ಶಾಂತಿನಾಥ ದೇಸಾಯಿ ಅವರು ಲೇಖಕ, ವಿಮರ್ಶಕ ಮತ್ತು ಕಾದಂಬರಿ ಲೋಕಕ್ಕೆ ಒಂದು ಹೊಸ ಮಾರ್ಗವನ್ನು ತಂದವರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 22 ಜುಲೈ 1929ರಂದು ಇವರು ಜನಿಸಿದರು. ಹಳಿಯಾಳ ಒಂದು ಕಾಡು ಪ್ರದೇಶ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಮುಗಿಸುವುದರೊಂದಿಗೆ ಒಬ್ಬ ಉತ್ತಮ ವಿದ್ಯಾರ್ಥಿಯಾಗಿ ಎಲ್ಲರ ಗಮನ ಸೆಳೆದ ಇವರು ಮೆಟ್ರಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದುವ ಉದ್ದೇಶದಿಂದ ಧಾರವಾಡದ ಶಾಲೆಗೆ ಸೇರಿದರು. ಸಾಹಿತಿ ಗಂಗಾಧರ ಚಿತ್ತಾಲರ ಪ್ರಭಾವಕ್ಕೆ ಒಳಗಾಗಿ ಚಿಂತನಶೀಲತೆಯ ಜೊತೆಗೆ ವಿದ್ಯಾರ್ಜನೆಯಲ್ಲಿಯೂ ಅತಿಯಾದ ಆಸಕ್ತಿಯನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಧಾರವಾಡಕ್ಕೆ ಬಂದ ಚಿಂತನಕಾರ ಮಾನವೇಂದ್ರರಾಯರ ಮಾನವತವಾದದ ಬಗ್ಗೆಯೂ ಆಕರ್ಷಿತರಾದರು. ಉತ್ತಮ ವಿದ್ಯಾರ್ಥಿಯಾದ ಇವರು ಆಂಗ್ಲ ಭಾಷಾ ಅಧ್ಯಾಪಕರ ಗಮನ ಸೆಳೆದ ಪರಿಣಾಮವಾಗಿ ಇಂಗ್ಲಿಷ್ ಭಾಷೆಯಲ್ಲಿ ವಿಶೇಷ ಅಧ್ಯಯನಕ್ಕಾಗಿ ಮುಂಬೈಯ ಪ್ರಸಿದ್ಧವಾದ ವಿಲ್ಸನ್ ಕಾಲೇಜಿಗೆ ಸೇರಿದರು. ಮುಂದೆ ಪಿ. ಎಚ್. ಡಿ. ಪದವಿಯನ್ನು ಪಡೆದುಕೊಂಡರು. ಬ್ರಿಟಿಷ್ ಕೌನ್ಸಿಲ್ ಪ್ರಣೀತ ಇಂಗ್ಲೆಂಡಿಗೆ ಹೋಗುವ ಒಂದು ಉತ್ತಮ ಅವಕಾಶ ಇವರಿಗೆ ದೊರೆಯಿತು. ಈ ಸಂದರ್ಭದಲ್ಲಿ ಹಡಗಿನ ಪ್ರವಾಸ ಅವರಿಂದ ಒಂದು ಉತ್ತಮ ಕಥೆ ಸೃಷ್ಟಿಗೆ ಕಾರಣವಾಯಿತು. ಹಡಗಿನಿಂದ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯನ್ನು ಕೇಂದ್ರೀಕರಿಸಿ ಬರೆದ ಜನಪ್ರಿಯ ಸಣ್ಣ ಕಥೆಯೇ “ಕ್ಷಿತಿಜ”.
ಎರಡು ವರ್ಷ ವಿದೇಶದಲ್ಲಿದ್ದು ಬಂದ ಶಾಂತಿನಾಥರು ಕೊಲ್ಲಾಪುರದ ರಾಜರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ಕೆಲವು ವರ್ಷಗಳ ಕಾಲ ಮರಾಠವಾಡದಲ್ಲಿಯ ಔರಂಗಬಾದ್ ನಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬೇಕಾಯಿತು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷಗಳ ಕಾಲ ರೀಡರ್ ಆಗಿ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಪ್ರಮುಖರಾಗಿ ಸೇವೆ ಸಲ್ಲಿಸಿ, 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪದವಿಯ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸಿದರು. ಲಂಕೇಶ್, ಅನಂತಮೂರ್ತಿ, ಕೃಷ್ಣಮೂರ್ತಿ, ಗೋಪಾಲಕೃಷ್ಣ ಅಡಿಗ ಇವರೆಲ್ಲರ ವಿಚಾರಗಳಿಂದ ಪ್ರಭಾವಿತರಾಗಿ ಸಾಹಿತ್ಯ ರಚನೆಗೆ ತೊಡಗಿದರು. 1959ರಲ್ಲಿ ದೇಸಾಯಿಯವರ ಚೊಚ್ಚಲ ಸಾಹಿತ್ಯ ಕೃತಿ “ಸಣ್ಣ ಕಥೆಗಳ ಸಂಗ್ರಹ” ಪ್ರಕಟವಾಯಿತು. ಪಾಶ್ಚಾತ್ಯರು ಮನುಷ್ಯರನ್ನು ನೋಡುವ ದೃಷ್ಟಿಕೋನದಲ್ಲಿನ ಬದಲಾವಣೆಯನ್ನು ಕನ್ನಡಕ್ಕೆ ಇಳಿಸುವ ಗಂಭೀರವಾದ ಪ್ರಯತ್ನವನ್ನು ಇವರು ಮಾಡಿದರು.
1941 ರಲ್ಲಿ ಇವರ “ಮುಕ್ತಿ” ಕಾದಂಬರಿಯ ಮೂಲಕ ನವ್ಯ ಪ್ರಕಾರವನ್ನು ಕನ್ನಡ ಕಾದಂಬರಿ ಲೋಕಕ್ಕೆ ನೀಡಿದವರು ಶಾಂತಿನಾಥ ದೇಸಾಯಿಯವರು. ಮನೋವಿಶ್ಲೇಷಣಾ ತಂತ್ರ ಅವರ ಬರಹದಲ್ಲಿ ಕಂಡುಬಂದಂತೆ ಅನಿಸಿದರೂ ಅವರ ಸಾಹಿತ್ಯದ ವಿಷಯಗಳ ವಿಶೇಷತೆ ಮನಸ್ಸನ್ನು ಆಕರ್ಷಿಸುತ್ತದೆ. “ಕ್ಷಿತಿಜ”ದಂತೆ ಅವರ “ಮಂಜುಗಡ್ಡೆ” ಕತೆಯು ಬಹಳ ಚರ್ಚೆಗೆ ಒಳಗಾಗಿದೆ. ನಮ್ಮ ಸುತ್ತಲೂ ಇರುವಂತಹ ಹಲವಾರು ಸಾಮಾಜಿಕ, ವೈಯಕ್ತಿಕ, ದುರ್ಲಕ್ಷಿತ ಘಟನೆಗಳು ಸಾಹಿತ್ಯ ರಚನೆಯ ವಿಷಯಗಳು ಏಕಾಗಬಾರದು ? ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ‘ಕೂರ್ಮಾವತಾರ’, ‘ವಾಸನೆ’, ‘ಭರಮ್ಯ ಹೋಗಿ ನಿಖಿಲನಾದದ್ದು’,’ದಂಡೆ’, ‘ರಾಕ್ಷಸ’,’ಪರಿವರ್ತನೆ’, ಇತ್ಯಾದಿ ಕಥೆಗಳು ಹೊರಬಂದವು. ಒಬ್ಬ ಕುಡುಕನ ಸುತ್ತ ಹೆಣೆದ ಕಥೆ ‘ನಾನಾನ ತೀರ್ಥಯಾತ್ರೆ’ ಬಹಳ ಪರಿಣಾಮಕಾರಿಯಾಗಿದೆ. ‘ನದಿಯ ನೀರು’ ಕಥೆಯಲ್ಲಿ ತನ್ನ ಗೆಳೆಯ ನದಿಯಲ್ಲಿ ಮುಳುಗಿ ಸಾಯುವುದಕ್ಕೆ ತಾನೇ ಕಾರಣನಾಗಿದ್ದರೂ, ಅದಕ್ಕೂ ತನಗೂ ಸಂಬಂಧವಿಲ್ಲದಂತೆ ಬಾಲ್ಯದಿಂದಲೂ ಬದುಕುವ ಒಬ್ಬ ವ್ಯಕ್ತಿ ಆಂತರ್ಯದಿಂದ ನಿಷ್ಠರವಾಗಿ ಬಾಳಲು ಸಾಧ್ಯವೇ ಎಂಬ ಸತ್ಯವನ್ನು ಈ ಕತೆಯಲ್ಲಿ ಎತ್ತಿ ಹಿಡಿದಿದ್ದಾರೆ. ಇವರ ಎಲ್ಲಾ ಕಥೆಗಳಿಗೂ ಮನಸ್ಸನ್ನು ತಟ್ಟುವಂತಹ ಒಂದು ಒಳದನಿ ಇದೆ. ಪ್ರಯೋಗಶೀಲರಾದ ದೇಸಾಯಿಯವರು ಪ್ರಯೋಗ ಶೀಲತೆಯನ್ನು ಬಿಡದೆ ಒಟ್ಟು 49 ಕಥೆಗಳನ್ನು ಬರೆದಿದ್ದಾರೆ.
ಇವರ ಕಾದಂಬರಿಗಳಲ್ಲಿಯೂ ಸಾಮಾಜಿಕ ಧೋರಣೆಗಳ ಬಗ್ಗೆ ಚಿಂತನೆ ಇದೆ. ಇವರ ಕಾದಂಬರಿ “ಸೃಷ್ಟಿ” ನವ್ಯೋತ್ತರ ಕಾಲದ ಒಂದು ಮಹತ್ವವಾದ ಕೃತಿ. “ಬೀಜ” ಹಾಗೂ “ಅಂತರಾಳ” ಈ ಎರಡು ಕಾದಂಬರಿಗಳೂ ಮೇರು ಸ್ಥಾನದಲ್ಲಿವೆ. ಹುಟ್ಟಿನಿಂದ ಬಂದ ತಿಳುವಳಿಕೆ ಇರುವ ‘ಓಂಣಮೋ’ ಕಾದಂಬರಿಯು ದೇಸಾಯಿಯವರು ತಮ್ಮ ಅಂತರಾಳದಿಂದ ಬರೆದ ಕೃತಿ. ಈ ಕಾದಂಬರಿಯಲ್ಲಿ ಪ್ರಪಂಚದ ಎರಡು ಧ್ರುವಗಳು ಭಾರತ ಮತ್ತು ಪಶ್ಚಿಮ, ಎರಡು ಧರ್ಮಗಳು ಜೈನ ಮತ್ತು ಕ್ರಿಶ್ಚನ್, ಎರಡು ವಾದಗಳು ಧರ್ಮವಾದ ಮತ್ತು ಮಾರ್ಕ್ಸ್ ವಾದ ಇವುಗಳ ವಿಚಾರ ಪ್ರಣಾಳಿಗಳು ಬರುತ್ತವೆ. ಸೃಜನಶೀಲ ಮತ್ತು ವಿಚಾರಶೀಲ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಒಬ್ಬ ಉತ್ತಮ ವಿಮರ್ಶಕರೂ ಹೌದು. “ಸಾಹಿತ್ಯ ಮತ್ತು ಭಾಷೆ”, “ಗಂಗಾಧರ ಚಿತ್ತಾಲದ ಕಾವ್ಯ ಸೃಷ್ಟಿ”, ”ಕನ್ನಡ ಕಾದಂಬರಿ ನಡೆದು ಬಂದ ದಾರಿ”, “ನವ್ಯ ಸಾಹಿತ್ಯ ದರ್ಶನ” ಇವರು ಚಿಂತನಶೀಲ ಸಾಹಿತ್ಯಕ್ಕೆ ಕೊಟ್ಟ ಅನನ್ಯ ಕೊಡುಗೆ. ಗೋಕಾಕರ “ಜೀವನ ಚಿತ್ರಣ”ದ ಚಿತ್ರೀಕರಣಕ್ಕೆ ವಿವಿಧ ಆಯಾಮಗಳಲ್ಲಿ ಅವರ ಸಂದರ್ಶನ ಮಾಡಿದ್ದರು.
“ಕನ್ನಡದ ಕಾದಂಬರಿ ನಡೆದು ಬಂದ ದಾರಿ” ಒಂದು ವ್ಯಾಸಂಗ ಪೂರ್ಣ ಗ್ರಂಥವಾದರೆ “ನವ್ಯ ಸಾಹಿತ್ಯ ದರ್ಶನ” ಇದು ಒಂದು ಸಂದರ್ಭಗ್ರಂಥವೆನ್ನುವಷ್ಟು ಮಹತ್ವದ್ದು. ಕನ್ನಡದ ಉತ್ತಮ ಕಥೆಗಳು ಸಾಧ್ಯವಾದಷ್ಟು ಇತರ ಭಾಷೆಯ ಓದುಗರಿಗೂ ತಲುಪಬೇಕು ಎನ್ನುವ ಕಳಕಳಿ, ದೇಸಾಯಿ ಅವರದ್ದಾಗಿತ್ತು. ಪಿ. ಲಂಕೇಶರ “ಕ್ರಾಂತಿ ಬಂತು ಕ್ರಾಂತಿ” ಎಂಬ ನಾಟಕವನ್ನು ಹಾಗೂ ಯು. ಆರ್. ಅನಂತ ಮೂರ್ತಿಯವರ ಕಾದಂಬರಿ “ಅವಸ್ಥೆ”ಯನ್ನು ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ. ಮರಾಠಿಯ ಪ್ರಮುಖ ಕಾದಂಬರಿಕಾರರಾದ ನಾರಾಯಣ ಆಪ್ಟೆಯವರನ್ನು ಕುರಿತ “ಮಿ. ಹರಿನಾರಾಯಣ ಆಪ್ಟೆ” ಎನ್ನುವ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದು. ಶಾಂತಿನಾಥ ದೇಸಾಯಿಯವರನ್ನು ಕುರಿತು ಮಾರುತಿ ಶಾನಭಾಗ್ ಬರೆದ “ಸಾಲು ದೀಪಗಳು” ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಸಲಹೆಗಾರರಾಗಿ ಹಲವು ವರ್ಷಗಳ ಕಾಲ ಯೋಗ್ಯ ಸಲಹೆಗಳ ಮೂಲಕ ಕೆಲಸ ಮಾಡಿದ ಗೌರವ ಇವರಿಗೆ ಸಲ್ಲುತ್ತದೆ. ಇವರು ನಿರಂತರ ಮಾಡಿದ ಸಾಹಿತ್ಯ ಸೇವೆಗೆ ಇವರ ಕೃತಿ “ರಾಕ್ಷಸ ಕಥಾ ಸಂಕಲನ”ಕ್ಕೆ 1977ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಹಾಗೆ “ವರ್ಧಮಾನ ಪ್ರಶಸ್ತಿ”, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, “ಓಂಣಮೋ” ಕೃತಿಗೆ 2000ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇವರ ರಚನೆಯ “ಸಂಬಂಧ” ಕಾದಂಬರಿಗೆ 1982ರಲ್ಲಿ ಸುಧಾ ವಾರಪತ್ರಿಕೆ ಕಾದಂಬರಿ ಪ್ರಶಸ್ತಿ ದೊರೆಯಿತು.
ಮಹಾನ್ ಲೇಖಕ ಹಾಗೂ ವಿಮರ್ಶಕರಾಗಿ, ಕನ್ನಡದ ಸಣ್ಣ ಕಥೆ, ಕಾದಂಬರಿ, ಪ್ರಬಂಧಗಳು, ವಿಮರ್ಶೆ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಯೋಗಶೀಲತೆಯನ್ನು ತೋರಿಸಿ ನಾಲ್ಕು ದಶಕಗಳ ಕಾಲ ಸಾಹಿತ್ಯ ಸೇವೆಯನ್ನು ಮಾಡಿ “ಕನ್ನಡದ ಮೇಲ್ಪಂಕ್ತಿಯ ಬರಹಗಾರ”ರೆಂದು ಕೀರ್ತಿವಂತರಾದ ಶಾಂತಿನಾಥ ಕುಬೇರಪ್ಪ ದೇಸಾಯಿಯವರು ತಮ್ಮ ‘ಓಂಣಮೋ’ ಕಾದಂಬರಿಯನ್ನು ಬರೆದು ಮುಗಿಸಿ ಸುಮಾರು ಒಂದು ವಾರಗಳ ನಂತರ 26 ಮಾರ್ಚ್ 1998ರಂದು ಸಾಹಿತ್ಯ ಲೋಕಕ್ಕೆ ವಿದಾಯ ಹೇಳಿದರು. ಇಂದು ಅವರ ಜನ್ಮದಿನ. ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತವಾಗಿದೆ. ಅದಮ್ಯ ಚೇತನಕ್ಕೆ ಅನಂತ ನಮನಗಳು.
-ಅಕ್ಷರೀ