ಮಂಗಳೂರು: ಬನವಾಸಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಸಮಾವೇಶ ‘ಪ್ರಕೃತಿಯ ಮಡಿಲು ನುಡಿಯ ಒಡಲು’ ಕಾರ್ಯಕ್ರಮದ ಅಂಗವಾಗಿ ‘ಮನೆಯಂಗಳದಿ ಸಾಹಿತ್ಯ ರಸದಿನ’ ಕಾರ್ಯಕ್ರಮವು ದಿನಾಂಕ 02-06-2024ರಂದು ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ನರೂರು, ಬನವಾಸಿಯ ಶ್ರೀ ರಘುನಂದನ ಭಟ್ಟರ ಮನೆಯ ಆವರಣದಲ್ಲಿ ನಡೆಯಿತು.
ವಿಶ್ವ ಪರಿಸರ ದಿನಕ್ಕೆ ಪೂರಕವಾಗಿ, ಶ್ರೀ ಜಗದೀಶ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತೀರ್ಥಹಳ್ಳಿ ಸಮಿತಿಯ ಆಧ್ಯಕ್ಷರಾದ ಅಣ್ಣಪ್ಪ ಅರಬಗಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಣಚೂರು ಹಾಗೂ ಮಂಗಳಾ ಆಸ್ಪತ್ರೆ ವೈದ್ಯ ಮತ್ತು ಕವಿಯಾದ ಡಾ. ಸುರೇಶ ನೆಗಳಗುಳಿ ಅವರನ್ನು ಮಂಗಳೂರಿನ ಮಾಜಿ ಎಸ್. ಪಿ. ಕುಮಾರಸ್ವಾಮಿ ಶಾಲು ತೊಡಿಸಿ, ಫಲ ಹಾಗೂ ಫಲಕ ನೀಡಿ ಗೌರವಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ನಾರಾಯಣ ಶೇವಿರೆ ಇವರ ದಿಕ್ಕೂಚಿ ಭಾಷಣದಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದ್ಯಾರ್ಥಿ ಪ್ರಮುಖ್ ತಿಮ್ಮಣ್ಣ ಭಟ್ ಮತ್ತು ವಿಂಧ್ಯಾ ಭಟ್ ಸಂಗಡಿಗರಿಂದ ‘ಮಂಕು ತಿಮ್ಮನ ಕಗ್ಗ’ದ ವಾಚನ ವ್ಯಾಖ್ಯಾನ, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಅವರಿಂದ ವೇದ ಮತ್ತು ಪರಿಸರದ ಬಗೆಗಿನ ಉಪನ್ಯಾಸ ಹಾಗೂ ಊರ ಪರ ಊರ ಕವಿಗಳಿಂದ ಪರಿಸರ ಕುರಿತ ಕವಿ ಗೋಷ್ಠಿಗಳು ನಡೆದವು. ಭಾನು ರಾಜ ಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರತಿನಿಧಿಗಳಾಗಿ ಡಾ. ಮಾಧವ, ಸುಂದರ ಶೆಟ್ಟಿ, ಜಯಾನಂದ ಪೆರಾಜೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ಸಮಿತಿ ಅಧ್ಯಕ್ಷರಾದ ಗಣಪತಿ ಭಟ್ ಕುಳಮರ್ವ, ಪವನ್, ಸಂದೀಪ್, ಅರವಿಂದ ಭಟ್ ಮುಂತಾದವರು ಭಾಗವಹಿಸಿದ್ದರು.