ತಮ್ಮ ತಾಯಿ ಹಾಡುತ್ತಿದ್ದ ಕನ್ನಡ, ತೆಲುಗು ಭಾಷೆಯ ಹಾಡುಗಳು ಮತ್ತು ತಂದೆಯ ಸಂಸ್ಕೃತ ಶ್ಲೋಕಗಳನ್ನು ಬಾಲ್ಯದಿಂದಲೇ ಮೈಮನಗಳಲ್ಲಿ ತುಂಬಿಕೊಂಡವರು ತಿರುಮಲೆ ರಾಜಮ್ಮ. ಕಲೆ ಮತ್ತು ಸಾಹಿತ್ಯದ ಬಗ್ಗೆ ಇವರಿಗೆ ಮೊದಲೇ ಇದ್ದ ಪ್ರತಿಭೆ, ಅವಕಾಶ ದೊರೆತ ಕೂಡಲೇ ಅನಾವರಣಗೊಂಡಿತು. ರಾಘವಾಚಾರ್ ಮತ್ತು ಸೀತಮ್ಮ ದಂಪತಿಗಳ ಸುಪುತ್ರಿಯಾದ ರಾಜಮ್ಮ ತುಮಕೂರಿನಲ್ಲಿ 20 ನವಂಬರ್ 1900ರಲ್ಲಿ ಜನಿಸಿದರು. ವರ್ಗಾವಣೆಗೊಂಡು ತಂದೆ ರಾಘವಾಚಾರ್ ಹಾಸನದಲ್ಲಿದ್ದ ಹೊತ್ತಿನಲ್ಲಿ ಅಲ್ಲಿಯೇ ಅಕ್ಷರಭ್ಯಾಸ ಆರಂಭಗೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಮುಗಿದು ಮುಂದೆ ಲೋವರ್ ಸೆಕೆಂಡರಿಗೇ ವಿದ್ಯಾಭ್ಯಾಸ ಮೊಟಕಾಯಿತು.
ಪಂಚ ಭಾಷಾ ಕೋವಿದ, ಸಾಹಿತಿ, ವಾಗ್ಮಿ, ಪತ್ರಿಕೋದ್ಯಮಿ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯ ತಿ.ತಾ. ಶರ್ಮ ಎಂದೇ ಪ್ರಸಿದ್ಧರಾದ ಕನ್ನಡದ ಭೀಷ್ಮ, ತಿರುಮಲೆ ತಾತಾಚಾರ್ಯ ಶರ್ಮರೊಂದಿಗೆ ತಮ್ಮ 13ನೆಯ ವಯಸ್ಸಿನಲ್ಲಿ ರಾಜಮ್ಮನ ವಿವಾಹವಾಯಿತು. ಪದ್ಧತಿಯಂತೆ ವಿವಾಹಿತ ಹೆಣ್ಣು ಮಕ್ಕಳು ತವರಿನಲ್ಲಿಯೇ ಉಳಿಯುವ ಕ್ರಮ. ಆದ್ದರಿಂದ ಪತಿಯ ವಿದ್ಯಾಭ್ಯಾಸ ಮುಗಿಯುವವರೆಗೆ ರಾಜಮ್ಮನವರು ತವರಿನಲ್ಲಿ ಉಳಿದರು. ರಾಜಮ್ಮನವರ ಸೋದರ ಮಾವ ವಿದ್ವಾನ್ ಟಿ. ವೆಂಕಟಾಚಾರ್ಯರು ಆ ಕಾಲಘಟ್ಟದ ಪ್ರಸಿದ್ಧ ನಾಟಕಕಾರರು. ಇವರ ಪ್ರೋತ್ಸಾಹದಿಂದ ರಾಜಮ್ಮನವರಿಗೆ ಸಾಹಿತ್ಯದಲ್ಲಿ ಮುಂದುವರಿಯುವ ಮತ್ತು ಸಂಸ್ಕೃತದಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ಅನುಕೂಲವಾಯಿತು. ತಂದೆ ಬೆಂಗಳೂರಿಗೆ ವರ್ಗವಾಗಿ ಬಂದ ಸಮಯದಲ್ಲಿ ಸಂಗೀತ ಮತ್ತು ಸಾಹಿತ್ಯದಲ್ಲಿ ಮುಂದುವರೆಯಲು ಹೆಚ್ಚಿನ ಅವಕಾಶ ರಾಜಮ್ಮನವರಿಗೆ ದೊರೆಯಿತು. ಇವರ ವೀಣಾ ವಾದನ ಕೇಳಿ ಸಂತೋಷಪಟ್ಟ ಪ್ರಸಿದ್ಧ ವಿದ್ವಾಂಸ ಪಿಟೀಲು ತಾಯಪ್ಪನವರು ಹೆಚ್ಚಿನ ಅಭ್ಯಾಸಕ್ಕಾಗಿ ವೀಣೆ ಗೋಪಾಲಾಚಾರ್ಯರನ್ನು ಪರಿಚಯಿಸಿದರು. ಇದರಿಂದಾಗಿ ರಾಜಮ್ಮನವರು ವೀಣಾವಾದನದಲ್ಲಿ ವಿದುಷಿಯಾದರು. ಮುಂದೆ ವೀಣೆ ಪಾಠವನ್ನು ಖ್ಯಾತ ವೈಣಿಕರಾದ ವೀಣೆ ಶೇಷಣ್ಣನವರಲ್ಲಿ ಮುಂದುವರಿಸುವ ಅವಕಾಶ ದೊರೆಯಿತು.
ಪತಿ ತಾತಾಚಾರ್ಯರು ಇಂಟರ್ಮೀಡಿಯಟ್ ಮುಗಿಸಿ ಮದರಾಸಿನ ಶಾಸನ ಇಲಾಖೆಗೆ ಉದ್ಯೋಗಿಯಾಗಿ ಸೇರಲು ಪತ್ನಿ ಸಮೇತರಾಗಿ ಮದರಾಸಿಗೆ ಹೋದರು. ಪಾಂಡಿತ್ಯಪೂರ್ಣ ಭಾಷಾ ಜ್ಞಾನಿಯಾದ ಪತಿಯೊಂದಿಗೆ ರಾಜಮ್ಮ ಮದರಾಸಿಗೆ ಬಂದ ಸಮಯದಲ್ಲಿ ಸ್ವಾತಂತ್ರ್ಯ ಚಳುವಳಿ ಮತ್ತು ಸಮಾಜ ಸುಧಾರಣೆಗೆ ಸಂಬಂಧಪಟ್ಟ ಚಳುವಳಿಗಳು ಗಂಭೀರ ರೂಪ ಪಡೆದಿದ್ದವು. ದೇಶದ ನಾಯಕರು ಮಾಡುತ್ತಿದ್ದ ಭಾಷಣಗಳಿಂದ ಪ್ರಭಾವಿತರಾದ ರಾಜಮ್ಮ ಬಾಲ ವಿಧವಾ ಪುನರ್ ವಿವಾಹ ಮತ್ತು ಬಾಲ್ಯ ವಿವಾಹ ನಿಷೇಧ ಈ ವಿಷಯಗಳನ್ನು ಪ್ರಮುಖವಾಗಿರಿಸಿಕೊಂಡು ‘ಸುಖಮಾರ್ಗ’ ಎಂಬ ಶೀರ್ಷಿಕೆಯ ನಾಟಕದ ರಚನೆ ಮಾಡಿದರು. ಮದರಾಸಿನಲ್ಲಿ ಮೊಟ್ಟ ಮೊದಲಿಗೆ ಗಾಂಧೀಜಿಯವರನ್ನು ಕಂಡ ರಾಜಮ್ಮನವರೊಳಗಿನ ಸೂಪ್ತ ದೇಶಪ್ರೇಮ ಜಾಗೃತವಾಯಿತು. ಗಾಂಧಿ ಮಾರ್ಗದಲ್ಲಿ ನಂಬಿಕೆ ಇಟ್ಟ ಇವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ದೇಶ ಭಕ್ತರಿಗೆ ‘ಭಾರತಿ’ ಎಂಬ ಕಾವ್ಯನಾಮದಲ್ಲಿ ಕನ್ನಡ ದೇಶಭಕ್ತಿ ಗೀತೆಗಳನ್ನು ರಚಿಸಿಕೊಟ್ಟು, ಅವರಲ್ಲಿ ಸ್ಪೂರ್ತಿ ತುಂಬುವ ಮೂಲಕ ತನ್ನದೇ ಆದ ರೀತಿಯಲ್ಲಿ ಸಹಕರಿಸಿದರು. ಅವರು ರಚಿಸಿದ ಮೊದಲ ಗೀತೆ ‘ದೇಶ ಸೇವಾ ನಿರತರಾಗೈ ಲೋಗರೇ’, 1942ರ ಬ್ರಿಟಿಷರೇ, “ಭಾರತ ಬಿಟ್ಟು ತೊಲಗಿ” ಚಳುವಳಿಯ ಸಂದರ್ಭದಲ್ಲಿ ‘ರಾಷ್ಟ್ರ ಶಕ್ತಿಯ ವಿರಾಡ್ರೂಪಧಾರೀ ನಮೋ’, ಉಪ್ಪಿನ ಸತ್ಯಾಗ್ರಹಕ್ಕೆ ಸಂಬಂಧಪಟ್ಟ “ಸತ್ಯ ಸಂಗ್ರಾಮ ರಂಗಕ್ಕೆ ಬನ್ನಿ”, ಭಾರತ ಸ್ವತಂತ್ರವಾದ ಬೆಳಗ್ಗೆ ರಚಿಸಿದ ‘ನಿದ್ದೆ ತಿಳಿದೆಚ್ಚರು’ ಮುಂತಾದವು ದೇಶಪ್ರೇಮವನ್ನು ಸ್ಪುರಿಸಿ, ನಮ್ಮನ್ನು ಜಾಗ್ರತಗೊಳಿಸುವ, ಮನತಟ್ಟುವ ಹಾಡುಗಳು.
ಪತಿ ತಾತಾಚಾರ್ಯರು ನಡೆಸುತ್ತಿದ್ದ ‘ವಿಶ್ವ ಕರ್ನಾಟಕ ಪತ್ರಿಕೆ’ಗೆ ರಾಜಮ್ಮ ನೀಡಿದ ಸಹಕಾರ ಸಾಮಾನ್ಯವಾದುದಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ತಪ್ಪುಗಳನ್ನು ತಿದ್ದಿ, ಸಂಪಾದಕರ ಗಮನಕ್ಕೆ ತರುತ್ತಿದ್ದರು. ಪತ್ರಿಕೆಗೆ ಬೇಕಾದ ಕಾಗದ ಕೊಡುವಲ್ಲಿ ಸರಕಾರ ವಿಫಲವಾದಾಗ ಕಾಳಸಂತೆಯಲ್ಲಿ ಕೊಳ್ಳಬೇಕಾಗುತ್ತಿತ್ತು. ಒಂದು ಸಲ ವಿಪರೀತ ಹಣದ ತೊಂದರೆಯಾದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ನೀಡಿ ಪತ್ರಿಕೆ ಹೊರಡಿಸಲು ಸಹಕರಿಸಿದರು.”ತನ್ನ ವೈಯಕ್ತಿಕ ಜೀವನದಲ್ಲಿ ಮತ್ತು ವೃತ್ತಿ ಜೀವನದಲ್ಲಿ ತುಂಬು ಸಹಕಾರ ನೀಡಿ ಪ್ರಭಾವ ಬೀರಿದವರು ತನ್ನ ಪತ್ನಿಯೇ” ಎಂದು ಪತಿ ಶರ್ಮರೇ ಹೇಳಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ರಾಜಮ್ಮನವರ ಸಾಹಿತ್ಯಿಕ ಕೆಲಸಗಳಿಗೆ ಪತಿಯ ಸಂಪೂರ್ಣ ಸಹಕಾರ ಇತ್ತು. ಹೆಚ್ಚು ವಿದ್ಯಾಭ್ಯಾಸ ಇಲ್ಲದ ರಾಜಮ್ಮನವರು ನಾಟಕ, ಗೀತೆ, ಪ್ರಬಂಧ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮರ್ಥ ಬರಹಗಾರ್ತಿಯಾಗಿ ಭದ್ರ ಸ್ಥಾನದಲ್ಲಿರುವುದು ಅವರ ಹೆಗ್ಗಳಿಕೆ. ಇವರ ‘ಜೈ ಭಾರತ ಭೂಮಿಗೆ ಮಾತೆಗೆ’ ಎಂಬ ಹಾಡು ಆ ದಿನಗಳಲ್ಲಿ ಪ್ರಾರ್ಥನಾ ಗೀತೆಯಾಗಿ, ಎಲ್ಲಾ ವಿದ್ಯಾರ್ಥಿಗಳ ಬಾಯಲ್ಲೂ ನಲಿದಾಡುತ್ತಿತ್ತು.
ಮಾತೃಭಾಷೆಯಾದ ತೆಲುಗಿನಲ್ಲಿ ಸಾಹಿತ್ಯ ಅಧ್ಯಯನ ಮಾಡಿದ ರಾಜಮ್ಮನವರು ಕನ್ನಡ ಭಾಷೆಯಲ್ಲಿಯೂ ಆಸಕ್ತಿ ತಾಳಿ ಕಾದಂಬರಿಕಾರರಾದ ಗಳಗನಾಥ ಮತ್ತು ವೆಂಕಟಚಾರ್ಯ ಮೊದಲಾದವರ ಕಾದಂಬರಿಗಳನ್ನು ಓದಿ ಕನ್ನಡ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದರು. ಗಾಂಧೀಜಿಯವರ ‘ವೈಷ್ಣವ ಜನತೋ’ ಹಾಡನ್ನು ‘ವೈಷ್ಣವನಿವನೇ ನಿಜವೀ ಜಗದಿ” ಎಂದು ಕನ್ನಡಕ್ಕೆ ಭಾಷಾಂತರ ಮಾಡಿ ಗಾಂಧೀಜಿಯವರ ಸಮ್ಮುಖದಲ್ಲಿ ಹಾಡಿ ಮೆಚ್ಚುಗೆ ಪಡೆದಿದ್ದರು. “ರಾಷ್ಟ್ರಭಕ್ತಿ” ಮತ್ತು “ರಾಷ್ಟ್ರಶಕ್ತಿ” ನೂರು ಹಾಡುಗಳ ಸಂಗ್ರಹವಾದ ಎರಡು ಕವನ ಸಂಕಲನಗಳು ಮತ್ತು ‘ಜ್ವಾಲಾಮುಖಿ’ ಹಾಗೂ ‘ವೇದನ ನಿವೇದನ’ ಇವೆರಡು ಇವರ ನೀಳ್ಗವಿತೆಗಳು.
‘ಆರ್ಯ ಕೈಲಾಸಂ’ ಮತ್ತು ‘ವೀಣೆ ಶೇಷಣ್ಣ’ ರಾಜಮ್ಮನವರು ರಚಿಸಿದ ಎರಡು ಜೀವನ ಚರಿತ್ರೆಗಳು. ಗುರುಗಳಾದ ವೀಣೆ ಶೇಷಣ್ಣನವರ ಬಗ್ಗೆ ಮತ್ತು ಅವರು ವೀಣೆ ಪಾಠವನ್ನು ಕಲಿಸುತ್ತಿದ್ದ ರೀತಿಯನ್ನು ‘ವೀಣೆ ಶೇಷಣ್ಣ’ ಕೃತಿಯಲ್ಲಿ ವರ್ಣಿಸಿದ್ದಾರೆ. ರಾಜಮ್ಮನವರ ಕುಟುಂಬಕ್ಕೆ ಆತ್ಮೀಯರಾದ ಕೈಲಾಸಂ ಬಗ್ಗೆ ರಾಜಮ್ಮನವರಿಗೆ ಅಪಾರ ಅಭಿಮಾನವಿತ್ತು. ಅವರನ್ನು ತನ್ನ ಅಣ್ಣನ ಸ್ಥಾನದಲ್ಲಿರಿಸಿದ್ದರು. ‘ತಪಸ್ವಿನಿ’, ‘ಮಹಾಸತಿ’ ಮತ್ತು ‘ವಾತ್ಸಲ್ಯ ತರಂಗ ಲೀಲಾ’ ಈ ಮೂರು ನಾಟಕಗಳು ‘ಭಾರತಿ ರೂಪಕತ್ರಯ’ ಎನಿಸಿಕೊಂಡಿದ್ದು, ರಾಜಮ್ಮನವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟಿವೆ. ಸೀತಾ ರಾಮ ಲಕ್ಷ್ಮಣರು ವನವಾಸಕ್ಕೆ ಹೋದಾಗ ಅಯೋಧ್ಯೆಯಲ್ಲಿ ಉಳಿದಿದ್ದ ಊರ್ಮಿಳೆ ಪತಿಯ ನಿರೀಕ್ಷೆಯಲ್ಲಿ ತಪಸ್ವಿನಿಯಾಗಿ ಕಾಲ ಕಳೆದ ಸಂದರ್ಭವನ್ನು ವಸ್ತುವನ್ನಾಗಿಸಿಕೊಂಡ ನಾಟಕ ‘ತಪಸ್ವಿನಿ’. ಇದು 1931ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು ಮತ್ತು ಈ ನಾಟಕಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಬಹುಮಾನವೂ ದೊರೆಯಿತು.
ಪತಿ ಶರ್ಮರೊಡನೆ ಇತಿಹಾಸ ಪುರಾಣ ಪ್ರಸಿದ್ಧವಾದ ಊರುಗಳನ್ನು ನೋಡುವ ಮತ್ತು ಅಲ್ಲಿಯ ಸ್ಥಳ ಮಹಿಮೆಯನ್ನು ತಿಳಿಸುವ ಶಾಸನಗಳನ್ನು ವೀಕ್ಷಿಸುವ ಅವಕಾಶ ಪಡೆದ ರಾಜಮ್ಮನವರಿಗೆ ‘ಮಹಾಸತಿ’ ನಾಟಕ ಬರೆಯಲು ಪ್ರೇರೇಪಣೆ ದೊರೆಯಿತು. ನವಿಲ ನಾಡಿನ ಒಡೆಯ ಏಚನ ಹೆಂಡತಿ ದೇಕಬ್ಬೆ. ರಾಜಾಜ್ಞೆಯನ್ನು ಮೀರಿ ಮಲ್ಲ ಯುದ್ಧದಲ್ಲಿ ತನ್ನ ದಾಯಾದಿಯಾದ ಎರೆಯಂಗನನ್ನು ಏಚ ಕೊಂದಾಗ, ರಾಜನು ಮರಣದಂಡನೆ ವಿಧಿಸುತ್ತಾನೆ. ಏಚನ ದೇಹವನ್ನು ಜೊತೆಗೆ ಇಟ್ಟುಕೊಂಡು ದೇಕಬ್ಬೆ ಮಹಾ ವೈಭವದಿಂದ ಸಹಗಮನ ಮಾಡಿದ್ದೇ ‘ಮಹಾಸತಿ’ ನಾಟಕದ ಕಥಾವಸ್ತು. 1956ರಲ್ಲಿ ಪ್ರಕಟವಾದ ಈ ನಾಟಕ ವಿದ್ವಾಂಸರ ಪ್ರಶಂಸೆಗೆ ಪಾತ್ರವಾಯಿತು.
ವಿಶ್ವಾಮಿತ್ರರಿಂದ ಮೇನಕೆಗೆ ಹುಟ್ಟಿದ ಹೆಣ್ಣು ಮಗುವನ್ನು ಬಿಟ್ಟು, ದೇವೇಂದ್ರನ ಅಪ್ಪಣೆಗೆ ತಲೆಬಾಗಿ, ಮೇನಕೆ ದೇವಲೋಕಕ್ಕೆ ಹೋಗುವ ಸಂದರ್ಭದಲ್ಲಿ ಆಕೆಯ ತೊಳಲಾಟವನ್ನು ರಾಜಮ್ಮ ಹೃದಯಂಗಮವಾಗಿ ಚಿತ್ರಿಸಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿ ರಚಿಸಿದ ಈ ಕೃತಿ ‘ವಾತ್ಸಲ್ಯ ತರಂಗ ಲೀಲಾ’ ನಾಟಕದ ವಸ್ತು. ಇವರ ‘ಸಂಗೀತ ಸ್ವರೂಪ’ ಲೇಖನದಲ್ಲಿ ಸಂಗೀತದ ಬಗ್ಗೆ ಇವರಿಗೆ ಇರುವ ಪಾಂಡಿತ್ಯ ಪ್ರಕಟಗೊಂಡಿದೆ. ‘ಭಾರತಿ’ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಿದ್ದ ರಾಜಮ್ಮ ಅವರ ಸಮಕಾಲೀನ ಸಂಗೀತಗಾರರು ಮತ್ತು ಸಾಹಿತಿಗಳಿಂದ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.
ರಾಜಮ್ಮನವರು 1943ರಲ್ಲಿ ಶಿವಮೊಗ್ಗದ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ನೀಡಿದ ಭಾಷಣ ವಿದ್ವತ್ಪೂರ್ಣವಾಗಿದ್ದು ಎಲ್ಲರ ಮೆಚ್ಚುಗೆ ಪಡೆಯಿತು. 1972 ನವೆಂಬರ್ 19ರಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ ಕನ್ನಡ ನಾಡು ರಾಜಮ್ಮನವರನ್ನು ಸಂಭ್ರಮದಿಂದ ಸನ್ಮಾನಿಸಿ ‘ಭಾರತಿ’ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಸಮರ್ಪಿಸಿತು. ಇವರ ಲೇಖನಿಯಿಂದ ಹೊರಬಂದ ಇತರ ಕೃತಿಗಳು ‘ದೃಢ ಪ್ರತಿಜ್ಞೆ’, ‘ಸ್ವರ್ಗ ನಿರಸನ’, ‘ಉನ್ಮತ್ತ ಬಾಮಿನಿ’, ‘ಅಂತರ್ಜ್ಯೋತಿ’.
ತಮ್ಮ ಬರಹಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿ ತುಂಬಿ, ಸಮಾಜದಲ್ಲಿದ್ದ ಕೆಟ್ಟ ಪದ್ಧತಿ ದೂರ ಮಾಡಲು ನಾಟಕಗಳನ್ನು ರಚಿಸಿ, ಸಮಾಜ ಸುಧಾರಣೆಯಲ್ಲಿ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ತಿರುಮಲೆ ರಾಜಮ್ಮನವರು 24 ಸೆಪ್ಟೆಂಬರ್ 1984ರಲ್ಲಿ ಶಾಶ್ವತವಾಗಿ ಸಾಹಿತ್ಯ ಲೋಕದಿಂದ ಮಾತ್ರವಲ್ಲ ಇಹದಿಂದಲೇ ದೂರ ಸರಿದರು. ಅಗಲಿದ ಆತ್ಮಕ್ಕೆ ಅನಂತ ನಮನಗಳನ್ನು ಸಲ್ಲಿಸುತ್ತಾ ಅವರ ಜನ್ಮದಿನವಾದ ಇಂದು ಅವರ ಸಾಹಿತ್ಯದ ಮೂಲಕ ಅವರನ್ನು ಕಾಣೋಣ.
– ಅಕ್ಷರೀ
