ಕನ್ನಡದ ಪ್ರಮುಖ ವೈಚಾರಿಕ ಬರಹಗಾರ್ತಿ ಹಾಗೂ ಸೃಜನಶೀಲ ಕವಿ ಶಶಿಕಲಾ ವೀರಯ್ಯಸ್ವಾಮಿ.
ಸ್ತ್ರೀವಾದಿ ಎಂದೇ ಗುರುತಿಸಲ್ಪಟ್ಟವರು ವೈಚಾರಿಕ ಬರಹಗಾರ್ತಿ ಶಶಿಕಲಾ ವೀರಯ್ಯಸ್ವಾಮಿ. ಮೂಲತಃ ಶಿಕ್ಷಕಿಯಾದ ಇವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿದವರು. ಹಲವಾರು ಸಂಘ-ಸಂಸ್ಥೆಗಳಿಗೆ, ಅಸಹಾಯಕ ಬಡ ರೋಗಿಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಮಾನವೀಯ ಗುಣವುಳ್ಳವರು . ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇವರು ದೇಹದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸಿದ್ದಲಿಂಗಯ್ಯ ಮತ್ತು ಅನ್ನಪೂರ್ಣಾ ದೇವಿ ದಂಪತಿಯ ಸುಪುತ್ರಿ ಶಶಿಕಲಾ ವೀರಯ್ಯ. 01 ಮೇ 1948ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿ, ಕಾಲೇಜು ವಿದ್ಯಾಭ್ಯಾಸವನ್ನು ಬಿಜಾಪುರ ಮತ್ತು ಗುಲ್ಬರ್ಗದಲ್ಲಿ ಪೂರೈಸಿದರು. “ಸಿಂದಗಿಯ ಜಿಗುಟು ಮಣ್ಣಿನ ನೆಲದ ಚೈತನ್ಯ ತನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ” ಎಂಬ ಮಾತುಗಳಿಂದ ಹುಟ್ಟೂರಿನ ಮೇಲೆ ಅವರಿಗಿರುವ ಅಭಿಮಾನ ವ್ಯಕ್ತವಾಗುತ್ತದೆ.
ಎಂ.ಎ. ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಶಶಿಕಲಾ ಅವರು ತನ್ನ ಹುಟ್ಟೂರಿನಲ್ಲೇ ಸಿಂದಗಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದರು.
ಮುಂದೆ ಬೀದರ್ ಅಕ್ಕಮಹಾದೇವಿ ಪದವಿ ಕಾಲೇಜು, ಚಿಟ್ಟಗುಪ್ಪ ಸರಕಾರಿ ಕಾಲೇಜು, ಗೋಕಾಕ್ ಕಾಲೇಜು ಬೆಳಗಾವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಯಲಹಂಕ ಸರಕಾರಿ ಜೂನಿಯರ್ ಕಾಲೇಜು, ಬೆಂಗಳೂರಿನ ವಾಣಿವಿಲಾಸ ಕಾಲೇಜು, ಚಿಕ್ಕಮಗಳೂರಿನ ಸರಕಾರಿ ಕಾಲೇಜು ಮತ್ತು ಶಹಾಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು.
ಸ್ವಲ್ಪ ಸಮಯ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ, ಧಾರವಾಡದ ಪತ್ರಾಗಾರ ಇಲಾಖೆಯಲ್ಲಿ ಪತ್ರಪಾಲಕರಾಗಿ ಕೆಲಸ ಮಾಡಿದ್ದಾರೆ. ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಧಾರವಾಹಿ ಮತ್ತು ಚಲನಚಿತ್ರಗಳ ಆಯ್ಕೆ ಸಮಿತಿ ಬೆಂಗಳೂರು ದೂರದರ್ಶನದ ಸದಸ್ಯರಾಗಿ, ಪದವಿ ಪೂರ್ವ ಶಿಕ್ಷಣಾ ಮಂಡಳಿ ಬೆಂಗಳೂರಿನ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಅತ್ಯಂತ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಅನೇಕ ಸಂಘ ಸಂಸ್ಥೆಗಳನ್ನು ಮುಂದುವರಿಸಿ ಕೊಂಡುಹೋದದ್ದು ಇವರ ಕಾರ್ಯ ದಕ್ಷತೆಗೆ ಸಾಕ್ಷಿಯಾಗಿದೆ.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಉಳಿವು ಹಾಗೂ ಬೆಳವಣಿಗೆಗಾಗಿ ನಾಡಿನಾದ್ಯಂತವಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಹೀಗೆ ಅನೇಕ ಕಡೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಇವರ ಮೌಲ್ಯಯುತವಾದ ಲೇಖನಗಳು ರಾಜ್ಯದ ಬಹುತೇಕ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದುಕೊಂಡದ್ದು ಬರವಣಿಗೆಯ ಪ್ರೌಢತೆಗೆ ಸಾಕ್ಷಿಯಾಗಿದೆ. ಕವಿತೆಗಳು ತೆಲುಗು, ಉರ್ದು, ಮರಾಠಿ ಮತ್ತು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ.
ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಶಶಿಕಲಾ ವೀರಯ್ಯ ಸ್ವಾಮಿ ಆಯ್ಕೆ ಆಗಿದ್ದರು. ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಮಹಿಳಾ ಸಾಹಿತಿಗಳ ಹೆಸರು ಪ್ರಸ್ತಾಪಕ್ಕೆ ಬಂದಿದ್ದು, ಎಲ್ಲರ ಸಾಹಿತ್ಯದ ಹಿರಿತನವನ್ನು ಗಮನಿಸಿ, ಸುಧೀರ್ಘವಾದ ಚರ್ಚೆ ನಡೆಸಿ ಹಿರಿಯ ಕವಿ ಶಶಿಕಲಾ ವೀರಯ್ಯನವರನ್ನೇ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ಅವರ ಸಾಹಿತ್ಯ ಸೇವೆಗೆ ಒದಗಿ ಬಂದ ಗೌರವವಾಗಿದೆ.
ಇವರ ರಚನೆಯ ಕೃತಿಗಳಲ್ಲಿ ‘ಗುಬ್ಬಿಮನಿ’ , ‘ಪ್ರಶ್ನೆ’ , ‘ಜೀವ ಸಾವುಗಳ ನಡುವೆ’ , ‘ಹೆಂಗೆ ಹೇಳಲೇ ಗೆಳತಿ’ , ‘ಮಧ್ಯಂತರದ ಒಂದು ಗದ್ಯಗೀತೆ’ , ‘ಬಟ್ಟ ಬಯಲಲ್ಲಿ ನಿಂತು’ , ‘ ಒಂಚೂರು ನೆಲ – ಒಂಚೂರು ಮುಗಿಲು’ ಇವು ಕಲನ ಸಂಕಲನಗಳು.
‘ಶ್ರೀ ಗುರುಸಿದ್ದೇಶ್ವರ ಚರಿತ್ರೆ’ ಮತ್ತು ‘ಕೊಡಿಕೊಪ್ಪ ಮಠದ ಬಸವರಾಜ ಶಾಸ್ತ್ರಿಗಳು’ ಇವು ಎರಡು ವ್ಯಕ್ತಿ ಚಿತ್ರಗಳು ‘ಅಪ್ಪ ಮತ್ತು ಮಣ್ಣು’ ಇದೊಂದು ಪ್ರಬಂಧ ಸಂಕಲನ. ‘ಆಧುನಿಕ ಕನ್ನಡ ಕವನಗಳು’ , ‘ಸಂವೇದನೆಗಳು’ , ‘ಪ್ರಣಯಿನಿ’, ‘ರಾಘವಾಂಕ’ , ‘ಗಾಂ ಎಂಬ ಹೆಸರು’ , ‘ಕುಂಕುಮ ಭೂಮಿ’ ಮತ್ತು ‘ಕುಸುಮಾಂಜಲಿ’ ಇವುಗಳು ಇವರ ಸಂಪಾದಿತ ಕೃತಿಗಳು.
ಬಿ. ಸರೋಜಾ ದೇವಿ ಸಾಹಿತ್ಯ ಪ್ರಶಸ್ತಿ , ಮಾತೋಶ್ರೀ ರತ್ನಮ್ಮ ಹೆಗ್ಗಡೆ ಕಾವ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ನೂರಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ತೋರಿದ ಪ್ರೀತ್ಯಾದರ ಶಶಿಕಲಾ ವೀರಯ್ಯ ಸ್ವಾಮಿಯವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.
ಸ್ತ್ರೀ ಸಂವೇದನೆಗೆ ಧ್ವನಿಯಾದ ಶಶಿಕಲಾ ವೀರಯ್ಯಸ್ವಾಮಿ ಅವರ ಭಾಷೆಯ ಉಪಯೋಗ, ನಿರೂಪಣಾ ಶೈಲಿ, ವ್ಯವಸ್ತೆಯನ್ನು ಪ್ರಶ್ನಿಸುವ ರೀತಿ ಮತ್ತು ಉತ್ತರ ಕಂಡುಕೊಳ್ಳುವ ಪ್ರಯತ್ನ ಬಹಳ ಆಕರ್ಷಕವಾಗಿದ್ದು ಓಡುಗರನ್ನು ತಟ್ಟುವಲ್ಲಿ ಯಶಸ್ವಿಯಾಗಿದೆ.
-ಅಕ್ಷರೀ
Subscribe to Updates
Get the latest creative news from FooBar about art, design and business.
Previous Articleಮೇಘಮೈತ್ರಿ ಸಮ್ಮೇಳನಗಳ ಮೂರು ದತ್ತಿ ಪ್ರಶಸ್ತಿ ಪ್ರಕಟ