ತೆಕ್ಕಟ್ಟೆ : ರಸರಂಗ (ರಿ.) ಕೋಟ ಸಂಸ್ಥೆಯ ಸಂಯೋಜನೆಯಲ್ಲಿ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇದರ ಸಹಕಾರದೊಂದಿಗೆ ‘ಸಿನ್ಸ್ -1999 ಶ್ವೇತಯಾನ-55’ ಸರಣಿ ಕಾರ್ಯಕ್ರಮದ ಅಂಗವಾಗಿ ‘ಶ್ರೀ ಕೃಷ್ಣ ದರ್ಶನ’ ವಿನೂತನ ಯಕ್ಷಗಾನ ಪ್ರಯೋಗವು 31 ಆಗಸ್ಟ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರಳ ಭಗವದ್ಗೀತೆ, ಸರಳ ರಾಮಾಯಣ ಮುಂತಾದ ಕೃತಿಗಳನ್ನು ರಚಿಸಿದ ಲೇಖಕಿ ಶ್ರೀಮತಿ ನರ್ಮದಾ ಎನ್. ಪ್ರಭು ತೆಕ್ಕಟ್ಟೆ ಮಾತನಾಡಿ “ಜಗದೊಳಿರುವ ಮನುಜರಿಗೆ ಕೃಷ್ಣ ಪ್ರಜ್ಞೆಯನ್ನು ಹಾಗೂ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿಕೊಂಡು ಬರುವಲ್ಲಿ ಸತತವಾಗಿ ಹೋರಾಟವನ್ನು ಮಾಡುತ್ತಾ ಬಂದಿರುವವರು ಯಕ್ಷಗಾನ ಕಲಾವಿದರು. ಪ್ರತೀ ಹಳ್ಳಿ ಹಳ್ಳಿಗಳ ದೇವಸ್ಥಾನಗಳಲ್ಲಿ ತಮ್ಮ ಯಕ್ಷಗಾನದ ಪ್ರದರ್ಶನಗಳನ್ನು ನೀಡುವ ಮೂಲಕ ಅನಕ್ಷರಸ್ಥರಲ್ಲೂ ಜ್ಞಾನವನ್ನು ಬೆಳೆಸುವ ಕಾರ್ಯ ಯಕ್ಷಗಾನ ಮಾಡಿದೆ. ಯಕ್ಷಗಾನದಂತಹ ಕಲೆಯ ಜೊತೆಜೊತೆಗೆ ಪುಸ್ತಕದ ಓದೂ ಮನುಷ್ಯನನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಉತ್ತಮ ಕಾರ್ಯಕ್ರಮವನ್ನು ನೀಡುತ್ತಿರುವ ರಸರಂಗ ಸಂಸ್ಥೆಗೆ ಶುಭವಾಗಲಿ.” ಎಂದರು.
ಇನ್ನೋರ್ವ ಅಭ್ಯಾಗತರಾದ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ರಸರಂಗವು ಬಹು ಕಾಲದಿಂದಲೂ ಇಂತಹ ವಿನೂತನವಾದ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ರಂಗಕರ್ಮಿಯಾದ ಸುಧಾ ಮಣೂರು ವಿಭಿನ್ನ ಕಾರ್ಯಕ್ರಮದಲ್ಲಿಯೇ ಮನ ಮಾಡುವವರು. ಇವರ ಕಾರ್ಯಕ್ರಮದಲ್ಲಿ ಹೊಸತನ ಅಡಗಿರುತ್ತದೆ.” ಎಂದರು.
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಕೋಟ ಸುದರ್ಶನ ಉರಾಳರು ದಿಮ್ಸಾಲ್ ಫಿಲ್ಮ್ಸ್ ಇದರ ಪ್ರಥಮ ಕಲಾಕಾಣಿಕೆಯ ಕಿರುಚಿತ್ರ “ಡಿ ಫಾರ್ ಡೈ”ಗೆ ಪಶ್ಚಿಮ ಬಂಗಾಳದ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಬಂದಿರುವ ನಾಲ್ಕು ಪ್ರಶಸ್ತಿಯನ್ನು ವಿಜಿತ್ ಹಾಗೂ ಅಗಮ್ಯ ಮತ್ತು ತಂಡಕ್ಕೆ ನೀಡಿ ಗೌರವಿಸಿದರು. ಶ್ರೀಮತಿ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿ, ಸುಮನ ಹೇರಳೆ ಕಾರ್ಯಕ್ರಮ ನಿರ್ವಹಿಸಿ, ಡಾ. ಸರಿತಾ ಉಪಾಧ್ಯಾಯ ಧನ್ಯವಾದ ಸಮರ್ಪಿಸಿದರು. ಬಳಿಕ ಸುಧಾ ಮಣೂರು ಇವರ ಪರಿಕಲ್ಪನೆಯ ಯಕ್ಷಗಾನ ‘ಶ್ರೀ ಕೃಷ್ಣ ದರ್ಶನ’ ರಸರಂಗದ ಕಲಾವಿದರಿಂದ ರಂಗ ಪ್ರಸ್ತುತಿಗೊಂಡಿತು.