ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು, ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 21-05-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾ ತಿಲಕ ನಾಟ್ಯಾಚಾರ್ಯ ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಮಂಗಳ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಮೋಹನ್ ಕುಮಾರ್ ಉಳ್ಳಾಲ್, ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದ್ವಾನ್ ಮುರಳೀಧರ ಆಚಾರ್ಯ ಉಪಸ್ಥಿತರಿದ್ದರು. ವಿದುಷಿ ಶಾರದಾಮಣಿ ತನ್ನ ಶಿಷ್ಯೆ ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕಿ ಭಾರತಿ ಸುರೇಶ್ ಅವರನ್ನು ಅಭಿನಂದಿಸಿ ಶುಭ ಕೋರುತ್ತಾ “ಕಲೆ ಒಂದು ಶಕ್ತಿ ಮತ್ತು ಧ್ಯಾನ ಇದ್ದ ಹಾಗೆ, ನಂಬಿದವರ ಕೈ ಬಿಡುವುದಿಲ್ಲ. ನಾವು ಕಲೆಯನ್ನು ಪ್ರೀತಿಸಿದರೆ ಸಮಾಜವೇ ನಮ್ಮನ್ನು ಪ್ರೀತಿಸುತ್ತದೆ” ಎಂದರು.
ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಮಾತನಾಡುತ್ತಾ “ಭರತನಾಟ್ಯ ಸನಾತನ ಕಲೆ, ಅದನ್ನು ಪ್ರೋತ್ಸಾಹಿಸಿ ಎಲ್ಲರೂ ಅದನ್ನು ಎತ್ತಿ ಹಿಡಿಯಬೇಕು. ನಟರಾಜನ ಆರಾಧನೆಯೊಂದಿಗೆ ಸಂಗೀತ ಮತ್ತು ನೃತ್ಯವನ್ನು ಅದರ ಸ್ಥಾನದಲ್ಲಿಯೇ ಇಟ್ಟು ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು” ಎಂದರು.
ವೇದಿಕೆಯಲ್ಲಿದ್ದ ನಾಟ್ಯಾಚಾರ್ಯ ಮೋಹನ್ ಕುಮಾರ್, ಅವರ ಶಿಷ್ಯೆ ವಿದುಷಿ ಶಾರದಾಮಣಿ ಮತ್ತು ಅವರ ಶಿಷ್ಯೆ ಭಾರತಿ ಸುರೇಶ್ ಇವರನ್ನು ನೋಡಿದ ವಿದ್ವಾನ್ ಶ್ರೀ ಮುರಳೀಧರ “ಈ ಗಟ್ಟಿಯಾದ ಗುರುಶಿಷ್ಯ ಪರಂಪರೆಗೆ ಹಲವು ಮಂದಿ ಹಿರಿಯ ಗುರುಗಳ ಕೊಡುಗೆ ಇದೆ ಎನ್ನುತ್ತಾ ವಿದ್ವಾನ್ ಎನ್.ಕೆ. ಸುಂದರಾಚಾರ್ಯ, ವಿದ್ವಾನ್ ವಿಠಲ್ ಮಾಸ್ಟರ್, ಮೋರ್ ಸಿಂಗ್ ದೇವರಾಜ್ ಇವರೆಲ್ಲರನ್ನೂ ಸ್ಮರಿಸಿ ಯಾವುದೇ ರಾಜಕೀಯವಿಲ್ಲದೆ ಸಂಗೀತ ಮತ್ತು ನೃತ್ಯ ಎಂಬ ಅಮೂಲ್ಯ ಕಲೆ ಜೊತೆ ಜೊತೆಯಾಗಿ ಮುಂದುವರಿಯಲಿ” ಎಂದು ಹಾರೈಸಿದರು. ಬೆಂಗಳೂರಿನಿಂದ ಬಂದ ವಿದುಷಿ ಭಾರತಿ ಸುರೇಶ್ ಅವರ ಸಂಬಂಧಿ ಶ್ರೀಮತಿ ನಂದಾ ಮಾತನಾಡಿ “ಪವಿತ್ರವಾದ ಈ ಭರತನಾಟ್ಯ ಕಲೆ ಇಲ್ಲಿ ಪವಿತ್ರವಾಗಿ ಉಳಿದಿದೆ. ಇಂದಿನ ನೃತ್ಯ ಕಾರ್ಯಕ್ರಮವನ್ನು ನೋಡಿ ಒಂದು ದಿವ್ಯ ಅನುಭವವಾಯಿತು. ಇತರ ಹೆಚ್ಚಿನ ಕಡೆಗಳಲ್ಲಿ ಈ ಕಲೆ ಒಂದು ವ್ಯವಹಾರವಾಗುತ್ತಾ ಹೋಗುತ್ತಿರುವುದು ಖೇದಕರವಾಗಿದೆ.” ಎಂದು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.
ಗಣಪತಿ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮ ನಾಟ್ಯದ ಅಧಿದೇವನಾದ ನಟರಾಜನಿಗೆ, ರಂಗ ದೇವತೆಗಳಿಗೆ, ದಿಕ್ಪಾಲಕರಿಗೆ ಹಾಗೂ ಗುರುಗಳಿಗೆ ನಮಿಸುತ್ತಲೇ ಪುಷ್ಪಾಂಜಲಿ ನೃತ್ಯದ ಮೂಲಕ ಪುಷ್ಪಗಳನ್ನು ಅರ್ಪಿಸಿದ ನಂತರ ಭಗವಂತನಿಗೆ ತನ್ನನ್ನು ತಾನೇ ಹೂವಾಗಿ ಅರ್ಪಿಸುವಂತಹ ಅಲರಿಪು ಹಾಗೂ ಪಂಚ ರಾಗಮಾಲಿಕೆಯ ಪದವರ್ಣ ಪ್ರಸ್ತುತಿಯ ಅದ್ಬುತ ಪ್ರದರ್ಶನದ ನಂತರ ಸಭಾ ಕಾರ್ಯಕ್ರಮ ನಡೆಯಿತು. ನೃತ್ಯ ಕಾರ್ಯಕ್ರಮ ಮುಂದುವರೆದು ತಿಲ್ಲಾನದೊಂದಿಗೆ ಮುಕ್ತಾಯಗೊಂಡಿತು. ಹಾಡುಗಾರಿಕೆಯಲ್ಲಿ ಸಹಕರಿಸಿದ ವಿದುಷಿ ಶ್ರೀಮತಿ ಅಪರ್ಣಾ ಶರ್ಮ ಪಾಂಡಿಚೇರಿ, ಮೃದಂಗದಲ್ಲಿ ಬಾಲಚಂದ್ರ ಭಾಗವತ, ಕೊಳಲು ವಿದ್ವಾನ್ ಶ್ರೀ ಮುರಳೀಧರ ಆಚಾರ್ಯ, ಪಿಟೀಲು ಶ್ರೀ ವಿದ್ವಾನ್ ಶ್ರೀಧರ ಅಚಾರ್ ಮತ್ತು ಸುಂದರವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದ ಶ್ರೀ ದಾಮೋದರ ಶರ್ಮ ಇವರೆಲ್ಲರನ್ನೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.