ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 04 ಜನವರಿ 2025ರಂದು ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ ನಡೆಯಿತು.
ಈ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೈಸೂರಿನ ಸುತ್ತೂರು ಮಠದ ಮಠಾಧೀಶ ಡಾ. ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ “ವಚನ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಶಾಸ್ತ್ರಬದ್ಧ ಕೃತಿಗಳಿಗೆ ವಿರಾಮ ಹೇಳಿ ಸರಳವಾದ ಮಾತುಗಳು ಕೂಡ ಸಾಹಿತ್ಯವಾಗಬಹುದು ಎಂದು ವಚನ ಸಾಹಿತ್ಯ ತೋರಿಸಿಕೊಟ್ಟಿದೆ. ಎಲ್ಲಾ ಸುಲಭವಾದ, ಸರಳ ಭಾಷೆಯಲ್ಲಿ ಲೌಕಿಕ ಸಂಗತಿಯಲ್ಲದೆ, ಭಗವಂತ-ಮನುಷ್ಯನ ಕುರಿತ ಸಂಗತಿ ವಚನ ಸಾಹಿತ್ಯದಲ್ಲಿದೆ. ವಚನ ಸಾಹಿತ್ಯದ ಕುರಿತು ಅನೇಕ ಕೃತಿಗಳು ಬಂದಿದ್ದು, ಅದನ್ನು ಅರಿಯುವ ಕೆಲಸ ನಾವೆಲ್ಲರೂ ಮಾಡಬೇಕು. ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನಡೆದಿರುವುದು ವಿಶೇಷವಾಗಿದೆ” ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ. ಅರವಿಂದ್ ಜತ್ತಿ ಮಾತನಾಡಿ “ವಚನ ಸಾಹಿತ್ಯ ಮತ್ತು ಜೀವನ ಅನುಸಂಧಾನ ಈ ಸಮ್ಮೇಳನದ ಆಶಯ. ಸಮ್ಮಿಲನ ಸಮ್ಮೇಳನವಾಗಿ ರೂಪುಗೊಂಡು ಜಾತ್ರೆಯ ರೂಪ ಪಡೆಯುತ್ತಿದೆ. ಬಸವಾದಿ ಶರಣರನ್ನು ಮತ್ತು ವಚನವನ್ನು ಕೇವಲ ಧಾರ್ಮಿಕ ಸಾಹಿತ್ಯವಾಗಿ ನೋಡುವ ಪರಿಪಾಠ ಬಂದಿದೆ. ಕ್ರಾಂತಿ ಸ್ವರೂಪವಾದ ಆಂದೋಲನವನ್ನು ನಾವು ಒಂದು ಧರ್ಮಕ್ಕೆ ಸೀಮಿತಗೊಳಿಸಿ, ಇಡೀ ಮಹಾಕಲ್ಪನೆಯನ್ನು ಸಂಕುಚಿತಗೊಳಿಸಿದ್ದೇವೆ ಎಂಬ ಚಿಂತನೆ ಮೂಡುತ್ತಿದೆ. ಬದುಕಿನ ಸಾಹಿತ್ಯವಾಗಿ ವಚನ ಕಾಣಿಸಿಕೊಳ್ಳುತ್ತದೆ. ವಚನದಲ್ಲಿ ಧರ್ಮವನ್ನು ಹುಡುಕಬಾರದು. ಬದುಕಿನ ಧರ್ಮವನ್ನು ಬಸವಣ್ಣ ಅವರು ಜನಪರ ಭಾಷೆಯಲ್ಲೇ ನೀಡಿದ್ದಾರೆ. ವಚನಗಳಲ್ಲಿ ಅನುಭವ ಇರುತ್ತದೆ, ಅನುಭಾವವೂ ಇರುತ್ತದೆ. ಆದರೆ ನಾವು ಅನುಭವವನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ” ಎಂದು ವಿವರಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ 2014ರಿಂದ 2024ರವರೆಗಿನ ಹಾದಿಯ ‘ವಚನಯಾನ’ ಸ್ಮರಣ ಸಂಚಿಕೆಯನ್ನು ಸುತ್ತೂರು ಶ್ರೀಗಳು ಬಿಡುಗಡೆಗೊಳಿಸಿದರು. ದ.ಕ. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣಗೈದು, ಅ.ಭಾ.ವಿ.ಮ. ರಾಜ್ಯಾಧ್ಯಕ್ಷ ಶಂಕರ ಬಿದರಿ ಸಾಕ್ಷ್ಯಚಿತ್ರ ಉದ್ಘಾಟಿಸಿ, ಅಕ್ಕಮಹಾದೇವಿ ವೀರಶೈವ ಮಹಾಸಂಘ ಮಂಗಳೂರು ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಅವಲೋಕನಗೈದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ. ಗುರುಕಿರಣ್ (ಸಂಗೀತ), ಡಾ. ಶಾಲಿನಿ ನಾಲ್ವಡ್ (ಸಮಾಜ ಸೇವೆ, ವೈದಕೀಯ), ದೇವದಾಸ್ ಕಾಪಿಕಾಡ್ (ತುಳು ಸಾಹಿತ್ಯ ಮತ್ತು ನಾಟಕ ರಂಗ), ಶ್ರೀ ಹರಿಕೃಷ್ಣ ಪುನರೂರು (ಸಮಾಜ ಸೇವೆ), ಶ್ರೀ ಜನಾರ್ಧನ್ ಬುಡೋಳಿ (ದೈವ ನರ್ತನ), ಶ್ರೀಮತಿ ಚಂಚಲ ತೇಜಮಯ (ಸಂಘಟನೆ), ಶ್ರೀ ಶಶಿ ಕುಮಾರ್ ಭಟ್ (ಪುರಾತನ ವಸ್ತು ಸಂಗ್ರಾಲಯ), ಶ್ರೀ ಸುದರ್ಶನ (ಸಮಾಜ ಸೇವೆ), ಶ್ರೀ ಜೇ.ಡಿ. ವೀರಪ್ಪ (ಸಮಾಜ ಸೇವೆ), ಶ್ರೀ ಯುವರಾಜ್ (ಜಾನಪದ ಗಾಯಕ, ನಿರ್ದೇಶಕ), ಶ್ರಿಮತಿ ರಾಜೇಶ್ವರಿ ಹಿರೇಮಠ (ಉದ್ಯಮ), ಶ್ರೀ ಮೊಹಮದ್ ಯಾಸೀರ್ (ಪುರಾತನ ವಸ್ತು ಸಂಗ್ರಹ), ವಾಲ್ಟರ್ ನಂದಳಿಕೆ (ಪತ್ರಿಕೋದ್ಯಮ) ಮುಂತಾದ ಹಿರಿಯ ಸಾಧಕರಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ ಸಮ್ಮಾನಿಸಲಾಯಿತು. ಹನ್ನೊಂದು ಮಂದಿಗೆ ವೀಲ್ ಚೇರ್ ಗಳನ್ನು ವಿತರಿಸಲಾಯಿತು.
ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಶ್ರೀ ಕ್ಷೇತ್ರ ಕಟೀಲಿನ ಅನುವಂಶೀಯ ಮೊಕ್ತೇಸರ ಹರಿನಾರಾಯಣದಾಸ ಆಸ್ರಣ್ಣ, ಸಂಗೀತ ನಿರ್ದೇಶಕ ಗುರುಕಿರಣ್, ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕ ವಲಯ ಮುಖ್ಯಸ್ಥ ರಾಜೇಶ್ ಖನ್ನಾ, ಎಂ.ಆರ್.ಪಿ.ಎಲ್.ನ ಸುದರ್ಶನ್, ಪ್ರಮುಖರಾದ ಎ.ಸಿ. ಭಂಡಾರಿ, ಡಾ. ಕೆ.ಸಿ. ಮಾದೇಶ್, ಪ್ರಸನ್ನ ಉಪಸ್ಥಿತರಿದ್ದರು. ಉರ್ವಸ್ಟೋರಿನ ಶ್ರೀ ಮಹಾಗಣತಿ ದೇವಸ್ಥಾನದ ಅಧ್ಯಕ್ಷರಾದ ಸುರೇಂದ್ರ ರಾವ್ ಸ್ವಾಗತಿಸಿ, ಡಾ. ಶಿವಪ್ರಕಾಶ್ ನಿರೂಪಿಸಿದರು.
ಸಭೆಯ ಮೊದಲು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಚನ ಸಾಹಿತ್ಯ ದಿಬ್ಬಣಕ್ಕೆ ಚಾಲನೆ ನೀಡಲಾಯಿತು. ಬಳಿಕ ಪುರಭವನದಲ್ಲಿ ಧ್ವಜಾರೋಹಣ ನೆರವೇರಿತು. ಮಂಗಳೂರಿನ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು ಅಧ್ಯಕ್ಷೆ ಶಕುಂತಳಾ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ‘ಆಧುನಿಕ ವಚನಗೋಷ್ಠಿ’ ನಡೆಯಿತು. ಈ ಕಾರ್ಯಕ್ರಮದಲ್ಲಿ ಲೇಖಕಿ ಶ್ರೀಮತಿ ಮೀನಾಕ್ಷಿ ರಾಮಚಂದ್ರ ಮತ್ತು ಕಿರಿಯ ಲೇಖಕಿ ಡಾಕ್ಟರ್ ಅರುಣ ನಾಗರಾಜ್ ಇವರು ತಮ್ಮ ಆಧುನಿಕ ವಚನಗಳನ್ನು ವಾಚಿಸಿದರು. ಗೌರವ ಉಪಸ್ಥಿತಿಯಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ, ಡಾ. ಮಾಲತಿ ಶೆಟ್ಟಿ ಮಣೂರು, ಶ್ರೀ ಜನಾರ್ಧನ ಹಂಡೆ ಪೊಳಲಿ, ನಿತ್ಯಾನಂದ ಕಾರಂತ ಉಪಸ್ಥಿತರಿದ್ದರು.
ಚಿಂತನಾ ಗೋಷ್ಠಿಯಲ್ಲಿ ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅನುಸಂಧಾನ’ ಎಂಬ ವಿಷಯದ ಬಗ್ಗೆ ಪುತ್ತೂರು ಬಿಟ್ಟಂಪಾಡಿಯ ಸರಕಾರಿ ಕಾಲೇಜಿನ ಪ್ರಾಂಶುಪಾಲರು ಡಾ. ವರದರಾಜ ಚಂದ್ರಗಿರಿ ಇವರು ವಿಶ್ವ ಪ್ರಸ್ತುತಿಗೊಳಿಸಿದರು. ‘ತುಳುನಾಡಿನಲ್ಲಿ ವೀರಶೈವ ಪರಂಪರೆ ಒಂದು ಐತಿಹಾಸಿಕ ನೋಟ’ ಎಂಬ ವಿಷಯದ ಬಗ್ಗೆ ಹಿರಿಯ ಇತಿಹಾಸ ತಜ್ಞರಾದ ಡಾಕ್ಟರ್ ಪುಂಡಿಕಾಯಿ ಗಣಪತಿ ಭಟ್ ಇವರು ಪ್ರಸ್ತುತ ವಿಷಯ ಪ್ರಸ್ತುತಿ ಮಾಡಿದರು. ಗೌರವ ಉಪಸ್ಥಿತಿಯಲ್ಲಿ ಮಂಗಳೂರಿನ ಎಂ.ಆರ್.ಪಿ.ಎಲ್. ನಿವೃತ್ತ ಮಹಾ ಪ್ರಬಂಧಕರಾದ ಶ್ರೀಮತಿ ವೇಣನ್ ಟಿ. ಶೆಟ್ಟಿ ಮತ್ತು ಶ್ರೀಮತಿ ಕವಿತಾ ಮುರುಗೇಶ್ ಇವರು ಭಾಗವಹಿಸಿದ್ದರು. ‘ವಚನ ಸಾಹಿತ್ಯ ಅವಲೋಕನ’ ಎಂಬ ಗೋಷ್ಠಿಯಲ್ಲಿ ಮೈಸೂರಿನ ವಿಶ್ವ ವಚನ ಫೌಂಡೇಶನ್ನಿನ ಡಾಕ್ಟರ್ ವಚನ ಕುಮಾರಸ್ವಾಮಿ ಇವರು ‘ಕಲ್ಯಾಣ ಕ್ರಾಂತಿಕಥನ’ ಎಂಬ ವಿಷಯವನ್ನು ಪ್ರಸ್ತುತಿ ಪಡಿಸಿದರು ಹಾಗೂ ‘ಪಕೀರಪ್ಪ ಗುರಪ್ಪ ಹಳಕಟ್ಟಿ ವಚನದ ಬೆಳಕು’ ಎಂಬ ವಿಷಯದ ಬಗ್ಗೆ ಮಂಗಳೂರಿನ ಕ. ಲೇ. ವಾ. ಸಂಘದ ಮಾಜಿ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಇವರು ಪ್ರಸ್ತಾವಿಸಿದರು. ಅಧ್ಯಕ್ಷರಾಗಿ ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕರು ಶ್ರೀ ರಘು ಇಡ್ಕಿದು ಇವರು ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ಅಧ್ಯಕ್ಷರು ಸೂರಜ್ ಇಂಟರ್ನ್ಯಾಷನಲ್ ಶಾಲೆ ಮುಡಿಪು ಮತ್ತು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಬಿ.ಎಮ್. ರೋಹಿಣಿ ಹಿರಿಯ ಸಾಹಿತಿ ಸದಸ್ಯ ಕರಾವಳಿ ಲೇಖಕಿಯರ ಸಂಘ ಮತ್ತು ವಾಚಕಿಯರ ಸಂಘ ಮಂಗಳೂರು ಉಪಸ್ಥಿತರಿದ್ದರು. ಬಳಿಕ ವಚನ ಗಾನ ವೈಭವ ಜರಗಿತು.
ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅಕ್ಕಮಹಾದೇವಿ ಪ್ರಾಂಗಣದಲ್ಲಿ ‘ಸಮೂಹ ವಚನ ಗಾಯನ ಸ್ಪರ್ಧೆ’ ಮತ್ತು ‘ಸಮೂಹ ವಚನ ನೃತ್ಯ ಸ್ಪರ್ಧೆ’ಯನ್ನು ವಿದುಷಿ ಗೀತಾ ಸರಳಾಯ ದೀಪ ಬೆಳಗಿ ಉದ್ಘಾಟಿಸಿದರು. ಡಾ. ಮೀನಾಕ್ಷಿ ರಾಮಚಂದ್ರ, ರತ್ನಾವತಿ ಜೆ. ಬೈಕಾಡಿ, ಪೂರ್ಣಿಮಾ ಪೇಜಾವರ ಮತ್ತು ರವಿರಾಜ್ ಎಸ್. ಇವರುಗಳ ನೇತ್ರತ್ವದಲ್ಲಿ ಸ್ಪರ್ಧೆಗಳು ನಡೆದವು. ಗಾಯನ ಸ್ಪರ್ಧೆ ವಿಜೇತರು ಪ್ರಥಮ – ನಾದ ಸ್ವರ ಸಂಗೀತ ವಿದ್ಯಾಲಯ ಮತ್ತು ತಂಡ, ದ್ವಿತೀಯ – ಮಹಿಳಾ ಮಂಡಲ ಕುಳಾಯಿ, ತೃತೀಯ – ಗಾನ ಮಂದಾರ ಮಹಿಳಾ ಘಟಕ. ಸಮೂಹ ವಚನ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ – ಕೀರ್ತನ ಮತ್ತು ಬಳಗ, ದ್ವಿತೀಯ – ಕಲಾಶ್ರೀ ಮತ್ತು ತಂಡ, ತೃತೀಯ – ಮಂಜುಶ್ರೀ ಮತ್ತು ತಂಡ ಗಳಿಸಿತು.