ಕಾಸರಗೋಡು : ಸಂಶೋಧಕ ಶಿಕ್ಷಕ, ಸಂಘಟಕ, ಜನಾನುರಾಗಿ ಕನ್ನಡ ಕಟ್ಟಾಳು, ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಇವರನ್ನು ಕೇರಳ ರಾಜ್ಯ ಕಾಸರಗೋಡು ಕನ್ನಡ ಭವನದ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ “ರಜತ ಸಂಭ್ರಮ” ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಶ್ರೀ ಸಿದ್ರಾಮು ನಿಲಜಗಿ ನಾಮ ನಿರ್ದೇಶನ ಮಾಡಿದರು. ಇನ್ನೊರ್ವ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ಹಾಗೂ ನಿರ್ದೇಶಕ ಸಿ. ವೈ. ಮೆಣಸಿನಕಾಯಿ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ ಸಾಂಸ್ಕೃತಿಕ ರಾಯಬಾರಿಗಳಿಗೆ ಕನ್ನಡ ಭವನದ “ಉಚಿತ ವಸತಿ ಸೌಕರ್ಯ” ಹಾಗೂ ರಜತ ಸಂಭ್ರಮ ವಿಶೇಷ ಕನ್ನಡ ಕಾರ್ಯಕ್ರಮಗಳ ಸಂಘಟನೆ, ಸಂಯೋಜನೆಯ ಜವಾಬ್ದಾರಿ ಸ್ವೀಕರಿಸಿ ಜಿಲ್ಲಾ ಘಟಕವನ್ನು ವಿಸ್ತರಿಸಿ ಕಾರ್ಯ ಪ್ರವೃತರಾಗಬೇಕೆಂದು ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಜಂಟಿಯಾಗಿ ತಿಳಿಸಿದ್ದಾರೆ.