ದೇರಳಕಟ್ಟೆ : ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಕಣಚೂರು ಮಹಿಳಾ ಪಿ.ಯು.ಕಾಲೇಜ್ ಇವುಗಳ ಜಂಟಿ ಆಶ್ರಯದಲ್ಲಿ ಕಣಚೂರು ಪಿಯು ಕಾಲೇಜು ಆಡಿಟೋರಿಯಂನಲ್ಲಿ ದಿನಾಂಕ 27-07-2023 ಗುರುವಾರ ನಡೆದ ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಜಯರಾಮ್ ಶೆಟ್ಟಿಯವರು ಮಾತನಾಡುತ್ತಾ “ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಪೈಕಿ ಅಬ್ಬಕ್ಕಳು ಉಳ್ಳಾಲ ಭಾಗದಲ್ಲಿ ಹೋರಾಟ ಮಾಡಿದ ಮಹಿಳೆ. ಅಬ್ಬಕ್ಕಳ ಸೇನೆಯಲ್ಲಿ ಜಾಸ್ತಿಯಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಗಳು ಇದ್ದರು. ಅವರು ಪೋರ್ಚುಗೀಸರ ವಿರುದ್ಧ ಹೋರಾಟದ ಜೊತೆ ಅಸಹಕಾರ ಚಳವಳಿ ಮಾಡಿದ್ದಾರೆ. ಮೂರು ಜನ ಅಬ್ಬಕ್ಕಳ ಪೈಕಿ ಹೋರಾಟ ಮಾಡಿ ಪ್ರಾಣ ಬಿಟ್ಟದ್ದು ಎರಡನೆಯವಳು. ಈ ಹೋರಾಟದ ಇತಿಹಾಸದ ಅಧ್ಯಯನ ಮಾಡಬೇಕಾಗಿದೆ” ಎಂದು ಹೇಳಿದರು.
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ‘ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರ’ಗಳ ಕುರಿತು ವಿಶೇಷ ಉಪನ್ಯಾಸ ನೀಡಿ “ವಾಸ್ಕೋಡಿಗಾಮ ದೇಶಕ್ಕೆ ಪ್ರಥಮವಾಗಿ ಬಂದು ವ್ಯಾಪಾರ ಆರಂಭಿಸಿದ್ದ. ಇದರ ಬಳಿಕ ಪೊರ್ಚ್ ಗೀಸರು ಭಾರತಕ್ಕೆ ಬಂದು ಅಸ್ತಿತ್ವದ ಜೊತೆ ವ್ಯಾಪಾರವನ್ನು ಶುರು ಮಾಡಿದರು. ಇವರನ್ನು ಮೆಟ್ಟಿ ನಿಲ್ಲುವುದು ಅಬ್ಬಕ್ಕಳಿಗೆ ಒಂದು ಸವಾಲು ಆಗಿತ್ತು. ಆದರೆ ಎದೆಗುಂದದೆ ಕಾರ್ಯಾಚರಣೆ ನಡೆಸಿದ ಅಬ್ಬಕ್ಕಳ ಬಗ್ಗೆ ಹೆಮ್ಮೆ ಎನಿಸುತ್ತದೆ” ಎಂದು ಹೇಳಿದರು.
ಕಣಚೂರು ಮೆಡಿಕಲ್ ಕಾಲೇಜು ಡೀನ್ ಡಾ.ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಆಲಿಯಬ್ಬ ಉಪಸ್ಥಿತರಿದ್ದರು. ಕಣಚೂರು ಪಿಯು ಕಾಲೇಜು ಪ್ರಾಂಶುಪಾಲ ಶಾಹಿದಾ ಬಿ.ಎಂ.ಸ್ವಾಗತಿಸಿ, ಜಿ.ಪಂ.ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಶ್ರೀ ಆನಂದ ಅಸೈಗೋಳಿ ವಂದಿಸಿದರು.