ಕನ್ನಡ ನೆಲ, ಸಂಸ್ಕೃತಿಯ ಕುರಿತಂತೆ ಆಳವಾಗಿ ಅಧ್ಯಯನ ಮಾಡಿದ ಶ್ರೇಷ್ಠ ಕನ್ನಡದ ಸಂಶೋಧಕರಲ್ಲಿ ಶಂ.ಬಾ. ಜೋಶಿಯವರು ಒಬ್ಬರು. ಕನ್ನಡ, ಇಂಗ್ಲೀಷ್, ಸಂಸ್ಕೃತ, ಮರಾಠಿ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಶಂ.ಬಾ. ಜೋಶಿಯವರ ಅರಿವಿನ ಹರವು ವಿಶಾಲವಾದುದ್ದು. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆ ವಿಶಿಷ್ಟವಾದುದು. ಗೋವಿಂದ ಪೈಯವರ ಸಮಕಾಲೀನರಾಗಿದ್ದ ಶಂ.ಬಾ. ಜೋಶಿಯವರು ಕನ್ನಡ ಸಾಂಸ್ಕೃತಿಕ ಶೋಧದಲ್ಲಿ ತಾವು ಬಳಸಿದ ವಿಶ್ಲೇಷಣಾ ವಿಧಾನ ಮತ್ತು ಅಧ್ಯಯನ ಕ್ರಮಗಳಿಂದ ವಿಶಿಷ್ಟರಾಗಿದ್ದಾರೆ. ಸಂಸ್ಕೃತಿಯ ಬಹುಶಿಸ್ತೀಯ ಅಧ್ಯಯನ ವಿಧಾನ, ಪರಿಕಲ್ಪನಾತ್ಮಕವಾಗಿ ಸಂಸ್ಕೃತಿಯ ವ್ಯಾಖ್ಯಾನದ ಪ್ರಯತ್ನ, ಗತಕಾಲದ ವೈಚಾರಿಕ ಆಕೃತಿಗಳು, ವರ್ತಮಾನವನ್ನು ಪ್ರಭಾವಿಸುವ ಬಗೆಯನ್ನು ಅರಿಯುವ ಹಂಬಲ ಮತ್ತು ನೈತಿಕ ಆಯ್ಕೆಯನ್ನು ಮಾಡುವ ಸ್ಥೈರ್ಯ ಇವುಗಳಿಂದಾಗಿ ಶಂ.ಬಾ.ರವರು ಮುಖ್ಯರಾಗುತ್ತಾರೆ.
ಕನ್ನಡ ಸಾರಸ್ವತ ಲೋಕದಲ್ಲಿ ‘ಶಂ.ಬಾ.’ ಎಂದೇ ಪ್ರಖ್ಯಾತರಾದ ಶಂಕರ ಬಾಳದೀಕ್ಷಿತ ಜೋಶಿಯವರು, ಬಾಳದೀಕ್ಷಿತ ಜೋಶಿ ಮತ್ತು ಉಮಾಬಾಯಿ ದಂಪತಿಗಳ ಮಗನಾಗಿ 1896ರ ಜನವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಮತ್ತು ಧಾರವಾಡಗಳಲ್ಲಿ ಪೂರೈಸಿ, ನಂತರ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು.
ಬಾಲಗಂಗಾಧರ ತಿಲಕರ ಪ್ರಭಾವದಿಂದ ದೇಶ ಸೇವೆ ಮಾಡುವ ಹಂಬಲ ಹೆಚ್ಚಾಯಿತು. ಬೆಳಗಾವಿಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವಾಗ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಅವರ ಜೊತೆ ಓಡಾಡಿದರು. ಇದನ್ನು ಗಮನಿಸಿದ ಸರ್ಕಾರ ಅವರನ್ನು ವರ್ಗಾವಣೆ ಮಾಡಿತು. ಇದರಿಂದ ಬೇಸರಗೊಂಡ ಶಂ.ಬಾ. ಜೋಶಿಯವರು ಕೆಲಸಕ್ಕೆ ರಾಜೀನಾಮೆ ನೀಡಿ ಪತ್ರಿಕೆಯಲ್ಲಿ ಬರೆಯುವ ಕೆಲಸಕ್ಕೆ ಸೇರಿಕೊಂಡರು. ಕರ್ನಾಟಕ ವೃತ್ತ, ಧನಂಜಯ, ಕರ್ಮವೀರ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಮುಂದೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಮುಂದುವರಿಸಿ 1946ರಲ್ಲಿ ನಿವೃತ್ತರಾದರು.
ಶಂಬಾ ಜೋಶಿಯವರು ವಿಚಾರವಾದಿಗಳು. ತಾವು ಕೈಗೊಂಡ ಪ್ರತಿಯೊಂದು ಕಾರ್ಯದಲ್ಲೂ ಸ್ವಂತಿಕೆಯನ್ನು ಉಳಿಸಿಕೊಂಡು ಬಂದವರು. ಸಂಸ್ಕೃತಿ ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದವರು. ಸಂಸ್ಕೃತಿ ಅಧ್ಯಯನವನ್ನು ಸಾಂಪ್ರದಾಯಿಕ ನೆಲೆಯಿಂದ ಮಾಡದೆ ಅದನ್ನು ಭಾಷಾಶಾಸ್ತ್ರ, ಮನಃಶಾಸ್ತ್ರ, ಪುರಾತತ್ವಶಾಸ್ತ್ರ, ಇತಿಹಾಸ ಶಾಸ್ತ್ರ ಹೀಗೆ ವಿವಿಧ ಶಾಸ್ತ್ರಗಳ ನೆರವಿನಿಂದ ಆಳವಾದ ಅಧ್ಯಯನ ನಡೆಸಿದವರು. ಇವರ ಅಧ್ಯಯನದ ಬಗೆಗೆ ವಿ. ಸೀತಾರಾಮಯ್ಯನವರು ಹೀಗೆ ಹೇಳಿದ್ದಾರೆ. “ಅಪಾರವಾದ ಬುದ್ದಿಮತ್ತೆಯಿಂದ ತಮ್ಮ ಅಧ್ಯಯನವನ್ನು ಸ್ಪಷ್ಟವಾಗಿಸಿಕೊಂಡ ಧೀಮಂತ ಸಂಶೋಧಕ.” ಈ ಮಾತುಗಳು ಶಂ.ಬಾ ಜೋಶಿಯವರ ಅಧ್ಯಯನದ ವಿಧಾನ ಮತ್ತು ಆಳವನ್ನು ತಿಳಿಸುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಧ್ಯಯನದ ವಿಧಾನಗಳನ್ನು ಅನುಸರಿಸುವ ಮೂಲಕ ತಮ್ಮದೇ ಆದ ನೆಲೆಕಟ್ಟಿಕೊಟ್ಟವರು ಇವರು. ಭಾಷೆಯ ಮೇಲಿನ ಅಭಿಮಾನ ಇವರ ಸಂಶೋಧನೆಯನ್ನು ವಿಸ್ತರಿಸುತ್ತಾ ಹೋಯಿತು, ಸಂಸ್ಕೃತಿ ಚಿಂತನೆಯ ಬಗೆಗಿನ ಇವರ ಅಧ್ಯಯನಗಳು ಮತ್ತು ಚಿಂತನೆಗಳು ವಸ್ತುನಿಷ್ಠವಾಗಿದ್ದವು.
ಕನ್ನಡ ಭಾಷೆ, ಸಂಸ್ಕೃತಿಯ ಬಗೆಗೆ ಅಪಾರವಾದ ಒಲವು ಮತ್ತು ಅಭಿಮಾನ ಹೊಂದಿರುವ ಶಂ.ಬಾ.ರವರ ಅನೇಕ ಕೃತಿಗಳು ಹಾಗೂ ಸಂಶೋಧನೆಗಳು ಕನ್ನಡ ಸಂಸ್ಕೃತಿಯನ್ನು ಕುರಿತಾದವು. ಕನ್ನಡ ನೆಲ, ಸಂಸ್ಕೃತಿಯನ್ನು ಕುರಿತಾದ ಅವರ ಕೃತಿಗಳು ಅನೇಕ, ‘ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’, ‘ಕಣ್ಮರೆಯಾದ ಕನ್ನಡ’, ‘ಕನ್ನಡ ನುಡಿಯ ಜೀವಾಳ’, ‘ಕನ್ನಡ ಸಾಹಿತ್ಯ ಅಭಿವೃದ್ಧಿ’, ‘ಅನ್ನವಿದ್ಯೆ’, ‘ಯಕ್ಷಪ್ರಶ್ನೆ’, ‘ಹಾಲುಮತ ದರ್ಶನ’, ‘ನಾಗ ಪ್ರತಿಮಾ ವಿಚಾರ’, ‘ಕರ್ಣನ ಮೂರು ಚಿತ್ರಗಳು’, ‘ಎಡೆಗಳು ಹೇಳುವ ಕಂನಾಡ ಕಥೆ’, ‘ಕನ್ನಡದ ನೆಲೆ’ ಮುಂತಾದವು.
1947ರಲ್ಲಿ ಪ್ರಕಟವಾದ ‘ಎಡೆಗಳು ಹೇಳುವ ಕಂನಾಡ ಕಥೆಗಳು’ ಕೃತಿಯಲ್ಲಿ ಇವರು “ಊರ ಹೆಸರಿನಂತಹ ಕ್ಷುಲ್ಲಕವಾಗಿ ತೋರುವ ವಿಷಯದಲ್ಲಿ ಇಷ್ಟೊಂದು ಸಾಂಸ್ಕೃತಿಕ ಸಂಗತಿಗಳು ಹುದುಗಿಕೊಂಡಿವೆಯೆಂಬ ಕಲ್ಪನೆಯೆ ಮೊದಲು ಇರಲಿಲ್ಲ. ನಮ್ಮ ನಾಡಿನ ಎಡೆಗಳ ಹೆಸರಿನ ಅಭ್ಯಾಸಕ್ಕೊಂದು ವಿಶೇಷ ಮಹತ್ವವುಂಟೆಂದು ಇದನ್ನು ಬರೆವಾಗ ನನಗೆ ಮನವರಿಕೆಯಾಗಿದೆ. ಎಡೆಗಳ ಹೆಸರಿನ ಹಿನ್ನೆಲೆಯಲ್ಲಿ ನಮ್ಮ ನಾಡಿಗರ ರೂಢಿ, ಸಂಪ್ರದಾಯ ಮತ್ತು ಪೂರ್ವಪರಂಪರೆಗಳನ್ನು ಮಾನವ ಸಮಾಜ ವಿಕಾಸಶಾಸ್ತ್ರದ ಬೆಂಬಲದಿಂದ ಹೊಂದಿಸಿ ಹೇಳುವುದೇ ಈ ಲೇಖನದ ಗುರಿಯಾಗಿದೆ” ಎಂದಿದ್ದಾರೆ. ಈ ಮಾತುಗಳು ಇವರ ಅಧ್ಯಯನದ ಉದ್ದೇಶ ಹಾಗೂ ಅದರ ಬಗೆಗಿನ ಸ್ಪಷ್ಟ ಚಿತ್ರಣವನ್ನು ನಮಗೆ ಕೊಡುತ್ತದೆ. ಅಧ್ಯಯನವು ಕೇವಲ ಒಂದು ನೆಲೆಯಲ್ಲಿ ಸಾಗದೆ ವಿವಿಧ ಶಾಸ್ತ್ರಗಳ ಜೊತೆಗೆ ಅದನ್ನು ಬಹುಶಿಸ್ತೀಯಗೊಳಿಸಿ ಅಧ್ಯಯನ ಮಾಡುವ ಒಬ್ಬ ಶ್ರೇಷ್ಠ ಸಂಶೋಧಕ ಶಂ.ಬಾ. ಜೋಶಿಯವರು.
ಸಂಶೋಧನ ಕ್ಷೇತ್ರವಲ್ಲದೆ, ಕನ್ನಡದ ಬಗೆಗಿನ ಇವರ ಆಸಕ್ತಿಯು ಹೋರಾಟದ ಮೂಲಕವೂ ಸಾಗಿತ್ತು. 1924ರಲ್ಲಿ ಕರ್ನಾಟಕ ಏಕೀಕರಣಕ್ಕೆ ಬೆಳಗಾವಿಯಲ್ಲಿ ನಡೆದ ಸಮಾವೇಶವನ್ನು ಸಂಘಟಿಸಿದ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1982ರಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಗೋಕಾಕ್ ಭಾಷಾ ಸೂತ್ರದ ಅನುಷ್ಠಾನಕ್ಕೆ ಒತ್ತಾಯಿಸಿ ಉಪವಾಸ ನಡೆಸಿದರು. ಈ ಸಂದರ್ಭದಲ್ಲಿ ರೂಪುಗೊಂಡ ಅಖಿಲ ಕರ್ನಾಟಕ ಕನ್ನಡ ಕ್ರಿಯಾ ಸಮಿತಿಯ ಮೊದಲ ಅಧ್ಯಕ್ಷರೂ ಆಗಿದ್ದರು. ಇವರ ನಾಡುನುಡಿಯ ಬಗೆಗಿನ ಅಭಿಮಾನ ಎಂತದ್ದು ಎಂಬುದು ಇದರಿಂದ ನಮಗೆ ಅರಿವಾಗುತ್ತದೆ.
ಶಂ.ಬಾ. ಜೋಶಿಯವರ ಸಾಹಿತ್ಯ ಸೇವೆಗೆ ದೊರೆತ ಪುರಸ್ಕಾರಗಳು ಹಲವು 1967ರಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 1970ರಲ್ಲಿ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 1986ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ. ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ 54ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯವು 1973ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಸಂಶೋಧನೆ, ಸಂಸ್ಕೃತಿ, ಕನ್ನಡದ ಬಗೆಗಿನ ಅಭಿಮಾನದ ಜೊತೆಗೆ ಅಧ್ಯಯನವನ್ನು ನಿರಂತರವಾಗಿ ಬದುಕಿನುದ್ದಕ್ಕೂ ಮಾಡುತ್ತಾ ಬಂದ ಶಂ.ಬಾ. ಜೋಶಿಯವರು ತೊಂಬತ್ತಾರನೆಯ ವಯಸ್ಸಿನಲ್ಲಿ ಅಂದರೆ ಸಪ್ಟೆಂಬರ್ 28, 1991ರಂದು ತಮ್ಮ ಬದುಕಿನ ಯಾತ್ರೆಯನ್ನು ಮುಗಿಸಿದರು. ಕನ್ನಡ ನಾಡು ಕಂಡ ಶ್ರೇಷ್ಠ ಸಂಶೋಧಕ ಶಂ.ಬಾ. ಜೋತಿಯವರ ಸಂಸ್ಕೃತಿಯ ಬಗೆಗಿನ ಚಿಂತನೆಗಳು ಹಾಗೂ ಸಂಶೋಧನೆಗಳು ಇಂದಿಗೂ ಕನ್ನಡಿಗರಿಗೆ ಹಾಗೂ ಸಂಶೋಧಕರಿಗೆ ಮಾರ್ಗದರ್ಶಿಯಾಗಿ ದಾರಿದೀಪಗಳಾಗಿವೆ.
ವಿಮರ್ಶಕಿ : ಡಾ. ಜ್ಯೋತಿ ಪ್ರಿಯಾ.
ಸಹ ಪ್ರಾಧ್ಯಾಪಕರು ಡಾ. ಪಿ. ದಯಾನಂದ ಪೈ – ಪಿ ಸತೀಶ ಪೈ ಸರಕಾರಿ ಪ್ರಥಮದರ್ಜೆ ಕಾಲೇಜು, ರಥಬೀದಿ. ಮಂಗಳೂರು.