ಉಡುಪಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕ ಸಾಹಿತಿಗಳ 6ನೆಯ ರಾಜ್ಯ ಸಮ್ಮೇಳನವು ದಿನಾಂಕ 05-09-2023ರಂದು ಉಡುಪಿಯ ಅಂಬಲ್ಪಾಡಿ ಶ್ರೀ ಭವಾನಿ ಸಭಾಂಗಣದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ 34ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಾನಂದ ಪೆರಾಜೆಯವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಮತ್ತು ಗ್ರಾಮೀಣ ಹಿಂದುಳಿದ ಪ್ರದೇಶದ ಬಡ, ದೀನ, ದಲಿತ ಮಕ್ಕಳಿಗೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡಿರುವ ಅಮೂಲ್ಯ ಸೇವೆಗೆ ರಾಜ್ಯ ಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಲಾಯಿತು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತಿ ನೆಂಪು ನರಸಿಂಹ ಭಟ್ಟರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಂಬಲ್ಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಕಾರ್ಯದರ್ಶಿ ಡಾ. ವಿಜಯ ಬಲ್ಲಾಳ, ಉದ್ಯಮಿ ವಿಶ್ವನಾಥ ಶೆಣೈ, ಕ.ಚು.ಸಾ.ಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹುಬ್ಬಳ್ಳಿ, ಕಾರ್ಯದರ್ಶಿ ಶಾಂತ ಪುತ್ತೂರು, ಡಾ.ವಾಣಿಶ್ರೀ, ಗುರುರಾಜ ಕಾಸರಗೋಡು, ಸಾವಿತ್ರಿ ಮನೋಹರ್ ಕಾರ್ಕಳ, ಬಹುಭಾಷಾ ಕವಿ ಅಂಶುಮಾಲಿ, ಉಡುಪಿ ಜಿಲ್ಲಾಧ್ಯಕ್ಷ ಜಿ.ಯು.ನಾಯಕ, ಉಪಾಧ್ಯಕ್ಷ ರಾಜು ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಚುಟುಕು ವಾಚನ ಗೋಷ್ಠಿಯಲ್ಲಿ ಕ.ದ ಜಿಲ್ಲೆಯ ಬಹುಭಾಷಾ ಕವಿಗಳಾದ ಶ್ರೀ ಅಂಶುಮಾಲಿ ಅಧ್ಯಕ್ಷತೆ ವಹಿಸಿ, ಉಡುಪಿಯ ಹಿರಿಯ ಕವಿಗಳಾದ ಶ್ರೀಮತಿ ಇಂದಿರಾ ಹಾಲಂಬಿ ಆಶಯ ನುಡಿಗಳನ್ನಾಡಿದರು. ಮಂಡ್ಯದ ಡಾ. ಶ್ರೀ ಸವಿತಾ ದಾಸರಗುಪ್ಪ, ಕೊರಟಿಯ ಹಿರಿಯ ಕಲಾವಿದರಾದ ಶ್ರೀ ಪಿಳ್ಳಪ್ಪನವರು ಹಾಗೂ ಪತ್ರಕರ್ತರಾದ ಡಾ. ಶೇಖರ್ ಅಜೇಕಾರ್ ಇವರ ಉಪಸ್ಥಿಯಲ್ಲಿ ಹಿರಿಯ ಕಿರಿಯ ಕವಿಗಳಿಂದ ಚುಟುಕು ವಾಚನ ನಡೆಯಿತು. ಮಂಗಳೂರಿನ ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.

