶ್ರೀ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ. ಡಾ. ಸಾ.ಶಿ. ಮರುಳಯ್ಯನವರು 2016ರ ಫೆಬ್ರವರಿ 5, ಶುಕ್ರವಾರ ಮುಂಜಾನೆ ಜಯದೇವ ಕಾರ್ಡಿಯೋ ನಾಳೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೃದಯಾಘಾತದಿಂದ ಈ ಲೋಕವನ್ನಗಲಿದರು. ಬೆಂಗಳೂರು ನಗರದಲ್ಲಿ ನಿಧನರಾದ ವಿದ್ವಾಂಸ, ಕವಿ ಸಾ.ಶಿ. ಮರುಳಯ್ಯ ಅವರು ಉಯಿಲಿನಲ್ಲಿ ಬಯಿಸಿದಂತೆ ಕಣ್ಣುಗಳನ್ನು ಹಾಗೂ ಪಾರ್ಥಿವ ಶರೀರವನ್ನು ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲಾಯಿತು.

    ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟುಹಾಕಿದ ಇಂತಹ ಧೀಮಂತ ಹಿರಿಯ ಸಾಹಿತಿಯ ಸೇವಾ ಕೈಂಕರ್ಯವನ್ನು ಮೆಲುಕು ಹಾಕುತ್ತಾ ಅವರ ಜನುಮ ದಿನವಾದ ಇಂದು ಆ ದಿವ್ಯಚೇತನವನ್ನು ಹೃತ್ಪೂರ್ವಕ ನಮನಗಳೊಂದಿಗೆ ಅಭಿನಂದಿಸೋಣ.

    ಡಾ. ಕೆ. ಯಶೋಧರ
    ಶಿಕ್ಷಣ ಪ್ರಾಧ್ಯಾಪಕರು (ನಿವೃತ್ತ), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿ ಮಣಿಪಾಲ ಅಂದು-ಇಂದು ‘ಮಿನಿ ಕಾಫಿಟೇಬಲ್’ ಚಿತ್ರ ಸಂಪುಟ ಲೋಕಾರ್ಪಣೆ | ಫೆಬ್ರವರಿ 01
    Next Article ಗೋವಿಂದ ದಾಸ ಕಾಲೇಜಿನಲ್ಲಿ ‘ಗಾನ ಶಾರದೆಗೆ ನಮನ… ಗುರುವಿಗೊಂದು ನಾಟ್ಯ ನಮನ’ ಕಾರ್ಯಕ್ರಮ
    roovari

    1 Comment

    1. ನಾಗರತ್ನ ಕೆ.ಆರ್ on January 29, 2025 4:09 pm

      ಕನ್ನಡ ಸಾರಸ್ವತ ಲೋಕದಲ್ಲಿ ಚಿರಸ್ಥಾಯಿಯಾಗಿರುವ
      ಡಾ. ಸಾ.ಶಿ.ಮರುಳಯ್ಯನವರ ಸಾರ್ಥಕ ಬದುಕನ್ನು ಮತ್ತು ಬರಹ ಸಾಧನೆಯ ತ್ರಿವಿಕ್ರಮ ಸ್ವರೂಪವನ್ನು ಈ ಕಿರು ಲೇಖನದಲ್ಲಿ ಕನ್ನಡಿಗರ ಮನ ಮುಟ್ಟುವಂತೆ ಪರಿಚಯಿಸಿರುವ ಲೇಖಕಿ ಡಾ. ಯಶೋಧರಾ ರವರಿಗೆ
      ಹೃತ್ಪೂರ್ವಕ ಕೃತಜ್ಞತೆಗಳು.

      Reply

    Add Comment Cancel Reply


    Related Posts

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    1 Comment

    1. ನಾಗರತ್ನ ಕೆ.ಆರ್ on January 29, 2025 4:09 pm

      ಕನ್ನಡ ಸಾರಸ್ವತ ಲೋಕದಲ್ಲಿ ಚಿರಸ್ಥಾಯಿಯಾಗಿರುವ
      ಡಾ. ಸಾ.ಶಿ.ಮರುಳಯ್ಯನವರ ಸಾರ್ಥಕ ಬದುಕನ್ನು ಮತ್ತು ಬರಹ ಸಾಧನೆಯ ತ್ರಿವಿಕ್ರಮ ಸ್ವರೂಪವನ್ನು ಈ ಕಿರು ಲೇಖನದಲ್ಲಿ ಕನ್ನಡಿಗರ ಮನ ಮುಟ್ಟುವಂತೆ ಪರಿಚಯಿಸಿರುವ ಲೇಖಕಿ ಡಾ. ಯಶೋಧರಾ ರವರಿಗೆ
      ಹೃತ್ಪೂರ್ವಕ ಕೃತಜ್ಞತೆಗಳು.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.