08 ಏಪ್ರಿಲ್ 2023, ಪಡುಬಿದ್ರಿ: ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮೂಲ ಮಠದ ಶ್ರೀ ಪ್ರಾಣ ದೇವರ ಸನ್ನಿಧಿಯಲ್ಲಿ ಗುರುವಾರ ದಿನಾಂಕ 06-04-2023ರಂದು ಹನುಮಜ್ಜಯಂತಿ ಮತ್ತು ಶ್ರೀ ರಾಜರಾಜೇಶ್ವರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಸಂದರ್ಭ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಶ್ರೀ ರೆಂಜಾಳ ಹರಿನಾರಾಯಣ ಬೈಪಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ದಂಪತಿಗೆ ಶತಮಾನದ ಶಕಪುರುಷ, ಜ್ಞಾನವೃದ್ಧರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಸಂಸ್ಮರಣಾರ್ಥ ನೀಡಲಾಗುವ “ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ”ವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯಪಟ್ಟ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರದಾನ ಮಾಡಿ ದಂಪತಿಗಳನ್ನು ಹರಸಿದರು. ಪುರಸ್ಕಾರವು ಸನ್ಮಾನ ಪತ್ರದೊಂದಿಗೆ ರೂ.50,000 ನಿಧಿಯನ್ನು ಒಳಗೊಂಡಿದೆ.
ಪಲಿಮಾರು ಮಠದ ದಿವಾನರಾದ ವಿದ್ವಾನ್ ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಬೈಪಾಡಿತ್ತಾಯ ದಂಪತಿಗಳನ್ನು ಸಭೆಗೆ ಪರಿಚಯಿಸಿ, ವಿದ್ವಾನ್ ಕೆ.ವಿ. ಶಂಕರನಾರಾಯಣ ಅಭಿನಂದನಾ ಮಾತುಗಳನ್ನಾಡಿದರು.