ಪಾದರಸದಂತೆ ಚಟುವಟಿಕೆಯ ಗಾಂಧಿವಾದಿ, ಕನ್ನಡದ ಶಕ್ತಿ ಸಿದ್ದವನಹಳ್ಳಿ ಕೃಷ್ಣಶರ್ಮರು ಒಬ್ಬ ಅಪರೂಪದ ಸಾಹಿತಿ. ಉತ್ತಮ ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ, ಗಾಂಧೀ ವಿಚಾರವಾದಿ, ಸಹಕಾರಿ ಕ್ಷೇತ್ರದ ಹರಿಕಾರ ಮಾತ್ರವಲ್ಲದೆ ಶ್ರೇಷ್ಠ ಪತ್ರಕರ್ತರಾಗಿ ಕನ್ನಡ ನಾಡು ನುಡಿಯ ಬಗ್ಗೆ ಅಪೂರ್ವ ಸೇವೆ ಸಲ್ಲಿಸಿದ ಒಬ್ಬ ಮೇರು ವ್ಯಕ್ತಿ.
ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿ 1904 ಜುಲೈ 04ರಂದು ರಂಗಾಚಾರ್ ಮತ್ತು ಶೇಷಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದರು. ಮೈಸೂರು ಪರಕಾಲ ಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದರು. ಕೃಷ್ಣಶರ್ಮರು ಇವರ ವಂಶಸ್ಥರು. ಆದ್ದರಿಂದಲೇ ಸಂಸ್ಕಾರ ಹಾಗೂ ವಿದ್ವತ್ತು ಇವರಿಗೆ ರಕ್ತಗತವಾಗಿ ಬಂದಿದ್ದವು. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸವನ್ನು ಪೂರೈಸಿದ ಶರ್ಮರು ಶಾಲೆಯ ಉಪಾಧ್ಯಾಯ ಸೂರಪ್ಪನವರು ಸಂಜೆಯ ವೇಳೆಗೆ ಓದುತ್ತಿದ್ದ ಮಹಾಭಾರತ ವಾಚನಕ್ಕೆ ಮಾರುಹೋದರು. ಚಿತ್ರದುರ್ಗದಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದಾಗ ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಗರಣಿ ರಂಗಾಚಾರ್ಯರ ಪ್ರೋತ್ಸಾಹ ಕೃಷ್ಣಶರ್ಮರಿಗೆ ದೊರೆತಾಗ ಕನ್ನಡದ ಬಗ್ಗೆ ಅಭಿರುಚಿ ಮೊಳೆತು ಬೆಳೆಯ ತೊಡಗಿತು. ಪ್ರೌಢಶಾಲೆಗೆ ಬಂದಾಗ ಹನುಮಂತರಾಯರೆಂಬ ಕನ್ನಡ ಪಂಡಿತರು ಛಂದಸ್ಸನ್ನು ಕಲಿಸಿದರು. ಹೀಗೆ ವಿದ್ಯಾಭ್ಯಾಸದ ಎಲ್ಲಾ ಹಂತದಲ್ಲಿಯೂ ಅಧ್ಯಾಪಕರ ಸಹಕಾರ ಅವರಿಗೆ ದೊರೆಯಿತು. ಆದ್ದರಿಂದಲೇ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದ ‘ಶ್ರೀರಾಮ ಪಟ್ಟಾಭಿಷೇಕ’, ‘ರಮಾಶ್ವಮೇಧ’, ‘ಆನಂದ ರಾಮಾಯಣ’ ಮಾತ್ರವಲ್ಲದೆ ‘ಮಹಾಭಾರತ’, ‘ಭಾಗವತ’ ಮುಂತಾದವುಗಳನ್ನು ಓದಿ ಮನದಟ್ಟು ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದರು. ಪ್ರೌಢ ಶಾಲೆಯಲ್ಲಿ ಓದುವಾಗ ಇನ್ಸ್ಪೆಕ್ಷನಿಗಾಗಿ ಬಂದ ಇನ್ಸ್ಪೆಕ್ಟರ್ ಪರೀಕ್ಷೆ ನಡೆಸಿ ಇವರಿಗೆ ಕನ್ನಡ ಮತ್ತು ಸಂಸ್ಕೃತದಲ್ಲಿದ್ದ ಅಪಾರ ಜ್ಞಾನವನ್ನು ಗಮನಿಸಿ ಬಹುಮಾನ ರೂಪವಾಗಿ ಎರಡು ಕಾದಂಬರಿಗಳನ್ನು ನೀಡಿದರು. ಈ ಕಾದಂಬರಿಗಳನ್ನು ಓದುತ್ತಾ ಹೋದಂತೆ ಕೃಷ್ಣಶರ್ಮರಲ್ಲಿ ಕನ್ನಡದ ಬಗ್ಗೆ ಅತಿಯಾದ ಆಸಕ್ತಿ ಮೂಡಿತು. ಓದುವುದರೊಂದಿಗೆ ಬರವಣಿಗೆಯನ್ನು ಆರಂಭಿಸಿದರು. ಹೀಗೆ ಪ್ರೌಢಶಾಲಾ ದಿನಗಳಿಂದಲೇ ಬರವಣಿಗೆಯನ್ನು ಆಸಕ್ತಿಯಿಂದ ಆರಂಭಿಸಿದ ಇವರ ಆರಂಭದ ಬರಹಗಳು ಧಾರವಾಡದ ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇಲ್ಲಿ ಇವರು ದ. ರಾ. ಬೇಂದ್ರೆ ಮತ್ತು ವಿ. ಕೃ. ಗೋಕಾಕರ ಸಂಪರ್ಕಕ್ಕೆ ಬರುವ ಅವಕಾಶ ದೊರೆಯಿತು. ಚಿಕ್ಕಪ್ಪನೊಡನೆ ಸೇರಿ “ವಾಣಿವಿಲಾಸ” ಎಂಬ ಕೈ ಬರಹದ ಪತ್ರಿಕೆಯನ್ನು ಹೊರ ತಂದರು. ಮುಂದೆ ಇದು ನಿಂತು ಹೋದ ಕಾರಣ ಮೈಸೂರಿನ “ಮಧುರವಾಣಿ” ಪತ್ರಿಕೆಗೆ ಕಥೆಗಳನ್ನು ಬರೆದರು. ಮನಸ್ಸಿಗೆ ತಟ್ಟುವ ಬರಹದ ಶೈಲಿ, ಆರಿಸುವ ವಸ್ತು ಮತ್ತು ಅದನ್ನು ವಿಮರ್ಶಿಸಿ ಸತ್ವವನ್ನು ಅರಿತು ಕೆಲವೇ ಶಬ್ದಗಳಲ್ಲಿ ಅದನ್ನು ಚಿತ್ರಿಸುವ ಚಮತ್ಕಾರಕ್ಕೆ ಅವರಿಗೆ ಯಾರೂ ಸಾಟಿ ಇಲ್ಲ. ಪಾತ್ರಗಳ ಒಳ ಹೊಕ್ಕು ಅಂತರಂಗವನ್ನೂ ಬಣ್ಣಿಸಬಲ್ಲ ಚತುರರಾಗಿದ್ದರು. ಪತ್ರಿಕೆಗಳಲ್ಲಿ ಇಂದು ನಾವು ಕಾಣುವ ಅಂಕಣ ವೈವಿಧ್ಯ, ಶೈಲಿ, ನುಡಿಗಟ್ಟುಗಳು ಎಲ್ಲವೂ ಇವರದೇ ಆವಿಷ್ಕಾರ ಮತ್ತು ಪ್ರಯೋಗ. ಕಾಲೇಜು ವ್ಯಾಸಂಗಕ್ಕೆ ಮೈಸೂರಿಗೆ ಬರುವ ಸಂದರ್ಭದಲ್ಲಿ ಎಲ್ಲೆಡೆ ಸತ್ಯಾಗ್ರಹ, ಸ್ವಾತಂತ್ರ್ಯ ಚಳುವಳಿ ಆರಂಭವಾಗಿತ್ತು. ಗಾಂಧೀಜಿಯವರ ಸಂದೇಶಕ್ಕೆ ಮಾರುಹೋಗಿ ಖಾದಿ ದೀಕ್ಷೆ ತೊಟ್ಟು, ಓದುಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಜೊತೆಯಲ್ಲಿ ಪತ್ರಿಕೋದ್ಯಮ ಮತ್ತು ಬರಹದ ಕೆಲಸವನ್ನು ಮಾಡತೊಡಗಿದರು. ಇದೇ ಸಮಯದಲ್ಲಿ ಆಕರ್ಷಕ ಹಾಗೂ ಬಹುಮುಖ ವ್ಯಕ್ತಿತ್ವದ ಪಂಡಿತ ತಾರಾನಾಥರ ಭೇಟಿಯಾಗಿ ಅವರ “ಪ್ರೇಮಾಯತನ” ಆಶ್ರಮದಲ್ಲಿ ಸ್ವಲ್ಪ ಸಮಯವಿದ್ದರು. ಆಶ್ರಮದಲ್ಲಿ ಇವರ ಕಾರ್ಯ ಚಟುವಟಿಕೆಯನ್ನು ಗಮನಿಸಿದ ಹಿರಿಯರು ಸನ್ಯಾಸಿ ಆಗಿ ಬಿಡುತ್ತಾನೆಂಬ ಭಯದಿಂದ 1925ರಲ್ಲಿ ಹೈದರಾಬಾದಿನ ಸಬ್ ಇನ್ಸ್ಪೆಕ್ಟರ್ ರ ಪುತ್ರಿಯೊಂದಿಗೆ ಮದುವೆ ಮಾಡಿದರು. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ, ಎರಡು ವರ್ಷದ ನಂತರ ಹೈದರಾಬಾದಿನ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹೈದರಾಬಾದಿನ ಶಾಲೆಗಳಲ್ಲಿ ಕನ್ನಡವನ್ನು ಉರ್ದು ಭಾಷೆಯಲ್ಲಿ ಬೋಧಿಸುತ್ತಿದ್ದ ಆ ಕಾಲದಲ್ಲಿ ಕನ್ನಡವನ್ನು ಕನ್ನಡದಲ್ಲಿಯೇ ಬೋಧಿಸಿದ ಮೊದಲ ಅಧ್ಯಾಪಕರು ಎಂಬ ಕೀರ್ತಿಗೆ ಇವರು ಪಾತ್ರರಾದರು. ಇದೇ ಸಮಯದಲ್ಲಿ ನಿಜಾಮರ ಆಡಳಿತದ ವಿರುದ್ಧ ತೆಲುಗು, ಮರಾಠಿ, ಕನ್ನಡ ಸಂಘಗಳನ್ನು ಸ್ಥಾಪಿಸಿ, ಆಯಾಯ ಭಾಷೆಯ ಜನರನ್ನು ಒಂದುಗೂಡಿಸುವ ರಾಜಕೀಯ ನಾಯಕರಿಗೆ ಪೂರಕವಾಗಿ ಕನ್ನಡಿಗರನ್ನು ಸಂಘಟಿಸುವ ಕೆಲಸವನ್ನು ಶರ್ಮರು ಮಾಡಿದರು. ಖಾದಿ ಪ್ರಚಾರ, ಪ್ರಭಾತ್ ಫೇರಿ, ರಾಷ್ಟ್ರೀಯ ಹಾಡುಗಳನ್ನು ಸಾಮೂಹಿಕವಾಗಿ ಹಾಡಿ, ಸಾರ್ವಜನಿಕವಾಗಿ ತಮ್ಮನ್ನು ತೊಡಗಿಸಿಕೊಂಡರು. ಹೈದರಾಬಾದಿನ ನಿಜಾಮರ ವಿರುದ್ಧ ಪ್ರಚೋದನಕಾರಿ ಲೇಖನಗಳನ್ನು ಬರೆದು ಪ್ರಕಟಿಸಿದಾಗ ಇವರನ್ನು ಬಂಧಿಸಿ ಶಿಕ್ಷಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಎಲ್ಲಾ ಪ್ರಯತ್ನಗಳೂ ವ್ಯರ್ಥವಾದವು. ಕೊನೆಯಲ್ಲಿ ಇವರಿಗೆ ನಿಜಾಂ ಸರಕಾರ ಹೈದರಾಬಾದ್ ಬಿಟ್ಟು ಹೋಗುವಂತೆ ಗಡಿಪಾರು ಆದೇಶ ಹೊರಡಿಸಿತು. ಅಲ್ಲಿಂದ ಚಿತ್ರದುರ್ಗಕ್ಕೆ ಹಿಂದಿರುಗಿದ ಶರ್ಮರು ಕನ್ನಡಪರ ಕೆಲಸಗಳನ್ನು ನಿಲ್ಲಿಸಲಿಲ್ಲ. ಸುಮಾರು 1941ರ ಸಮಯಕ್ಕೆ ಅಹಮದಾಬಾದಿನ ಗಾಂಧಿಜಿಯವರ ಆಶ್ರಮಕ್ಕೆ ಹೋಗಿ, ಗಾಂಧೀಜಿಯವರ ಒಡನಾಡಿಯಾಗಿ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದರು. ಗಾಂಧೀಜಿಯವರ ದಿನಚರಿಯ ಬಗ್ಗೆ ‘ವಾರ್ಧಾಯಾತ್ರೆ’ ಮತ್ತು ‘ಪರ್ಣಕುಟಿ’ ಎಂಬ ಎರಡು ಶ್ರೇಷ್ಟ ಗದ್ಯ ಕೃತಿಗಳನ್ನು ರಚಿಸಿದರು. ಮುಂದೆ ರಾಜ್ಯ ಪುನರ್ವಿಂಗಡಣಾ ಆಯೋಗದ ಅಧ್ಯಕ್ಷರಾಗಿದ್ದ ಜವಾಹರ್ಲಾಲ್ ನೆಹರು ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆಯ ಶಿಕ್ಷೆಯನ್ನು ಅನುಭವಿಸಿದರು.
ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ದುಡಿದವರಲ್ಲಿ ಇವರೂ ಒಬ್ಬರು. ಪ್ರಥಮ ಬಾರಿಗೆ “ಹರಿಜನ ಪತ್ರಿಕೆ”ಯನ್ನು ಕನ್ನಡದಲ್ಲಿ ಪ್ರಕಟಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
ತೀ. ತಾ. ಶರ್ಮ ನಡೆಸುತ್ತಿದ್ದ ‘ವಿಶ್ವ ಕರ್ನಾಟಕ’ ಪತ್ರಿಕೆಯ ಸಹಸಂಪಾದಕರಾಗಿ ಕೃಷ್ಣಶರ್ಮರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಲೇಖನಗಳು ಮತ್ತು ಸಂಪಾದಕೀಯ ಜನರ ಮೆಚ್ಚುಗೆಗೆ ಪಾತ್ರವಾಯಿತು. ಇವರಿಬ್ಬರ ಲೇಖನಗಳು ಹರಿತವಾದ ಭಾಷಾ ಪ್ರಯೋಗ, ಓದುಗರನ್ನು ಬಡಿದೆಬ್ಬಿಸುವ ಪದ ಪ್ರಯೋಗ, ರಾಷ್ಟ್ರೀಯ ಭಾವನೆಗಳನ್ನು ಪ್ರೋತ್ಸಾಹಿಸುವ ದಿಟ್ಟತನ ಹೀಗೆ ಏಕರೂಪದ ಬರವಣಿಗೆಯನ್ನು ಹೊಂದಿದ್ದವು. ಆದ್ದರಿಂದ ಯಾವುದು ಯಾರ ಲೇಖನ ಎಂಬುದು ಪತ್ತೆ ಹಚ್ಚಲಾಗದ ಏಕರೂಪತೆ ಅಲ್ಲಿತ್ತು.
‘ವಾಹಿನಿ’, ‘ವಿಜಯ ಕರ್ನಾಟಕ’, ‘ನವೋದಯ’, ‘ಭೂದಾನ’, ‘ಕನ್ನಡ ನುಡಿ’ ಮೊದಲಾದ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ ಹೆಗ್ಗಳಿಕೆ ಇವರದು. ಸಂಸ್ಕೃತ, ಕನ್ನಡ, ಇಂಗ್ಲಿಷ್, ಬಂಗಾಳಿ, ಹಿಂದಿ, ತೆಲುಗು, ತಮಿಳು, ಉರ್ದು ಭಾಷೆಗಳಲ್ಲಿ ಪರಿಣಿತರಾಗಿದ್ದ ಇವರು ಅತಿ ದೊಡ್ಡ ಮಟ್ಟದಲ್ಲಿ ಸಾಹಿತ್ಯ ಸೇವೆ ಮಾಡಿದ ಧೀಮಂತ. ಧಾರವಾಡದ ಗೆಳೆಯರ ಗುಂಪಿನ ಪ್ರಕಟಣೆಯಾದ “ಯತಿರಾಜ ರಾಮಾನುಜ” ಇವರ ಚೊಚ್ಚಲ ಕೃತಿ.
ಸಾಮಾಜಿಕವಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ ಕೃಷ್ಣಶರ್ಮರು ಅನೇಕ ಸಂಘ ಸಂಸ್ಥೆಗಳ ಸ್ಥಾಪನೆಗೂ ಕಾರಣರಾಗಿದ್ದರು . ಗಾಂಧಿ ಜಯಂತಿಯನ್ನು ಆಚರಿಸಿ ಅದರಲ್ಲಿ ಉಳಿದ ಮೊತ್ತವನ್ನು ಪುಸ್ತಕ ಭಂಡಾರವನ್ನು ಮತ್ತು ಬೆಂಗಳೂರಿನ ಮಲ್ಲೇಶ್ವರದಲ್ಲಿ ಗಾಂಧಿ ಸಾಹಿತ್ಯ ಸಂಘವನ್ನು ಸ್ಥಾಪಿಸಲು ವಿನಿಯೋಗಿಸಿದರು. ಅದಲ್ಲದೆ ಸಾರ್ವಜನಿಕರ ಉಪಯೋಗಕ್ಕಾಗಿ ಶ್ರೀರಾಮ ಕಾರ್ಪೊರೇಟಿವ್ ಬ್ಯಾಂಕ್, ಶ್ರೀ ಆಂಜನೇಯ ಕಾರ್ಪೊರೇಟಿವ್ ಬ್ಯಾಂಕ್, ಬೆಂಗಳೂರು ಎಜುಕೇಶನ್ ಸೊಸೈಟಿ, ಗಣೇಶ ನಗರ ನಿವೇಶನದಾರರ ಸಂಘ, ಮೈಸೂರಿನ ವಿದ್ಯೋದಯ ಸಭಾ, ಶ್ರೀನಿವಾಸ ಮಂದಿರ ಧರ್ಮ ಸಂಸ್ಥೆ, ಬೆಂಗಳೂರು ನಗರ ಪುಸ್ತಕ ಬಂಡಾರ, ಪ್ರಭಾಸ್ ಸಾಹಿತ್ಯ ಹೀಗೆ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸುಮಾರು 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಸಾರ್ವಜನಿಕ ಕಾರ್ಯಕ್ಕಾಗಿಯೇ ಹುಟ್ಟಿದ ಸಿದ್ಧವನ ಕೃಷ್ಣಶರ್ಮರು ಸಾಮಾಜಿಕ ಕಾರ್ಯಕರ್ತರ ಪಾಲಿಗೆ ಒಬ್ಬ ಅದ್ಭುತ ವ್ಯಕ್ತಿ.
ಸಮಾಜಮುಖಿ ಕೆಲಸಗಳನ್ನು ಮಾಡಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಿದ್ದವನಹಳ್ಳಿ ಕೃಷ್ಣಶರ್ಮರು 14 ಅಕ್ಟೋಬರ್ 1973ರಲ್ಲಿ ಇಹವನ್ನು ತ್ಯಾಜಿಸಿದರು. ಇವರು ನಮ್ಮ ನಡುವೆ ಇಲ್ಲದಿದ್ದರೂ ಅವರು ಮಾಡಿದ ಮಹತ್ತರ ಕಾರ್ಯಗಳು ಅವರನ್ನು ನಮ್ಮ ನಡುವೆ ಜೀವಂತವಾಗಿ ಇರಿಸಿವೆ. ಅವರ ಜನ್ಮದಿನವಾದ ಇಂದು ಅವರನ್ನು ಅಂತರಾಳದಿಂದ ಸ್ಮರಿಸೋಣ.
–ಅಕ್ಷರೀ