ಮೂಡುಬಿದಿರೆ : ಮೂಡುಬಿದಿರೆ ಆಲಂಗಾರು ಶ್ರೀ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ದಿನಾಂಕ 09 ಡಿಸೆಂಬರ್ 2025ರಂದು ಶ್ರೀ ಹರಿಲೀಲಾ ಯಕ್ಷನಾದದ 5ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರ್ಥಧಾರಿ, ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ “ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆಯ ಅಬ್ಬರದಿಂದ ಮದ್ದಲೆ ನೇಪಥ್ಯಕ್ಕೆ ಸರಿಯುತ್ತಿದೆ. ಪಂಚವಾದ್ಯಗಳೂ ಮೂಲೆ ಗುಂಪಾಗಲು ಚೆಂಡೆಯೇ ಕಾರಣವಾಗಿದೆ. ಚೆಂಡೆಯ ಬಳಕೆಯನ್ನು ಮಿತಗೊಳಿಸದಿದ್ದರೆ ಭವಿಷ್ಯದಲ್ಲಿ ಮದ್ದಳೆಯು ಯಕ್ಷಗಾನದಿಂದ ಕಣ್ಮರೆಯಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದರು.

ಯಕ್ಷಗಾನದ ಹಿರಿಯ ಮದ್ದಲೆಗಾರ ಪದ್ಯಾಣ ಶಂಕರನಾರಾಯಣ ಭಟ್ ಇವರಿಗೆ 2015ನೇ ಸಾಲಿನ ‘ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಪತ್ನಿ ವನಜಾಕ್ಷಿ ಭಟ್ ಇವರನ್ನು ಗೌರವಿಸಲಾಯಿತು. ಎಂ.ಎಲ್. ಸಾಮಗ ಸಂಸ್ಮರಣಾ ಭಾಷಣ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಯಾಣ ಶಂಕರನಾರಾಯಣ ಭಟ್ “ನಾಲ್ಕು ದಶಕಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದ್ದು ಕಲೆಗೆ ತನ್ನದೇ ಆದ ಕೊಡುಗೆ ನೀಡಿದ್ದೇನೆ. ಈ ಪ್ರಶಸ್ತಿಯು ಕಲೆಗೆ ಸಂದ ಗೌರವವಾಗಿದೆ” ಎಂದರು.

ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ ಮಾತನಾಡಿ, “ಗಂಭೀರ ವ್ಯಕ್ತಿತ್ವ ಸೌಂದರ್ಯದ ಮೂರ್ತ ರೂಪದಂತಿರುವ ಪದ್ಯಾಣ ಶಂಕರನಾರಾಯಣ ಭಟ್ ಯಕ್ಷಗಾನದ ಸ್ಟಾರ್ ಕಲಾವಿದರು. ಹಿಮ್ಮೇಳ ಕಲಾದವಿರಿಗೆ ಇವರು ಮಾದರಿ ಮತ್ತು ಆದರ್ಶರಾಗಿದ್ದಾರೆ. ಚೆಂಡೆ ಯಕ್ಷಗಾನದ ಭಾಗವಾಗಿ ಬಂದಿದ್ದು ಇದರ ಬಳಕೆಯ ಕುರಿತು ಅಭ್ಯಾಸಿ ವಲಯದಲ್ಲಿ ಚರ್ಚೆಯಾಗಲಿ” ಎಂದರು.
ಶ್ರೀ ಕ್ಷೇತ್ರ ಕಟೀಲಿನ ಶ್ರೀ ಹರಿ ನಾರಾಯಣದಾಸ ಆಸ್ರಣ್ಣ ಅಧ್ಯಕ್ಷತೆ ವಹಿಸಿ, ಆಶೀರ್ವಚನ ನೀಡಿದರು. ಉದ್ಯಮಿ ಕೆ. ಶ್ರೀಪತಿ ಭಟ್ ಮಾತನಾಡಿದರು. ಡಿಜಿ ಯಕ್ಷ ಫೌಂಡೇಶನ್‌ನ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕ ಮಾತನಾಡಿದರು. ಮೈತ್ರಿ ಭಟ್ ಸನ್ಮಾನ ಪತ್ರ ವಾಚಿಸಿ, ಚೇತನ್ ಕತ್ತಲ್ ಸಾರ್ ವಂದಿಸಿ, ಸಾಯಿಸುಮ ನಾವಡ ಕಾರ್ಯಕ್ರಮ ನಿರ್ವಹಿಸಿದರು. ಬೆಳಿಗ್ಗೆ ಬೈಪಾಡಿತ್ತಾಯ ಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಲೀಲಾವತಿ ಬೈಪಾಡಿತ್ತಾಯರಿಗೆ ಯಕ್ಷಗಾನಾರ್ಚನೆ ನಡೆಯಿತು. ಸಂಜೆ ಶ್ರೀಶ ಕಲಿಕಾ ಕೇಂದ್ರ ತಲಕಳದ ಮಹಿಳಾ ಕಲಾವಿದೆಯರಿಂದ ‘ದಕ್ಷ ಯಜ್ಞ’ ಯಕ್ಷಗಾನ ಪ್ರದರ್ಶನಗೊಂಡಿತು.
