ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಇದರ ವತಿಯಿಂದ ದಿನಾಂಕ 6 ಅಕ್ಟೋಬರ್ 2024ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು, ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಲೀಲ ವಾಸುದೇವ್ ಇವರ ಸರ್ವಾಧ್ಯಕ್ಷತೆಯಲ್ಲಿ ಬೆಳಗ್ಗೆ ಗಂಟೆ 9-30ರಿಂದ ರಾಜ್ಯ ಮಟ್ಟದ 15ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಡಾ. ಸಿಸಿರಾ ತಿಳಿಸಿದ್ದಾರೆ.
ಬೆಳಗ್ಗೆ 9-30 ಗಂಟೆಗೆ ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ.ದ ನಿಕಟ ಪೂರ್ವ ಅಧ್ಯಕ್ಷರಾದ ಅನಿಕೇತನ ಶ್ರೀ ಮಾಯಣ್ಣ ಧ್ವಜಾರೋಹಣ ನೆರವೇರಿಸಲಿದ್ದು, ಕವಯತ್ರಿ ಶ್ರೀಮತಿ ಶಾಂತಲಾ ಸುರೇಶ್ ಇವರು ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡುವರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಹಿತಿ ಶ್ರೀಮತಿ ಅಂಬುಜಾ ಪ್ರಕಾಶ್ ಇವರು ಹಾಡಿನ ಮೂಲಕ ಪ್ರಾರಂಭಿಸಲಿದ್ದಾರೆ.
ಬೆಳಗ್ಗೆ 10-30 ಗಂಟೆಗೆ ಖ್ಯಾತ ವಿಮರ್ಶಕ, ವಿದ್ವಾಂಸರಾದ ಡಾ. ಜಿ. ರಾಮಕೃಷ್ಣ ಇವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇವರು ಅಧ್ಯಕ್ಷತೆ ವಹಿಸಲಿರುವರು. ಶಿಕ್ಷಣ ತಜ್ಞರು, ಗಾಂಧಿ ಭವನದ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ‘ಅನಿಕೇತನ ಪ್ರಶಸ್ತಿ’ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಸಮಾಜ ಸೇವಕರಾದ ಶಶಿಕಾಂತರಾವ್ ಇವರು ಭಾಗವಹಿಸಲಿದ್ದು ಸಂಸ್ಥೆಯ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ ಪ್ರಾಸ್ತಾವಿಕ ನುಡಿಗಳಾಡುವರು.
ವಿವಿಧ ಗೋಷ್ಠಿಗಳಲ್ಲಿ ವಿಶ್ರಾಂತ ಕೆ.ಎ.ಎಸ್. ಅಧಿಕಾರಿ ಹಿರಿಯ ಸಾಹಿತಿ ಡಾ. ಕೃಷ್ಣಪ್ಪ ಎನ್. ಕೋಡಿಪಾಳ್ಯ ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ, ಹಿರಿಯ ಸಾಹಿತಿ ಶ್ರೀಮತಿ ಹಾ.ವೀ. ಮಂಜುಳಾ ಶಿವಾನಂದ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಕಥಾ ವಾಚನಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ವರದಾ ಶ್ರೀನಿವಾಸ್, ಶ್ರೀಮತಿ ಎಸ್. ಗುಣಸಾಗರಿ ನಾಗರಾಜು, ಖ್ಯಾತ ಕುಂಚ ಕಲಾವಿದೆ ಶ್ರೀಮತಿ ಶಾಂತಿ ವಾಸು, ಶ್ರೀ ಕೆ. ಕೃಷ್ಣಮೂರ್ತಿ ಪೂಜಾರಿಪಾಳ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದು ಸಾಧಕರಿಗೆ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಮಾಡಲಿರುವರು.
ಸಂಜೆ 3-30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡರು ಸಮಾರೋಪ ನುಡಿಗಳನ್ನಾಡುವರು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾದ ಡಾ. ಎಸ್.ಜಿ. ಸುಶೀಲಮ್ಮನವರು, ಪ್ರಗತಿಪರ ಚಿಂತಕಿ ಶ್ರೀಮತಿ ಇಂದಿರಾ ಕೃಷ್ಣಪ್ಪ, ಹಿರಿಯ ಸಾಹಿತಿ ಪ್ರೊ. ಲೀಲ ವಾಸುದೇವ್, ಕನ್ನಡ ಸಾಹಿತ್ಯ ಸಂಸ್ಕೃತಿ ಪರಿಚಾರಕರು, ವೀರಲೋಕ ಪ್ರಕಾಶನದ ಶ್ರೀ ವೀರಕಪುತ್ರ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕನ್ನಡ ಪ್ರಾಧ್ಯಾಪಕ ಡಾ. ಆರ್. ವಾದಿರಾಜು, ಕೆ.ಎಂ. ರೇವಣ್ಣ, ಕವಿ ಡಾ. ಕೃಷ್ಣ ಹಾನ್ ಬಾಳ್ ಮುಂತಾದವರು ಉಪಸ್ಥಿತರಿದ್ದು, ಎಲೆಮರೆ ಕಾಯಿಯಂತೆ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ದಾನಿಗಳು ನೀಡಿರುವ ವಿವಿಧ ದತ್ತಿ ಪ್ರಶಸ್ತಿ, ಬಹುಮಾನಗಳು, ಪ್ರತಿಭಾ ಪುರಸ್ಕಾರವನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಸಿ. ಹೇಮಾವತಿ ತಿಳಿಸಿದ್ದು, ಸಾರ್ವಜನಿಕರು, ಸಾಹಿತ್ಯ ಸಂಸ್ಕೃತಿ ಪ್ರಿಯರು ಸಮಾರಂಭದಲ್ಲಿ ಭಾಗವಹಿಸಲು ಕೋರಿದ್ದಾರೆ.