ಬಂಟ್ವಾಳ ತಾಲೂಕಿನ ಅಡ್ಯನಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1955 ಲಾಗಾಯ್ತು ಶಿಕ್ಷಕರಾಗಿ ಸುದೀರ್ಘ ಸೇವೆ ಗೈದ ಮಹಾಲಿಂಗ ಭಟ್ಟರು ರವರು ನೆರೆಯ ಅಡ್ಕಸ್ಥಳದ ವಾಟೆ ಸುಬ್ರಾಯ ಭಟ್ಟರ ಸುಪುತ್ರರು. ಮುಳಿಯಾಲ ಮನೆತನದ ಮಹಾಲಕ್ಷ್ಮೀ ಎಂಬ ಸಾಧ್ವಿಯ ಪತಿ ಹಾಗೂ ಇಬ್ಬರು ಪುತ್ರಿಯರು ಮತ್ತು ಓರ್ವ ಪದವೀಧರನಾದರೂ ಕೃಷಿ ಕೈಂಕರ್ಯದಲ್ಲಿರುವ ಪುತ್ರನ ಹೆಮ್ಮೆಯ ಪಿತ.
ಅಡ್ಯನಡ್ಕ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಅಧ್ಯಾಪಕರಾಗಿ, ಅದೇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದವರು ಹಾಗೂ ಎಲ್ಲಾ ಪ್ರಕಾರದ ಸಾಹಿತ್ಯದಲ್ಲಿ ನಿಪುಣರಾಗಿದ್ದ ಮಾಲಿಂಗ ಮಾಸ್ತರ್ ಬರೆದ ಬೀಚಿ ತಿಮ್ಮನ ಮಾದರಿಯ ‘ಕಿಟ್ಟನ ಕಟ್ಲೇರಿ’ ನಗೆ ಬರಹ ಅತಿ ಜನಪ್ರಿಯ. ‘ಶ್ರೀಗಂಧ’, ‘ಭಾವ ಕುಸುಮ’, ‘ಗಮಗಮ’, ಪ್ರ’ಸಾದ’ ಹಾಗೂ ‘ಸಂಗಮ’ ಎಂಬ ಮಕ್ಕಳ ಕವನ ಸಂಕಲನಗಳೂ, ‘ಮರ್ಲ್ ಗ್ ಮರ್ದ್’ ಎಂಬ ತುಳುನಾಟಕ, ‘ನಾಮ ನಂದಿನಿ’ ಎಂಬ ಹಲವು ಹೆಸರುಗಳ ಪ್ರಕಟಿತ ಸಂಕಲನವೂ ವಿಶಿಷ್ಡ ವಿಭಿನ್ನ.
‘ರಡ್ಡತ್ತ್ ಒಂಜಿ’, ‘ಬೊಲ್ಪಾಂಡ್’, ‘ಕಲ್ತಿ ಮಗೆ’, ‘ಜಾತಿ ತೂವಡೆ’ ಎಂಬ ತುಳು ನಾಟಕಗಳು, ‘ಸುಳ್ಳಿನ ಸೋಲು’, ‘ಬೆಳಕಿನ ದಾರಿಯಲ್ಲಿ’, ‘ಮಣ್ಣಿನಮಗ’, ‘ಕಾಣುವ ಕೈ’, ‘ಮಹನೀಯ ಸಮಾಜ’, ‘ಹೀಗೂ ಉಂಟೆ’, ‘ಬಾಡಿಗೆ ಮನೆ’, ‘ದೂರ್ವಾಸ ಗರ್ವ ಭಂಗ’, ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’, ‘ವಿಜಯೋತ್ಸವ’ ಎಂಬ ನಾಟಕಗಳೂ ಸಂಗಮ ಎಂಬ ಕವನ ಸಂಕಲನವೂ ಅವರ ಕೈ ಚಳಕದ ಅಪ್ರಕಟಿತ ರಚನೆಗಳು. ‘ಮೇಲಾಗಿ ಸತೀ ಸುಕನ್ಯಾ’ , ‘ಶಿವ ಮಂಗಳಾ’, ‘ಸುರ ಪಾರಿಜಾತ’, ‘ವಿಧಿ ಲೀಲೆ’, ‘ಶಕುಂತಲಾ’, ‘ಭಕ್ತ ಪುರಂದರ ದಾಸ’, ‘ಭಕ್ತ ಬಂಧು’, ‘ಯಮನ ಸೋಲು’, ‘ಭಕ್ತ ಮಾರ್ಕಂಡೇಯ’, ‘ಕಾವೇರಿ ಹರಿದಳು’, ‘ಧ್ರುವ ಕುಮಾರ’ ಹಾಗೂ ‘ಸತ್ಯವಾನ ಸಾವಿತ್ರಿ’ ಎಂಬ ನೃತ್ಯ ರೂಪಕಗಳೂ ಹಲವು ಮಕ್ಕಳಿಂದ ವೇದಿಕೆಯಲ್ಲಿ ರಂಜಿಸಿದುವುಗಳಾಗಿವೆ.
ಅದ್ವಿತೀಯ ಪಾದರಸದ ವ್ಯಕ್ತಿತ್ವದ ಮಾಲಿಂಗ ಮಾಸ್ತರ್ ಪ್ರತಿದಿನ ಶಾಲಾ ಭಿತ್ತಿ ಪತ್ರಿಕೆಗೂ ಚುಟುಕು ಬರೆಯುತ್ತಿದ್ದರು. ಜುಗಲ್ ಬಂದಿಯೋ ಎಂಬಂತೆ ನನ್ನಣ್ಣ ನೆ.ಮ.ಭಟ್ಟ ಸಹ ಬರೆಯುತ್ತಿದ್ದರು. ನೆ.ಮ – ವಿ.ಮ ಎಂಬೆರಡು ಕವಿ ಬರಹ ಆಗ ಜನಪ್ರಿಯ.
ಒಮ್ಮೆ ನಾನು ಆರನೇಯ ತರಗತಿಯಲ್ಲಿದ್ದಾಗ ನನ್ನ ಪ್ರಬಂಧ ಪ್ರಥಮ ಬಹುಮಾನ ಪಡೆದಿತ್ತು. ಆ ಪ್ರಬಂಧವನ್ನು ಏಳನೇ ತರಗತಿಯಲ್ಲಿ ಓದಿ ಸ್ಪೂರ್ತಿ ತುಂಬಿದವರಿವರು. ನಗು ಮುಖ ಬಿಟ್ಟರೆ ಬೇರೇನಿರದ ಇವರು ಯಾವ ವಿದ್ಯಾರ್ಥಿಗೂ ಪೆಟ್ಟು ಕೊಟ್ಟ ಇತಿಹಾಸವೇ ಇಲ್ಲ. ಸಹೋದ್ಯೋಗಿಗಳಿಗೂ ಹೆತ್ತವರಿಗೂ ಸದಾತ್ಮೀಯ ನಡೆ ಇವರದು. ನನ್ನ ಕವನವೊಂದು ಉದಯವಾಣಿಯಲ್ಲಿ ಬಂದಾಗ ಬಹಳ ಚೆನ್ನಾಗಿ ರಾಗ ಲಯ ಮಾತ್ರೆ ಸಹ ಇರುವಂತೆ ಬರೆದಿದ್ದಿ ಸುರೇಶ ಮುಂದುವರಿಸು ಎಂದಿದ್ದರು ಇತ್ತೀಚೆಗೆ. ಆಕಾಶವಾಣಿಯ ಬಾಲರ ಕಾರ್ಯಕ್ರಮದಲ್ಲಿ ಇವರ ‘ಗೀತ ಗಾಯನ’ ಮಾಸ ಪರ್ಯಂತ ಪ್ರಸಾರವಾಗಿವೆ. ಯಕ್ಷಗಾನದಲ್ಲೂ ಆಸಕ್ತರಾಗಿದ್ದ ಈ ಮಾಸ್ತರ್ 2020ರಲ್ಲಿ ಸಾದನಾ ಪಥಿಕ ವಾಟೆ ಎಂಬ ಅಭಿನಂದನಾ ಗ್ರಂಥಕ್ಕೆ ಪಾತ್ರರಾಗಿದ್ದಾರೆ.
ಸಿರಿವಂತರಾದರೂ ನಿಗರ್ವಿಯಾದ ಈ ಸಕಲ ಸಾಹಿತ್ಯ ವಿಶಾರದರು ಕೃಷಿಯಲ್ಲಿ ಅನೇಕ ನವೀಕರಣ ತಂತ್ರ ಹಾಗೂ ಬಹು ಬೆಳೆ ಬೆಳೆದವರಲ್ಲದೆ ‘ಅಡಿಕೆ’ ಪತ್ರಿಕೆಯ ಸಾಂಪಾದಕ ಮಂಡಳಿಯ ಸದಸ್ಯರೂ ಆಗಿದ್ದರು.
ನಮ್ಮೂರ ಹೆಮ್ಮೆಯ ಆಸ್ತಿಯಾಗಿದ್ದವರು ವಯೋ ಸಹಜವಾಗಿ 15-12-2023ರಂದು ತಮ್ಮ 87ನೇಯ ವಯಸ್ಸಿನಲ್ಲಿ ಅಸ್ತಂಗತರಾದರೂ ಅವರ ನೆನಪು ಚಿರಂತನ.
ಓಂ ಶಾಂತಿ.
ಡಾ ಸುರೇಶ ನೆಗಳಗುಳಿ
‘ಸುಹಾಸ’, ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ, ಮಂಗಳೂರು-575009
9448216674
2 Comments
Nice sir.
Nice sir. Well written. Informative.