ಮೂಡುಬಿದಿರೆ : ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಸಮಿತಿ, ಬೈಪಾಡಿತ್ತಾಯರು ಸ್ಥಾಪಿಸಿರುವ ಡಿಜಿ ಯಕ್ಷ ಫೌಂಡೇಶನ್ (ರಿ.) ಬೆಂಗಳೂರು ಸಹಯೋಗದಲ್ಲಿ ಹಾಗೂ ಅವರ ಸಮಸ್ತ ಶಿಷ್ಯ ವೃಂದದವರ ಸಹಕಾರದಲ್ಲಿ ದಿನಾಂಕ 09 ಡಿಸೆಂಬರ್ 2025ರಂದು ಮೂಡುಬಿದಿರೆ ಆಲಂಗಾರು ಶ್ರೀ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಪ್ರಶಸ್ತಿ ಪ್ರದಾನ, ಯಕ್ಷ ನಾದೋತ್ಸವ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ.
ದಿ. ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯರ ಹೆಸರಿನಲ್ಲಿ ನೀಡಲಾಗುವ 2025ನೇ ಸಾಲಿನ ‘ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರ’ವನ್ನು ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ ಇವರಿಗೆ ಪ್ರದಾನ ಮಾಡಲಾಗುತ್ತದೆ. ಲೀಲಾವತಿ ಬೈಪಾಡಿತ್ತಾಯದ ಮೊದಲ ವರ್ಷದ ಸ್ಮರಣೆಯೂ ನಡೆಯಲಿದ್ದು, ಪ್ರಶಸ್ತಿಯು ರೂ.10,079/- ನಗದು, ಸ್ಮರಣಿಕೆ ಒಳಗೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹಿಮ್ಮೇಳ ವಾದಕರಾದ ಲಕ್ಷ್ಮೀಶ ಅಮ್ಮಣ್ಣಾಯ, ಪೆರುವಾಯಿ ನಾರಾಯಣ ಭಟ್, ಮಿಜಾರು ಮೋಹನ ಶೆಟ್ಟಿಗಾರ್‌ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ’ ಸಂದಿದೆ.
ಬೆಳಗ್ಗೆ 10-00 ಗಂಟೆಗೆ ಬೈಪಾಡಿತ್ತಾಯರ ಶಿಷ್ಯರು ಹಾಗೂ ಅತಿಥಿ ಕಲಾವಿದರು ಲೀಲಾವತಿ ಬೈಪಾಡಿತ್ತಾಯರಿಗೆ ಯಕ್ಷ ಗಾನಾರ್ಚನೆ ನಡೆಸಿಕೊಡಲಿದ್ದು, ಅಪರಾಹ್ನ ಗಂಟೆ 3-15ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ವಹಿಸಲಿದ್ದು, ವೇದಮೂರ್ತಿ ಈಶ್ವರ ಭಟ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಯಕ್ಷಗಾನದ ಹಿರಿಯ ವಿದ್ವಾಂಸರಾದ ಪ್ರೊ. ಎಂ.ಎಲ್. ಸಾಮಗ ಇವರು ಸಂಸ್ಮರಣಾ ನುಡಿಗಳನ್ನಾಡಲಿದ್ದು, ವಾಸುದೇವ ರಂಗಾಭಟ್ ಮಧೂರು ಇವರು ಪ್ರಶಸ್ತಿ ಪ್ರದಾನ ಮಾಡಿ ಪದ್ಯಾಣ ಶಂಕರನಾರಾಯಣ ಭಟ್ ಇವರನ್ನು ಅಭಿನಂದಿಸಲಿದ್ದಾರೆ. ಸಂಜೆ 5-00 ಗಂಟೆಗೆ ಅಬ್ಬರ ತಾಳ, ಬೈಪಾಡಿತ್ತಾಯ ಶಿಷ್ಯವೃಂದದಿಂದ ಚೆಂಡೆ ಜುಗಲ್ಬಂದಿ ಮತ್ತು ಬೈಪಾಡಿತ್ತಾಯರಿಗೆ ವಿಶೇಷ ಗೌರವದ ರೀತಿಯಲ್ಲಿ ಸಂಪೂರ್ಣ ಮಹಿಳೆಯರ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ‘ದಕ್ಷ ಯಜ್ಞ’ ಯಕ್ಷಗಾನವು ಶ್ರೀಶ ಕಲಿಕಾ ಕೇಂದ್ರ ತಲಕಳ ಇದರ ಕಲಾವಿದರಿಂದ ಜರಗಲಿದೆ.

