ಮಂಗಳೂರು : ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘ (ರಿ.) ಇದರ ವತಿಯಿಂದ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 04 ಜನವರಿ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಾ. ಅರವಿಂದ್ ಜತ್ತಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
‘ವಚನ ಸಾಹಿತ್ಯ ದಿಬ್ಬಣ’ವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿದ್ದು, ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿ ಉದ್ಘಾಟನೆ ಮಾಡಲಿರುವರು. ಅನುಭವ ಸಂಗಮ ವೇದಿಕೆಯಲ್ಲಿ ಬೆಳಿಗ್ಗೆ 9-30 ಗಂಟೆಗೆ ಶ್ರೀ ಸೂರ್ಯ ಬಸಪ್ಪಕಡಿ ಇವರಿಂದ ವಚನ ಗಾಯನ ಪ್ರಸ್ತುತಗೊಳ್ಳಲಿದೆ. ಅಲ್ಲಮಪ್ರಭು ವೇದಿಕೆಯಲ್ಲಿ ಸಮೂಹ ವಚನ ಗಾಯನ ಸ್ಪರ್ಧೆ ಮತ್ತು ಸಮೂಹ ವಚನ ನೃತ್ಯ ಸ್ಪರ್ಧೆ ನಡೆಯಲಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ 10-00 ಗಂಟೆಗೆ ಧ್ವಜಾರೋಹಣ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ ಉದ್ಘಾಟನೆ, ವಸ್ತು ಮಾರಾಟ ಮಳಿಗೆ ಉದ್ಘಾಟನೆ, ಸಾಕ್ಷ್ಯ ಚಿತ್ರ ಉದ್ಘಾಟನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘಗಳನ್ನು ಸನ್ಮಾನಿಸಲಾಗುವುದು.
ಅಪರಾಹ್ನ 1-30 ಗಂಟೆಗೆ ಗೋಷ್ಠಿ -1ರಲ್ಲಿ ‘ಆಧುನಿಕ ವಚನಗೋಷ್ಠಿ’ಯಲ್ಲಿ ಎಮಿರೇಟ್ಸ್ ಪ್ರಾಧ್ಯಾಪಕರಾದ ಪ್ರೊ. ವಿಜಯಾದೇವಿ, ಹಿರಿಯ ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಮತ್ತು ಹಿರಿಯ ಲೇಖಕಿ ಡಾ. ಅರುಣಾ ನಾಗರಾಜ್ ವಾಚನ ಗೈಯಲಿರುವರು. ಗೋಷ್ಠಿ -2ರಲ್ಲಿ ‘ಚಿಂತನ ಗೋಷ್ಠಿ’ಯಲ್ಲಿ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅನುಸಂದಾನ’ ಹಾಗೂ ಹಿರಿಯ ಇತಿಹಾಸ ತಜ್ಞರಾದ ಡಾ. ಪುಂಡಿಕಾಯಿ ಗಣಪತಿ ಭಟ್ ಇವರು ‘ತುಳುನಾಡಿನಲ್ಲಿ ವೀರಶೈವ ಪರಂಪರೆ ಒಂದು ಐತಿಹಾಸಿಕ ನೋಟ’ ಎಂಬ ವಿಷಯದ ಪ್ರಸ್ತುತಿ ಮಾಡಲಿರುವರು. ಗೋಷ್ಠಿ -3ರಲ್ಲಿ ‘ವಚನ ಸಾಹಿತ್ಯ ಅವಲೋಕನ’ದಲ್ಲಿ ಡಾ. ವಚನ ಕುಮಾರ ಸ್ವಾಮಿ ಇವರು ‘ಕಲ್ಯಾಣ ಕ್ರಾಂತಿ ಕಥನ’ ಹಾಗೂ ಡಾ. ಜ್ಯೋತಿ ಚೇಳಾಯ್ರು ಇವರು ‘ಫ.ಗು. ಹಳಕಟ್ಟಿ – ವಚನದ ಬೆಳಕು’ ಎಂಬ ವಿಷಯದ ಪ್ರಸ್ತುತಿ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಾನಪದ ಗಾಯಕ ಮತ್ತು ಸಂಗೀತ ನಿರ್ದೇಶಕ ಕೆ. ಯುವರಾಜ್ ಶಿವಮೊಗ್ಗ ಮತ್ತು ಸಿ.ಎ. ಅಮೂಲ್ಯ ಮಲ್ಲಿಕಾರ್ಜುನ್ ಇವರಿಂದ ‘ವಚನ ಗಾನ ವೈಭವ’, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.