ಮಂಗಳೂರು : ಯಕ್ಷಗಾನದ ಗುರು ದಂಪತಿ – ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಹಾಗೂ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹೆಸರಿನಲ್ಲಿ ನೀಡಲಾಗುವ 2024ನೇ ಸಾಲಿನ ಪ್ರತಿಷ್ಠಿತ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಗುರು, ಮದ್ದಳೆಗಾರರಾಗಿರುವ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ.10,078/- ನಗದು, ಬಿನ್ನವತ್ತಳೆ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಬೈಪಾಡಿತ್ತಾಯರು ಸ್ಥಾಪಿಸಿರುವ ಡಿ.ಜಿ. ಯಕ್ಷ ಫೌಂಡೇಶನ್ (ರಿ) ಸಹಯೋಗದಲ್ಲಿ ಶಿಷ್ಯವೃಂದದವರು ಏರ್ಪಡಿಸಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಯಕ್ಷಕಲಾ ಪೊಳಲಿಯ ಸಂಪೂರ್ಣ ಸಹಕಾರದೊಂದಿಗೆ ದಿನಾಂಕ 13 ಅಕ್ಟೋಬರ್ 2024ರ ಭಾನುವಾರದಂದು ಮಧ್ಯಾಹ್ನ 2-00 ಗಂಟೆಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಡಿ.ಜಿ. ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ತಿಳಿಸಿರುತ್ತಾರೆ.
2021, 2022 ಹಾಗೂ 2023ರಲ್ಲಿ ಅನುಕ್ರಮವಾಗಿ ಯಕ್ಷಗಾನ ರಂಗದ ದಿಗ್ಗಜ ಹಿಮ್ಮೇಳವಾದಕರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀ ಪೆರುವಾಯಿ ನಾರಾಯಣ ಭಟ್ ಹಾಗೂ ಶ್ರೀ ಮಿಜಾರು ಮೋಹನ ಶೆಟ್ಟಿಗಾರ್ ಇವರುಗಳಿಗೆ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ’ ಸಂದಿದೆ. 4ನೇ ವರ್ಷದ ಕಾರ್ಯಕ್ರಮವು ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷವಾದುದು. ಇಬ್ಬರು ಶ್ರೇಷ್ಠ ಗುರುಗಳ ಸಂಗಮದ ಕಾರ್ಯಕ್ರಮವಿದು. ಬೈಪಾಡಿತ್ತಾಯರು ಮತ್ತು ಮಾಂಬಾಡಿಯವರ ಶಿಷ್ಯಂದಿರು ಇಂದು ಯಕ್ಷಗಾನ ರಂಗದಲ್ಲಿ ವಿಜೃಂಭಿಸುತ್ತಿದ್ದಾರೆ. ಬೈಪಾಡಿತ್ತಾಯರು ತಮ್ಮದೇ ಕಾಯಕದಲ್ಲಿ ನಿರತರಾಗಿರುವ ಮತ್ತೊಬ್ಬ ಗುರು ಮಾಂಬಾಡಿಯವರನ್ನು ಗೌರವಿಸುವುದು ಈ ಬಾರಿಯ ವಿಶೇಷವಾಗಿದ್ದು, ಈ ಮೂಲಕ ಪ್ರಶಸ್ತಿಯ ಪ್ರತಿಷ್ಠೆ ಹೆಚ್ಚಾಗಿದೆ.