ಧಾರವಾಡ : ಅಭಿನಯ ಭಾರತಿ ಧಾರವಾಡ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಇವರ ಸ್ಮರಣಾರ್ಥ ‘ಜಿಬಿ-ಕೀರ್ತಿ ನೆನಪು’ ಎಂಬ ವಿಶೇಷ ದತ್ತಿ ಕಾರ್ಯಕ್ರಮವು ದಿನಾಂಕ 29 ಜುಲೈ 2024ರಂದು ಮನೋಹರ ಗ್ರಂಥ ಮಾಲಾದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಚಿಂತಕ ಶ್ರೀ ಹರ್ಷ ಡಂಬಳ ಇವರು ಮಾತನಾಡಿ “ಮನುಷ್ಯ ಮನುಷ್ಯರ ನಡುವಣ ಆತ್ಮೀಯ ಸಂಬಂಧದ ಮಧುರ ನೆನಪುಗಳು ಜೀವನದ ಅವಿಸ್ಮರಣೀಯ ಕ್ಷಣಗಳಾಗಿ ನಮಗೆ ಬಾಳ ಬುತ್ತಿ ನೀಡಬಲ್ಲವು. ಜಿ.ಬಿ. ಮತ್ತು ಕೀರ್ತಿಯವರ ದೇಹಗಳು ಬೇರೆ ಬೇರೆಯಾದರೂ ಜೀವನದ ದೃಷ್ಟಿಕೋನ ಒಂದೇ, ಯಾರನ್ನೂ ಸಣ್ಣವರಾಗಿ ನೋಡದೇ ತಮ್ಮ ಪ್ರೀತಿ ವಾತ್ಸಲ್ಯದ ಅಮೃತ ಸಿಂಚನ ನೀಡುತ್ತಿದ್ದರು” ಎಂದರು.
ಜಿ.ಬಿ. ಜೋಶಿಯವರ 120ನೇ ಹುಟ್ಟುಹಬ್ಬ ಹಾಗೂ ಕೀರ್ತಿನಾಥರ 21ನೆಯ ಪುಣ್ಯತಿಥಿ ಅಂಗವಾಗಿ ಅವರಿರುವರ ಅವಿನಾಭಾವ ಸಂಬಂಧದ ವಿವಿಧ ಮಗ್ಗಲುಗಳನ್ನು ಅವರನ್ನು ಹತ್ತಿರದಿಂದ ಬಲ್ಲ ಆತ್ಮೀಯರು ಹಂಚಿಕೊಂಡರು. ಶ್ರೀ ಕೃಷ್ಣ ಕಟ್ಟಿಯವರು ಕೀರ್ತಿಯವರ ಬಗ್ಗೆ ಡಾಕ್ಟರ್ ಚಂದ್ರಶೇಖರ್ ಕಂಬಾರ್ ಇವರು ಬರೆದ ಕವಿತೆಯೊಂದನ್ನು ಓದಿ ಅವರ ಶಿಷ್ಯ ವಾತ್ಸಲ್ಯವನ್ನು ನೆನಪಿಸಿಕೊಂಡರು. “ಜಿ.ಬಿ. ಮತ್ತು ಕೀರ್ತಿಯವರ ವಯಸ್ಸಿನ ಅಂತರವನ್ನು ಮೀರಿದ ಅಂಟಿದ ನಂಟು, ಶಕ್ತಿ ಶಾರದೆಯ ಮೇಳವಾಗಿ ರೂಪುಗೊಂಡು ಮನೋಹರ ಗ್ರಂಥ ಮಾಲೆಯಂತಹ ವಿಕ್ರಮ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಯಿತು” ಎಂದರು.
ಡಾ. ವಿನಾಯಕ ನಾಯಕ ಅವರು ಜಿ.ಬಿ.ಯವರ ಪ್ರಯೋಗಶೀಲತೆ ಹಾಗೂ ನಾಟಕದ ಹುಚ್ಚನ್ನು ನೆನಪಿಸಿಕೊಂಡರು. ಶ್ರೀ ವಿಶ್ವನಾಥ್ ಕೋಳಿವಾಡ ಅವರು ಜಿ.ಬಿ.ಯವರು ಕಟ್ಟಿದ ‘ಧಾರವಾಡ ಗೆಳೆಯರು’ ತಂಡದ ನಾಟಕಗಳ ಸಾಹಸಗಾಥೆಯನ್ನು ನೆನಪಿಸಿಕೊಂಡು ಜಿ.ಬಿ.ಯವರು ಹಣಕಾಸಿನ ವ್ಯವಹಾರದ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲ ಎಂದರು. ಡಾ. ಪ್ರಕಾಶ ಗರುಡ, ಡಾ. ಶಶಿಧರ ನರೇಂದ್ರ, ಶ್ರೀನಿವಾಸ ವಾಡಪ್ಪಿ ಮುಂತಾದವರು ಇಬ್ಬರ ಸಾಹಿತ್ಯ ಹಾಗೂ ಸಂಸ್ಕೃತಿ ಪ್ರಿಯತೆಯನ್ನು ನೆನಪಿಸಿಕೊಳ್ಳುತ್ತಾ ಕನ್ನಡ ಸಾಹಿತ್ಯಕ್ಕೆ ಅವರ ಅಪೂರ್ವ ಕೊಡುಗೆಯನ್ನು ಸ್ಮರಿಸಿದರು.
ಅಭಿನಯ ಭಾರತಿ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಶ್ರೀ ಜಯತೀರ್ಥ ಜಹಗೀರದಾರ ಇವರು ನೀಡಿದ ದತ್ತಿಯ ಅಂಗವಾಗಿ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಡಾ. ಹ.ವೆಂ. ಕಾಖಂಡಿಕಿ ಅವರು ನಿರೂಪಿಸಿ, ಸಂಯೋಜಿಸಿದರು, ಅಭಿನಯ ಭಾರತಿ ಅಧ್ಯಕ್ಷ ಶ್ರೀ ಅರವಿಂದ ಕುಲಕರ್ಣಿ ಅವರು ವಂದನಾರ್ಪಣೆ ಮಾಡಿದರು. ಶ್ರೀ ಕೃಷ್ಣ ತಾವರಗೇರಿ, ಶ್ರೀನಿವಾಸ್ ದೇಶಪಾಂಡೆ, ಎಸ್.ಬಿ. ದ್ವಾರ್ ಪಾಲಕ, ಪ್ರಕಾಶ್ ದೇಶಪಾಂಡೆ, ಶ್ರೀ ಹನುಮೇಶ್ ಸಕ್ರಿ, ಗಿರೀಶ್ ದೊಡ್ಡಮನಿ ಮತ್ತು ಸಮೀರ್ ಜೋಶಿ ಮುಂತಾದವರು ಉಪಸ್ಥಿತರಿದ್ದರು.