ಬೆಂಗಳೂರು : ಬುದ್ದ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಪ್ರೊ. ಕೃಷ್ಣಪ್ಪ ಟ್ರಸ್ಟ್ ಹಾಗೂ ವೀರಲೋಕ ಪಬ್ಲಿಕೇಶನ್ ಸಹಕಾರದಲ್ಲಿ ದಿನಾಂಕ 03 ಜುಲೈ 2025ರಂದು ಆಯೋಜಿಸಿದ ರಾಜ್ಯ ಮಟ್ಟದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಸಮಾವೇಶ-2025 ಕಾರ್ಯಕ್ರಮವು ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ “ನಮ್ಮ ಜೀವನದಲ್ಲಿ ವೈಜ್ಞಾನಿಕ ವಿಚಾರಗಳನ್ನು ಬೆಳೆಸಿಕೊಂಡು, ಸಾಂಪ್ರದಾಯಕವಾಗಿ ತುಂಬಿರುವ ಮೌಢ್ಯದ ಬೇರು ಕಿತ್ತೊಗಯದೇ ಇದ್ದರೇ ಬಡತನವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ವಿಷಯ ವಿಶ್ಲೇಷಣೆ ಮಾಡದಿದ್ದರೆ ಈ ಸಮಾಜ, ದೇಶ ಬೆಳವಣಿಗೆ ಆಗುವುದಿಲ್ಲ. ನಾವು ಬರೆಯುವ ಸಾಹಿತ್ಯ ಸೂಕ್ಷ್ಮತೆ ಪಡೆದುಕೊಳ್ಳದೇ ಇದ್ದರೆ, ವೈಚಾರಿಕತೆಯ ಅಂಶ ಮೈಗೂಡಿಸಿಕೊಳ್ಳದೇ ಹೋದರೇ, ಪ್ರಶ್ನಿಸುವ ಮತ್ತು ಉತ್ತರ ಪಡೆಯುವ ಮನೋಧರ್ಮವನ್ನು ರೂಪಿಸಿಕೊಳ್ಳದಿದ್ದರೆ ಸಮಾಜಕ್ಕೆ ಏನನ್ನು ಮಾಡಲು ಸಾಧ್ಯವಿಲ್ಲ. ಸಾಹಿತಿಯಾಗಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಸೂಕ್ಷ್ಮತೆಗಳನ್ನು ಗಮನಿಸುತ್ತಿರಬೇಕು. ಸಾಹಿತಿ ಜನರ ನಡುವೆ ಹೋಗದೇ ಇದ್ದರೆ, ನಾವು ಬರೆಯುವ ಸಾಹಿತ್ಯ ಯಾರಿಗೆ ಮುಟ್ಟುತ್ತಿದೆ ಎಂದು ಪ್ರಶ್ನಿಸಿಕೊಳ್ಳದೇ ಇದ್ದರೆ ಅದು ವ್ಯರ್ಥ. ಬರೆಯುವ ಸಾಹಿತ್ಯ ಯಾರಿಗೆ ಮುಟ್ಟುತ್ತಿದೆ ಎಂದು ಪ್ರಸ್ನಿಸಿಕೊಳ್ಳದಿದ್ದರೆ ಸಾಹಿತಿಕಾರರು ಎಂದು ಹಣೆಪಟ್ಟಿ ಅಂಟಿಸಿಕೊಂಡು, ಸಮಾರಂಭಗಳಲ್ಲಿ ಭಾಗವಹಿಸಿಕೊಂಡು, ಪುಸ್ತಕಗಳನ್ನು ಪ್ರಕಟಿಸಿಕೊಂಡು, ಪ್ರಶಸ್ತಿಗಳನ್ನು ತೆಗೆದುಕೊಳ್ಳುತ್ತೇವೆಯೇ ಹೊರತು ಅದರಿಂದ ಈ ದೇಶಕ್ಕೆ, ನಾಡಿನ ಸಮಾಜಕ್ಕೆ ಏನು ಪ್ರಯೋಜನವಿಲ್ಲ. ವೈಜ್ಞಾನಿಕತೆಯ ಸೂಕ್ಷ್ಮತೆಗಳನ್ನು ಬರವಣಿಗೆಯಲ್ಲಿ ಕಾಪಾಡಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಬೈರಮಂಗಲ ರಾಮೇಗೌಡ ಇವರು ಉದ್ಯಮಿ ಶಶಿಕಾಂತ್ ರಾವ್ ನೀಡಿರುವ ‘ಪುನೀತ್ ರಾಜಕುಮಾರ್ ಯುವ ಸಾಹಿತ್ಯ ಪ್ರಶಸ್ತಿ’ಯನ್ನು ಯುವ ಸಾಹಿತಿಗಳಾದ ಡಾ. ಆರ್.ಎಸ್. ರವೀಂದ್ರ ಮತ್ತು ಆಶಾ ಶಿವುಗೌಡರವರಿಗೆ ಪ್ರದಾನ ಮಾಡಿ ಮಾತನಾಡಿ “ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು ತಮ್ಮ ಆಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು, ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ನಂಬಿಕೆಗಳಲ್ಲ. ಕುವೆಂಪು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತ” ಎಂದು ಹೇಳಿದರು.
“ಸಮಾಜ ಸೇವೆ, ಸಾಹಿತ್ಯ ಸಂಸ್ಕೃತಿ, ಮಾನಸಿಕ ಮತ್ತು ಸಾಮಾಜಿಕ ವಿಶಾಲತೆಗಳಿಗಿಂತ ಹಣಗಳಿಸುವಿಕೆ ಅತ್ಯಂತ ಮುಖ್ಯವಾಗುತ್ತದೆ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೂ ಕುವೆಂಪು ಅವರ ವೈಚಾರಿಕ ಪ್ರಜ್ಞೆ ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದೆ” ಎಂದು ಸಮಾವೇಶದ ಅಧ್ಯಕ್ಷರು, ವಿಜ್ಞಾನ ಲೇಖಕರಾದ ಡಾ. ಆರ್.ಎಸ್. ರವೀಂದ್ರ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮುರಳಿಕೃಷ್ಣ ಬೆಳಾಲು ಇವರ ‘ಭಾವ ಬೆಸುಗೆ’, ಪದ್ಮನಾಭ ಡಿ. ಇವರ ‘ಮನಸಿನ ಪುಟದಲಿ’, ವಿಹಾರಿಕ ಅಂಜನ ಹೊಸಕೇರಿ ಇವರ ‘ಪ್ರವಾಸದ ಆ ದಿನಗಳು’ ಮತ್ತು ಸಂಗಮನಾಥ ಪಿ. ಸಜ್ಜನ ಇವರ ‘ಜೇನುಗೂಡು’ ಕೃತಿಗಳಿಗೆ ಸಿದ್ಧನಹಳ್ಳಿ ಶ್ರೀಮತಿ ಪದ್ಮಮ್ಮ ಶ್ರೀ ಸಿದ್ಧೇಗೌಡ ಸ್ಮಾರಕ ದತ್ತಿ ಪುಸ್ತಕ ಪ್ರಶಸ್ತಿ ನೀಡಲಾಯಿತು. ಶ್ರೀಮತಿ ಶಾಂತಲಾ ಸುರೇಶ್ ಇವರ ‘ಸಾಹುಕಾರ ನಂದೀಶ’ ಮತ್ತು ‘ಮನದ ಕಡಲು’ ಹಾಗೂ ಸಾಹಿತಿ ವಿಜಯಾ ಗುರುರಾಜ್ ಇವರ ‘ಪಕಳೆಗಳು’ ಕೃತಿಗಳು ಲೋಕಾರ್ಪಣೆ, ಪ್ರಬಂಧ ಮಂಡನೆ, ಲೋಕಾರ್ಪಣೆಗೊಳ್ಳಲಿರುವ ಕೃತಿಗಳ ಕುರಿತು ಹಾಗೂ ಕವಿತೆ ಮತ್ತು ಕಥಾ ವಾಚನ ಪ್ರಸ್ತುತಗೊಂಡವು. ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ 2025ರ ಸಾಲಿನ ‘ಶ್ರೀಗಂಧ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ ಕಾರ್ಯಕರ್ತರಿಗೆ ಗೌರವ ಸನ್ಮಾನ, ಬಳಿಕ ಕುಮಾರಿ ನಯನ ಶಿವಣ್ಣ ಮತ್ತು ಕುಮಾರಿ ಮೋನಿಕಾ ದೇವಿ ಕೆ.ಜಿ. ಇವರಿಂದ ನೃತ್ಯ ಪ್ರದರ್ಶನ ನಡೆಯಿತು.
ಈ ವೇಳೆ ಸಾಹಿತಿ ಶಶಿಕಾಂತ್ ರಾವ್, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಕಾರ್ಯದರ್ಶಿ ಸಿ. ಹೇಮಾವತಿ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟಿನ ಇಂದಿರಾ ಕೃಷ್ಣಪ್ಪ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಡಾ. ಕೃಷ್ಣ ಹಾನ್ ಬಾಳ್, ಡಾ. ಆರ್. ವಾದಿರಾಜ್ ಇನ್ನಿತರರು ಉಪಸ್ಥಿತರಿದ್ದರು.