ಮಂಗಳೂರು : ಅಳಪೆ-ಕಣ್ಣೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಕೊಡಕಾಲ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲೋತ್ಸವ ಅಂಗವಾಗಿ ದಿನಾಂಕ 13-03-2024ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ದರ್ಶನ (ಜಾಂಬವತಿ ಕಲ್ಯಾಣ)’ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಚೆಂಡೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ಮದ್ದಳೆಯಲ್ಲಿ ಮಯೂರ್ ನಾಯಗ ಭಾಗವಹಿಸಿದ್ದರು.
ಅರ್ಥಧಾರಿಗಳಲ್ಲಿ ಬಲರಾಮನಾಗಿ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಜಾಂಬವಂತನಾಗಿ ಶಂಭು ಶರ್ಮ ವಿಟ್ಲ, ಶ್ರೀಕೃಷ್ಣನಾಗಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಾರದನಾಗಿ ಡಾ. ದಿನಕರ ಎಸ್. ಪಚ್ಚನಾಡಿ ಭಾಗವಹಿಸಿದ್ದರು. ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆಯಿತ್ತು ಗೌರವಿಸಿದರು. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಕಲಾವಿದರ ವಿವರ ನೀಡಿದರು. ಸಮಿತಿ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ ವಂದಿಸಿದರು.