ಟಿ. ಚೌಡಯ್ಯನವರು ಮೈಸೂರು ಸಮೀಪದ ಕಾವೇರಿ ಮತ್ತು ಕಪಿಲಾ ನದಿ ಸಂಗಮದಲ್ಲಿರುವ ತಿರುಮಕೂಡಲು ಎಂಬ ಹಳ್ಳಿಯಲ್ಲಿ ಒಕ್ಕಲಿಗ ಕುಟುಂಬದಲ್ಲಿ 1895ರಲ್ಲಿ ಜನಿಸಿದರು. ತಂದೆ ಅಗಸ್ತ್ಯೇ ಗೌಡ ತಾಯಿ ಸುಂದರಮ್ಮ.
ಚೌಡಯ್ಯನವರು 1910ರಲ್ಲಿ ಮೈಸೂರು ರಾಜ ಮನೆತನದ ಆಸ್ಥಾನ ಸಂಗೀತಗಾರರಾದ ಗಾನ ವಿಶಾರದ ಬಿಡಾರಂ ಕೃಷ್ಣಪ್ಪ ಇವರ ಶಿಷ್ಯರಾಗಿದ್ದರು. 1918ರವರೆಗೆ ಗುರುಕುಲ ಪದ್ಧತಿಯಲ್ಲಿ ಅತ್ಯಂತ ಕಠಿಣ ಮತ್ತು ಶಿಸ್ತಿನ ಶ್ರದ್ಧಾಪೂರ್ವಕ ಅಭ್ಯಾಸದಿಂದ ಶ್ರೇಷ್ಠ ಪಿಟೀಲು ವಾದಕರಾಗಿದ್ದು, ಗುರುಗಳ ಪ್ರೋತ್ಸಾಹ ಪಾಂಡಿತ್ಯದಿಂದಾಗಿ ಇವರ ಸಮಕಾಲೀನರಾದವರೆಲ್ಲರಿಂದ ಪ್ರೀತಿ, ಗೌರವ ಪಡೆದು ಖ್ಯಾತರಾದವರು. ಪ್ರಸಿದ್ಧ ಗಾಯಕ ಜಿ.ಎನ್. ಬಾಲಸುಬ್ರಮಣ್ಯಂ ತಮ್ಮ ಸಂಗೀತ ಕಚೇರಿಯನ್ನು ಏರ್ಪಡಿಸುವ ಮೊದಲು, ಪಿಟೀಲು ವಾದನಕ್ಕೆ ಚೌಡಯ್ಯನವರು ದೊರೆಯುವ ಸಾಧ್ಯತೆಯನ್ನು ನೋಡಿ ದಿನ ನಿಗದಿಪಡಿಸುವಂತೆ ಸಭಾ ಕಾರ್ಯದರ್ಶಿಗಳಿಗೆ ಹೇಳುತ್ತಿದ್ದರು. ಮಾತ್ರವಲ್ಲದೆ ಎಲ್ಲಾ ಪ್ರಸಿದ್ಧ ಸಂಗೀತಗಾರರೂ ಚೌಡಯ್ಯನವರೇ ಪಿಟೀಲು ವಾದನಕ್ಕೆ ಬರುವುದನ್ನು ಬಯಸುತ್ತಿದ್ದರು. ಗುರು ಬಿಡಾರಂ ಕೃಷ್ಣಪ್ಪನವರು ಸಾರ್ವಜನಿಕ ಸಂಗೀತ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಪಿಟೀಲುವಾದಕರು ಕಾರಣಾಂತರಗಳಿಂದ ಬರಲಾಗದ ಕಾರಣ ಪಿಟೀಲು ವಾದಕರಾಗಿ ತಮ್ಮ 17ನೇ ವಯಸ್ಸಿಗೆ ಚೌಡಯ್ಯನವರಿಗೆ ದೊರೆತ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿತ್ತು. ಇದರ ನಂತರ ಏಕವ್ಯಕ್ತಿ ಕಾರ್ಯಕ್ರಮ ನೀಡಿದ ಖ್ಯಾತಿಯೂ ಇವರದ್ದಾಗಿತ್ತು.
ಗುರುವಾಗಿ ಅನೇಕ ವಿದ್ಯಾರ್ಥಿಗಳಿಗೆ ಸಮರ್ಪಿತಭಾವದಿಂದ ವಿದ್ಯಾದಾನ ಮಾಡುತ್ತಾ ಮತ್ತು ಶಿಸ್ತಿನ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದರು. ಪ್ರತಿ ದಿನ ಬೆಳಗ್ಗೆ ಏಳುವ ಮತ್ತು ಅಕಾರ ಸಾಧನವನ್ನು ಅಭ್ಯಾಸ ಮಾಡುವ ಪರಿಪಾಠದೊಂದಿಗೆ ದಿನಕ್ಕೆ ನಾಲ್ಕು ಗಂಟೆ ಅಭ್ಯಾಸ ಮಾಡಿ ಧ್ವನಿ ಸಂಸ್ಕೃತಿ ಮತ್ತು ಸ್ವರಗಳ ಆಳವಾದ ಜ್ಞಾನವನ್ನು ಅಭ್ಯಾಸ ಮಾಡುವ ಮೂಲಕ ಒಂದು ತಿಂಗಳಲ್ಲಿ ಒಂದು ರಾಗವನ್ನು ಮಾತ್ರ ಅಭ್ಯಾಸ ಮಾಡಿಸಿ ಶಿಷ್ಯರ ಕರ ಮತ್ತು ಕಂಠಗಳನ್ನು ಪಳಗಿಸುತ್ತಿದ್ದರು. ಆದ್ದರಿಂದಲೇ ಮೂರು ಗತಿಗಳಲ್ಲಿ ವರ್ಣಗಳನ್ನು ಶಿಷ್ಯರು ಚೌಡಯ್ಯನವರಿಗೆ ತೃಪ್ತಿಯಾಗುವಂತೆ ಅವರ ಮುಂದೆ ಹಾಡುವ ಸಾಮರ್ಥ್ಯವನ್ನು ಪಡೆದಿದ್ದರು.
ಗುರುಗಳಾಗಿ ಚೌಡಯ್ಯನವರು ಶಿಷ್ಯರನ್ನು ಬಹಳ ಪ್ರೀತಿ ಆದರಗಳಿಂದ ಕಾಣುತ್ತಿದ್ದರು. ಅವರ ಅನೇಕ ಶಿಷ್ಯರಲ್ಲಿ ಆರ್.ಕೆ. ವೆಂಕಟರಾಮಶಾಸ್ತ್ರಿ, ಕಂದದೇವಿ ಎಸ್. ಅಳಗಿರಿ ಸ್ವಾಮಿ, ಪಾಲ್ಘಾಟ್ ಮಣಿ ಅಯ್ಯರ್, ಚೆನ್ನೈ ವಿ. ಸೇತುರಾಮಯ್ಯ ಇವರೆಲ್ಲ ಪ್ರಸಿದ್ಧ ಪಿಟೀಲುವಾದಕರಾದವರು. ವಿ. ರಾಮರತ್ನಂ ಗಾಯನದಲ್ಲಿ ಪ್ರಸಿದ್ಧರು. ಹೆಚ್ಚಿನ ಸಮಯವನ್ನು ಸಂಗೀತದಲ್ಲಿಯೇ ಕಳೆಯುತ್ತಿದ್ದ ಚೌಡಯ್ಯನವರು ತಮ್ಮ ಸಂಗೀತ ಪ್ರವಾಸದಲ್ಲಿ ಕೆಲವು ಆಯ್ದ ಶಿಷ್ಯರುಗಳನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಸಂಗೀತ ದಿಗ್ಗಜರೊಂದಿಗೆ ಸಂವಹನ ನಡೆಸಲು ಅವಕಾಶ ನೀಡಿ, ಆ ಬಗ್ಗೆ ಹೆಚ್ಚು ಅನುಭವ ಹೊಂದಲು ಎಲ್ಲಾ ರೀತಿಯಿಂದಲೂ ಪ್ರೋತ್ಸಾಹಿಸುತ್ತಿದ್ದರು.
ಆರಂಭದ ಹಂತದಲ್ಲಿ ನಾಲ್ಕು ತಂತಿಗಳ ಪಿಟೀಲು ನುಡಿಸುತ್ತಿದ್ದ ಚೌಡಯ್ಯನವರು 1927ರ ಹೊತ್ತಿಗೆ ಅತ್ಯಂತ ಪ್ರಸಿದ್ಧ ಪಿಟೀಲು ಸಹವಾದಕರಾದರು. ಧ್ವನಿವರ್ಧಕದ ವ್ಯವಸ್ಥೆ ಇಲ್ಲದ ಆ ಕಾಲಘಟ್ಟದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಬಂದ ಹಿಂದಿನ ಸಾಲಿನಲ್ಲಿ ಕುಳಿತ ಆಸಕ್ತರಿಗೆ ಸಂಗೀತ ಆಸ್ವಾದಿಸಲು ಕಷ್ಟವಾದುದನ್ನು ಗ್ರಹಿಸಿದ ಚೌಡಯ್ಯನವರು ಮೊದಲೇ ಇದ್ದ ನಾಲ್ಕು ತಂತಿಗಳಿಗೆ ಇನ್ನೂ ಮೂರು ತಂತಿಗಳನ್ನು ಸೇರಿಸುವ ಮೂಲಕ ಸುಧಾರಣೆ ತಂದು ಸಭಾಂಗಣದ ದೂರದ ಮೂಲೆಯಲ್ಲಿದ್ದವರಿಗೂ ಪಿಟೀಲುವಾದನ ಕೇಳುವ ಅವಕಾಶ ಕಲ್ಪಿಸಿದರು. ನಿರಂತರ ಅಭ್ಯಾಸದ ನಂತರ ಸಂಗೀತ ಕಚೇರಿಗಳಲ್ಲಿ ಸತತವಾಗಿ ಏಳು ತಂತಿಗಳ ಪಿಟೀಲನ್ನೇ ಬಳಸುತ್ತಿದ್ದರು. ಈ ರೀತಿ ಅಭ್ಯಾಸ, ಹೊಸತನ ಮತ್ತು ಪರಿಪೂರ್ಣತೆಯನ್ನು ಸಾಧಿಸುವಲ್ಲಿ ಅನೇಕ ಪ್ರಯೋಗಗಳ ಅಭ್ಯಾಸ ಮಾಡುತ್ತಿದ್ದರು. ಚೌಡಯ್ಯನವರ ಈ ರೀತಿಯ ಹೊಸ ಆವಿಷ್ಕಾರದ ಸಾಧನೆಗೆ ಗುರು ಬಿಡಾರಂ ಕೃಷ್ಣಪ್ಪನವರು ಮತ್ತು ವೀಣೆ ಶೇಷಣ್ಣನವರು ಸಂತಸ ವ್ಯಕ್ತಪಡಿಸಿದ್ದರು. 1947ರಲ್ಲಿ ಹನ್ನೆರಡು ತಂತಿಗಳ ಪಿಟೀಲನ್ನೂ ಆವಿಷ್ಕಾರ ಮಾಡಿದ್ದು ಚೌಡಯ್ಯನವರ ಸಂಗೀತ ಪ್ರತಿಭೆಗೆ ಸಾಕ್ಷಿಯಾಗಿದೆ. ‘ಪ್ರಸನ್ನ ಸೀತಾರಾಮ ಮಂದಿರ’ ಇದರ ಆವರಣದಲ್ಲಿ ಕಾಲೇಜಿನ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿತ್ತು. ಅದನ್ನು ಗುರು ಬಿಡಾರಂ ಕೃಷ್ಣಪ್ಪನವರ ಕನಸು ನನಸಾಗಿಸಲು ಕಾಲೇಜಿನ ಕಾರ್ಯವನ್ನು ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಅಯ್ಯನಾರ್ ಸಂಗೀತ ಶಾಲೆ ಸ್ಥಾಪನೆ ಮಾಡಿ, ನೂರಾರು ವಿದ್ಯಾರ್ಥಿಗಳು ವಾದ್ಯ ಗಾಯನ ತರಬೇತಿಯೊಂದಿಗೆ ಭಾರತ ಸರ್ಕಾರದ ವಿದ್ಯಾರ್ಥಿ ವೇತನವನ್ನು ಪಡೆಯುವಂತಹ ಅವಕಾಶ ಕಲ್ಪಿಸಿದರು.
ಸಂಗೀತ ಕ್ಷೇತ್ರದ ವಿದ್ವಾಂಸರು ಚಲನಚಿತ್ರಗಳಲ್ಲಿ ಭಾಗವಹಿಸುವುದನ್ನು ನೋಡಿ ಅದರಿಂದ ಪ್ರೇರಣೆಗೊಂಡು ತಾವೇ ಸಂಗೀತ ನಿರ್ದೇಶಕರಾಗಿ 1943ರಲ್ಲಿ ‘ವಾಣಿ’ ಎಂಬ ಚಲನಚಿತ್ರವನ್ನು ನಿರ್ಮಾಣ ಮಾಡಿದರು. ಪ್ರೀತಿ ಪೂರ್ವಕವಾಗಿ ಮಾಡುವ ಆತಿಥ್ಯಕ್ಕೆ ಚೌಡಯ್ಯನವರು ಹೆಸರಾಗಿದ್ದರು. ಮೈಸೂರಿಗೆ ಭೇಟಿ ನೀಡಿದ ಸಂಗೀತಗಾರರಿಗೆ ತಮ್ಮ ನಿವಾಸದ ಪಕ್ಕದ ಮನೆಯಲ್ಲಿ ಉಳಕೊಳ್ಳುವ ವ್ಯವಸ್ಥೆಯನ್ನು ಮಾಡಿ ಅವರ ಅಗತ್ಯಗಳನ್ನು ಪೂರೈಸಲು ಅಡುಗೆಯವರು ಮತ್ತು ಸೇವಕರನ್ನು ಗೊತ್ತು ಪಡಿಸಿ, ಬಹಳ ಗೌರವ ಆದರದ ಆತಿಥ್ಯ ನೀಡುತ್ತಿದ್ದರು. ಮಾತ್ರವಲ್ಲ ಚೌಡಯ್ಯನವರನ್ನು ಅವರ ಶಿಷ್ಯ ವರ್ಗದೊಂದಿಗೆ ಆಹ್ವಾನಿಸಿ ಉಚಿತ ಸತ್ಕಾರ ನೀಡಲು, ಮನೆಯಲ್ಲಿ ಉಳಿಸಿಕೊಳ್ಳುವಂತೆ ವಿನಂತಿಸಲು ಉನ್ನತ ಅಧಿಕಾರಿಗಳು ಮುಖಂಡರು ಪೈಪೋಟಿ ನಡೆಸುತ್ತಿದ್ದರು.
ಚೌಡಯ್ಯನವರು ಊರಿಗೆ ಬರುವ ಸುದ್ದಿ ತಿಳಿದಾಗ ಅವರನ್ನು ಕಾಣಲು ಜನರು ಕಿಕ್ಕಿರಿದು ಸೇರುತ್ತಿದ್ದರು. ಇದರಿಂದ ಅವರು ಏನು ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದ ಚೌಡಯ್ಯನವರು ತಮ್ಮ ಯಾವ ಕೆಲಸವನ್ನೂ ಶಿಷ್ಯ ವರ್ಗದಿಂದ ಮಾಡಿಸುತ್ತಿರಲಿಲ್ಲ.
ಸಂಗೀತ ಕ್ಷೇತ್ರದಲ್ಲಿ ಪಿಟೀಲು ವಾದನದಲ್ಲಿ ಮೇರು ಸ್ಥಾನದಲ್ಲಿರುವ ಇವರ ಸವಿನೆನಪಿಗಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕರ್ನಾಟಕ ಸರಕಾರದ ಸಹಾಯದೊಂದಿಗೆ 1980ರಲ್ಲಿ ಚೌಡಯ್ಯ ಸ್ಮಾರಕ ಸಭಾಂಗಣ ನಿರ್ಮಾಣಗೊಂಡಿದೆ. ಇದರ ವಿಶೇಷತೆ ಏನೆಂದರೆ ಇದನ್ನು ಏಳು ತಂತಿಗಳ ಪಿಟೀಲಿನ ಆಕಾರದಲ್ಲಿ ನಿರ್ಮಿಸಲಾಗಿದ್ದು, ಸಂಗೀತ ಕಲಾವಿದರೊಬ್ಬರ ನೆನಪಿಗಾಗಿಯೇ ಕಟ್ಟಿಸಿದ ಏಕೈಕ ಕಟ್ಟಡ ಇದಾಗಿದೆ. ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್ ಇದರ ನಿರ್ವಹಣೆ ಮಾಡುತ್ತಿದ್ದು, ಪ್ರತಿವರ್ಷ ಪ್ರಬುದ್ಧ ಸಂಗೀತಗಾರರಿಗೆ ‘ಸಂಗೀತ ರತ್ನ ಮೈಸೂರು ಡಿ ಚೌಡಯ್ಯ ಸ್ಮಾರಕ ಪ್ರಶಸ್ತಿ’ಯನ್ನು ನೀಡುತ್ತಿದೆ.
ಸಂಗೀತ ಕ್ಷೇತ್ರದಲ್ಲಿ ಹಿಮಾಲಯದೆತ್ತರಕ್ಕೆ ಏರಿ ಸಂಗೀತ ಹಾಗೂ ವಾದ್ಯ ಗಾಯನದಲ್ಲಿ ಅನೇಕ ಮೇಧಾವಿ ಶಿಷ್ಯರನ್ನು ಸಂಗೀತ ಲೋಕಕ್ಕೆ ನೀಡಿದ ‘ಸಂಗೀತ ರತ್ನ ತಿರುಮಕೂಡಲು ಚೌಡಯ್ಯ’ನವರು 19 ಜನವರಿ 1967ರಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ಸಂಗೀತ ಸರಸ್ವತಿಯ ಪಾದವನ್ನಪ್ಪಿದರು.