ಸಾಗರ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀರಂಗ ದತ್ತಿನಿಧಿ ನಾಟಕ ವಿಭಾಗ ಹಾಗೂ ನಮ್ಮ ರಂಗ ಸ್ವರೂಪ ಟ್ರಸ್ಟ್ (ರಿ.) ಸಾಗರ ಇದರ ಸಹಯೋಗದಲ್ಲಿ ಶ್ರೀರಂಗರ ನಾಟಕಗಳ ಕುರಿತ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಶ್ರೀರಂಗರ ‘ಸಾವಿತ್ರಿ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮತ್ತು 28 ಅಕ್ಟೋಬರ್ 2025ರಂದು ಸಾಗರ ಶ್ರೀನಾಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 27 ಅಕ್ಟೋಬರ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದು, ರಂಗಕರ್ಮಿಗಳಾದ ಡಾ. ಎ. ಮುರಿಗೆಪ್ಪ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಗರದ ನಮ್ಮ ರಂಗ ಸ್ವರೂಪ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ.ಎಸ್. ಚಂದ್ರಶೇಖರ ಇವರ ಉಪಸ್ಥಿತಿಯಲ್ಲಿ ಶ್ರೀರಂಗ ದತ್ತಿನಿಧಿ ಇದರ ಸಂಚಾಲಕರಾದ ಡಾ. ವೀರೇಶ ಬಡಿಗೇರ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಧ್ಯಾಹ್ನ 3-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ಹಿರಿಯ ಸಾಹಿತಿ ಡಾ. ಜಿ.ಎಸ್. ಭಟ್ ಇವರು ‘ಶ್ರೀರಂಗರ ವ್ಯಕ್ತಿತ್ವ ಮತ್ತು ಸಾಧನೆ’, ರಂಗಕರ್ಮಿಗಳಾದ ಡಾ. ಎ. ಮುರಿಗೆಪ್ಪ ಇವರು ‘ಶ್ರೀರಂಗರ ವ್ಯಕ್ತಿತ್ವ ಮತ್ತು ಸಾಧನೆ’, ಡಾ. ಮಲ್ಲಯ್ಯ ಸಂಡೂರು ಇವರು ‘ಶ್ರೀರಂಗರ ಹೃದಯವಂತಿಕೆ ಮತ್ತು ಸಾಮಾಜಿಕ ಪ್ರಜ್ಞೆ’, ಡಾ. ರಾಜಶೇಖರ ಕಂಬಾರ ಇವರು ‘ಶ್ರೀರಂಗರು : ಭಾರತೀಯ ಮತ್ತು ಕನ್ನಡ ರಂಗಭೂಮಿ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ 6-30 ಗಂಟೆಗೆ ನಮ್ಮ ರಂಗ ಸ್ವರೂಪ ಟ್ರಸ್ಟ್ ತಂಡದವರಿಂದ ಸಿ.ಟಿ. ಬ್ರಹ್ಮಾಚಾರ್ ಇವರ ನಿರ್ದೇಶನದಲ್ಲಿ ‘ಸಾವಿತ್ರಿ’ ಶ್ರೀರಂಗರ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 28 ಅಕ್ಟೋಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ನಡೆಯುವ ಗೋಷ್ಠಿ 2ರಲ್ಲಿ ಎಲ್ಲ ಆಹ್ವಾನಿತ ವಿದ್ವಾಂಸರಿಂದ ‘ಶ್ರೀರಂಗರ ಸಾವಿತ್ರಿ ನಾಟಕ ಪ್ರದರ್ಶನ ಕುರಿತ ಚರ್ಚೆ’ ನಡೆಯಲಿದೆ. ಗೋಷ್ಠಿ 3ರಲ್ಲಿ ‘ಶ್ರೀರಂಗರ ನಾಟಕಗಳ ರಂಗತಂತ್ರ’ ಎಂಬ ವಿಷಯದ ಬಗ್ಗೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಡಾ. ಜಯಪ್ರಕಾಶ ಮಾವಿನಕುಳಿ ಇವರು ವಹಿಸಲಿದ್ದಾರೆ. ಡಾ. ಅಶೋಕಕುಮಾರ ರಂಜೇರೆ ಇವರು ‘ಶ್ರೀರಂಗರ ನಾಟಕಗಳಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದ ಸ್ಥಿತಿಗತಿ’, ಪ್ರೊ. ಲಿಂಗರಾಜ ಕಮ್ಮಾರ ಇವರು ‘ಶ್ರೀರಂಗರ ನಾಟಕಗಳಲ್ಲಿ ಸ್ವಾತಂತ್ರ್ಯ ನಂತರ ಭಾರತದ ಸ್ಥಿತಿಗತಿ’, ಕೆ.ಜಿ. ಜಗದೀಶ್ ಒಡೆರ್ ಇವರು ‘ಶ್ರೀರಂಗರ ನಾಟಕಗಳ ರಂಗತಂತ್ರ’ ಮತ್ತು ಡಾ. ವೀರೇಶ ಬಡಿಗೇರ ಇವರು ‘ಶ್ರೀರಂಗರ ನಾಟಕಗಳಲ್ಲಿ ಸತ್ಯ ಮತ್ತು ಮಿಥ್ಯೆಗಳ ಸಂಕಥನ’ ಹಾಗೂ ಗೋಷ್ಠಿ 4ರ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರು ಹಾಲೇಶಪ್ಪ ಇವರು ವಹಿಸಲಿದ್ದು, ರಂಗಕರ್ಮಿ ಎಂ.ಪಿ. ಲಕ್ಷ್ಮೀನಾರಾಯಣ ಇವರು ‘ಶ್ರೀರಂಗರು ಮತ್ತು ಎನ್.ಆರ್. ಮಾಸೂರ್ ಒಡನಾಟ’ ಮತ್ತು ರಂಗಕರ್ಮಿ ದೇವೇಂದ್ರ ಬೇಳಯೂರು ಇವರು ‘ಶ್ರೀರಂಗರು ಮತ್ತು ಎನ್.ಆರ್. ಮಾಸೂರ್ ನಿರ್ದೇಶನದ ಬಗೆ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.