Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ರಂಗಭೂಮಿಯ ರಾಯಭಾರಿ ಶ್ರೀನಿವಾಸ ಜಿ. ಕಪ್ಪಣ್ಣ
    Birthday

    ವಿಶೇಷ ಲೇಖನ | ರಂಗಭೂಮಿಯ ರಾಯಭಾರಿ ಶ್ರೀನಿವಾಸ ಜಿ. ಕಪ್ಪಣ್ಣ

    February 13, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತುಮಕೂರು ಜಿಲ್ಲೆಯ ಎಡೆಯೂರು ಸಮೀಪದ ಜಲಧಿಗೆರೆ ಶ್ರೀನಿವಾಸ ಜಿ. ಕಪ್ಪಣ್ಣ ಇವರ ಹುಟ್ಟೂರು. ಬಡತನದ ಬೇಗೆಯಿಂದಾಗಿ ತಂದೆ ಗಿರಿಯಪ್ಪ ಮತ್ತು ತಾಯಿ ಜಯಮ್ಮರೊಂದಿಗೆ ಬಾಲ್ಯದಲ್ಲಿಯೇ ಬೆಂಗಳೂರಿನತ್ತ ಮುಖ ಮಾಡಿದವರು. ತಂದೆ ಗಿರಿಯಪ್ಪ ಕಾರ್ಮಿಕ ಇಲಾಖೆಯ ನೌಕರರಾಗಿದ್ದರೆ, ತಾಯಿ ಜಯಮ್ಮ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದರು. 13 ಫೆಬ್ರವರಿ 1948ರಲ್ಲಿ ಜನಿಸಿದ ಕಪ್ಪಣ್ಣನವರು ಮೂವರು ಸಹೋದರರು ಹಾಗೂ ಓರ್ವ ಸಹೋದರಿಯರೊಂದಿಗೆ ಪ್ರೀತಿಯನ್ನು ಹಂಚಿಕೊಂಡು ಬೆಳೆದವರು. 7ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ತೇರ್ಗಡೆಯಾದ ಇವರು ಆರ್ಥಿಕವಾಗಿ ಕಡುಬಡವರಾಗಿದ್ದರೂ, ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದರು. ಕಾಲೇಜು ಜೀವನದಲ್ಲಿಯೇ ಪದ್ಮಭೂಷಣ ಎಚ್. ನರಸಿಂಹಯ್ಯನವರ ಪ್ರಭಾವಕ್ಕೆ ಒಳಗಾಗಿ ಅವರ ಮಾರ್ಗದರ್ಶನದಲ್ಲಿ ಬೆಳಕಿನ ರಂಗ ವಿನ್ಯಾಸದೊಂದಿಗೆ ನಾಟಕದ ಜವಾಬ್ದಾರಿಯನ್ನು ನಿರ್ವಹಿಸಿದರು. ಮೇಕಪ್ ನಾಣಿ ಎಂದೇ ಪ್ರಸಿದ್ಧರಾದ ಸೌಂದರ್ಯವರ್ಧಕ ಕಲಾವಿದ ಹಾಗೂ ಚಲನಚಿತ್ರ ನಟರಾದ ಬೆಳವಾಡಿ ನಂಜುಂಡಯ್ಯ ನಾರಾಯಣ ಇವರ ಮಾರ್ಗದರ್ಶನವು ದೊರೆಯಿತು.

    1964ರಲ್ಲಿ ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್ ಮೂಲಕ ನಾಟಕಗಳಿಗೆ ರಂಗ ಸಜ್ಜಿಕೆ, ಬೆಳಕು, ವಿನ್ಯಾಸ ಮುಂತಾದವುಗಳಿಗೆ ವಿಶೇಷ ಶ್ರಮಪಡುವ ಮೂಲಕ ರಂಗ ಚಟುವಟಿಕೆ ಪ್ರಾರಂಭಿಸಿದರು. ಪದವಿ ಪಡೆದ ನಂತರ ವಾರ್ತಾ ಪ್ರಚಾರ ಇಲಾಖೆಯಲ್ಲಿ ಸೇವೆ, 1972ರಲ್ಲಿ ‘ನಟರಂಗ’ ತಂಡ ಆರಂಭವಾದಾಗ ತಂಡದ ಸಂಘಟನೆಯ ಜವಾಬ್ದಾರಿಗೆ ಹೆಗಲು ಕೊಟ್ಟರು. ‘ಕಾಕನಕೋಟೆ’, ‘ವೆಯಿಟಿಂಗ್ ಫಾರ್ ಗಾಡ್’, ‘ಸಂಕ್ರಾಂತಿ’, ‘ಶೋಕ ಚಕ್ರ’, ‘ನಮ್ಮೊಳಗೊಬ್ಬ ನಾಜೂಕಯ್ಯ’, ‘ತಲೆದಂಡ’ ಮುಂತಾದ ನಾಟಕ ಪ್ರದರ್ಶನಗಳಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ‘ನಟರಂಗ ‘ತಂಡದ ಕಲಾವಿದರಿಂದಲೇ ‘ಕಾಕನಕೋಟೆ’ ಚಲನಚಿತ್ರವೂ ನಿರ್ಮಾಣಗೊಂಡಿತು ಎಂಬುದು ಹೆಗ್ಗಳಿಕೆ ಮಾತ್ರವಲ್ಲ ಶ್ರೀನಿವಾಸ ಕಪ್ಪಣ್ಣರ ಪರಿಶ್ರಮದ ಸಾರ್ಥಕ್ಯವೂ ಇಲ್ಲಿ ಗಮನಾರ್ಹ. ಕಪ್ಪಣ್ಣನವರು ‘ನಟರಂಗ’ ತಂಡದ ಸ್ಥಾಪಕ ಕಾರ್ಯದರ್ಶಿಯಾಗಿದ್ದರು ಎನ್ನುವುದು ಈ ತಂಡದ ಗೌರವವೂ ಹೌದು. ಜಪಾನ್, ಹಾಂಕಾಂಗ್, ಕೊರಿಯ, ಸಿಂಗಾಪುರ್ ದೇಶಗಳಲ್ಲಿ ಅಪ್ರತಿಮ ಸೃಜನಶೀಲ ಸಾಂಸ್ಕೃತಿಕ ರಾಯಭಾರಿ ಶ್ರೀನಿವಾಸ್ ಜಿ. ಕಪ್ಪಣ್ಣನವರು ನೃತ್ಯ, ನಾಟಕೋತ್ಸವ, ರಂಗಭೂಮಿಯ ಬಗ್ಗೆ ಅಂತರಾಷ್ಟ್ರೀಯ ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಪಾಲ್ಗೊಂಡು ನಿರ್ವಹಿಸಿದ್ದು ಶ್ಲಾಘನೀಯ.

    ಖ್ಯಾತ ನಿರ್ದೇಶಕ ಪೀಟರ್ ಬ್ರೂಕ್ ಇವರ ‘ಅಂತರಾಷ್ಟ್ರೀಯ ಮಹಾಭಾರತ ಕಾರ್ಯಾಗಾರ’ ಗೋಷ್ಠಿಯ ಸಂಚಾಲಕರಾಗಿ ಯಶಸ್ವಿಯಾಗಿ ಕಾರ್ಯಕ್ರಮ ನಿರ್ವಹಿಸಿದ ಹೆಗ್ಗಳಿಕೆ ಇವರದು. ‘ಕಾಡು’, ‘ಕಾನೂರು ಹೆಗ್ಗಡತಿ’ ಚಲನಚಿತ್ರಗಳಲ್ಲಿ ‘ಮಾಲ್ಗುಡಿ ಡೇಸ್’ ಮತ್ತು ‘ಮುಕ್ತ ಮುಕ್ತ’ ಇತ್ಯಾದಿ ಧಾರಾವಾಹಿಗಳಲ್ಲಿಯೂ ಪಾತ್ರ ನಿರ್ವಹಿಸಿದವರು ಶ್ರೀನಿವಾಸ ಕಪ್ಪಣ್ಣ. ಕನ್ನಡದ ಶ್ರೇಷ್ಠ ನಿರ್ದೇಶಕರುಗಳಾದ ಪ್ರೊಫೆಸರ್ ಬಿ. ಚಂದ್ರಶೇಖರ, ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಸಿ.ಆರ್. ಸಿಂಹ ಮುಂತಾದವರೊಂದಿಗೆ ಶ್ರೀನಿವಾಸರು ಕೆಲಸ ಮಾಡಿದ್ದು ಹೆಮ್ಮೆಯ ವಿಚಾರ. ‘ಎಲ್ಲಾ ನನ್ ಮಕ್ಕಳೇ’, ‘ಅಧ:ಪಾತಾಳ’, ‘ಚಿಕ್ಕವೀರರಾಜೇಂದ್ರ’ ಮತ್ತು ‘ಕುರುಡು ಕಾಂಚಾಣ’ ನಾಟಕಗಳಿಗೆ ಸಾವಿರಕ್ಕೂ ಹೆಚ್ಚು ಬಾರಿ ಬೆಳಕು ಮತ್ತು ಸಂಯೋಜನೆ ಮಾಡಿದ್ದು ವಿಶೇಷ ದಾಖಲೆ. ಇದು ಶ್ರೀನಿವಾಸ ಕಪ್ಪಣ್ಣನವರ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ.

    ಸೋನಾಲ್ ಮಾನ್ ಸಿಂಗ್, ಮೃಣಾಲಿನಿ ಸಾರಾಭಾಯಿ, ಪದ್ಮ ಸುಬ್ರಮಣ್ಯಂ, ಮಾಯಾ ರಾವ್, ಪ್ರತಿಭಾ ಪ್ರಹ್ಲಾದ್, ನಿರುಪಮಾ ರಾಜೇಂದ್ರ, ಮಾಧವಿ ಸೋನಾಲ್ ಇತ್ಯಾದಿ ಪ್ರಖ್ಯಾತ ನೃತ್ಯ ಪ್ರತಿಭೆಗಳ ಕಾರ್ಯಕ್ರಮಗಳಿಗೆ ಬೆಳಕು ಸಂಯೋಜನೆ ಮಾಡಿದ ಶ್ರೇಯಸ್ಸು ಕಪ್ಪಣ್ಣರದು. ಎಂಟು ವರ್ಷಗಳ ಕಾಲ ದೇಶದ ರಾಜಧಾನಿಯಲ್ಲಿ ಗಣರಾಜ್ಯೋತ್ಸವದಂದು ಕರ್ನಾಟಕವನ್ನು ಪ್ರತಿನಿಧಿಸುವ ಜಾನಪದ ತಂಡಗಳಿಗೆ ನೃತ್ಯ ಸಂಯೋಜನೆ ಮಾಡಿ ಅದರ ಮುಂದಾಳತ್ವ ವಹಿಸಿದ್ದಾರೆ. ಮೈಸೂರು ದಸರಾ ಉತ್ಸವ 2000ಕ್ಕಾಗಿ ಟಾರ್ಚ್ ಲೈಟಿನ ವಿನ್ಯಾಸ ಮಾಡಿದರೆ, ರಷ್ಯನ್ ಉತ್ಸವ, ಸಾರ್ಕ್ ಉತ್ಸವ, ರಾಜ್ಯೋತ್ಸವ, ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಇವುಗಳಿಗೆಲ್ಲ ಬೆಳಕು ಮತ್ತು ವಿನ್ಯಾಸ ಸಂಘಟನೆ ಮಾಡಿದ ಮೇಧಾವಿ ಶ್ರೀನಿವಾಸ್ ಜಿ ಕಪ್ಪಣ್ಣ. ‘ಕುವೆಂಪು ಕಲಾಕ್ಷೇತ್ರ – ಒಂದು ಪ್ರದರ್ಶನ ರಂಗಭೂಮಿ’ ಇದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ. ಈ ಕಾರ್ಯಕ್ರಮದ ವಿನ್ಯಾಸಕಾರ ಕಪ್ಪಣ್ಣನವರು.

    ಎರಡು ವರ್ಷಗಳ ಕಾಲದಲ್ಲಿ 69 ಸಲ ನಡೆದ ಜನಪದ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಜಾನಪದ ಕಲೆಗಳ ಪ್ರದರ್ಶನಗಳ ದೃಶ್ಯ ವೈಭವವನ್ನು ಪ್ರದರ್ಶನ ಮಾಡಿದ್ದಾರೆ. ಇದರಲ್ಲಿ 250 ತಂಡಗಳು ಭಾಗವಹಿಸಿದ್ದು, 83 ವಿಭಿನ್ನ ಪ್ರಕಾರದ ಜಾನಪದ ಕಲೆಗಳನ್ನು ಈ ಕಾರ್ಯಕ್ರಮದಲ್ಲಿ ಒಟ್ಟು 5800 ಮಂದಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಯಶಸ್ವಿಯಾದರು. ಇದರ ಕೀರ್ತಿ ಸಲ್ಲಬೇಕಾದದ್ದು ಸಾಧಕ ಶ್ರೀನಿವಾಸ ಜಿ. ಕಪ್ಪಣ್ಣನವರಿಗೆ. ಸಿಂಗಾಪುರ್, ಟರ್ಕಿ, ಸಿರಿಯ, ಇಟಲಿ, ಜಪಾನ್, ಶ್ರೀಲಂಕಾ, ಹಾಂಗ್ ಕಾಂಗ್ ಇತ್ಯಾದಿ ಇನ್ನೂ ಅನೇಕ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿ, ತಂಡಗಳ ಕಲಾ ನಿರ್ದೇಶಕರಾಗಿ, ಭಾರತೀಯ ಕಲೆಗಳನ್ನು ಪ್ರದರ್ಶಿಸಿದ ಮೇರು ಕಲಾವಿದ ಇವರು. ಪೂರ್ವ ಜರ್ಮನಿ ಮತ್ತು ಸಿಯೋಲ್ ನಲ್ಲಿ ರಂಗಭೂಮಿಯ ಕುರಿತಾದ ಪ್ರಬಂಧ ಮಂಡನೆ ಹಾಗೂ ಬ್ರಿಟನ್ ಮತ್ತು ಅಮೇರಿಕದಲ್ಲಿ ‘ಜನಪದ ಜಾತ್ರೆ’ ಎನ್ನುವ ವಿಷಯದಲ್ಲಿ ಪ್ರಬಂಧ ಮಂಡಿಸಿರುವರು. 2010ರಲ್ಲಿ ನ್ಯೂ ಜರ್ಸಿಯಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಂಘಟಕರಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ.

    ‘ಸಿ. ಅಶ್ವತ್ ನಮನ’ ಎಂಬ ಬೃಹತ್ ಕಾರ್ಯಕ್ರಮ, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಇವೆಲ್ಲವುಗಳ ಸಂಘಟನಾ ರೂವಾರಿ ಸಂಘಟಕ ಶ್ರೇಷ್ಠರಾದ ಶ್ರೀನಿವಾಸ ಜಿ. ಕಪ್ಪಣ್ಣನವರು. ಇವರು ಮಾಡಿದ ಸಾಧನೆಗಳಿಗೆ ಹಲವಾರು ಪ್ರಶಸ್ತಿ, ಬಿರುದುಗಳು, ಸನ್ಮಾನ, ಸತ್ಕಾರಗಳು ನಡೆದಿವೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಭಾರತದ ರಾಷ್ಟ್ರಪತಿಗಳಿಂದ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದುಬೈನ ಶ್ರೀರಂಗ ಪ್ರತಿಷ್ಠಾನ ಪ್ರಶಸ್ತಿ, ಮುಂಬೈ ಕರ್ನಾಟಕ ಸಂಘದಿಂದ ಸಾಂಸ್ಕೃತಿಕ ರಾಯಭಾರಿ ಬಿರುದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರತಿಷ್ಠಾನ ಪ್ರಶಸ್ತಿ ಇವೆಲ್ಲವೂ ಒಬ್ಬ ಸಾಂಸ್ಕೃತಿಕ ರಾಯಭಾರಿಯಾಗಿ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿದ ರಂಗಕರ್ಮಿ, ಬೆಳಕು ಸಂಯೋಜನಕ, ರಂಗ ಸಜ್ಜಿಕೆ, ಅತ್ಯುತ್ತಮ ನಟ ಮತ್ತು ಸಂಘಟಕರಾಗಿ ಅಮೋಘ ಕಾರ್ಯವನ್ನು ಮಾಡಿದ ಕಪ್ಪಣ್ಣನವರ ಕಲಾ ಸಾಧನೆಗೆ ಸಂದ ಗೌರವ.

    ಸಾಂಸ್ಕೃತಿಕ ಸಂಘಟಕರಾದ ಕಪ್ಪಣ್ಣನವರ ಮಗಳು ಸ್ನೇಹ ಕಪ್ಪಣ್ಣ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ನೃತ್ಯ ಕಲಾವಿದೆ. ತಂದೆಯಿಂದಲೇ ಪ್ರಭಾವಿತಳಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ಎಂದರೆ ಸಾಂಸ್ಕೃತಿಕ ರಂಗಕ್ಕೆ ಕಪ್ಪಣ್ಣನವರು ಒಂದು ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ ಎಂದೇ ಅರ್ಥ. ಪ್ರದರ್ಶನ ಕಲೆಗಳಿಗಾಗಿಯೇ ಮೀಸಲಾದ ‘ಪ್ರಸಿದ್ಧ ಫೌಂಡೇಶನ್’ ಇದರ ಕಲಾ ನಿರ್ದೇಶಕರಾಗಿ ಸೃಜನಶೀಲ ನೃತ್ಯ ತಂಡವಾದ ‘ಭ್ರಮರಿ’ಯ ತಾಂತ್ರಿಕ ನಿರ್ದೇಶಕರಾಗಿ ಕಪ್ಪಣ್ಣನವರು ಕಾರ್ಯನಿರ್ವಹಿಸುತ್ತಿದ್ದಾರೆ. ಯುನೆಸ್ಕೋದ ‘ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್’ನಲ್ಲಿ ರಂಗಭೂಮಿ ಕೇಂದ್ರದಲ್ಲಿನ ಭಾರತ ಅಧ್ಯಯನ ವಿಭಾಗದ, ಭಾರತೀಯ ನಾಟ್ಯ ಸಂಘದ ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಸಾಂಸ್ಕೃತಿಕ ಲೋಕವನ್ನು ತಮ್ಮ ಬೆಳಕು ವಿನ್ಯಾಸ, ಸಂಘಟನಾ ಚಾತುರ್ಯ, ಅಭಿನಯದ ಮೂಲಕ ಬೆಳಗಿ, ಸ್ವಪ್ರತಿಭೆಯ ಪ್ರಭೆ ಎಲ್ಲೆಡೆ ಬಿರುವಂತಾದದ್ದು ಕಪ್ಪಣ್ಣನವರ ಅಸಾಮಾನ್ಯ ಸಾಧನೆ. ಅನೇಕ ರೀತಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವುದು ಕಪ್ಪಣ್ಣನವರ ಸಾಧನೆಯ ಯಶಸ್ಸಂದೇ ಹೇಳಬಹುದು.

    ಕ್ರಿಯಾಶೀಲ ಸಾಧಕ ಶ್ರೀನಿವಾಸ ಜಿ. ಕಪ್ಪಣ್ಣನವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.

    ಅಕ್ಷರೀ

    Birthday Literature specialarticle theatre
    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತಿ ಸುಧಾ ನಾಗೇಶರಿಗೆ ‘ಸಾಧನಾ ಶ್ರೀ ಪ್ರಶಸ್ತಿ’ | ಫೆಬ್ರವರಿ 14
    Next Article ಹಾಲಕ್ಕಿ ಜನಾಂಗದ ಜಾನಪದ ಕೋಗಿಲೆ ‘ಪದ್ಮಶ್ರೀ’ ಪುರಸ್ಕೃತ ಹಿರಿಯ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ವಿಧಿವಶ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.