ಹೆಸರಾಂತ ಹಿರಿಯ ಸಂಶೋಧಕಿ ಡಾ. ಜೋತ್ಸ್ನಾ ಕಾಮತ್ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ್ತಿ ಮತ್ತು ಒಬ್ಬ ದಿಟ್ಟ ನಿಲುವಿನ ದಕ್ಷ ಆಡಳಿತಗಾರ್ತಿ. 1937 ಜನವರಿ 24ರಂದು ಶ್ರೀ ಶಾರದಾ ಬಾಯಿ ಮತ್ತು ಗಣೇಶ ರಾವ್ ದಂಪತಿಗಳ ಪುತ್ರಿಯಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವೆಲ್ಲ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಯಲ್ಲಿ ನಡೆಯಿತು. ಕೊಂಕಣಿ, ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಬೆಂಗಾಳಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪರಿಣತರಾದ ಇವರು ಇತಿಹಾಸದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಬಿ.ಎ. ಪದವಿಯ ಬಳಿಕ ಒಂದು ವರ್ಷ ‘ಡಿಪ್ಲೋಮಾ ಇನ್ ಎಜುಕೇಶನ್’ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು.
ಡಾ. ಬಿ.ಎ. ಸಾಲೆತೊರೆ, ಡಾ. ಪಿ.ಬಿ. ದೇಸಾಯಿ ಮತ್ತು ಡಾ. ಜಿ.ಎಸ್. ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರಿಂದ ಪ್ರಭಾವಿತರಾಗಿ ಎರಡು ವರ್ಷಗಳ ಕಾಲ ಸಹಾಯಕ ಸಂಶೋಧಕಿಯಾಗಿ ಕಾರ್ಯ ನಿರ್ವಹಿಸಿ ಮುಂದೆ ಯು.ಪಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1964ರಲ್ಲಿ ಧಾರವಾಡದ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸಕ್ಕೆ ಸೇರಿಕೊಂಡು, ನಿರ್ದೇಶಕರ ಹುದ್ದೆಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದವರು ಡಾ. ಜೋತ್ಸ್ನಾ ಕಾಮತ್. ಕೊಲ್ಕತ್ತಾ, ಜೈಪುರ, ಮುಂಬೈ, ಮೈಸೂರು, ಬೆಂಗಳೂರು ಈ ಎಲ್ಲಾ ಕಡೆಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ 1994ರಲ್ಲಿ ನಿವೃತ್ತಿ ಹೊಂದಿದರು.
ಡಾ. ಜೋತ್ಸ್ನಾ ಕಾಮತ್ ಇವರು ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಸಾಹಿತ್ಯ ಕೃತಿಗಳನ್ನು ನೀಡಿದ ಅನನ್ಯ ಬರಹಗಾರ್ತಿ. ಇವರ ‘ಸಂಸಾರದಲ್ಲಿ ಸ್ವಾರಸ್ಯ’ ಎಂಬುದು ಪ್ರಬಂಧಗಳ ಸಂಕಲನ, ‘ಕರ್ನಾಟಕದ ಶಿಕ್ಷಣ ಪರಂಪರೆ’ ಎಂಬುದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಕೃತಿ. ‘ಹೇಗಿದ್ದೇವೆ ನಾವು’ ಇದೊಂದು ಹಾಸ್ಯ ಕೃತಿ. ‘ಮಹಿಳೆ ಒಂದು ಅಧ್ಯಯನ’, ‘ನೆನಪಿನಲ್ಲಿ ನಿಂತವರು’, ‘ನಗೆ ಕೇದಿಗೆ’, ‘ಪತ್ರ ಪರಾಚಿ’ ಇವು ಇತರ ಕೃತಿಗಳು. ‘ಹೀಗಿದ್ದರು ನಮ್ಮ ಕಂತಿ’ ಎಂಬುದು ಪತಿ ಕೃಷ್ಣಾನಂದ ಕಾಮತ್ ಅವರ ಕುರಿತ ಒಂದು ನೆನಪಿನ ಕೃತಿ. ‘ಸೋಶಿಯಲ್ ಲೈಫ್ ಇನ್ ಮಿಡಿವಲ್ ಕರ್ನಾಟಕ’, ‘ಎಜುಕೇಶನ್ ಇನ್ ಕರ್ನಾಟಕ ತ್ರೂ ದ ಏಜಸ್’ ಈ ಎಲ್ಲಾ ಕೃತಿಗಳನ್ನು ಹೊರತುಪಡಿಸಿ ಕೊಂಕಣಿ ಭಾಷೆಯಲ್ಲಿ ‘ಸುರಾಗ್ಯ ಸಾರ್’ ಎಂಬ ಕೃತಿಯನ್ನು ರಚಿಸಿದ್ದಾರೆ. ಇವೆಲ್ಲವೂ ಅವರ ಪ್ರಸಿದ್ಧ ಪ್ರಕಟಿತ ಕೃತಿಗಳಾಗಿವೆ. ಆಕಾಶವಾಣಿಯಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾಗ ಎರಡು ಕಾರ್ಯಕ್ರಮಗಳನ್ನು ಬಿತ್ತರಿಸಿದ್ದಾರೆ. ಅವುಗಳು ‘ಗಾಂಧಿ ಒಂದು ಪುನರ್ದರ್ಶನ’ ಮತ್ತು ‘ಹಿರಿಯರ ಯುಗಾದಿಮೇಳ’. ಮುಂದೆ ಇವುಗಳನ್ನು ಪುಸ್ತಕ ರೂಪದಲ್ಲಿಯೂ ಪ್ರಕಟಪಡಿಸಿದ್ದಾರೆ.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. 1991ರಲ್ಲಿ ಕರ್ನಾಟಕ ಸರ್ಕಾರವು ಜೋತ್ಸ್ನಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ‘ಕರ್ನಾಟಕ ಶಿಕ್ಷಣ ಪರಂಪರೆ’ ಕೃತಿಗೆ ಉತ್ತಮ ಸಂಶೋಧನಾ ಗ್ರಂಥ ಎಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ, ಕನ್ನಡ ಸಾಹಿತ್ಯ ಸಂಶೋಧನೆಗಾಗಿ ಅವರಿಗೆ ‘ಕಿಟ್ಟಲ್ ಪುರಸ್ಕಾರ’, ಕರ್ನಾಟಕ ಇತಿಹಾಸ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನ, ಉತ್ತರ ಅಮೇರಿಕದ ಕೊಂಕಣಿ ಕೂಟದ ಅಧ್ಯಕ್ಷತೆ ಮುಂತಾದ ಗೌರವಗಳನ್ನೂ ಇವರು ಪಡೆದಿದ್ದಾರೆ. ‘ಕೆ.ಎಲ್. ಕಾಮತ್ ಮೆಮೋರಿಯಲ್ ಟ್ರಸ್ಟ್’ ಇದರ ಅಧ್ಯಕ್ಷರಾಗಿ ಕೃಷ್ಣಾನಂದ ಕಾಮತರ ಕಾರ್ಯಗಳು ಮತ್ತು ಅವರ ಧ್ಯೇಯೋದ್ದೇಶಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಜೋತ್ಸ್ನಾ ಕಾಮತ್ ಅವರು ಭಾರತೀಯ ಪುರಾತತ್ವ ಸಮಾಜ, ಮಿತಿಕ್ ಸೊಸೈಟಿ, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನಗಳ ಕ್ರಿಯಾಶೀಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಮನಮುಟ್ಟುವ ಲೇಖನಗಳು ನಿರಂತರವಾಗಿ ‘Amma’s column’ ಎಂಬ ಬ್ಲಾಗಿನಲ್ಲಿ ಪ್ರಕಟಗೊಂಡಿವೆ. Kamath’s Potpurri (kamath.com) ಅಂತರ್ಜಾಲದಲ್ಲಿ ತಮ್ಮ ಕುಟುಂಬವು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಮಹಾ ಕೊಡುಗೆಯನ್ನು ಮೂಡಿಸುವ ಅತಿ ದೊಡ್ಡ ಕಾರ್ಯವನ್ನು ಮಾಡಿದ್ದಾರೆ. ಮಗನೊಂದಿಗೆ ನಡೆಸಿದ ಪತ್ರಗಳ ಸರಣಿಯಾಗಿ Remote Control – Letters to a Son ಎಂಬ ಕೃತಿಯ ಸಂಪಾದನೆಯನ್ನು ನಿರ್ವಹಿಸಿದ್ದಾರೆ.
ಹೆಸರಾಂತ ಸಂಶೋಧಕಿಯಾಗಿ ದಕ್ಷ ಆಡಳಿತಗಾರ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಬರಹಗಾರ್ತಿಯಾಗಿ ಸೇವೆ ಸಲ್ಲಿಸಿದ ಡಾಕ್ಟರ್ ಜೋತ್ಸ್ನಾ ಕಾಮತ್ ಇವರು ಸ್ವಲ್ಪ ಕಾಲ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ, 24 ಆಗಸ್ಟ್ 2022ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಇಹವನ್ನು ತ್ಯಜಿಸಿದರು.
ಅವರ ಜನ್ಮದಿನವಾದ ಇಂದು ಅಗಲಿದ ಆತ್ಮಕ್ಕೆ ಅನಂತ ನಮನಗಳೊಂದಿಗೆ –
• ಅಕ್ಷರೀ
