ಧಾರವಾಡ : ಕಾದಂಬರಿ ಪಿತಾಮಹ ಗಳಗನಾಥರ 155ನೇ ಜನ್ಮದಿನೋತ್ಸವ ಹಾಗೂ 2022-23ನೇ ಸಾಲಿನ ‘ಶ್ರೀ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 05-01-2024ನೇ ಶುಕ್ರವಾರದಂದು ಧಾರವಾಡದ ಅಲೂರು ವೆಂಕಟರಾವ್ ಸ್ಮಾರಕ ಭವನದಲ್ಲಿ ನಡೆಯಿತು.
ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ರೂಪಾಯಿ 50 ಸಾವಿರ ನಗದನ್ನು ಒಳಗೊಂಡ 2022-23ನೇ ಸಾಲಿನ ‘ಗಳಗನಾಥ ಪ್ರಶಸ್ತಿ’ಯನ್ನು ಸಾಹಿತಿ ಜಯಂತ ಕಾಯ್ಕಿಣಿಗೆ ಹಾಗೂ ಅಷ್ಟೇ ಮೊತ್ತದ ‘ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿ’ಯನ್ನು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾ ರೆಡ್ಡಿಯವರಿಗೆ, ಕಥೆಗಾರ ಹಾಗೂ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರದಾನಿಸಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ “ನಾನು ಕಾದಂಬರಿ ಬರೆದಿಲ್ಲ. ಆದಾಗ್ಯೂ ಗಳಗನಾಥ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ಖುಷಿ ಇದೆ. ಆದರೆ, ಇದು ರಾವಣನ ಕೈಯಲ್ಲಿ ಆತ್ಮಲಿಂಗ ಕೊಟ್ಟಂತೆ ಅನುಭವ ನೀಡಿದೆ ಎಂದರು. ಅನಾಮಿಕರಾಗಿ ಬರಿಯೋದು, ಪ್ರಶಸ್ತಿ ಸ್ವೀಕರಿಸುವುದು ದ್ವಂದ್ವ ಅಲ್ವಾ? ನಾವು ಬರೆದಿದ್ದು ನಮ್ಮ ಮೇಲೆಯೇ ಪ್ರಭಾವ ಬೀರದೆ ಇದ್ದಾಗ ಬೇರೆಯವರ ಮೇಲೆ ಪ್ರಭಾವ ಬೀರಲು ಹೇಗೆ ಸಾಧ್ಯ?. ಎಂದು ಕಾದಂಬರಿ ಬರೆಯದಿರುವ ಬಗ್ಗೆ ತಮ್ಮನ್ನೇ ಪ್ರಶ್ನಿಸಿಕೊಂಡರು. ಎರಡುವರೆ ಸಾವಿರ ಇತಿಹಾಸ ಹೊಂದಿದ ಕನ್ನಡ ಭಾಷೆ ವಿಭಿನ್ನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆ ಒಳಗೊಂಡಿದೆ. ಕಾವ್ಯ ಸಮಾಜದ ಇ.ಸಿ.ಜಿ. ಲಿಖಿತ ಸಾಹಿತ್ಯ ನಮ್ಮ ಬದುಕಿನ ಕಾರ್ಡಿಯಾ ಇದ್ದಂತೆ ಕಥೆಗಿಂತ ಮಿಗಿಲಾದ ಸತ್ಯವೇ ಇಲ್ಲ. ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನಿಸಿ ಪ್ರಶಸ್ತಿ ನೀಡಿರುವ ಪ್ರತಿಷ್ಠಾನಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ಕಾದಂಬರಿ ಬರೆಯುವ ಪ್ರಯತ್ನ ಮಾಡುವೆ. ವಿದ್ಯಾರ್ಥಿಗಳಿಗೆ ಗಳಗನಾಥರ ಬಗ್ಗೆ ರುಚಿ ಹಚ್ಚುವ ಕೈಂಕರ್ಯ ನಡೆಯಬೇಕಿದೆ.” ಎಂದರು.
ಪ್ರಶಸ್ತಿ ಪ್ರದಾನಿಸಿದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ “ಬಹಳಷ್ಟು ಇಳಿಯ ವಯಸ್ಸಿನ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದು ಸಮಂಜಸವಲ್ಲ ವಯಸ್ಸು ಇದ್ದವರಿಗೆ ಪ್ರಶಸ್ತಿ ನೀಡಿದಾಗ ಅದಕ್ಕೆ ಮೌಲ್ಯ ಬರಲಿದೆ. ಇನ್ನಷ್ಟು ಕೆಲಸಗಳೂ ಆಗಲಿದೆ.” ಎಂದು ತಿಳಿಸಿದರು. ಪ್ರತಿಷ್ಠಾನ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಗಳಗನಾಥ, ಡಾ.ಶ್ರೀರಾಮ ಭಟ್ಟ, ಕೆ. ಆರ್. ಗಣೇಶ, ಶ್ರೀಧರ ಬಳೆಗಾರ, ಹನುಮಂತಗೌಡ ಗೊಲ್ಲರ ಪಾಲ್ಗೊಂಡಿದ್ದರು.