ಬೆಂಗಳೂರು : ಸಂಚಾರಿ ಥಿಯೇಟರ್ 20ನೇ ವರ್ಷದ ರಂಗಸಂಭ್ರಮದ ಸಂಚಾರಿ ಸಡಗರದಲ್ಲಿ ‘ಶ್ರೀದೇವಿ ಮಹಾತ್ಮೆ’ ನಾಟಕ ಪ್ರದರ್ಶನವು ದಿನಾಂಕ 09 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಸ್ತುತಗೊಳ್ಳಲಿದೆ.
ವಸುಧೇಂದ್ರ ರಚಿಸಿರುವ ಈ ನಾಟಕಕ್ಕೆ ಶಶಿಧರ ಅಡಪ ರಂಗಸಜ್ಜಿಕೆ, ವಿನಯ್ ಚಂದ್ರ : ಬೆಳಕು, ಗಜಾನನ ಟಿ. ನಾಯ್ಕ ಸಂಗೀತ ನೀಡಿದ್ದು, ಮಂಗಳಾ ಎನ್. ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಕಲಾವಿದರಾದ ಪ್ರಸನ್ನ ಶೆಟ್ಟಿ, ಸತ್ಯಶ್ರೀ ಮತ್ತು ನಾಗರಾಜ್ ವಿ. ಇವರುಗಳು ಅಭಿನಯಿಸಲಿದ್ದಾರೆ.
ಶ್ರೀದೇವಿ ಮಹಾತ್ಮೆ ವಸುಧೇಂದ್ರ ಇವರ ಸಣ್ಣ ಕತೆಯೊಂದನ್ನು ಆಧರಿಸಿ ಮಾಡಿದ ರಂಗರೂಪ. ಅಪಾರ್ಟ್ಮೆಂಟ್ ಒಂದರಲ್ಲಿ ನಡೆಯುವ ಈ ನಾಟಕ ಬೆಂಗಳೂರಿನ ಓಟದ ಬದುಕಿನ, ನಗರೀಕರಣಗೊಂಡ ಬದುಕಿನಲ್ಲಿನ ಅಚ್ಚರಿಗಳು, ಕಳೆದುಹೋಗಿರುವ ಸೂಕ್ಷ್ಮಗಳು, ಬದಲಾದ ಗ್ರಹಿಕೆಗಳು, ಸಹಜವೆನಿಸಿಬಿಡುವ ಅಸಹಜ ನಂಬಿಕೆಗಳು, ಕನಸುಗಳು, ಬದಲಾದ ಬದುಕಿನ ಗತಿಯ ಬಗ್ಗೆ ಮಾತಾಡುತ್ತದೆ. ಬದುಕನ್ನು ನೋಡುವ ಭಿನ್ನ ಬಗೆಗಳು, ವ್ಯಕ್ತವಾಗುತ್ತವೆ. ಸ್ವಸ್ಥ ಬದುಕಿನ ಮೂಲದ್ರವ್ಯಕ್ಕಾಗಿ ನಡೆಸುವ ಹೋರಾಟವೂ ಕಾಣಿಸುತ್ತದೆ. ಇದೊಂದು ನಗರ ಜೀವನದಲ್ಲಿ ನಡೆಯಬಹುದಾದ ಅನೇಕ ಶ್ರೀದೇವಿಯರ ಕಥೆ.