ಉಡುಪಿ : ರಂಗಭೂಮಿ ವತಿಯಿಂದ 44ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯು ದಿನಾಂಕ 22-11-2023ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹ ಕುಲಾಧಿಪತಿ ಹಾಗೂ ರಂಗಭೂಮಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್ ಇವರು “ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸುವುದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ದೇಶದ ಯುವ ಜನತೆಗೆ ನಾಟಕ ಸ್ಪರ್ಧೆಗಳ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು. ಸಿನೆಮಾ ತಾರೆಯರಿಗಿಂತಲೂ ನಾಟಕ, ಯಕ್ಷಗಾನ ಕಲಾವಿದರ ಶ್ರಮ ಅಪಾರ. ಸಿನೆಮಾದಲ್ಲಿ ಒಂದು ದೃಶ್ಯಕ್ಕೆ ಹಲವಾರು ಟೇಕ್ ಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ನಾಟಕ, ಯಕ್ಷಗಾನದಲ್ಲಿ ಹಾಗೆ ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಕಲೆ ಮತ್ತಷ್ಟು ಬೆಳೆಯಬೇಕು. ನಾಟಕಗಳಲ್ಲಿ ಯುವಜನತೆ ಹಾಗೂ ಮಕ್ಕಳ ಪಾಲ್ಗೊಳ್ಳುವಿಕೆ ಅತೀ ಅಗತ್ಯವಾಗಿದೆ. ಇದರಿಂದ ಈ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯ” ಎಂದು ಹೇಳಿದರು.
ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉದ್ಘಾಟಿಸಿ, ನಾಟಕ ಅತ್ಯಂತ ವಿಶಿಷ್ಟವಾದ ಕಲೆಯಾಗಿದ್ದು, ಪಾಶ್ಚಾತ್ಯರ ಸಂಸ್ಕೃತಿಯ ನಡುವೆಯೂ ರಂಗಕಲೆ ಜೀವಂತಿಕೆ ಉಳಿಸಿಕೊಂಡಿದೆ. ಇಂದಿನ ಮೊಬೈಲ್ ಯುಗದಲ್ಲೂ ನಾಟಕ ಕಲೆಯನ್ನು ಬೆಳೆಸಿ, ಪ್ರೋತ್ಸಾಹಿಸುತ್ತಿರುವ ರಂಗಭೂಮಿ ಉಡುಪಿಯ ಕಾರ್ಯ ಅನನ್ಯ. ಈ ಕಲೆಯನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ವಿಭಿನ್ನತೆ ತರುವ ಕೆಲಸವಾಗಬೇಕು” ಎಂದು ಹೇಳಿದರು.
ರಂಗಭೂಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸಂಸ್ಥೆಯು 59ನೇ ವರ್ಷದಲ್ಲಿ ಮುಂದುವರಿಯುತ್ತಿದೆ. ಪ್ರಸ್ತುತ 44ನೇ ವರ್ಷದ ನಾಟಕ ಸ್ಪರ್ಧೆ ಇದಾಗಿದ್ದು, ರಾಜ್ಯದಲ್ಲಿ ಯಾರೂ ಸಹ ಇಷ್ಟು ವರ್ಷಗಳಿಂದ ನಿರಂತರವಾಗಿ ಕನ್ನಡ ನಾಟಕ ಸ್ಪರ್ಧೆ ಆಯೋಜಿಸಿಲ್ಲ. ಎಲ್ಲರ ಸಹಕಾರದೊಂದಿಗೆ ಉಡುಪಿಯ ರಂಗಭೂಮಿ ಆ ಕಾರ್ಯ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ” ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉದ್ಯಮಿಗಳಾದ ಸತ್ಯಾನಂದ ನಾಯಕ್, ಗೋಪಾಲ ಸಿ. ಬಂಗೇರ ಉಪಸ್ಥಿತರಿದ್ದರು. 12 ದಿನಗಳ ಕಾಲ ನಡೆಯಲಿರುವ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿರುವ ಶ್ರೀಪಾದ ಟಿ. ಭಾಗ್ವತ್, ವಿನಾಯಕ್ ಭಟ್ ಹಾಸಣಗಿ, ಸತೀಶ್ ತಿಪಟೂರು, ಎಂ.ಎಸ್. ಭಟ್, ಲಕ್ಷ್ಮೀನಾರಾಯಣ ಭಟ್ ಕೆ. ಅವರಿಗೆ ಸ್ಪರ್ಧೆಯ ಜವಾಬ್ದಾರಿ ಹಸ್ತಾಂತರಿಸಲಾಯಿತು.
ಶಶಿಪ್ರಭಾ ಕಾರಂತ ಪ್ರಾರ್ಥಿಸಿ, ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘದ ಜತೆ ಕಾರ್ಯದರ್ಶಿ ವಿವೇಕಾನಂದ ಎನ್. ಪರಿಚಯಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳ್ಳಾರಿ ಸಿರಿಗೆರೆಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಮಹಾಂತೇಶ್ ರಾಮದುರ್ಗ ಇವರ ನಿರ್ದೇಶನದಲ್ಲಿ ‘ಸೋರುತಿಹುದು ಸಂಬಂಧ’ ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಿದರು.