ಪ್ರಸಿದ್ಧರಾದ ಭಾರತೀಯ ವೀಣಾ ವಾದಕರಾದ ಕರ್ನಾಟಕ ಸಂಗೀತ ಪರಂಪರೆಯಲ್ಲಿ ಪ್ರಾತಃಸ್ಮರಣೀಯ ಮಹತ್ವಪೂರ್ಣ ಹೆಸರು ವೀಣಾ ವೆಂಕಟಗಿರಿಯಪ್ಪನವರದು. 26 ಏಪ್ರಿಲ್ 1887ರಲ್ಲಿ ಹೆಗ್ಗಡದೇವನ ಕೋಟೆ ಎಂಬಲ್ಲಿ ವೈದಿಕ ಮನೆತನದಲ್ಲಿ ಇವರ ಜನನವಾಯಿತು. ವೆಂಕಟರಾಮಯ್ಯ ಮತ್ತು ನರಸಮ್ಮ ದಂಪತಿಯ ಸುಪುತ್ರ. ಮಗುವಿಗೆ 11 ತಿಂಗಳಾಗುತ್ತಲೇ ಪತಿಯನ್ನು ಕಳೆದುಕೊಂಡ ನರಸಮ್ಮ ಮಗುವಿನೊಂದಿಗೆ ಮೈಸೂರಿಗೆ ಬಂದು ತಂದೆ ದೊಡ್ಡ ಸುಬ್ಬರಾಯರೊಂದಿಗೆ ಇರಲಾರಂಭಿಸಿದರು. ಹೀಗೆ ಮೈಸೂರಿಗೆ ಬಂದು ಆಶ್ರಯ ಪಡೆದಿದ್ದು ಒಂದು ರೀತಿಯಲ್ಲಿ ಗೆಲುವಿಗೆ ದಾರಿಯಾಯಿತು. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಪ್ರಸಿದ್ಧ ಸಂಗೀತ ಸಾಧಕರ ಮಾತ್ರವಲ್ಲದೆ ಅವರ ವೀಣಾ ವಾದನದ ವೈಖರಿಯನ್ನು ವೀಕ್ಷಿಸುವ ಅವಕಾಶ ಇವರಿಗೆ ದೊರೆಯಿತು. ಅಜ್ಜ ದೊಡ್ಡ ಸುಬ್ಬರಾಯರು ಪ್ರಸಿದ್ಧ ವೀಣಾವಾದಕರು. ವೀಣೆ ನುಡಿಸುವವರು ವೀಣೆಯನ್ನು ಅಡ್ಡಲಾಗಿ ಹಿಡಿದು ನುಡಿಸಿದರೆ, ದೊಡ್ಡ ಸುಬ್ಬರಾಯರು ಅದನ್ನು ಲಂಬವಾಗಿ ಹಿಡಿದು ನುಡಿಸುತ್ತಿದ್ದರು. ವೀಣಾ ವಾದನದಲ್ಲಿ ಅದ್ಭುತ ಸಾಧನೆ ಮಾಡಿದವರಿಗೆ ಮಾತ್ರ ಇದು ಸಾಧ್ಯವಾಗುವಂತದ್ದು. ತಾಯಿ ನರಸಮ್ಮನವರ ಏಕೈಕ ಸಹೋದರ ಚಿಕ್ಕ ಸುಬ್ಬರಾಯರಿಗೆ ಸಂತಾನವಿಲ್ಲದ ಕಾರಣ ವೆಂಕಟಗಿರಿಯಪ್ಪನನ್ನೇ ತನ್ನ ಮಗನಂತೆ ಪೋಷಿಸಿ ಶಿಕ್ಷಣ ನೀಡಿದರು. ವೆಂಕಟಗಿರಿಯಪ್ಪನವರ ಐದನೇ ವರ್ಷದಿಂದಲೇ ಸ್ವತಃ ದೊಡ್ಡ ಸುಬ್ಬರಾಯರೇ ವೀಣಾ ಪಾಠವನ್ನು ಆರಂಭಿಸಿದರು. ವಿಜಯದಶಮಿಯಂದು ವೀಣೆಗೂ ದೇವರಿಗೂ ಮೊಮ್ಮಗನಿಂದ ಪೂಜೆ ಮಾಡಿಸುವ ಮೂಲಕ ಸಂಗೀತ ದೀಕ್ಷೆಯನ್ನು ನೀಡಿ, ಮುಂದೆ ಆತನ ವಿದ್ಯಾಭ್ಯಾಸದ ಹಾಗೂ ಎಲ್ಲಾ ಹೊಣೆಗಾರಿಕೆಯನ್ನು ಪುತ್ರ ಚಿಕ್ಕ ಸುಬ್ಬರಾಯರಿಗೆ ಒಪ್ಪಿಸಿ, ದೇವರಿಗೆ ನಮಸ್ಕಾರ ಮಾಡಿದವರು ಮತ್ತೆ ಮೇಲೇಳಲಿಲ್ಲ. ಅಪಾರ ಪಾಂಡಿತ್ಯವನ್ನು ತೆರೆಮರೆಯಲ್ಲಿ ಇಟ್ಟುಕೊಂಡಿದ್ದ ಚಿಕ್ಕ ಸುಬ್ಬರಾಯರು ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ಸ್ವಂತ ಮಗನಂತೆ ಸಾಕಿದ ವೆಂಕಟಗಿರಿಯಪ್ಪನವರಿಗೆ ವೀಣಾ ವಾದನದ ಎಲ್ಲಾ ಸೂಕ್ಷ್ಮ ಕೌಶಲ್ಯಗಳನ್ನು ಶಿಸ್ತಿನಿಂದ ಮತ್ತು ಅತ್ಯಂತ ಶ್ರದ್ಧೆಯಿಂದ ಸಂಪ್ರದಾಯಕ್ಕೆ ಸರಿಯಾಗಿ ಧಾರೆ ಎರೆದರು. ಒಂದು ಸಾವಿರಕ್ಕಿಂತಲೂ ಹೆಚ್ಚು ಕೀರ್ತನೆಗಳನ್ನು ವೆಂಕಟಗಿರಿಯಪ್ಪನವರಿಗೆ ಕಲಿಸಿ, ವೀಣಾವಾದನದಲ್ಲಿ ಪಳಗಿಸಿ ಮೇರು ವಿದ್ವಾಂಸರನ್ನಾಗಿ ಮಾಡುವಲ್ಲಿ ಯಶಸ್ವಿಯಾದರು.
ಯಾರೇ ಒಬ್ಬ ಕಲಾವಿದ ಆಸ್ಥಾನ ವಿದ್ವಾಂಸರಾಗುವುದು ಸಾಮಾನ್ಯ ವಿಷಯವಲ್ಲ. ಅದು ಅಪ್ರತಿಮ ಪ್ರತಿಭೆ ಮತ್ತು ಪಾಂಡಿತ್ಯದಿಂದ ಮಾತ್ರ ಸಾಧ್ಯ. ಅಪಾರ ಪಾಂಡಿತ್ಯವುಳ್ಳ ವೆಂಕಟಗಿರಿಯಪ್ಪನವರು ಮಹಾರಾಜರ ಶಿಸ್ತಿನ ಪರೀಕ್ಷೆಯಲ್ಲಿ ಶ್ರದ್ಧೆಯಿಂದ ವೀಣೆಯನ್ನು ನುಡಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾದರು ಮತ್ತು ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು. ಮುಂದೆ ಅವರು ಮಹಾರಾಜ ಇವರು ಆಸ್ಥಾನ ವಿದ್ವಾಂಸ ಹೇಳುವಷ್ಟಕ್ಕೆ ಅವರ ಸಂಬಂಧ ಸೀಮಿತವಾಗಿರಲಿಲ್ಲ. ಪರಸ್ಪರ ಒಬ್ಬ ಗೆಳೆಯ, ಮಾರ್ಗದರ್ಶಕ, ತತ್ವಜ್ಞಾನಿ ಎಂಬ ರೀತಿಯಲ್ಲಿ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ವೀಣಾವಾದನದಲ್ಲಿ ವೆಂಕಟಗಿರಿಯಪ್ಪನವರು ಎಷ್ಟು ಪಾಂಡಿತ್ಯವನ್ನು ಪಡೆದಿದ್ದರೆಂದರೆ ವಿ. ಸೀತಾರಾಮಯ್ಯನವರು ಇವರ ವೀಣಾ ಗಾನವನ್ನು ಆಲಿಸಿ, “ವೀಣಾ ಗಾನ” ಎಂಬ ಒಂದು ಅನನ್ಯವಾದ ಕವನವನ್ನೇ ರಚಿಸಿದ್ದರು. ಶೇಷಣ್ಣನವರ ಸಾನಿಧ್ಯದಲ್ಲಿ ವೀಣಾ ವಾದನವನ್ನು ಆಲಿಸಿ, ಅವರ ಆತ್ಮೀಯ ಮತ್ತು ಪ್ರಾಮಾಣಿಕ ಶಿಷ್ಯರಾಗಿ, ಹೆಚ್ಚಿನ ಪಾಂಡಿತ್ಯವನ್ನು ಪಡೆದು, ಅವರ ಮೆಚ್ಚುಗೆಯನ್ನುಗಳಿಸಿ ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾದರು. ವೆಂಕಟಗಿರಿಯಪ್ಪನವರು ಕಚೇರಿ ನಡೆಸುತ್ತಿದ್ದರೆ ಪ್ರೇಕ್ಷಕರು ವೀಣೆ ಶೇಷಣ್ಣನವರ ಕಚೇರಿಯನ್ನು ಕೇಳಿದಷ್ಟೇ ಮುದಗೊಂಡು, ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು.
ಮಹಾರಾಜರಿಗೆ ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತ ಎರಡರಲ್ಲಿಯೂ ಅತೀವ ಅಭಿರುಚಿ ಇದ್ದ ಕಾರಣ ಪಾಶ್ಚಾತ್ಯ ಸಂಗೀತ ವಾದ್ಯಗಳನ್ನು ಕಲಿಯುವಂತೆ ವೆಂಕಟಗಿರಿಯಪ್ಪನವರನ್ನು ಪ್ರೋತ್ಸಾಹಿಸಿದರು. ಪಾಶ್ಚಿಮಾತ್ಯ ಸಂಗೀತವನ್ನು ಅಭ್ಯಾಸ ಮಾಡಿದ ನಂತರ ವೆಂಕಟಗಿರಿಯಪ್ಪನವರ ಜವಾಬ್ದಾರಿ ಹೆಚ್ಚಿತು. ವಾದ್ಯಗೋಷ್ಠಿ ಹಾಗೂ ಅರಮನೆಯ ಕರ್ನಾಟಕ ಬ್ಯಾಂಡಿನ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಮಹಾರಾಜರಿಗೆ ಪ್ರಿಯವಾದ ಕೃತಿಗಳನ್ನೆಲ್ಲ ಶ್ರದ್ಧೆಯಿಂದ ಬರೆದಿಡುತ್ತಿದ್ದರು. ಇವರ ಕಾರ್ಯ ವೈಖರಿಯನ್ನು ನೋಡಿ ಹರ್ಷಗೊಂಡ ಮಹಾರಾಜರು ಆಸ್ಥಾನದಲ್ಲಿ ಇಂತಹ ವಿದ್ವಾಂಸರಿರುವುದರ ಬಗ್ಗೆ ಹೆಮ್ಮೆಪಟ್ಟು ವೆಂಕಟ ಗಿರಿಯಪ್ಪನವರನ್ನು ಕರ್ನಾಟಕ ಬ್ಯಾಂಕ್ ನಿರ್ದೇಶಕರಾಗಿ ನೇಮಿಸಿ, ಇದಕ್ಕಾಗಿ ಹೆಚ್ಚುವರಿ ಭತ್ಯ ನೀಡುವ ವ್ಯವಸ್ಥೆಯನ್ನು ಮಾಡಿದರು. ಅವಕಾಶ ವಂಚಿತ ಆಸಕ್ತ ಮಕ್ಕಳಿಗೆ ಉಚಿತವಾಗಿ ಕಲಾಭ್ಯಾಸ ಮಾಡಲು ಅವಕಾಶ ಒದಗಿಸಿ ಕೊಟ್ಟ ಮಹಾರಾಜರು ಅದರ ಮೇಲ್ವಿಚಾರಣೆಯನ್ನು ವೆಂಕಟಗಿರಿಯಪ್ಪನವರಿಗೆ ವಹಿಸಿದರು. ಇವರು ಆ ಕಾಲದಲ್ಲಿ ಸರಕಾರದ ಟ್ರೈನಿಂಗ್ ಕಾಲೇಜಿನಲ್ಲೂ, ಮಹಾರಾಣಿ ಹೈಸ್ಕೂಲಿನಲ್ಲಿಯೂ ಅಧ್ಯಾಪಕರಾಗಿ ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ.
ವೀಣಾ ವೆಂಕಟಗಿರಿಯಪ್ಪನವರು ತಮ್ಮ ವೀಣಾ ಸಂಗೀತ ಜೀವನ ಯಾನದಲ್ಲಿ ಮನಸ್ಸಿಗೆ ಮುದ ನೀಡುವ ಹಲವಾರು ಅವಿಸ್ಮರಣೀಯ ರಸ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ತಿರುವಾಂಕೂರಿನ ದಿವಾನ್ ಸರ್ ಸಿ.ಪಿ. ರಾಮಸ್ವಾಮಯ್ಯರ್ ಇವರ ಮನೆಯಲ್ಲಿ ಸಂಗೀತ ಕಚೇರಿ ನಡೆದಾಗ, ಅಲ್ಲಿ ಬಂದ ಕಲಾರಸಿಕರೂ, ಶ್ರೇಷ್ಠ ವಿದ್ವಾಂಸರೂ ಆದ ವಿದುಷಿ ಮಹಾರಾಣಿ ಸೇತು ಪಾರ್ವತಿ ಬಾಯಿಯವರು ವೆಂಕಟ ಗಿರಿಯಪ್ಪನವರ ವೀಣಾ ವಾದನದ ನಾದ ಮಾಧುರ್ಯ, ಅಪೂರ್ವ ಶೈಲಿಯಿಂದ ಪ್ರಭಾವಿತರಾಗಿ, ನಡೆಯುತ್ತಿದ್ದ ಕಚೇರಿಯ ಮಧ್ಯದಲ್ಲಿಯೇ ಅರಮನೆಯಿಂದ ತರಿಸಿದ್ದ ಬೆಳ್ಳಿ ತಟ್ಟೆಗಳ ತುಂಬಾ ಬಗೆ ಬಗೆಯ ಹೂಗಳನ್ನು ಇಟ್ಟು, ಇವರನ್ನೂ ವೀಣೆಯನ್ನೂ ಪೂಜಿಸಿ, ಕಚೇರಿಯ ಅಂತ್ಯದಲ್ಲಿ ರತ್ನಖಚಿತವಾದ ತೋಡಾ, ಖಿಲ್ಲತ್ತು ಮತ್ತು ಸಾವಿರಾರು ರೂಪಾಯಿಗಳನ್ನು ನೀಡಿ ಗೌರವಿಸಿದರು. ಇದೇ ರೀತಿ ಜೋಧ್ ಪುರದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ವೆಂಕಟಗಿರಿಯಪ್ಪನವರು ರಾತ್ರಿ 12:30ರಿಂದ ಬೆಳಗಿನ ನಾಲ್ಕು ಗಂಟೆವರೆಗೂ ಅಮೋಘವಾಗಿ ವೀಣೆ ನುಡಿಸಿ ಇತರ ಮೇರು ವಿದ್ವಾಂಸರನ್ನೂ ಬೆರಗುಗೊಳಿಸಿದರು. ಆ ದಿನ ಅವರಿಗೆ ವಜ್ರದ ಉಂಗುರ ಹಾಗೂ ಸಹಸ್ರಾರು ರೂಪಾಯಿಗಳನ್ನು ನೀಡಿ ಗೌರವಿಸಿದರು. ಇಷ್ಟೇ ಅಲ್ಲದೆ ಉತ್ತರ ಭಾರತ ಪ್ರವಾಸ ಮಾಡುವಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ತೋಳು ಊದಿಕೊಂಡು, ಕೈ ಬೆರಳುಗಳು ಸಹಕರಿಸದೆ, ಕಾರ್ಯಕ್ರಮ ನೀಡುವ ಬಗ್ಗೆ ಮಾತಿನಲ್ಲಿ ಅಪಧೈರ್ಯ ಕಂಡು ಬರುತ್ತಿತ್ತಾದರೂ, ಸಂಜೆ ರಾಜರ ಸಮ್ಮುಖದಲ್ಲಿ ಕಲಾಸರಸ್ವತಿಯೇ ಹರಸಿದಂತೆ ಅಮೋಘವಾಗಿ ಕಾರ್ಯಕ್ರಮ ನೀಡಿದರು. ಮಹಾರಾಜರೂ ಮತ್ತು ಸಭಿಕರೂ ಮಂತ್ರಮುಗ್ಧರಾಗಿ ಆನಂದಭಾಷ್ಪ ಸುರಿಸಿರುವುದು ಹಾಗೂ ಮಹಾರಾಜರು ಸಾವಿರಾರು ರೂಪಾಯಿಗಳ ಸಂಭಾವನೆಯೊಂದಿಗೆ ಖಿಲ್ಲತ್ತು ನೀಡಿ ಗೌರವಿಸಿರುವುದು ಇವರ ಕಲಾ ಪ್ರೌಢಿಮೆಗೆ ಸಂದ ಗೌರವ.
ವೆಂಕಟಗಿರಿಯಪ್ಪನವರು ವಾಗ್ಗೇಯಕಾರರಾಗಿಯೂ ಹೆಸರು ಮಾಡಿದ್ದಾರೆ. ರಾಜರಿಗೆ ಶುಭ ಹಾರೈಸಿ ಪ್ರತಿ ವರ್ಷ ವರ್ಧಂತಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಕೃತಿ ರಚನೆ ಮಾಡಿ, ಅಪರೂಪದ ರಾಗಗಳನ್ನು ಸಂಯೋಜಿಸಿ, ಅದನ್ನು ಅರಮನೆಯ ಬ್ಯಾಂಡ್ ನಲ್ಲಿ ಪ್ರಸ್ತುತಪಡಿಸಿ ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಹಾಗೂ ಮೇರು ಪಾಂಡಿತ್ಯದ ಪ್ರತಿಭಾವಂತ ಶಿಷ್ಯ ವರ್ಗವನ್ನು ಸಂಗೀತ ಲೋಕಕ್ಕೆ ನೀಡಿದ ಖ್ಯಾತಿಯ ವೆಂಕಟಗಿರಿಯಪ್ಪನವರು ಪಡೆದ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. 1936ರ ದಸರಾ ಮಹೋತ್ಸವದ ಸಮಯದಲ್ಲಿ ‘ವೈಣಿಕ ಪ್ರವೀಣ’ ಬಿರುದು ಮತ್ತು 1946ರಲ್ಲಿ ‘ಸಂಗೀತ ವಿಶಾರದ’ ಪ್ರಶಸ್ತಿ ನೀಡಿ ಗೌರವಿಸಿದ್ದು ಮಾತ್ರವಲ್ಲದೆ ಕುಂಭಕೋಣದ ಶ್ರೀಗಳವರಿಂದ ‘ವೈಣಿಕ ಶಿಖಾಮಣಿ’ ಬಿರುದು ಪಡೆದಿರುವರು. ಇವರು ಯಾವ ಸಂಸ್ಥಾನಕ್ಕೆ ಹೋದರೂ ಇವರ ವಿದ್ವತ್ತಿಗೆ ಆಕರ್ಷಿತರಾಗಿ, ವೀಣಾ ಗಾನಕ್ಕೆ ಮುದಗೊಂಡು ರಾಜ ಯೋಗ್ಯವಾದ ರೀತಿಯಲ್ಲಿ ಸನ್ಮಾನಿಸಲ್ಪಡುತ್ತಿದ್ದರು. ತಿರುವಾಂಕೂರು, ಬರೋಡಾ, ಜಯಪುರ ಇತ್ಯಾದಿ ಸಂಸ್ಥಾನಗಳ ರಾಜರುಗಳೂ ಚಿನ್ನದ ಪದಕ, ರತ್ನ ಖಚಿತ ತೋಡಾ, ಖಿಲ್ಲತ್ತುಗಳನ್ನು ನೀಡಿ ವಿಶೇಷ ರೀತಿಯಲ್ಲಿ ತಮ್ಮ ಗೌರವವನ್ನು ಸೂಚಿಸುತ್ತಿದ್ದರು. ವೀಣಾ ಗಾನದ ಧ್ರುವತಾರೆಯಾಗಿ ತಮ್ಮ ವೀಣಾ ಗಾನದ ಅನನ್ಯ ಪಾಂಡಿತ್ಯದಿಂದ ಎಲ್ಲರನ್ನೂ ಅಪೂರ್ವ ಲೋಕಕ್ಕೆ ಒಯ್ದು ರಸಕ್ಷಣಗಳನ್ನು ಅನುಭವಿಸುವ ಭಾಗ್ಯವನ್ನು ನೀಡಿದ ವೆಂಕಟಗಿರಿಯಪ್ಪನವರು 1952 ಜನವರಿ 30ರಂದು ಗಾನ ಸರಸ್ವತಿಯ ನಾದದಲ್ಲಿ ಲೀನವಾಗಿ ಹೋದರು.
ದಿವ್ಯ ಚೇತನಕ್ಕೆ ಅನಂತ ನಮನಗಳು.
– ಅಕ್ಷರೀ