ಕುಮಟಾ : ಕುಮಟಾ ತಾಲೂಕಿನ ಬರ್ಗಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿ ದಿನಾಂಕ 12 ಏಪ್ರಿಲ್ 2025ರಂದು ಆಯೋಜನೆಗೊಂಡ ‘ಹನುಮ ಜಯಂತಿ’ಯಲ್ಲಿ ಸಾಧಕದ್ವಯರಿಗೆ ಶ್ರೀ ವೀರಾಂಜನೇಯ ಪುರಸ್ಕಾರ – 2025ನ್ನು ಪ್ರದಾನ ಮಾಡಲಾಯಿತು. ವೃತ್ತಿಯಲ್ಲಿ ಅಧ್ಯಾಪಕರಾದರೂ ಪ್ರವೃತ್ತಿಯಿಂದ ಯಕ್ಷಗಾನ ರಂಗಭೂಮಿಯಲ್ಲಿ ಸರಿಸುಮಾರು ಆರು ದಶಕಗಳಿಗೂ ಮಿಕ್ಕಿ ದೀರ್ಘಕಾಲಿಕವಾಗಿ ಭಾಗವತರಾಗಿ, ಕಲಾವಿದರಾಗಿ, ಗುರುವಾಗಿ ಬಾಳಿಕೆಯಾಗಿದ್ದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಅಡಿಗೋಣ ಬೀರಣ್ಣ ಮಾಸ್ತರರಿಗೆ ‘ಕಲಾ ಸಿಂಧು’ ಉಪಾದಿಯನ್ನಿತ್ತು ಗೌರವಿಸಲಾಯಿತು.
ತನ್ನ ಅಪೂರ್ವವಾದ ಮೇಧಾ ಶಕ್ತಿಯಿಂದ, ಜನ್ಮಜಾತವಾದ ಪ್ರತಿಭೆಯಿಂದ ಹಾಗೂ ವಿಶೇಷವಾದ ಅಭ್ಯಾಸಬಲದಿಂದ ವಯೋಮಾನಕ್ಕೆ ಮಿಗಿಲಾದ ಸಾಧನೆಯ ಮೂಲಕವಾಗಿ ವಿಶ್ವಮನ್ನಣೆಗೆ ಪಾತ್ರರಾದ ಏಳರ ಹರೆಯದ ಕನ್ನಡದ ಕುವರಿ ಹಿತ್ತಲಮಕ್ಕಿಯ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿನಿಯಾದ ಆರಾಧ್ಯ ತಿಮ್ಮಣ್ಣ ನಾಯಕರವರಿಗೆ ‘ಅಭಿನವ ಭಾರತಿ’ ಉಪಾದಿಯೊಂದಿಗೆ ನಗದು ಸಹಿತವಾಗಿ ‘ಶ್ರೀ ವೀರಾಂಜನೇಯ ಪುರಸ್ಕಾರ’ವನ್ನಿತ್ತು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ವಿಜೇತಳಾದ ಬರ್ಗಿಯ ಸ್ನೇಹಾ ಬಾಲಕೃಷ್ಣ ಗಾಂವಕರರವರಿಗೆ ಪ್ರೋತ್ಸಾಹಕ ನಿಧಿಯೊಂದಿಗೆ ಸನ್ಮಾನಿಸಲಾಯಿತು.
ಪುರಸ್ಕಾರಕ್ಕೆ ಭಾಜನರಾದ ಹಿರಿಯ ಯಕ್ಷನಟ ಬೀರಣ್ಣ ಮಾಸ್ತರ್ ಅಡಿಗೋಣರವರು ಮಾತನ್ನಾಡಿ, “85ರ ಇಳಿ ಹರೆಯದ ತಾನು ನೂರಾರು ಸಂಮಾನಗಳನ್ನು ಕಂಡಿದ್ದರೂ, ಸಾಂಸ್ಕೃತಿಕ ಪ್ರಜ್ಞೆಯ ಜಾಗೃತ ನೆಲವಾದ ಬರ್ಗಿಯಲ್ಲಿ ಪುರಸ್ಕರಿಸಿರುವುದು ಧನ್ಯತೆಯನ್ನು ತಂದಿದೆ. ಹಿರಿಯನಾದ ತನ್ನೊಂದಿಗೆ ಬಾಳಿ ಬೆಳಗಬೇಕಾದ ಕಿರಿಯಳಾಗಿರುವ ವಿಶ್ವಮಾನ್ಯಳಾದ ಆರಾಧ್ಯಗಳನ್ನು ಮಾನಿಸಿರುವುದು ಶ್ಲಾಘನೀಯ” ಎಂದರು.
ಪುರಸ್ಕಾರ ಪ್ರದಾನಗೈದ ವಿಶ್ವ ನಾಡವರ ಪ್ರತಿಷ್ಠಾನದ ವಿಶ್ವಾಧ್ಯಕ್ಷರಾದ ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಷಯದ ಪತ್ರಾಂಕಿತ ಉಪನ್ಯಾಸಕರಾದ ಹರೀಶ ನಾಯಕ ಬೇಲೇಕೆರಿಯವರು ಮಾತನ್ನಾಡುತ್ತಾ “ಅರ್ಧಶತಮಾನಕ್ಕೂ ಮಿಕ್ಕಿ ಯಕ್ಷ ರಂಗದಲ್ಲಿ ವಿಜೃಂಭಿಸಿದ ಬಾಳಸಂಜೆಯಲ್ಲಿರುವ ಆಡಿಗೋಣದ ಬೀರಣ್ಣ ಮಾಸ್ತರರಿಗೆ ಸಂದ ಗೌರವವು ಸಕಾಲಿಕವಾದುದು. ಕಲ್ಪನಾತೀತವಾದ ಸಾಧನೆಯ ಮೂಲಕವಾಗಿ ಜಾಗತಿಕ ಹೊತ್ತಿಗೆಗಳಲ್ಲಿ ದಾಖಲಾಗಿರುವ ಎಳೆಯ ಕಂದಮ್ಮಳಾದ ಆರಾಧ್ಯ ತಿಮ್ಮಣ್ಣ ನಾಯಕರವರನ್ನು ಶ್ರೀ ಹನುಮ ಜಯಂತಿಯ ಪರ್ವಕಾಲದಲ್ಲಿ ಶ್ರೀ ವೀರಾಂಜನೇಯ ಪುರಸ್ಕಾರದೊಂದಿಗೆ ಮಾನಿಸಿರುವುದು ಆಕೆಯ ಉತ್ಕರ್ಷಕ್ಕೆ ಶ್ರೀ ದೇವರ ಪ್ರಸಾದವಾದಂತಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿದ್ದ ‘ಯಕ್ಷಮುಖಿ’ಯ ಸಂಚಾಲಕರಾದ ಖ್ಯಾತ ನಿರೂಪಕ ರಾಜೇಶ ನಾಯಕ ಸೂರ್ವೆಯವರು, ಕಲಾ ಸಾಮರ್ಥ್ಯಕ್ಕಿಂತಲೂ ಸಜ್ಜನಿಕೆಯ ನಡವಳಿಕೆಯಿಂದ ವಯೋಮಾನಕ್ಕನುಗುಣವಾದ ಮುತ್ಸದ್ದಿಕೆಯನ್ನು ಕಾದುಕೊಂಡು ಬಂದ ಅಪರೂಪದ ವ್ಯಕ್ತಿತ್ವದ ಬೀರಣ್ಣ ಮಾಸ್ತರರನ್ನು ಗೌರವಿಸಿರುವುದು ಸಾತ್ವಿಕತೆಗೆ ಸಂದ ಸನ್ಮಾನವಾಗಿದೆ” ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ‘ಕನ್ನಡ ಚಂದ್ರಮ’ದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿಯವರು ಮಾತನ್ನಾಡುತ್ತಾ “ಕಳೆದ ಒಂದಿಷ್ಟು ವರ್ಷಗಳಿಂದ ಬರ್ಗಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿನ ಹನುಮ ಜಯಂತಿಯ ಕಾರ್ಯಕ್ರಮದಲ್ಲಿ ಸಾಧಕ ಸಮರ್ಥರನ್ನಾಯ್ದು ‘ಶ್ರೀ ವೀರಾಂಜನೇಯ ಪುರಸ್ಕಾರ’ವನ್ನಿತ್ತು ಮಾನಿಸುತ್ತಲೇ ಬಂದಿರುವುದು ಸಂಘಟಕರ ಸದಭಿರುಚಿಯ ಸಂಕೇತವಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ವರ್ಷ ವರ್ಷವೂ ಕಣ್ತುಂಬಿಸಿಕೊಳ್ಳುವುದೇ ಭಾಗ್ಯವಾಗಿದೆ” ಎಂದರು.
ಹರ್ಷಿತಾ ರಾಘವೇಂದ್ರ ಗಾಂವ್ಕರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ತರುವಾಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹುಳಸೆಮಕ್ಕಿಯವರಿಂದ ‘ವಜ್ರದುಂಬಿ’ ಎಂಬ ಯಕ್ಷಗಾನವು ಪ್ರದರ್ಶನಗೊಂಡಿತು. ರವೀಂದ್ರ ಭಟ್ ಆಚವೆಯವರ ಸುಮಧುರವಾದ ಸಾಂಪ್ರದಾಯಿಕ ಭಾಗವತಿಕೆಗೆ ದತ್ತಾರಾಮ್ ಮದ್ದಳೆಯಲ್ಲಿಯೂ, ಕೋಣಾರೆ ಗಜಾನನ ಹೆಗಡೆ ಚಂಡೆಯಲ್ಲಿಯೂ ಸಾಥ್ ನೀಡಿದರು. ರಾವಣನಾಗಿ ಮಂಜುನಾಥ ಗಾಂವ್ಕರ್ ಬರ್ಗಿ, ಮಹಿಳರಾವಣನಾಗಿ ಈಶ್ವರ ಭಟ್ಟ ಹಂಸಳ್ಳಿ, ವಿಭೀಷಣನಾಗಿ ಅನಂತ ಹಾವಗೋಡಿ, ಮತ್ಸ್ ಆಂಜನೇಯನಾಗಿ ಗಣಪತಿ ಹೆಗಡೆ ಮೂರೂರು, ಹನುಮಂತನಾಗಿ ಗುರುದತ್ತ ಭಟ್ಟ ಹಾಗೂ ರಾಮನಾಗಿ ಗಣಪತಿ ಕೊಂಡದಕುಳಿ ಕಳೆಗಟ್ಟಿದರು.