ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಮತ್ತು ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 09 ನವೆಂಬರ್ 2024ರಂದು ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಜರಗಿತು.
ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ “ಬಸವಾದಿ ಶಿವಶರಣರ ಆಶಯದಂತೆ ಪ್ರತಿಯೊಬ್ಬರೂ ಅರಿವು-ಆಚಾರವನ್ನು ಒಂದಾಗಿಸಿಕೊಂಡರೆ ಶರಣರಾಗಬಹುದು. ಸಂಕಮ್ಮ, ಕಕ್ಕಯ್ಯ, ಚೌಡಯ್ಯ, ಚೆನ್ನಯ್ಯ ಮೊದಲಾದ ಸಾಮಾನ್ಯರೂ ಕೂಡ ಶರಣರಾಗಿರುವುದು ನಮಗೆ ಪ್ರೇರಣೆ ನೀಡಬೇಕು. ಸಜ್ಜನರ ಸಂಗ ಹೆಚ್ಚಾದಂತೆ ನಾವೂ ಸಜ್ಜನರಾಗುತ್ತೇವೆ. ಬಸವಣ್ಣನವರ ಆಶಯಗಳನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು. ಶಿವಕುಮಾರ ಪ್ರಶಸ್ತಿ ಪಡೆದ ಮಹಂತೇಶ್ ಗಜೇಂದ್ರಗಡ ಇವರ ರಂಗಕಾರ್ಯ ಅನನ್ಯವಾದುದು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಅನೇಕರ ಸಹಾಯ, ಸಹಕಾರವಿದೆ. ಅವರಿಗೆಲ್ಲರಿಗೂ ಕೃತಜ್ಞತೆಗಳು” ಎಂದರು.
ಪ್ರಾಸ್ತಾವಿಕವಾಗಿ ಮತ್ತು ಶಿವಕುಮಾರ ಪ್ರಶಸ್ತಿ ಪುರಸ್ಕೃತರ ಕುರಿತು ಬೆಂಗಳೂರಿನ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿ “ಕಳೆದ ಹದಿನೈದು ದಿನಗಳ ಹಿಂದೆ ಬೆನ್ನುಹುರಿಯ ಮೇಜರ್ ಆಪರೇಶಷನ್ ಮಾಡಿಸಿಕೊಂಡಿದ್ದೇನೆ. ವೈದ್ಯರು ಮನೆಬಿಟ್ಟು ಹೊರಹೋಗಬೇಡಿ ಎಂದು ಹೇಳಿದ್ದಾರೆ. ಆದರೂ ಪೂಜ್ಯರ ಆದೇಶ ಮತ್ತು ಆಶೀರ್ವಾದದಿಂದ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಈ ವರ್ಷದ ಶಿವಕುಮಾರ ಪ್ರಶಸ್ತಿ ಪುರಸ್ಕೃತರಾದ ಮಹಂತೇಶ್ ಗಜೇಂದ್ರಗಡ ಕನ್ನಡ ರಂಗಭೂಮಿಯ ಪುಣ್ಯಕೋಟಿ ಇದ್ದಂತೆ. ನಿಸ್ಪೃಹತೆಯಿಂದ, ಯಾವ ಪ್ರತಿಫಲಾಕಾಕ್ಷೆಯಿಲ್ಲದೆ, ಹೆಸರಿಗೆ ಹಪಾಹಪಿಸದೆ ಕೆಲಸ ಮಾಡುವವರು. ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಮಿಗಳೆರಡರ ಸಮನ್ವಯ ಸಾಧಿಸಿದವರು. ಇಲಕಲ್ನಲ್ಲಿ ಸುಸಜ್ಜಿತವಾದ ರಂಗಮಂದಿರ ಕಟ್ಟಿದ್ದಾರೆ. ರಂಗಕರ್ಮಿಗಳಿಗೆ ಆದರ್ಶವಾದವರು. ಶರಣ ಪರಂಪರೆಯಲ್ಲಿ ಬೆಳೆದ ಮಹಂತೇಶ್ ಶರಣ ತತ್ವ ಮತ್ತು ರಂಗಭೂಮಿಗಳೆರಡನ್ನು ಕಾಯಕ ಪ್ರಜ್ಞೆಯಿಂದ ನಡೆಸಿಕೊಂಡು ಬರುತ್ತಿರುವವರು. ಕರ್ನಾಟಕ ಸರಕಾರ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಪ್ರಕಟಿಸಿದೆ. ಆದರೆ ಬಸವಣ್ಣವನವರನ್ನು ಎಷ್ಟರ ಮಟ್ಟಿಗೆ ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ಪೂಜ್ಯರು ಕಳೆದ ವರ್ಷ ಬಸವಣ್ಣನವರ 40 ವಚನಗಳನ್ನು `ತುಮ್ಹಾರೆ ಸಿವಾ ಔರ್ ಕೋಯಿ ನಹೀ ಹೈ’ ಎನ್ನುವ ವಚನ ನೃತ್ಯದ ಮೂಲಕ ಭಾರತದಾದ್ಯಂತ ಪ್ರದರ್ಶನ ನೀಡಿದ್ದು ಮತ್ತು ಇಡೀ ನಾಟಕೋತ್ಸವದ ಮೂಲಕ ಬಸವಣ್ಣರವರನ್ನು ಸಾಂಸ್ಕೃತಿಕ ನಾಯಕ ಎಂದು ಬಿಂಬಿಸುವ ಕಾರ್ಯ ಮಾಡುತ್ತಿರುವುದು ನಿಜವಾದ ಬಸವಣ್ಣ ಮೆಚ್ಚುವ ಕಾರ್ಯ” ಎಂದರು.
ಈ ಬಾರಿಯ ಶಿವಕುಮಾರ ಪ್ರಶಸ್ತಿ ಸ್ವೀಕರಿಸಿದ ಇಲಕಲ್ನ ಖ್ಯಾತ ರಂಗಕರ್ಮಿ ಮಹಾಂತೇಶ್ ಎಂ. ಗಜೇಂದ್ರಗಡ ಮಾತನಾಡಿ “ನಾನು ಯಾವುದೇ ಪ್ರಶಸ್ತಿ ಪುರಸ್ಕಾರದ ಹಿಂದೆ ಹೋದವನಲ್ಲ. ನನ್ನ ತಂದೆ-ತಾಯಿಗಳ ಆಶೀರ್ವಾದದಿಂದ ಈ ಪ್ರಶಸ್ತಿ ದೊರೆತಿದೆ ಎಂದು ಭಾವಿಸುವೆ. ನಮ್ಮ ಮನೆಯಲ್ಲಿ ಯಾರೂ ಕಲಾವಿದರು ಇಲ್ಲ. ಆದರೆ ಕಲಾವಿದರು ಯಾರೇ ಬಂದರು ನಮ್ಮ ಮನೆಯಲ್ಲಿ ದಾಸೋಹ ನಡೆಯುತ್ತಿತ್ತು. ಇದೇ ಪರಂಪರೆ ನನ್ನಲ್ಲಿ ಮೈಗೂಡಿದೆ. ಕಪ್ಪಣ್ಣನಂಥವರು ನನಗೆ ಸಂಘಟನಾ ಚಾತುರ್ಯವನ್ನು ಕಲಿಸಿಕೊಟ್ಟರು. ನಾಟಕದಗೀಳು ನನಗೆ ಬಾಲ್ಯದಲ್ಲೇ ಬಂತು. ಬಾಲಕನಾಗಿದ್ದಾಗಲೇ ನಾಟಕದಲ್ಲಿ ಅಭಿನಯಿಸುತ್ತಿದ್ದೆ. ಮುಂದೆ ರಂಗಭೂಮಿಯಿಂದ ಕಲಿತಿರುವಂತೆ, ಆನಂದ ಹೊಂದಿರುವಂತೆ ತೊಂದರೆಯನ್ನು, ನೋವನ್ನೂ ಉಂಡಿದ್ದೇನೆ. ನನ್ನ ಅಕ್ಕ ಸರೋಜಕ್ಕನಿಗೆ ಈ ಪ್ರಶಸ್ತಿ ಅರ್ಪಣೆ. ಮುಂದೆ ನನಗೆ ಮಾತನಾಡಲಾಗುತ್ತಿಲ್ಲ” ಎಂದು ಭಾವುಕರಾಗಿ ಮಾತನ್ನು ಮುಗಿಸಿದರು.
ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಮಾತನಾಡಿ “ಅತ್ಯಂತ ಸಂತೋಷದಿಂದ ಈ ನಾಟಕೋತ್ಸವದಲ್ಲಿ ನಾನು ಭಾಗವಹಿಸಿದ್ದೇನೆ. ರಂಗಭೂಮಿಗೂ ವಿಜಾಪುರ ಜಿಲ್ಲೆಗೂ ಸಾವಿರ ವರ್ಷದ ನಂಟಿದೆ. ಧುತ್ತರಿಗಿ, ಅರಿಷನಗೋಡಿ, ಸನಾದಿ ಅಪ್ಪಣ್ಣ ಮೊದಲಾದವರು ನಮ್ಮ ಜಿಲ್ಲೆಯವರೇ ಎನ್ನುವುದು ನನಗೆ ಬಹಳ ಹೆಮ್ಮೆಯ ವಿಷಯ. ಪ್ರಾಚೀನ ಕಾಲದಲಿ ಆಶ್ರಮಗಳು ಬ್ರಹ್ಮಜ್ಞಾನ ಪಡೆಯಲು ಮಾತ್ರ ಇದ್ದವು. 12ನೆಯ ಶತಮಾನದ ನಂತರ ಸ್ಥಾಪನೆಯಾದ ಅನೇಕ ಮಠಗಳು ಬಸವಾದಿ ಶರಣರ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನದಲ್ಲಿ ಸ್ಥಾಪಿತವಾದವು. ಅವುಗಳಲ್ಲಿ ಸಿರಿಗೆರೆ ಮಠಕ್ಕೆ ಅಗ್ರಸ್ಥಾನವಿದೆ. ಬಸವ ತತ್ವವನ್ನು ಅನುಷ್ಠಾನಗೊಳಿಸಲು, ಸಾಮಾಜಿಕ ನ್ಯಾಯಕ್ಕಾಗಿ ಶಾಲೆ, ಕಾಲೇಜು, ಹಾಸ್ಟೆಲ್ಗಳನ್ನು ಶಿವಕುಮಾರ ಶ್ರೀಗಳು ಪ್ರಾರಂಭಿಸಿದರು. ಅಸ್ಪೃಶ್ಯರಿಗೆ ಅಕ್ಷರ, ಅನ್ನ ದಾಸೋಹ ನೀಡಿದ ಮೊದಲ ಮಠ ಸಿರಿಗೆರೆಮಠ. ಈ ವೇದಿಕೆ, ಪಂಡಿತಾರಾಧ್ಯ ಶ್ರೀಗಳು 12ನೆಯ ಶತಮಾನದ ಅನುಭವ ಮಂಟಪವನ್ನು ನೆನೆಪಿಸುತ್ತದೆ. ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭುಗಳು ಮಾಡಿದಂತಹ ಕಾರ್ಯವನ್ನು ಪಂಡಿತಾರಾಧ್ಯ ಶ್ರೀಗಳು ಇಲ್ಲಿ ಮಾಡುತ್ತಿದ್ದಾರೆ. ಅಲ್ಲಮರ ‘ಮಹಾ ಘನವೇ ತಾನಾದ ಬಳಿಕ ಪುಣ್ಯವಿಲ್ಲ-ಪಾಪವಿಲ್ಲ’ ಎನ್ನುವಂತೆ ಶಿವನ ಸ್ವರೂಪದಲ್ಲಿ ಪಂಡಿತಾರಾಧ್ಯಿ ಶ್ರೀಗಳು ಅದ್ಭುತವಾದ ಕಾರ್ಯ ಮಾಡುತ್ತಿದ್ದಾರೆ. ಬಸವಣ್ಣನವರು ಬಯಸಿದ ವರ್ಗರಹಿತ ಸಮಾಜ ನಿರ್ಮಾಣ ಮಾಡಲಿಕ್ಕೆ ಪೂಜ್ಯರು ಕಂಕಣಬದ್ಧರಾಗಿದ್ದಾರೆ. ಭೂಮಿಯ ಮೇಲೆ ಮನುಷ್ಯರು ಇರುವವರೆಗೂ ಸಿರಿಗೆರೆಮಠ ಇರುತ್ತದೆ. ಪೂಜ್ಯ ಗುರುಗಳ ಮತ್ತು ಈ ಜಿಲ್ಲೆಯ ಮತದಾರರ ಆಶೀರ್ವಾದದಿಂದ ನಾನು ಚಿತ್ರದುರ್ಗದ ಲೋಕಸಭಾ ಸದಸ್ಯನಾಗಿದ್ದಾನೆ” ಎಂದರು.
ಚಿತ್ರದುರ್ಗದ ಶಾಸಕರಾದ ವೀರೇಂದ್ರ ಪಪ್ಪಿ ಮಾತನಾಡಿ “ಪಂಡಿತಾರಾಧ್ಯ ಶ್ರೀಗಳ ತಮ್ಮ ವಚನದಲ್ಲಿ `ಸತ್ಯವಂತರು ಯಾವಾಗಲೂ ಒಳಿತನ್ನೇ ಬಯಸುತ್ತಾರೆ. ಅಸತ್ಯವಂತರು ಅಹಿತವನ್ನೇ ಬಯಸುತ್ತಾರೆ. ಸತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಶುದ್ಧ ಸಮಾಜ ನಿರ್ಮಾಣವಾಗುತ್ತದೆ’ ಎಂದು ಹೇಳಿದ್ದಾರೆ. ಇಂದು ಧಾರ್ಮಿಕ ಕಾರ್ಯ, ಶೈಕ್ಷಣಿಕ, ದಾಸೋಹದಲ್ಲಿ ಬೇಕಾದಷ್ಟು ಮಠಗಳಿವೆ. ಆದರೆ ರಂಗಭೂಮಿಯ ಕಾಯಕ ಮಾಡುತ್ತಿರುವುದು ಸಾಣೇಹಳ್ಳಿಯ ಶ್ರೀಮಠ ಮಾತ್ರ. ಮುಂದಿನ ದಿನಗಳಲ್ಲಿ ಇದೇ ರೀತಿ ನಾಟಕೋತ್ಸವ ನಡೆಯಲಿ. ಇದಕ್ಕೆ ನನ್ನ ಸಂಪೂರ್ಣ ಸಹಾಕಾರ ಖಂಡಿತಾ ಇರುತ್ತದೆ. ಪೂಜ್ಯರ ಶಿಸ್ತು, ದೂರದೃಷ್ಟಿ, ಅಶೀರ್ವಾದದ ಫಲವಾಗಿ ನಾನು ಶಾಸಕನಾಗಿದ್ದೇನೆ” ಎಂದರು.
ಶಿವಮೊಗ್ಗದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡರು ಮಾತನಾಡಿ “ನಾಳೆಯಿಂದ ಇಲ್ಲಿ ಯಾವ ಕಾರ್ಯಕ್ರಮ ಇರುವುದಿಲ್ಲ ಎನ್ನುವುದು ಬಹಳ ಜನರಿಗೆ ನಿರಾಶೆಯುಂಟು ಮಾಡುತ್ತದೆ. ಅಷ್ಟರ ಮಟ್ಟಿಗೆ ನಮ್ಮನ್ನೆಲ್ಲ ನಾಟಕೋತ್ಸವದ ಕಾರ್ಯಕ್ರಮಗಳು ಆವರಿಸಿವೆ. ರಂಗಭೂಮಿಯನ್ನು ವೇದಿಕೆ ಮಾಡಿಕೊಂಡು ಪೂಜ್ಯರು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಶಿವಸಂಚಾರ ಇದರುವರೆಗೂ 81 ನಾಟಕಗಳು 3600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿರುವುದು ಒಂದು ದಾಖಲೆ. ಹಿಂದಿ ಭಾಷೆಯಲ್ಲಿ ಬಸವ ತತ್ವ ಪ್ರಚಾರ ಮಾಡುವುದಕ್ಕೋಸ್ಕರ ದೇಶವನ್ನು ಸುತ್ತುವ ಅನೇಕ ಪ್ರಯತ್ನಗಳನ್ನು ಮಾಡಿ ಅದರಲ್ಲಿ ಪೂಜ್ಯರು ಯಶಸ್ವಿಯಾಗಿದ್ದಾರೆ. ಎಲ್ಲಿ ಶರಣ ಚಿಂತನೆಗಳಿಲ್ಲವೋ ಅಲ್ಲಿಯೂ `ಮತ್ತೆ ಕಲ್ಯಾಣ’ದ ಮೂಲಕ ಶರಣತತ್ವ ಪ್ರಚಾರ ಮಾಡುತ್ತಿರುವುದು ಸಮಾಜದ ಹೆಮ್ಮೆ. ಪೂಜ್ಯರವು ವಿಶಿಷ್ಟವಾದ ಆಲೋಚನೆಗಳು. ಇವು ನಮ್ಮನ್ನೆಲ್ಲ ಚಕಿತಗೊಳಿಸುತ್ತವೆ” ಎಂದರು.
ಆದಿಜಾಂಬವ ನಿಗಮ ಮಂಡಲಿಯ ಅಧ್ಯಕ್ಷರಾದ ಚಿತ್ರದುರ್ಗದ ಜಿ.ಎಸ್. ಮಂಜುನಾಥ್ ಮಾತನಾಡಿ “ನಾನು ಕಳೆದ 24 ವರ್ಷಗಳಿಂದ ನಾಟಕೋತ್ಸವಕ್ಕೆ ಬರುತ್ತಿದ್ದೇನೆ. ಚಿತ್ರದುರ್ಗದ ಭಾಗದಲ್ಲಿ ಎಲ್ಲಿಯೇ ಶಿವಸಂಚಾರದ ನಾಟಕಗಳು ಪ್ರದರ್ಶನಗೊಂಡರೂ ಅದರ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಲೋಕಸಭಾ ಸದಸ್ಯರು ಮತ್ತು ಶಿವಕುಮಾರ ಪ್ರಶಸ್ತಿಗಳೆರಡನ್ನೂ ಗದಗ ಜಿಲ್ಲೆಯವರೇ ಪಡೆದುಕೊಂಡಿದ್ದಾರೆ. ಇದು ನಮ್ಮ ಜಿಲ್ಲೆಯ ಹೃದಯ ವೈಶಾಲ್ಯತೆ. ಪಕ್ಷಗಳ, ವ್ಯಕ್ತಿಗಳ ತಾರತಮ್ಯವಿಲ್ಲದೆ ಹೇಳಬೇಕಾದ ಮಾತುಗಳನ್ನು ಯಾರಿಗೂ ಅಂಜದೆ, ಅಳುಕದೆ ಗಟ್ಟಿ ಧ್ವನಿಯಲ್ಲಿ, ಸ್ಪಷ್ಟವಾಗಿ ಮಾತನಾಡುವ ಏಕೈಕ ಸ್ವಾಮಿಗಳು ಪಂಡಿತಾರಾಧ್ಯ ಶ್ರೀಗಳು. ಈ ಕಾರಣಕ್ಕಾಗಿಯೇ ಸಾವಿರಾರು ಅನುಯಾಯಿಗಳು ಅವರ ಹಿಂದೆ ಇದ್ದಾರೆ. ಪೂಜ್ಯರ ತಾಯ್ತನ ನಮ್ಮನ್ನು ಬಹುದೂರದಿಂದ ಎಳೆದುಕೊಂಡು ಬಂದಿದೆ. ಇದೇ ರೀತಿ ಮುಂದುವರೆದುಕೊಂಡು ಹೋಗಲಿ” ಎಂದರು.
ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ್ ಮಾತನಾಡಿ “ಬಸವಾದಿ ಶಿವಶರಣರು, ಸಾಧು-ಸಂತರು ಎಷ್ಟೇ ಹಿತೋಪದೇಶ ನೀಡಿದರೂ ಇನ್ನೂ ಸಮಾಜದಲ್ಲಿ ಜಾತಿ, ಧರ್ಮ, ಮತಗಳ ಪ್ರತಿಷ್ಠೆಗಳು ಪರಾಕಷ್ಠೆ ತಲುಪಿವೆ. ಇಂಥ ಸಂದರ್ಭದಲ್ಲಿ ಕಲೆಯ ಮೂಲಕ ಸಾಮರಸ್ಯ ಮೂಡಿಸುವ ಪಂಡಿತಾರಾಧ್ಯ ಶ್ರೀ ಗಳ ಪ್ರಯತ್ನ ಶ್ಲಾಘನೀಯವಾದುದು” ಎಂದರು. ಸಾಂದರ್ಭಿಕವಾಗಿ ಹಾಸ್ಯಮಯ ಘಟನೆಗಳನ್ನು, ಹಾಡುಗಳನ್ನು ಹಾಡಿದರು.
ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್ ಮಾತನಾಡಿ “ನಾನು ಉದ್ಘಾಟನೆ ಮತ್ತು ಸಮಾರೋಪ ಎರಡೂ ಸಂದರ್ಭದಲ್ಲಿ ಭಾಗವಹಿಸಿದ್ದೇನೆ. ಇದು ನನ್ನ ಪುಣ್ಯ ವಿಶೇಷ. ಪೂಜ್ಯರ ಆದೇಶಕ್ಕೆ ಎಂದೂ ವ್ಯತಿರಿಕ್ತವಾಗಿ ನಡೆಯುವವನಲ್ಲ. ಈ ಕಾರಣಕ್ಕಾಗಿ ನಾನು ಅನಿರೀಕ್ಷಿತವಾಗಿ ಬಂದಿದ್ದೇನೆ. ನಾಟಕೋತ್ಸವದ ಧ್ಯೇಯ ವಾಕ್ಯ; ನಮ್ಮ ನಡೆ ಸರ್ವೋದಯದೆಡೆಗೆ’ ಎಂದಿದೆ. ಇದರ ಅರ್ಥ ಎಲ್ಲರ ಹಿತದಲ್ಲಿಯೇ ನಮ್ಮ ಹಿತ ಅಡಗಿದೆ ಎನ್ನುವಂಥದ್ದು. ಸಾಮಾಜಿಕವಾಗಿ, ಆರ್ಥಿಕವಾಗಿ, ಸರ್ವರಿಗೂ, ಸಮಬಾಳು, ಸಮಪಾಲು ಎನ್ನುವ ಚಿಂತನೆಯ ಹಿನ್ನೆಲೆಯಲ್ಲಿಯೇ ಗಾಂಧೀಜಿ ಸ್ವತಂತ್ರಕ್ಕಾಗಿ ಹೋರಾಡಿದರು. ಅನೇಕ ಕಲಾಪ್ರತಿಭೆಗಳನ್ನು ಪೂಜ್ಯರು ನಾಡಿಗೆ ಪರಿಚಯಿಸುತ್ತಿದ್ದಾರೆ. ರಂಗಜಂಗಮ ಎಂದು ಖ್ಯಾತರಾಗಿ ತಮ್ಮ ಇಡೀ ಬದುಕನ್ನು ನಾಡಿನ ಹಿತಕ್ಕಾಗಿಯೇ ಮುಡಿಪಾಗಿಟ್ಟಿರುವುದು ನಾಡಿನ ಭಾಗ್ಯ” ಎಂದರು.
ಆರಂಭದಲ್ಲಿ ಸಾಣೇಹಳ್ಳಿಯ ಅಕ್ಕನ ಬಳಗ ಮತ್ತು ಶಿವಸಂಚಾರದ ತಂಡದವರು ವಚನಗೀತೆಗಳನ್ನು, ಕನ್ನಡಗೀತೆಗಳನ್ನು, ಭಾವಗೀತೆ, ಜನಪದಗೀತೆಗಳನ್ನು ಹಾಡಿದರು. ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಕರ್ಷಕ ವಚನ ನೃತ್ಯರೂಪಕ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಲ್ಲಗಂಭ ಪ್ರದರ್ಶನ ನೀಡಿದರು. ನಾಟಕೋತ್ಸವದ ದಾಸೋಹಿಗಳನ್ನು, ನಾಟಕದ ಲೇಖಕರು, ನಿರ್ದೇಶಕರನ್ನು ಗೌರವಿಸಲಾಯಿತು. ಸಾಣೇಹಳ್ಳಿಯ ಸಾ.ನಿ. ರವಿಕುಮಾರ್ ಸ್ವಾಗತಿಸಿದರೆ, ಮುಖ್ಯೋಪಾಧ್ಯಾಯರಾದ ಕೆ.ಆರ್. ಬಸವರಾಜ್ ಕಾರ್ಯಕ್ರಮ ನಡೆಸಿಕೊಟ್ಟು, ವಂದಿಸಿದರು. ಸಮಾರಂಭದ ನಂತರ ಶಿವಸಂಚಾರ ತಂಡ ಶ್ರೀ ಪಂಡಿತಾರಾಧ್ಯ ಶ್ರೀಗಳ ‘ಕೋಳೂರು ಕೊಡಗೂಸು’ ನಾಟಕ ಪ್ರದರ್ಶನಗೊಂಡಿತು.