ಮೂಡುಬಿದಿರೆ : ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ‘ವಿಶೇಷ ಉಪನ್ಯಾಸ ಮತ್ತು ಕವಿಯೊಂದಿಗೆ ಸಂವಾದ’ ಕಾರ್ಯಕ್ರಮವು ಡಾ. ವಿ.ಎ. ಆಚಾರ್ಯ ಸಭಾಂಗಣದಲ್ಲಿ ದಿನಾಂಕ 19 ಸೆಪ್ಟೆಂಬರ್ 2025ರಂದು ಜರುಗಿತು.
ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಕವಿ ಹಾಗೂ ವಿಮರ್ಶಕರಾದ ಕೆ.ಆರ್. ಪುರಂ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಟಿ. ಯಲ್ಲಪ್ಪ ಇವರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಬದುಕಿನ ಹಿನ್ನಲೆಯಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಂಚಿಕೊಂಡರು. “ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ ಮಲಹೋರುವ ಕುಟುಂಬದಲ್ಲಿ ಕಡುಬಡತನದಲ್ಲಿ ಜನಿಸಿದ್ದ ನಾನು, ಕನ್ನಡ ಸಾಹಿತ್ಯದ ಅಭ್ಯಾಸ ಮಾಡದೆ, ಭಾಷೆಯನ್ನು ಪ್ರೀತಿಸದೆ ಇದ್ದಿದ್ದರೆ ಇವತ್ತು ಸಹ ಅದೇ ಪರಿಸ್ಥಿತಿಯಲ್ಲಿ ಮುಂದುವರಿಯಬೇಕಾಗಿತ್ತು. ಆದರೆ ಬದುಕಿನ ಆಯ್ಕೆ ನನ್ನ ಕೈಯಲ್ಲಿತ್ತು. ಕಲಾ ವಿಭಾಗವನ್ನು ಆರಿಸಿಕೊಂಡು, ಬದುಕಿನ ಪಥ ಬದಲಿಸಿದೆ ಎಂದು ತಮ್ಮ ಬದುಕಿನ ಹೋರಾಟವನ್ನು ವಿವರಿಸಿದರು.
ಡಾ. ಯಲ್ಲಪ್ಪರು ವೈದ್ಯರಾಗಬೇಕೆಂಬ ಕನಸನ್ನು ಹೊತ್ತು ವಿಜ್ಞಾನ ವಿಭಾಗಕ್ಕೆ ಸೇರಿದ ನೆನಪು ಹಂಚಿಕೊಂಡರು. “ನನ್ನ ಸಹೋದರ ಸಾಲ ಮಾಡಿ ವಿಜ್ಞಾನ ವಿಭಾಗಕ್ಕೆ ದಾಖಲಿಸಿದರೂ, ತಂದೆ ಹಾಗೂ ಸಹೋದರರಿಗೆ ತಿಳಿಸದೆ ನಾನು ಸಾಲ ಮಾಡಿ ಕಲಾ ವಿಭಾಗಕ್ಕೆ ಸೇರಿದೆ. ಇಂದಿನ ಯಶಸ್ಸು ಆ ದಿಟ್ಟ ನಿರ್ಧಾರದ ಫಲ” ಎಂದು ಹೆಮ್ಮೆ ವ್ಯಕ್ತಪಡಿಸಿದರು. ಸಾಹಿತ್ಯದ ಅಭ್ಯಾಸವೇ ಜೀವನ ರೂಪಿಸುತ್ತದೆ ಎಂದು ತಿಳಿಸಿದ ಅವರು, ಪೋಷಕರ ಒತ್ತಾಯಕ್ಕೆ ಮಣಿದು ನಮ್ಮ ಇಚ್ಛೆಗೆ ವಿರುದ್ಧವಾದ ಹಾದಿ ಹಿಡಿದರೆ ಎದುರಾಗುವ ಅಪಾಯಗಳು ಕಠಿಣವಾಗಿರುತ್ತವೆ,” ಎಂದು ಎಚ್ಚರಿಸಿದರು. ಡಾ. ಯಲ್ಲಪ್ಪ ಅವರು ಕರ್ನಾಟಕದ 400 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಡೆಯುತ್ತಿರುವ ‘ತಮ್ಮ ಬುತ್ತಿ’ ಎಂಬ ಬೌದ್ಧಿಕ ಕಾರ್ಯಕ್ರಮವನ್ನು ಉಲ್ಲೇಖಿಸಿ ಬಡತನ ಹಾಗೂ ಹಸಿವಿನ ದಿನಗಳನ್ನು ನೆನೆದು ಭಾವುಕರಾದರು. ತಮ್ಮ ಸ್ವಂತ ಖರ್ಚಿನಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸುತ್ತಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಕಲಾ ನಿಖಾಯದ ಡೀನ್ ಪ್ರೊ. ವೇಣುಗೋಪಾಲ ಶೆಟ್ಟಿ ಮಾತನಾಡಿ, “ಸಾಹಿತ್ಯ ಜೀವನವನ್ನು ರೂಪಿಸುವ ಶಕ್ತಿ. ಕಟ್ಟಡಗಳು ಕಲ್ಲಿನಿಂದ ನಿರ್ಮಾಣವಾದಂತೆಯೇ ವ್ಯಕ್ತಿತ್ವ ಸಾಹಿತ್ಯದಿಂದ ರೂಪುಗೊಳ್ಳುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಝಾನ್ಸಿ ಪಿ.ಎನ್. ಇದ್ದರು. ಸಾಹಿತ್ಯ ಸಂಘದ ಸಂಯೋಜಕ ಡಾ. ಡಿ.ವಿ. ಪ್ರಕಾಶ್ ಸ್ವಾಗತಿಸಿ, ಉಪನ್ಯಾಸಕಿ ಉಷಾ ಬಿ. ಕಾರ್ಯಕ್ರಮ ನಿರೂಪಿಸಿ, ವೇದಾವತಿ ವಂದಿಸಿದರು.