ಮೈಸೂರು : ನಟನ ರಂಗಶಾಲೆ ಇದರ ವತಿಯಿಂದ ಹೊಸ ವರ್ಷದ ಮೊದಲ ಕಾರ್ಯಕ್ರಮವಾಗಿ ಪ್ರಖ್ಯಾತ ವಾಗ್ಮಿಗಳಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರಿಂದ ‘ನಟನೆಯ ಅಧ್ಯಾತ್ಮ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಂದು ಭಾನುವಾರ ಬೆಳಗ್ಗೆ 11-00 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ ಎಂದಿನಂತೆ ವಾರಾಂತ್ಯದ ನಾಟಕ ಇದೆ. ನಟ ಸುಂದರ್, ಪಿ.ಡಿ. ಸತೀಶ ಮುಂತಾದ ಘಟಾನುಗಟಿಗಳು ರಂಗದ ಮೇಲೆ ಬರುತ್ತಾರೆ. ನಟ, ನಿರ್ದೇಶಕ, ನಾಟಕಕಾರ ಸಂಘಟಕ ಎಲ್ಲವೂ ಆಗಿರುವ ರಾಜೇಂದ್ರ ಕಾರಂತರೂ ರಂಗದ ಮೇಲೆ ಇರುತ್ತಾರೆ. ರಂಗ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಮತ್ತು ಆಸಕ್ತರಿಗೆ ಮುಕ್ತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 7259537777, 9480468327 ಮತ್ತು 9845595505.
ಶ್ರೀ ಲಕ್ಷ್ಮೀಶ ತೋಳ್ಳಾಡಿ :
ಕುಮಾರಧಾರೆ ನದಿಯ ಪಕ್ಕದ ಶಾಂತಿಗೋಡಿನಲ್ಲಿ ನಮ್ಮ ಬಿಂಬವನ್ನು ಪ್ರತಿಬಿಂಬಿಸುವ ಆ ನದಿಯ ಹಾಗೆ ಅನುಭಾವದಲ್ಲಿ ತನ್ನ ಬದುಕನ್ನು ಬಿಂಬಿಸಿಕೊಂಡು ಅದರ ಆನನ್ಯತೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಂಡ ಲಕ್ಷ್ಮೀಶ ತೋಳ್ತಾಡಿಯವರು ಹುಟ್ಟಿದ್ದು 1947ರಲ್ಲಿ, ತಂದೆ ವಿಷ್ಣುಮೂರ್ತಿ, ತಾಯಿ ರತ್ನಮ್ಮ. ಓದಲು ಹೊರಟದ್ದು ವಿಜ್ಞಾನವನ್ನು. ಆದರೆ ಅವರಿಗೆ ಆಸಕ್ತಿ ಹುಟ್ಟಿದ್ದು ಸಂಸ್ಕೃತದಲ್ಲಿ. ಈ ಎರಡನ್ನೂ ಅಂಗೈಯಲ್ಲಿ ಇಟ್ಟುಕೊಂಡು ಒಡನಾಟ ನಡೆಸಿದ್ದು ವಿದ್ಯಾಭೂಷಣರ ಜೊತೆ. ಕವಿ ಗೋಪಾಲಕೃಷ್ಣ ಅಡಿಗರ ನಿಕಟತೆಯಲ್ಲಿ ಸುಖ ಸಿಕ್ಕುತ್ತಿದ್ದಂತೆ ಅವರಲ್ಲಿ ಪತ್ರಕರ್ತನಾಗಬೇಕೆಂಬ ಹಂಬಲ. ಆ ಹಂಬಲ ತುಡಿತವಾಗಿ ಉಡುಪಿಯಿಂದ ಬೆಂಗಳೂರಿಗೆ ಪಯಣ. ಅಲ್ಲಿ ವೈಯನ್ಕೆ, ಲಂಕೇಶ್, ಕಿ.ರಂ. ಮುಂತಾದವರ ಆಪ್ತತೆಯಲ್ಲಿ ಮಿಂದು ಬಿ.ವಿ. ಕಾರಂತರು ‘ಈಡಿಪಸ್’ ಇತ್ಯಾದಿ ಮೂರು ನಾಟಕಗಳನ್ನು ಆಡಿಸುತ್ತಿದ್ದ ಸಂಭ್ರಮದಲ್ಲಿ ತಾನೂ ಪಾಲುದಾರರಾಗಿ ಬಾದಲ್ ಸರ್ಕಾರರ ನಾಟಕವೊಂದನ್ನು ‘ಕೊನೆ ಎಲ್ಲಿ’ ಎಂದು ಅನುವಾದಿಸಿದರು. ಅದನ್ನು ಬಿ.ವಿ ಕಾರಂತರು ಆಡಿಸಿದಾಗ ಮಾತು ಮುತ್ತಾಗಿ ಚಿಪ್ಪೊಡೆದರೂ ಮತ್ತೆ ಊರಿನ ಸೆಳೆತಕ್ಕೆ ಶರಣಾದಂತೆ ಬಂದು ತನ್ನನ್ನು ತೊಡಗಿಸಿಕೊಂಡದ್ದು ಕೃಷಿಯಲ್ಲಿ. ಈ ದೇಶಕ್ಕೆ ತುರ್ತುಪರಿಸ್ಥಿತಿಯು ದುರ್ದಿನಗಳನ್ನು ತಂದಾಗ ಅವರು ಹೋಗಿ ನೆಲೆಸಿದ್ದು ಸೆರೆಮನೆಯಲ್ಲಿ. ಅಲ್ಲಿಂದ ಹೊರಬಂದ ಮೇಲೆ ಕಾಡಿದ್ದು ಯಕ್ಷಗಾನ ತಾಳಮದ್ದಳೆಯ ಕೂಟ. ಇದರಿಂದ ಒದಗಿ ಬಂದದ್ದು ತಾಳಮದ್ದಳೆ ಕ್ಷೇತ್ರದ ಶಿಖರಸೂರ್ಯರಾದ ದೇರಾಜೆ ಮತ್ತು ಶೇಣಿಯವರ ಆಪ್ತ ಒಡನಾಟ, ಎಂಭತ್ತರ ದಶಕದಲ್ಲಿ ಒಂದಷ್ಟು ದಿನ ಶೇಣಿಯವರ ಆತ್ಮಕಥನದ ಹೊತ್ತಗೆಗೆ ‘ಸ್ವರೂಪ’ ಕೊಡುವ ಕೈಚಳಕವೇ ಅವರ ಕಾಯಕ, ಅದೇ ಹೊತ್ತಿಗೆ ಭಗವದ್ಗೀತೆಯ ಕುರಿತು ಒಂದು ಪುಟ್ಟ ಟಿಪ್ಪಣಿ ‘ಮಹಾಯುದ್ಧಕ್ಕೆ ಮುನ್ನ’ವನ್ನು ಬರೆಯಬೇಕೆಂಬ ತಹತಹ! ಬರೆದಾದ ಮೇಲೆ ಅದಕ್ಕೆ ಆಧುನಿಕರಿಂದ ಸಿಕ್ಕಿದ್ದು ಅಪರೂಪದ ಗೌರವ. ತೊಂಬತ್ತರ ದಶಕದಲ್ಲಿ ಅವರಿಗೆ ಇಬ್ಬರು ಅಸಾಮಾನ್ಯ ಹಿರಿಯರ ಸಂಪರ್ಕ ಒದಗಿ ಬಂತು. ಒಬ್ಬರು ಸೂಫಿ ಬ್ಯಾರಿಯವರಾದರೆ ಇನ್ನೊಬ್ಬರು ‘ಪುತ್ತೂರು ಅಜ್ಜ’ ಎಂದು ಆ ಮೇಲೆ ಖ್ಯಾತರಾದ ನೆಟ್ಟಾರು ರಾಮಚಂದ್ರ ಭಟ್ಟರು, ಸೂಫಿ ಬ್ಯಾರಿಯವರು ಕೃಷಿಯಲ್ಲಿ ಅನುಭಾವವನ್ನು ಕಂಡುಕೊಂಡವರಿದ್ದರೆ, ಭಟ್ಟರು ತನ್ನನ್ನೇ ಅಲ್ಲಗಳೆದುಕೊಂಡು ಉಳಿದೆಲ್ಲವನ್ನೂ ಒಪ್ಪಿಕೊಂಡ ದಾರ್ಶನಿಕ, ಇವರಿಬ್ಬರ ಪ್ರತಿಬಿಂಬವನ್ನು ಬಿಂಬವಾಗಿಸಿ ಲೋಕಕ್ಕೆ ಪರಿಚಯಿಸುವುದರಲ್ಲಿ ತೋಳ್ಳಾಡಿಯವರು ‘ದರ್ಶನ’ ಸುಖವನ್ನು ಕಂಡುಕೊಂಡ ಮುನಿ. ಆದರೂ ಇವುಗಳ ನಡುವೆ ಅನೇಕ ಭಾಷಣಗಳಲ್ಲಿ, ಲೇಖನಗಳಲ್ಲಿ ತನ್ನ ಇರುವಿಕೆಗೆ ‘ಇಹಪರ’ವನ್ನು ತಂದುಕೊಂಡ ಲೌಕಿಕ. ಅವರು ಈಚೆಗಿನ ವರುಷಗಳಲ್ಲಿ ‘ಕೆಂಡಸಂಪಿಗೆ’ಯಲ್ಲಿ ‘ಭಾಗವತ’ವನ್ನು ವ್ಯಾಖ್ಯಾನಿಸಿ ಭಾಗವತದ ಪೂರ್ವಾಪರಗಳನ್ನು ತೆರೆದಿಟ್ಟ ಹಾಗೆ ‘ಸೌಂದರ್ಯಲಹರಿ’ಗೆ ನಿಜವಾದ ಅರ್ಥದ ಭಾಷ್ಯವನ್ನು ಬರೆದಿದ್ದಾರೆ. ಬದುಕನ್ನು ಸದಾ ತುಂ ತುಂ ಎಂಬಂತೆ ತುಂಬಿಕೊಳ್ಳುತ್ತಲೇ ಇರುವ ತೋಳಾಡಿಯವರು ನಮ್ಮ ನಡುವೆ ಆಶ್ಚರ್ಯ ಮತ್ತು ಅದ್ಭುತ ಎನ್ನುವುದಕ್ಕೆ ರೂಪಕ. ಅವರು ಪ್ರಜಾವಾಣಿಯಲ್ಲಿ ಬರೆದ ಅಂಕಣ ಲೇಖನಗಳು ಮುಂದೆ ‘ಭಾರತಯಾತ್ರೆ : ಮಹಾಭಾರತ ಅನುಸಂಧಾನ” ಎಂದು ಪುಸ್ತಕ ರೂಪದಲ್ಲಿ ಪ್ರಕಟವಾಗಿ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುವುದು ಕನ್ನಡಕ್ಕೆ ಹೆಮ್ಮೆ.