ಮೂಡುಬಿದಿರೆ : ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ದಿನಾಂಕ 08 ನವೆಂಬರ್ 2025ರಂದು ಮೂಡುಬಿದಿರೆ ಶ್ರೀ ಯಕ್ಷನಿಧಿ ದಶಮಾನೋತ್ಸವ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ “ಮಕ್ಕಳು ಯಕ್ಷಗಾನದಲ್ಲಿ ಒಲವನ್ನು ಬೆಳೆಸಿದಾಗ ತುಳುನಾಡಿನಲ್ಲಿ ಯಕ್ಷಗಾನ ಇನ್ನಷ್ಟು ಶ್ರೀಮಂತ ಕಲೆಯಾಗಿ ಬೆಳೆಯಲು ಸಾಧ್ಯ” ಎಂದು ಹೇಳಿದರು.

ಜೈನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಭಾತ್ ಕುಮಾರ್ ಬಲ್ನಾಡ್ ಮಾತನಾಡಿ “ಆರ್ಥಿಕ ಶಿಸ್ತು, ಕಲಾಭಿಮಾನ, ಸಂಘಟನಾ ಚಾತುರ್ಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಯಕ್ಷಗಾನವನ್ನು ಇಂದಿಗೂ ವೃತ್ತಿಯಾಗಿ ಸ್ವೀಕರಿಸಬಹುದು” ಎಂದರು. ಬಿಜೆಪಿ ಮುಖಂಡ ಸುದರ್ಶನ್ ಎಂ. ಮಾತನಾಡಿ, “ಯಕ್ಷಗಾನವನ್ನು ಕೇವಲ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಬಾರದು. ಇದಕ್ಕೆ ದೈವತ್ವದ ಹಿನ್ನೆಲೆ ಹಾಗೂ ಧಾರ್ಮಿಕ ಪರಂಪರೆ ಇದೆ. ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರು ಯಕ್ಷಗಾನದ ಕಡೆ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ” ಎಂದರು.

ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಮೇಳದ ಯಕ್ಷಗಾನ ಕಲಾವಿದ ಅಶೋಕ್ ಆಚಾರ್ಯ ವೇಣೂರು ಇವರಿಗೆ ರೂ. ಹತ್ತು ಸಾವಿರ ನಗದು ಒಳಗೊಂಡ ‘ಶ್ರೀ ಯಕ್ಷನಿಧಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯಕ್ಷಗಾನ ತರಬೇತುದಾರ ಶಿವಕುಮಾರ್ ಅವರ ತಾಯಿ ಗಿರಿಜ ಇವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಪ್ರೋತ್ಸಾಹಕರಾದ ಪ್ರೇಮನಾಥ ಮಾರ್ಲ, ಕ್ರಿಯೇಟಿವ್ ಕಾಲೇಜಿನ ಅಶ್ವತ್ಥ ಎಸ್.ಎಲ್, ಬೆಳುವಾಯಿ ಗ್ರಾ.ಪಂ. ಸದಸ್ಯ ಭರತ್ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಅಶೋಕ್ ನಾಯ್ಕ್ ಮುಚ್ಚೂರು, ಯಕ್ಷನಿಧಿಯ ಅಧ್ಯಕ್ಷೆ ಲತಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸ್ಥಾಪಕ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೀಕ್ಷಾ ಸಫಲಿಗ ವರದಿ ವಾಚಿಸಿ, ಸಂದೀಪ್ ಶೆಟ್ಟಿ ನಿರೂಪಿಸಿದರು.


