ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ. ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ. ವಸಂತರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 20 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2024-25ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 15 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.
ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಇವರ ‘ಪುಟಾಣಿ ರೈಲು – ಅಂದದ ಕಥೆಗಳ ಲೋಕದಲ್ಲೊಂದು ಸುಂದರ ಪಯಣ’ ಕಥಾ ಸಂಕಲನಕ್ಕೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.
ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಇವರು ಭಾಗಮಂಡಲ ನಾಡು ತಾವೂರು ಗ್ರಾಮದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಅಮೆ ಮಾದಪ್ಪ ಮತ್ತು ಶ್ರೀಮತಿ ವನಜ ದಂಪತಿಗಳ ಮಗಳಾಗಿ ದಿನಾಂಕ 27 ಏಪ್ರಿಲ್ 1989ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಡಿಕೇರಿಯ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಪೂರೈಸಿರುವರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿಯನ್ನು ಪಡೆದಿರುವರು. ವಿರಾಜಪೇಟೆಯ ಸರ್ವೋದಯ ಕಾಲೇಜಿನಲ್ಲಿ ಬಿ.ಇಡಿ. ಪದವಿಯನ್ನು ಪೂರೈಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವರು. ಭಾರತ ಸರ್ಕಾರದ ಮಾಜಿ ಮಾನವ ಸಂಪನ್ಮೂಲ ಸಚಿವೆ ಶ್ರೀಮತಿ ಸ್ಮೃತಿ ಇರಾನಿಯವರಿಂದ ಅತ್ಯುತ್ತಮ ಶಿಕ್ಷಕಿ ಎಂಬ ಪ್ರಶಂಸನೆಗೆ ಪಾತ್ರರಾಗಿರುವರು. ಶಾಲಾ ಕಾಲೇಜು ಹಂತದಲ್ಲಿ ಬಹುಮುಖ ಪ್ರತಿಭಾವಂತಳಾಗಿದ್ದು, ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುವರು. 2009-10 ಶೈಕ್ಷಣಿಕ ಸಾಲಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ‘ಬೆಸ್ಟ್ ಔಟ್ ಸ್ಟ್ಯಾಂಡಿಂಗ್ ಸ್ಟುಡೆಂಟ್ ಅಫ್ ದಿ ಯಿಯರ್’ ಬಹುಮಾನಕ್ಕೆ ಭಾಜನರಾಗಿದ್ದರು.
ಪ್ರಸ್ತುತ ವೃತ್ತಿಯಲ್ಲಿ ಗೃಹಿಣಿಯಾಗಿದ್ದು, ಪ್ರವೃತ್ತಿಯಲ್ಲಿ ಕಥೆ, ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಓದುವುದು ಇವರ ಹವ್ಯಾಸವಾಗಿರುತ್ತದೆ. ಇವರು ಹಲವಾರು ಕಥೆ, ಕವನ, ಮಕ್ಕಳ ಕಥೆ ಮತ್ತು ಲೇಖನಗಳನ್ನು ಕನ್ನಡ ಮತ್ತು ಅರೆಭಾಷೆಯಲ್ಲಿ ಪ್ರಕಟಿಸಿರುವರು. ಹಲವಾರು ಕಡೆ ಏರ್ಪಡಿಸಿದ ವಿವಿಧ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವರು. ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುವರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯವರು ಹೊರತರುವ ಹಿಂಗಾರ ತ್ರೈಮಾಸಿಕ ಪುಸ್ತಕದಲ್ಲಿ ಕಥೆ, ಕವನ ಮತ್ತು ಲೇಖನಗಳನ್ನು ಪ್ರಕಟಿಸಿರುವರು. ವಿವಿಧ ಕಥಾ ಮತ್ತು ಕವನ ವಾಚನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಇವರು ‘ಪುಟಾಣಿ ರೈಲು- ಅಂದದ ಕಥೆಗಳ ಲೋಕದಲ್ಲೊಂದು ಸುಂದರ ಪಯಣ’ ಎಂಬ ಮಕ್ಕಳ ಕಥಾ ಸಂಕಲನ ಪ್ರಕಟಿಸಿರುವರು. ಇವರು ಭಾಗಮಂಡಲ ನಾಡು ತಾವೂರು ಗ್ರಾಮದ ಕೂಡಕಂಡಿ ಚಂದ್ರಹಾಸ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ, ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಯಾನಂದ ಕೂಡಕಂಡಿಯವರ ಪತ್ನಿ. ಇವರಿಗೆ ಕುಮಾರಿ ವೈಷ್ಣವಿ ಮತ್ತು ಧನ್ವಿ ಎಂಬ ಇರ್ವರು ಪುತ್ರಿಯರು. ಪ್ರಸ್ತುತ ಇವರು ಮಡಿಕೇರಿಯ ಕಾವೇರಿ ಲೇಔಟ್ ನಲ್ಲಿ ವಾಸಿಸುತ್ತಿದ್ದಾರೆ.