ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚುಟುಕು ಸಂಗಮ ಕವಿಗೋಷ್ಠಿ ಹಾಗೂ ಜಾನಪದ ಸಾಹಿತ್ಯದಲ್ಲಿ ಹಾಸ್ಯ ಎನ್ನುವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 06 ಜುಲೈ 2025ರ ಭಾನುವಾರದಂದು ಕೊಪ್ಪಳದ ಗಂಜ್ ಸರ್ಕಲ್ ಹತ್ತಿರವಿರುವ ವಿ. ಹೆಚ್. ಎಂ. ಲಾ ಅಸೋಶಿಯಟ್ಸ್ ಮತ್ತು ಬಾಳಪ್ಪ ಎಸ್ ವೀರಾಪುರ ವಕೀಲರ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಸಿ. ವಿ. ಜಡಿಯವರ್ ಮಾತನಾಡಿ “ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳಿಗಿಂತ ಮೂಲ ಜಾನಪದ ಸಾಹಿತ್ಯಕ್ಕೆ ಶ್ರೇಷ್ಠತೆ ಇದೆ. ಜಾನಪದ ಸಾಹಿತ್ಯವು ಪ್ರತಿಯೊಬ್ಬರಿಗೂ ತಾಯಿ ಬೇರು ಇದ್ದಂತೆ, ಅದನ್ನು ಪೋಷಿಸಿ ಬೆಳೆಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ, ಇಂದಿನ ಆಧುನಿಕ ಯುಗದಲ್ಲಿ ಮೂಲ ಜಾನಪದ ಕಲಾವಿದರನ್ನು ಕಣೆಗಣಿಸಿ ಜಾನಪದಕ್ಕೆ ತದ್ವಿರುದ್ಧ (ನಕಲಿ )ಜಾನಪದ ಕಲಾವಿದರಿಗೇ ಹೆಚ್ಚಿನ ಪ್ರಮಾಣದಲ್ಲಿ ಮನ್ನಣೆ ದೊರೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಆಧುನಿಕತೆ ಹೆಸರಿನಲ್ಲಿ ಜಾನಪದ ನಶಿಸುತ್ತಿದೆ, ಇಂದು ಜಾತಿ, ಮತ, ಪಂಥಗಳಿಂದ ಸೌಹಾದ೯ತೆ ಮಾಯವಾಗುತ್ತಿದೆ. ಜನರ ನಡುವೆ ಇದ್ದ ಸಾಹಿತ್ಯ ಅದು ಪೂವ೯ಜರ ಬಳುವಳಿಯಿಂದ ಬಂದಿದ್ದು ಅದನ್ನು ಪ್ರತಿಯೊಬ್ಬರೂ ಕಾಪಾಡಬೇಕು. ಪ್ರಸ್ತುತ ದಿನಗಳಲ್ಲಿ ಚುಟುಕು ಸಾಹಿತ್ಯವು ಜಾನಪದ ಸಂತತಿಯಾಗಿ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ” ಎಂದು ವಿಶ್ಲೇಷಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕವಿ, ವಕೀಲ ವಿಜಯ ಅಮೃತರಾಜ್ ಮಾತನಾಡಿ “ಸಾಹಿತಿ ಸಂಘಟಕರಿಗೆ ಸರಕಾರದಿಂದ ನೆರವು ಪ್ರೋತ್ಸಾಹ ಯೋಜನೆಗಳಿವೆ. ಅವುಗಳನ್ನು ನಿಯಮಾನುಸಾರ ಪಡೆಯಲು ಪ್ರಯತ್ನಿಸಬೇಕು. ಬರಹಗಳಿಂದ ಬದುಕು ಸಾಧ್ಯ ಎಂಬುದನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ತೋರಿಸಿಕೊಟ್ಟಿದ್ದಾರೆ ಬರಹಗಾರರು ವಿಮುಖರಾಗಬಾರದು” ಎಂದು ಸಲಹೆ ನೀಡಿದರು.
ಸಾಹಿತಿ ಮಹಾಂತೇಶ್ ಮಲ್ಲನಗೌಡರ ಮಾತನಾಡಿ “ಜಿಲ್ಲಾ ಮಟ್ಟದ ಸಮಾರಂಭ ಎಂದರೆ ಅಷ್ಟು ಸುಲಭದ ಕೆಲಸ ಅಲ್ಲ ಇದರ ನಡುವೆಯೇ ಕೊಪ್ಪಳ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ನಿರಂತರ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ. ಈ ಕಾರ್ಯವನ್ನು ಜಿಲ್ಲೆಯ ಜನತೆ ಹಾಗೂ ಸಾಹಿತ್ಯ ಮನಸ್ಸುಗಳು ಬೆಂಬಲಿಸಿ ಪ್ರೋತ್ಸಾಹಿಸಲಿ” ಎಂದು ತಿಳಿಸಿದರು. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ಮಾತನಾಡಿ “ಬರುವ ದಿನಗಳಲ್ಲಿ ಸಾಹಿತ್ಯ ಕಮ್ಮಟ ಹಾಗೂ ವಿವಿಧ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪರಿಷತ್ತು ಉದ್ದೇಶಿಸಿದೆ” ಎಂದು ತಿಳಿಸಿದರು.
ಹಿರಿಯ ಸಾಹಿತಿ ವೀರಣ್ಣ ಹುರಕಡ್ಲಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಸಾಹಿತಿ ರಾಘವೇಂದ್ರ ಹಳ್ಳಿ, ವಕೀಲರಾದ ವಿ. ಹೆಚ್. ಮಾಲಿ ಪಾಟೀಲ್ , ಬಾಳಪ್ಪ ವೀರಾಪುರ ಮಾತನಾಡಿದರು. ಬಾಳಪ್ಪ ವೀರಾಪುರ ಸ್ವಾಗತಿಸಿ, ಡಾ. ಮಹಾಂತೇಶ್ ನೆಲಾಗಣಿ ಹಾಗೂ ಪ್ರದೀಪ್ ಹದ್ಧಣ್ಣ ವರ್ ಕಾಯ೯ಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಎ. ಪಿ. ಅಂಗಡಿ, ಶ್ರೀಮತಿ ಸುಮಂಗಲ, ಹೆಚ್. ಪ್ರದೀಪ್ ಕುಮಾರ ಹದ್ದಣ್ಣವರ್, ರವಿ ಹಿರೇಮನಿ, ಬಾಳಪ್ಪ ವೀರಾಪುರ, ಅಕ್ಕಮಹಾದೇವಿ ಅಂಗಡಿ, ಈರಯ್ಯ ಕುತ೯ಕೋಟಿ, ಅನ್ನಪೂರ್ಣಾ ಮಹೇಶ್ ಮನ್ನಪುರ, ರೇವಣಸಿದ್ದಪ್ಪ ಕೊಲ್ಕಾರ್, ವಸಂತ್ ಗುಡಿ, ಕಂಠಯ್ಯ ಅರಳಿಕಟ್ಟಿಮಠ, ಪುಷ್ಪಲತಾ ಯೋಳುಭಾವಿ, ಶಿವಪ್ಪ ಕೋಗಳಿ, ಬಸವರಾಜ್ ಉಪ್ಪಿನ, ಸುರೇಶ್ ಕುಂಬಾರ, ಬಸವರಾಜ್ ಸಂಕನಗೌಡರ, ನಾಗರತ್ನ ಬನ್ನಿಕೊಪ್ಪ, ವಿಜಯ ಲಕ್ಷ್ಮಿ ಕೊಳ್ಳಿ ಮುಂತಾದವರು ಕವಿತೆ ವಾಚಿಸಿದರು. ಇದಕ್ಕೂ ಮುಂಚೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.