ರಾಷ್ಟ್ರೀಯ ಮಟ್ಟದ ತಬಲವಾದಕ ಪಂಡಿತ್ ರಘುನಾಥನಕೋಡ್ ಇವರು 17 ಜನವರಿ 1954ರಲ್ಲಿ ಹುಬ್ಬಳ್ಳಿಯ ಸಂಗೀತಗಾರರ ಮನೆತನದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರಾದ ಅರ್ಜುನ್ ಸಾ ನಾಕೊಡ್ ಹಾಗೂ ಅನಸೂಯಾ ನಾಕೊಡ್ ದಂಪತಿಗಳ ಸುಪುತ್ರನಾಗಿ ಜನಿಸಿದರು. ಎಸ್. ಎಸ್. ಎಲ್. ಸಿ. ವರೆಗೆ ವಿದ್ಯಾಭ್ಯಾಸವನ್ನು ಮಾಡಿದ ರಘುನಾಥರಿಗೆ ಸಂಗೀತದ ಪ್ರಥಮ ಗುರು ತಂದೆಯಾಗಿದ್ದರು. ಮುಂದಕ್ಕೆ ಅವರು ಆರಿಸಿಕೊಂಡದ್ದು ಸಂಗೀತವಾದ್ಯಗಳಲ್ಲಿ ಒಂದಾದ ತಬಲಾವಾದನ. ಗುರು ವೀರಣ್ಣ ಕುಮಾರ್ ಇವರ ತಾಳ – ಲಯದ ಗುರು ಆಗಿದ್ದರು. ಮುಂದೆ ಬಸವರಾಜ ಬೆಂಡಿಗೇರಿ ಇವರಲ್ಲಿ ಶ್ರಮಪಟ್ಟು ಹೆಚ್ಚಿನ ಅಭ್ಯಾಸವನ್ನು ಮಾಡಿ ತಬಲ ವಾದನವನ್ನು ಕರಗತಗೊಳಿಸಿಕೊಂಡರು . ಹೈದರಾಬಾದಿನ ಉಸ್ತಾದ್ ಶೇಕ್ ದಾವೂದ್ ಇವರ ಮಗ ತಬ್ಬೀರ್ ದಾವೂದ್, ಗುರುಬಂಧು ನಂದಕುಮಾರ್ ಮುಂತಾದವರ ಬಳಿ ಹೆಚ್ಚಿನ ಶಿಕ್ಷಣವನ್ನು ಪಡೆದು ಈ ಕಲೆಯನ್ನು ಮೈಗೂಡಿಸಿಕೊಂಡರು. ತಾನು ಪಡೆದ ಅಗಾಧ ಜ್ಞಾನದಿಂದಾಗಿ ಪಂಡಿತ್ ಪುಟ್ಟರಾಜ ಗವಾಯಿಗಳು, ಪಂಡಿತ್ ಸೋಮನಾಥ ಮರಡೂರ, ಪಂಡಿತ್ ವೆಂಕಟೇಶ್ ಕುಮಾರ್, ಪಂಡಿತ್ ರಾಜೀವ್ ತಾರಾನಾಥ್, ಡಾ. ಗಂಗೂಬಾಯಿ ಹಾನಗಲ್, ಉಸ್ತಾದ್ ಬಾಲೇ ಖಾನ್, ಪ್ರಸಿದ್ಧ ಸಿತಾರ್ ವಾದಕರಾದ ಉಸ್ತಾದ್ ಶಾಹಿದ್ ಪರ್ವೇಜ್ ಮುಂತಾದವರಿಗೆ ತಬಲ ಸಾತ್ ನೀಡಲು ಸಾಧ್ಯವಾಯಿತು. ತನ್ನ ಹತ್ತರ ಹರೆಯದಲ್ಲಿಯೇ ತಂದೆಯ ಸಂಗೀತಕ್ಕೆ ಸಹವಾದಕರಾಗಿ ಭಾಗವಹಿಸಿದ ಹೆಗ್ಗಳಿಕೆ ಇವರದು.
1977ರಲ್ಲಿ ಮಂಗಳೂರಿನ ಆಕಾಶವಾಣಿ ನಿಲಯದಲ್ಲಿ ಉದ್ಯೋಗಕ್ಕೆ ಸೇರಿದವರು ‘ಎ ಟಾಪ್’ ತಬಲವಾದಕರಾದರು. ಕೆಲಕಾಲ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಅನುಭವವೂ ಇವರಿಗಿದೆ. ಈ ಸಂದರ್ಭದಲ್ಲಿ ಅನೇಕ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರಿಗೆ ತಬಲಾ ವಾದಕರಾಗಿ ಪಾಲ್ಗೊಳ್ಳುವ ಅವಕಾಶ ದೊರೆಯಿತು.
ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಸಂಗೀತಗಾರರಾದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಿಟೀಲು ವಾದನದಲ್ಲಿ ಪ್ರಸಿದ್ಧರಾದ ಗೋಪಾಲಕೃಷ್ಣ, ಸಾರೋದ್ ವಾದನದಲ್ಲಿ ಖ್ಯಾತರಾದ ಪಂಡಿತ್ ನಂದಲಾಲ್ ಘೋಷ್, ಶ್ರೀಮತಿ ಜಯಶ್ರೀ ಪಟ್ಣಕರ್, ಕೊಳಲು ವಾದನದಲ್ಲಿ ಪ್ರಖ್ಯಾತರಾದ ಪಂಡಿತ್ ವೆಂಕಟೇಶ್ ಗೋಡ್ಕಿಂಡಿ ಹಾಗೂ ಡಾ. ರಾಜಶೇಖರ ಮನ್ಸೂರ್ ಮುಂತಾದ ಘಟಾನುಘಟಿಗಳಿಗೆ ತಬಲ ಸಾಥ್ ನೀಡಿದ ಧೀಮಂತ.
ಇವರು ರಾಷ್ಟ್ರೀಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಸಂಗೀತೋತ್ಸವಗಳಲ್ಲಿಯೂ ಪ್ರಖ್ಯಾತ ಸಂಗೀತಗಾರರಿಗೆ ತಬಲ ಸಾಥ್ ನೀಡಿದ ಅನುಭವಿ. 1988ರಲ್ಲಿ ಲಂಡನ್ನ ಮ್ಯಾಂಚೆಸ್ಟರ್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ, 1996ರಲ್ಲಿ ಫ್ರಾನ್ಸ್ ನಲ್ಲಿ ನಡೆದ ಕಲಾ ವಿಸ್ತರಣಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, 1998ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವ ಕನ್ನಡ ಕೂಟ ಇತ್ಯಾದಿಗಳಲ್ಲಿ ಭಾಗವಹಿಸಿದ ವಿಶ್ವದಾದ್ಯಂತ ಪ್ರಸಿದ್ಧರಾದ ಸಂಗೀತಗಾರರ ಕಚೇರಿಗಳಲ್ಲಿ ಭಾಗವಹಿಸಿದ ಕಲಾರಾಧಕ. ಪಂಡಿತ್ ರಘುನಾಥ್ ನಾಕೋಡ್ ಇವರ ಪತ್ನಿ ಹಿಂದೂಸ್ತಾನಿ ಸಂಗೀತ ಗಾಯಕಿಯಾಗಿದ್ದು ಮಗ ರವಿಕಿರಣ ನಾಕೋಡ್ ತಂದೆಯಂತೆ ಪ್ರಸಿದ್ಧಿ ಪಡೆದ ತಬಲವಾದಕ. ಇವರು ಸಹ ‘ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಏಕವ್ಯಕ್ತಿ ಕಾರ್ಯಕ್ರಮ ನೀಡಿದ ಮತ್ತು ಪ್ರಖ್ಯಾತ ಸಂಗೀತಗಾರರಿಗೆ ತಬಲವಾದನದಲ್ಲಿ ಸಹಕರಿಸಿದ ಕಲಾಪ್ರೇಮಿ. ಗದಗ ನಗರದ ಕೆ. ಎಚ್. ಪಾಟೀಲ ಸಭಾಭವನದಲ್ಲಿ ನಡೆದ 44ನೇ ಹಿರಿಯ ಸಂಗೀತ ವಿದ್ವಾಂಸರ ಮತ್ತು 26ನೇ ಯುವ ಸಂಗೀತ ವಿದ್ವಾಂಸರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಸಂಗೀತ ನಿನಾದ ಮೊಳಗಿಸಿದವರು ಪಂಡಿತ್ ರಘುನಾಥ್ ನಾಕೋಡ್.
ಹಸನ್ಮುಖದಿಂದ ಅನಾಯಾಸವಾಗಿ ತಮ್ಮ ತಬಲವಾದನದಿಂದ ಪ್ರೇಕ್ಷಕರ ಮನವನ್ನು ಸೂರೆಗೊಳ್ಳುತ್ತಿದ್ದ ರಘುನಾಥರಿಗೆ ಸಂದ ಗೌರವಗಳು ಅನೇಕ. ಕರ್ನಾಟಕ ಸರಕಾರದಿಂದ ‘ತಬಲಾ ಸಾಮ್ರಾಟ್’ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ‘ರಾಜ್ಯೋತ್ಸವ ಪ್ರಶಸ್ತಿ’. ಮೈಸೂರಿನ ತ್ಯಾಗರಾಜ ಆರಾಧನಾ ಸಮಿತಿಯಿಂದ ‘ಸಂಗೀತ ಕಲಾ ತಪಸ್ವಿ’ ಧಾರವಾಡದ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದಿಂದ ‘ತಾಳ – ಲಯ – ಕಣ್ಮಣಿ’, ಬಸವ ಗುರು ಕಾರುಣ್ಯ ಪ್ರತಿಷ್ಠಾನದಿಂದ ‘ತಬಲ ವಾದ್ಯ ಗಾರುಡಿಗ’, 2017ನೇ ಸಾಲಿನ ‘ಬಿ. ಚೌಡಯ್ಯ ರಾಷ್ಟ್ರೀಯ ಪುರಸ್ಕಾರ’ ಇವೆಲ್ಲವೂ ಸಂಗೀತ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆ ಹಾಗೂ ನೀಡಿದ ಕೊಡುಗೆಗೆ ಸಂದ ಗೌರವ.