ಸಾಹಿತಿಯಾಗಿ, ಉತ್ತಮ ವಾಗ್ಮಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಹೀಗೆ ಸಮಾಜದ ವಿವಿಧ ಮುಖಗಳಲ್ಲಿ ಸೇವೆ ಸಲ್ಲಿಸಿದವರು ಮುದವೀಡು ಕೃಷ್ಣರಾಯರು.
1874 ಜುಲೈ 24ರಂದು ಹನುಮಂತ ರಾವ್ ಮತ್ತು ಗಂಗಾಬಾಯಿ ಅವರ ಪುತ್ರನಾಗಿ ಬಾಗಲಕೋಟೆಯಲ್ಲಿ ಕೃಷ್ಣರಾಯರು ಜನಿಸಿದರು. ಇವರ ಹಿರಿಯರು ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ಸೇರಿದ ಮುದವೀಡು ಎಂಬ ಗ್ರಾಮದಿಂದ ಬಂದವರು. ಆದಕಾರಣ ಇವರ ಹೆಸರಿನೊಂದಿಗೆ ಮುದವೀಡು ಹಾಸುಹೊಕ್ಕಾಗಿದೆ. ಬಾಲ್ಯದಲ್ಲಿ ತಂದೆ ತಾಯಿಯರ ಪ್ರೀತಿಯಿಂದ ವಂಚಿತರಾದ ಮುದವೀಡು ಕೃಷ್ಣರಾಯರು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಇವರ ಆರಂಭದ ವಿದ್ಯಾಭ್ಯಾಸ ಕಾರವಾರದಲ್ಲಿ ಮತ್ತು ಮೆಟ್ರಿಕ್ ವಿದ್ಯಾಭ್ಯಾಸ ಧಾರವಾಡದಲ್ಲಿ ನಡೆಯಿತು.
ಭಾರತದ ಸ್ವಾತಂತ್ರ್ಯಕ್ಕಾಗಿ ಆಂದೋಲನ ನಡೆಯುತ್ತಿದ್ದ ಸಮಯವದು. ಇದರಿಂದ ಪ್ರಭಾವಿತರಾದ ಕೃಷ್ಣರಾಯರು ವಿದ್ಯಾಭ್ಯಾಸವನ್ನು ಬದಿಗಿಟ್ಟು ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲೋಕಮಾನ್ಯ ತಿಲಕರಿಂದ ಪ್ರೇರಣೆಗೊಂಡು ಅವರ ಅನುಯಾಯಿಯಾಗಿ ಗಣೇಶೋತ್ಸವದಲ್ಲಿ ಮತ್ತು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೂ ಸಕ್ರಿಯ ಕಾರ್ಯಕರ್ತರಾಗಿ ದುಡಿದರು. ಪಾನನವಿರೋಧ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು ಭಾಷಣ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ವರ್ಷ ಸ್ಥಾನ ಬದ್ಧತೆಯ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿತು. ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಭಾಷೆಗಳಲ್ಲಿ ಪಾಂಡಿತ್ಯವಿರುವ ವಾಗ್ಮಿಯಾದ ಕೃಷ್ಣರಾಯರು ಇತರರ ಭಾಷಣಗಳನ್ನು ನಿರರ್ಗಳವಾಗಿ ಅನುವಾದ ಮಾಡುವುದಕ್ಕೆ ಪ್ರಸಿದ್ಧರಾಗಿದ್ದರು. ನೆಹರು, ಪಟ್ಟಾಭಿ, ಸೀತಾರಾಮಯ್ಯ, ರಾಜಾಜಿ ಮೊದಲಾದ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಬಂದಾಗ ಅವರ ಭಾಷಣಗಳ ಅನುವಾದಕ್ಕೆ ಇವರೇ ಸರಿ. ಇವರು ತಾವೇ ಸ್ವತಃ ಏರು ಸ್ವರದ ವಾಗ್ಮಿಯಾಗಿದ್ದರು. ಕನ್ನಡದ ಆಂದೋಲನವನ್ನು ಎಳೆಯ ಪ್ರಾಯದಲ್ಲಿಯೇ ಆರಂಭಿಸಿದವರು ಮುದವೀಡು ಕೃಷ್ಣರಾಯರು. ಕರ್ನಾಟಕದಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದ್ದ ಪ್ರದೇಶಗಳಲ್ಲಿ ತಮ್ಮ ಪ್ರಭಾವಶಾಲಿ ಭಾಷಣ ಮತ್ತು ಬರಹಗಳ ಮೂಲಕ ತರುಣರಲ್ಲಿ ಜಾಗೃತಿ ಮೂಡಿಸಿದ ಭಾಷಾ ಪ್ರೇಮಿ ಇವರು.
ತಮ್ಮ ಆಸಕ್ತಿಯ ಕ್ಷೇತ್ರವಾದ ಪತ್ರಿಕೋದ್ಯಮದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರು ಕರ್ನಾಟಕ ಏಕೀಕರಣದ ಸಮಯದಲ್ಲಿ ಗದ್ಯ ಶೈಲಿಯಲ್ಲಿ ಮನಮುಟ್ಟುವಂತಹ ಲೇಖನಗಳನ್ನು ಬರೆದಿದ್ದಾರೆ. ‘ಧನಂಜಯ ಪತ್ರಿಕೆ’ ಮತ್ತು ‘ಕರ್ನಾಟಕ ವೃತ್ತ ಪತ್ರಿಕೆ’ಗಳನ್ನು 25 ವರ್ಷಗಳ ಕಾಲ ನಿರಂತರ ನಡೆಸಿಕೊಂಡು ಬಂದ ಖ್ಯಾತಿ ಇವರದು. ಇದಕ್ಕಾಗಿ ಅವರಿಗೆ “ಕರ್ನಾಟಕದ ಗಂಡುಗಲಿ” ಎಂಬ ಬಿರುದು ಸಂದಿತ್ತು. 1907ರಲ್ಲಿ ‘ಭಾರತ ಕಲೋತ್ತೇಜಕ ನಾಟಕ ಮಂಡಳಿ’ಯನ್ನು ಸ್ಥಾಪಿಸಿ ರಂಗಭೂಮಿಯಲ್ಲಿ ತಮಗಿರುವ ಆಸಕ್ತಿಯನ್ನು ಮೆರೆದರು. ಇವರು ಬರೆದ ‘ಪ್ರೇಮಭಂಗ’ ಎಂಬ ನಾಟಕ ಹಲವಾರು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ಕಂಡಿದೆ. ಇವರು ಪಾತ್ರಧಾರಿಯಾಗಿ ಅಭಿನಯಿಸಿದ ಅನೇಕ ನಾಟಕಗಳು ಮತ್ತು ‘ಚಿರಂಜೀವಿ’ ಎಂಬ ವಾಕ್ಚಿತ್ರ ಇವರ ಅಭಿನಯ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ‘ಚಿತ್ತೂರು ಮುತ್ತಿಗೆ’ ಇವರ ಪ್ರಸಿದ್ಧ ಕಾದಂಬರಿ. ಶ್ರೇಷ್ಠ ಅನುವಾದಕರಾದ ಇವರು ‘ವಿಕ್ರಮ’, ‘ಶಶಿಕಲಾ’, ‘ಸುಭದ್ರಾ’, ‘ರಾಮರಾಜವಿಯೋಗ’ ಮುಂತಾದ ನಾಟಕಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಮುದ್ದು ಮೋಹನ’ ಎಂಬ ಅಂಕಿತನಾಮದಿಂದ ಬರೆದ ಹಲವಾರು ಕವನಗಳು ಇವರು ಒಬ್ಬ ಶ್ರೇಷ್ಟ ಕವಿ ಎಂಬುದನ್ನು ಪ್ರಚುರಪಡಿಸುತ್ತದೆ. ಅನನ್ಯ ಪಾಂಡಿತ್ಯವಿರುವ ಇವರನ್ನು 1939ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇವರ ಪಾಂಡಿತ್ಯಕ್ಕೆ ನೀಡಿದ ಗೌರವ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮುದವೀಡು ಕೃಷ್ಣರಾಯರು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂತೋಷದೊಂದಿಗೆ 1947 ಸೆಪ್ಟೆಂಬರ್ 7ರಂದು ಈ ಲೋಕದಿಂದ ದೂರವಾದರು.
ಭೌತಿಕವಾಗಿ ಈ ಲೋಕದಿಂದ ದೂರವಾದರೂ ದೇಶ, ನಾಡು-ನುಡಿಗಾಗಿ ಅವರು ಸಲ್ಲಿಸಿದ ಸೇವೆ ಶಾಶ್ವತವಾಗಿ ನಮ್ಮ ಮುಂದೆ ಇರುತ್ತದೆ. ಅವರ ಜನ್ಮದಿನವಾದ ಇಂದು ದಿವ್ಯ ಚೇತನಕ್ಕೆ ಗೌರವದ ನಮನಗಳು.
-ಅಕ್ಷರೀ