22 ಮಾರ್ಚ್ 2023, ಕುಂಬಳೆ: ‘ಭಾಷೆ ಬೆಳೆಯಬೇಕಾದರೆ ಅದರ ಬಳಕೆಯಾಗಬೇಕು. ಬಹುಭಾಷೆಗಳು ರಾಷ್ಟ್ರದ ಶಕ್ತಿಯಾಗಿದ್ದು, ಪ್ರತಿಯೊಂದು ಭಾಷೆಯ ರಕ್ಷಣೆ ಇತರ ಭಾಷೆಗಳ ಜವಾಬ್ದಾರಿ’ ಎಂದು ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಹೇಳಿದರು.
ಕುಂಬಳೆ ಸಮೀಪದ ನಾರಾಯಣಮಂಗಲದ ‘ಶ್ರೀನಿಧಿ’ಯಲ್ಲಿ ಸಿರಿಗನ್ನಡ ಕಾಸರಗೋಡು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 19-03-2023 ಭಾನುವಾರದಂದು ನಡೆದ ಬೆಂಗಳೂರಿನ ಸಿರಿಗನ್ನಡ ಕೇಂದ್ರ ಸಮಿತಿಯ ವಿಂಶತ್ಯುತ್ಸವ, ಎರಡು ಮುಕ್ತಕ ಕೃತಿಗಳ ಬಿಡುಗಡೆ, ಗಮಕ ವಾಚನ ಹಾಗೂ ವಸಂತ ಕಾವ್ಯೋತ್ಸವದಲ್ಲಿ ಅವರು ಮಾತನಾಡಿದರು. ಟಿ.ಕೆ.ವಿ. ಭಟ್ ಅವರ ‘ಮುಕ್ತಕ ಸುಮ’ ಕೃತಿ ಬಿಡುಗಡೆ ಮಾಡಿದ ಅವರು ‘ಮುಕ್ತಕಗಳು ಮುತ್ತಿನ ಹಾಗೆ. ಸ್ವತಂತ್ರವಾಗಿರುವ ಅವುಗಳನ್ನು ಕೃತಿಯೆಂಬ ದಾರದಿಂದ ಪೋಣಿಸಿದಾಗ ಇನ್ನಷ್ಟೂ ಸುಂದರವಾಗಿ ಕಾಣುತ್ತವೆ’ ಎಂದರು.
ಮಂಜೇಶ್ವರದ ಲಕ್ಷ್ಮಿ ವಿ.ಭಟ್ ಅವರ ‘ಜನಮಾನ್ಯ ಮುಕ್ತಕಗಳು’ ಕೃತಿಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಬಿಡುಗಡೆ ಮಾಡಿದರು. ಲಲಿತಾಲಕ್ಷ್ಮಿ ಕುಳಮರ್ವ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೆಕ್ಕಕೆರೆ ಶಂಕರನಾರಾಯಣ ಭಟ್, ಕೆ.ವಾಮನ್ ರಾವ್ ಬೇಕಲ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಶುಭ ಹಾರೈಸಿದರು. ವಿ.ಬಿ. ಕುಳಮರ್ವ ರಚಿಸಿದ ಕಾಸರಗೋಡಿನ ಸಿರಿಗನ್ನಡ ನಾಡಗೀತೆಯನ್ನು ಶ್ರದ್ಧಾ ನಾಯರ್ಪಳ್ಳ ಹಾಡಿದರು. ಜೈಮಿನಿ ಭಾರತದಿಂದ ಆಯ್ದ ಕಾವ್ಯಭಾಗದ ಗಮಕ ವಾಚನ ಹಾಗೂ ವ್ಯಾಖ್ಯಾನ ನಡೆಯಿತು. ಶ್ರದ್ಧಾ ನಾಯರ್ಪಳ್ಳ ಅವರು ವಾಚನ ಹಾಗೂ ಪೆಲ್ತಾಜೆ ಶ್ರೀಹರಿ ಭಟ್ ವ್ಯಾಖ್ಯಾನ ನೀಡಿದರು.
ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲೆಯ ಹಿರಿಯ ಮತ್ತು ಕಿರಿಯರಾದ ಸುಮಾರು 25 ಮಂದಿ ಕವಿಗಳು ಕವನ ವಾಚನ ಮಾಡಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಪುಸ್ತಕ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅನೂಷಾ ಎಸ್. ಪ್ರಾರ್ಥಿಸಿದರು. ವೆಂಕಟ್ ಭಟ್ ಎಡನೀರು ಸ್ವಾಗತಿಸಿ, ವಿ.ಬಿ. ಕುಳಮರ್ವ ವಂದಿಸಿದರು. ಪತ್ರಕರ್ತ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿ, ದಿನೇಶ್ ಜಾದೂಗಾರ್ ಪೆರ್ಲ ಸಹಕರಿಸಿದರು.