“ಪ್ರಪಂಚದೊಂದಿಗೆ ಸ್ಪರ್ಧಿಸು, ಆದರೆ ಓಡಿ ಸುಸ್ತಾಗಬೇಡ!” – ಈ ಮಾತು ನನ್ನನ್ನು ಆಕರ್ಷಿಸಿತು.
“ಕೇವಲ ಒಂದು ಹೆಜ್ಜೆ, ‘ಜಾಯ್ ಅಂಡ್ ಎಂಜಾಯ್’ಗೆ ಹಾಕಿದರೆ, ಮತ್ತೊಂದು ಹೆಜ್ಜೆ ಎಲ್ಲಿಯೂ ಹಾಕಬೇಕಾಗಿಲ್ಲ” – ನಾನು ಮತ್ತು ನನ್ನ ಪತ್ನಿ ಹೇಳಿದಾಗ, ನನ್ನ ಭಾವಮೈದುನ “ಇದೇನು ಜೈಲಾ?” ಅಂದ. ನಾನು ಹಿಂದೆ ಸರಿಯಲಿಲ್ಲ, “ಅದಕ್ಕಿಂತ ಹೆಚ್ಚೇ” ಅಂದೆ.
‘ಜಾಯ್ ಅಂಡ್ ಎಂಜಾಯ್’ ಎಂಬ ಪ್ರತಿಷ್ಠಿತ ವೆಂಚರ್‌ನಲ್ಲಿ ನಾವು ಮನೆ ಖರೀದಿಸಿದೆವು. ನಾವು ಪ್ರವೇಶಿಸುವ ಮೊದಲೇ ಅದರ ಬೆಲೆ ತುಂಬಾ ಹೆಚ್ಚಾಗಿತ್ತು. ಲಾಭ ತೋರಿಸಿ, ಮಾರಾಟ ಮಾಡಿದವನೇ ಮತ್ತೆ ಮನೆಯನ್ನು ಖರೀದಿಸಲು ಆಫರ್ ನೀಡಿದ. ಆರ್ಥಿಕ ಲಾಭಗಳನ್ನು ಬದಿಗಿಟ್ಟರೆ, ನಿಜ ಹೇಳಬೇಕೆಂದರೆ ತುಂಬಾ ಹೆಮ್ಮೆಪಡುವ ತರಾ ಇದೆ. ಹದಿನಾರು ಎಕರೆಗಳಲ್ಲಿ ವಿಸ್ತರಿಸಿದ್ದಕ್ಕೆ ‘ಗೇಟೆಡ್ ಕಮ್ಯುನಿಟಿ’ ಎಂದು ಹೆಸರಿಡುವುದು ಅದನ್ನು ಕೀಳಾಗಿ ಕಂಡಂತೆ. ಬ್ರ್ಯಾಂಾಡ್ ಹೆಸರಿನಿಂದಲೇ ಕರೆಯಬೇಕು, ಆಗಲೇ ಸಮರ್ಥನೆ ಸಿಗುತ್ತದೆ.
ಅದು ‘ಹೆವನ್ ಆನ್ ಅರ್ಥ್’. ನಲವತ್ತೈದು ಮಹಡಿಗಳು. ಈ ಟವರ್‌ಗಳ ಮಧ್ಯೆ ಸಂಪರ್ಕವೂ ಇದೆ. ಇನ್ನೂರು ಐದು ಪ್ಲಸ್ ಸೌಲಭ್ಯಗಳು. ಆ ಮಾತು ಕೇಳಿ ನನ್ನ ಭಾವಮೈದುನ “ಆರಾಮದಾಯಕ ಬಂಧನ” ಅಂದ. ಅಷ್ಟೇನಾ? ಒಳಗೆ ಪ್ರವೇಶಿಸುತ್ತಿದ್ದಂತೆಯೇ ಕ್ಲಬ್ ಹೌಸ್. ಕ್ಲಬ್ ಹೌಸ್‌ನಲ್ಲಿ ಏನಿರುತ್ತದೆಯೋ ವಿವರಿಸುವ ಅಗತ್ಯವಿಲ್ಲವೆಂದುಕೊಳ್ಳುತ್ತೇನೆ. ದೊಡ್ಡವರಿಗೂ ಮಕ್ಕಳಿಗೂ ಪ್ರತ್ಯೇಕವಾಗಿ ಪೂಲ್‌ಗಳು, ಜಿಮ್‌ಗಳು, ಮಹಿಳೆಯರಿಗೆ ವಿಶೇಷ ಕ್ಲಬ್‌ಗಳು. ಕಿಟ್ಟಿ ಪಾರ್ಟಿಗಳಿಂದ ಯಾವುದೇ ಪಾರ್ಟಿಗಳು… ಅದು ನಿಮ್ಮ ಆಯ್ಕೆ. ಈ ಮಹಡಿಗಳ ಮೇಲ್ಭಾಗದಲ್ಲಿ ರೆಸ್ಟೋರೆಂಟ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು… ಐಷಾರಾಮಿಯಾಗಿ ಮತ್ತು ಗೌರವಾನ್ವಿತವಾಗಿ ವಿನ್ಯಾಸಗೊಳಿಸಿದ್ದಾರೆ.
“ಅವರ ಮಾರುಕಟ್ಟೆಯಲ್ಲಿ ನೀವು ಗ್ರಾಹಕರು. ನಿಮ್ಮಿಂದ ಪ್ಲಾಟ್ ಖರೀದಿಸಿದಾಕ್ಷಣ ಅವರ ವ್ಯಾಪಾರ ಮುಗಿದಿಲ್ಲ, ನಿಮ್ಮ ಜೀವಿತಾವಧಿಯ ಖರೀದಿಗೆ ಸಿಂಗಲ್ ವಿಂಡೋ ತೆರೆದಿದ್ದಾರೆ, ನಿಮಗೆ ಮತ್ತೊಂದು ವಿಂಡೋ ಇಲ್ಲ…” ನನ್ನ ಭಾವಮೈದುನನ ಅರ್ಥವಿಲ್ಲದ ಗೊಂದಲದ ಮಾತುಗಳನ್ನು ನಾನು ಗಮನಿಸಲಿಲ್ಲ. ಅವನೇ ಮತ್ತೆ ಹೇಳು ಎನ್ನುವಂತೆ ನೋಡಿದ.
“ನಿನಗೊಂದು ವಿಷಯ ಗೊತ್ತಾ, ಈ ಮನೆಗಳ ನಾಲ್ಕು ಕಡೆ ನಾಲ್ಕು ದೇವಸ್ಥಾನಗಳು…” ಎಂದು ವಿವರಗಳನ್ನು ಹೇಳುವ ಮೊದಲೇ – “ನೀವು ಯಾವುದೇ ದೇವಸ್ಥಾನಗಳಿಗೂ, ಪುಣ್ಯಕ್ಷೇತ್ರಗಳಿಗೂ ಹೋಗದಂತೆ ಮಾಡಿ ನಿಮ್ಮ ಬಿಲ್ಡರ್‌ಗಳು ಪಾಪ ಕಟ್ಟಿಕೊಂಡಿದ್ದಾರೆ” ಎಂದು ನಿಲ್ಲಿಸಿ, ಮತ್ತೆ “ಆ ದೇವರುಗಳು ನಿಮಗೆ ಮಾತ್ರ ದೇವರುಗಳು, ನಿಮ್ಮ ಹಿತ್ತಲಲ್ಲಿ ಕಟ್ಟಿ ಹಾಕಿಕೊಳ್ಳಿ” ಎಂದು ನನ್ನ ಭಾವಮೈದುನ ನಕ್ಕ. ಅವನ ಸ್ವಭಾವ ಗೊತ್ತಿದ್ದರಿಂದ ನಾನೂ ನಕ್ಕೆ.
“ಎಲ್ಲ ಕಡೆಯೂ ಬಿಗಿಯಾದ ಭದ್ರತೆ… ಇನ್ನು ಏನು ಬೇಕು?” ಅಂದೆ.
“ಕೇಂದ್ರ ಜೈಲಿನಂತೆ, ನೀವು ಎಲ್ಲಿಗೂ ಓಡಿ ಹೋಗದಂತೆ, ಐ ಮೀನ್… ಹೋಗದಂತೆ” ಎಂದು ನನ್ನ ಭಾವಮೈದುನ ಕಾಮೆಂಟ್ ಮಾಡಿದ. ಗೇಟೆಡ್ ಕಮ್ಯುನಿಟಿ ಅಂದರೆ ಸಾಕು ಅವನಿಗೆ ಸಹಿಸಲಾಗುವುದಿಲ್ಲ. ‘ಪೂರ್ ಫೆಲೋ’ ಹಳ್ಳಿಯ ವಾಸನೆಗಳನ್ನು ಕಳೆದುಕೊಂಡಿಲ್ಲ. ಅಷ್ಟೇ ಅಲ್ಲದೆ ಡೀಕ್ಲಾಸ್ ಆಗುವುದು ಒಂದು ದೊಡ್ಡ ವಿಷಯ ಎಂಬಂತೆ ಮಾತನಾಡುತ್ತಾನೆ. ಅವನನ್ನು ಗಣನೆಗೆ ತೆಗೆದುಕೊಳ್ಳಬೇಡ ಎಂದು ನನ್ನ ಪತ್ನಿ ನನಗೆ ಮೊದಲೇ ಎಚ್ಚರಿಸಿದಳು.
“ಜೋರಾಗಿ ಕೂಗಿದರೆ ಓ.ಆರ್.ಆರ್ ಮೇಲೆ ಕೇಳಿಸುತ್ತದೆ” ಎಂದು ನಾನು ಅಂದರೆ, “ಆದರೆ ಅಷ್ಟು ಜೋರಾಗಿ ಕಿರಿಚಿದರೆ, ಗಂಟಲು ಹಾಳಾಗಬಹುದೇನೋ ಭಾವಾ” ಅಂದ ನನ್ನ ಭಾವಮೈದುನ ಗಂಭೀರವಾಗಿ.
ವೆಂಚರ್ ಹಾಕಿದಾಗಲೇ ಡೌನ್ ಪೇಮೆಂಟ್ ಮಾಡಿದೆವು. ನಂತರ ಬ್ಯಾಂಕ್ ಲೋನ್ ಬಂತು. ಇಪ್ಪತ್ತು ವರ್ಷ ಇಎಂಐಗಳು ಸಾಮಾನ್ಯ. “ಜೀವನದ ಒಂದೂವರೆ ಪಟ್ಟು ಶಿಕ್ಷೆ” ಎಂದು ನನ್ನ ಭಾವಮೈದುನ ತಮಾಷೆ ಮಾಡಿದ. ಜೀವನ ಅಂದರೆ ಹದಿನಾಲ್ಕು ವರ್ಷ, ಹಾಗಾಗಿ ಇದು ಜೀವನ ಒಂದೂವರೆ ಎಂದು ಅವನ ಹಾಸ್ಯದ ಅರ್ಥ.
“ಏನೇ ಆದರೂ ಕಾಲು ಅಲುಗಾಡಿಸಬೇಕಾಗಿಲ್ಲ. ಹೆಜ್ಜೆ ಇಡಬೇಕಾಗಿಲ್ಲ. ಕೈ ಚಾಚದೆಯೇ ಎಲ್ಲವೂ ಲಭ್ಯವಿದೆ…”
“ನಿಮ್ಮ ಕಮ್ಯುನಿಟಿಯಲ್ಲಿ ಜಿಮ್ ಇದ್ದರೂ, ಮನೆಯಲ್ಲೇ ಟ್ರೆಡ್ ಮಿಲ್ ಇದ್ದರೂ, ಡಂಬಲ್ಸ್ ಇದ್ದರೂ ಸಾಲದು ಭಾವಾ, ಅವುಗಳನ್ನು ಮಾಡಲು ನನ್ನಂತಹ ಯಾರನ್ನಾದರೂ ಇಟ್ಟುಕೊಳ್ಳಬೇಕು ಅಲ್ವಾ? ಸ್ವಿಮ್ಮಿಂಗ್ ಪೂಲ್ ಇದ್ದರೆ ಸಾಲದು ಭಾವಾ, ಈಜಲು ಸಮಯ ಇರಬೇಕು!” ನನ್ನ ಭಾವಮೈದುನ ನನ್ನನ್ನು ಕೆಣಕುತ್ತಲೇ ಇದ್ದ.
ನಾನು ಗಮನಿಸದೆ ಹೇಳಿದೆ. “ಮೆಂಟೆನೆನ್ಸ್ ಇರುತ್ತದೆ. ಶುಚಿಯಾಗಿ, ಅಚ್ಚುಕಟ್ಟಾಗಿ ಇರುತ್ತದೆ. ಕಾಳಜಿ ವಹಿಸಲಾಗುತ್ತದೆ…”
“ಕೊನೆಗೆ ಐಸಿಯುದಲ್ಲಿ ಇರುವಂತೆ ಇರುತ್ತದೆ ಅಂತೀಯಾ” ನನ್ನ ಭಾವಮೈದುನ ನಕ್ಕ, ಉಸಿರನ್ನು ಠುಸ್ಸೆನಿಸುತ್ತಾ.
ನಾನೂ ಕಮ್ಮಿ ಎನಿಸಲಿಲ್ಲ. “ಟ್ರಾಫಿಕ್ ಅನ್ನು ಎಡಗಾಲಿನಿಂದ ಒದ್ದುಬಿಟ್ಟೆವು….”
“ಹೌದು ಭಾವಾ, ಆದರೆ ರಿಂಗ್ ರೋಡ್ ಹತ್ತಿ ಮತ್ತೆ ಮೂವತ್ತಾರು ಕಿಲೋಮೀಟರ್ ಸುತ್ತಿ ಹೋಗಬೇಕು ಅಷ್ಟೇ” ಅಭಿನಂದನಾ ಪೂರ್ವಕವಾಗಿ ನನ್ನ ಕೈಗಳನ್ನು ಹಿಡಿದು ಕುಲುಕಿದ.
ಮೆಡಿಕಲ್ ಶಾಪ್‌ಗಳು ಮಾತ್ರವಲ್ಲ, ಡಾಕ್ಟರ್‌ಗಳೂ ಅಂಗಳದಲ್ಲೇ, ಸಾರಿ, ನನ್ನ ಭಾವಮೈದುನನ ಮಾತುಗಳನ್ನು ಕೇಳಿ ಕೇಳಿ ಹಾಗೆ ಬಂದುಬಿಟ್ಟಿತು, ಎಲ್ಲವೂ ನಮ್ಮ ಕಾಂಪೌಂಡ್‌ನಲ್ಲೇ. ಲ್ಯಾಬ್‌ಗಳೂ ಕಾಂಪೌಂಡ್‌ನಲ್ಲೇ. ದಿನಸಿಗಳೂ ಕಾಂಪೌಂಡ್‌ನಲ್ಲೇ. ಡೋರ್ ಡೆಲಿವರಿ ಕೂಡ. ಮಕ್ಕಳ ಶಾಲೆಗಳೂ ಕೂಡ. ಅವರ ಡ್ಯಾನ್ಸ್, ಮ್ಯೂಸಿಕ್ ಮತ್ತು ಟ್ಯೂಷನ್ ಕ್ಲಾಸ್‌ಗಳೂ ಕೂಡ.
ನಾವು ಆ ಶ್ರೀಮಂತಿಕೆಯನ್ನು ಅನುಭವಿಸುತ್ತಾ ಆನಂದಿಸಿದೆವು. ಹೇಳಬೇಕೇನು, ಹಾಗೆ ಕೆಲವು ದಿನಗಳ ನಂತರ ಅಭ್ಯಾಸದಿಂದ ಹಳೆಯದಾಯಿತು. ಆ ಭಾವನೆ ಕಡಿಮೆಯಾಗಿ ಸಾಮಾನ್ಯವಾಯಿತು.
ಹಿಂದಿನಂತೆ ನನ್ನ ಭಾವಮೈದುನ ಮತ್ತೆ ಬಂದ. ನನ್ನನ್ನು ನೋಡಿದ ತಕ್ಷಣ ಆತಂಕದಿಂದ “ಭಾವಾ…” ಎಂದು ಜೋರಾಗಿ ಕೂಗಿದ. ತಪ್ಪು ಅವನದಲ್ಲ, ಬಹುಶಃ ನನ್ನದೇ. ಬೆಲ್ಲಿ ಬರ್ನರ್ ತೂಕ ಇಳಿಸುವ ಬೆಲ್ಟ್ ಕಟ್ಟಿಕೊಂಡಿದ್ದೆ. ಅಷ್ಟೇ ಅಲ್ಲದೆ ಎರಡು ಭುಜಗಳ ಕೆಳಗೆ ಕೈಗಳಿಗೆ – ಕಾಲಿನ ಎರಡು ತೊಡೆಗಳಿಗೂ – ಎರಡು ಮಸಾಜ್ ಸ್ಲಿಮ್ಮಿಂಗ್ ಮೆಷಿನ್‌ಗಳನ್ನು ಬಿಳಿ ಬಣ್ಣದವುಗಳನ್ನು ಹಾಕಿಕೊಂಡಿದ್ದೆ. ಅವನು ನನಗೆ ಏನೋ ಅಪಘಾತ ಆದಂತೆ ಊಹಿಸಿಕೊಂಡಂತಿದೆ. ನನ್ನ ಹೆಂಡತಿಗೆ ಬಿಳಿ ಬಣ್ಣ ಬೇಡ ಅಂದೆ, ಕೇಳಲಿಲ್ಲ. ಬಿಳಿ ಬಣ್ಣ ‘ಕ್ಲಾಸ್’ ಆಗಿರುತ್ತದೆ ಎಂದು ವಾದಿಸಿದಳು, ಕೋರ್ಟ್ ನಲ್ಲಿ ವಕೀಲಳಂತೆ.
ನನ್ನ ಭಾವಮೈದುನ ನೀರು ಕುಡಿದು ಚೇತರಿಸಿಕೊಂಡು ಆರಾಮವಾಗಿ “ಬರಲಿಲ್ಲವೇನು?” ಎಂದು ಕೇಳಿದ.
ಎಲ್ಲಿಗೆ ಮತ್ತು ಏನೂ ಎಂದು ಕೇಳದೆಯೇ ಅಭ್ಯಾಸದಿಂದ “ನಾವೆಲ್ಲಿಗೂ ಹೋಗಬೇಕಾಗಿಲ್ಲ, ಎಲ್ಲವೂ ನಮ್ಮ ಕಾಲುಗಳ ಬಳಿಯೇ ಬರುತ್ತದೆ….” ಎಂದು ಹೆಮ್ಮೆಯಿಂದ ಹೇಳಿದೆ, ವಿಟಮಿನ್ ಡಿ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾ. ಅದಕ್ಕೆ ಸಾಕ್ಷಿಯಾಗಿ, ಸ್ವಿಗ್ಗಿ ಅಥವಾ ಜೊಮಾಟೋ ಡೆಲಿವರಿ ಏಜೆಂಟ್ ತಂದ ಫುಡ್ ಪ್ಯಾಕೆಟ್ ಅನ್ನು ನನ್ನ ಭಾವಮೈದುನನ ಕೈಗಿಟ್ಟು ಹೊರಟುಹೋದ. ತನ್ನ ಕೈಯಲ್ಲಿದ್ದ ಪ್ಯಾಕೆಟ್ ಅನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು, ಕೈ ತೊಳೆಯಬೇಕೋ ಬೇಡವೋ ಎಂದು ಅನುಮಾನದಿಂದ ನೋಡುತ್ತಿದ್ದಾಗ, ನಾನು ಅಲ್ಲಿ ಟ್ಯಾಪ್ ಇದೆ ಎಂದು ಕೈ ಸನ್ನೆ ಮಾಡಿದೆ. ಟ್ಯಾಪ್ ತಿರುಗಿಸುವ ಶ್ರಮವಿಲ್ಲದೆ, ಸೆನ್ಸರ್‌ನಿಂದ ನೀರು ಹರಿಯುವುದನ್ನು ನೋಡಿ ತಲೆ ಅಲ್ಲಾಡಿಸುತ್ತಾ ನನ್ನ ಬಳಿ ಬಂದ.
“ನಿಜವೇ ಭಾವಾ, ಅಷ್ಟೇ ಅಲ್ಲದೆ ವರ್ಕ್ ಫ್ರಮ್ ಹೋಮ್. ಇಪ್ಪತ್ತನಾಲ್ಕು ಗಂಟೆ, ವಾರದಲ್ಲಿ ಏಳು ದಿನ… ವಿಗ್ರಹದಂತೆ ನಿಂತು ಹೆಜ್ಜೆ ಹಾಕಬೇಕಾಗಿಲ್ಲ” ಮೆಚ್ಚುಗೆಯಿಂದ ನನ್ನ ಭಾವಮೈದುನ ಕೆಣಕಿದ. ಆಗಲೂ ಮತ್ತು ಯಾವಾಗಲೂ ನಾನು ಸಿಸ್ಟಮ್ ಮುಂದಿರುವುದನ್ನು ನೋಡಿರಬಹುದು.
ಆ ಮಾತು ಕೇಳುತ್ತಿದ್ದಂತೆ “ನಿನ್ನನ್ನೂ ನನ್ನನ್ನೂ ನಾಲ್ಕು ಹೆಜ್ಜೆ ನಡೆಯಲು ಹೇಳುತ್ತಿದ್ದಾರೆ. ಡಾಕ್ಟರ್‌ಗಳು, ಮಕ್ಕಳನ್ನೂ ಕೂಡ…” ನನ್ನ ಹೆಂಡತಿ ಹೇಳುತ್ತಿದ್ದಾಗ “ಕಂಪ್ಲೇಂಟ್ ಕೊಡು, ಮೆಂಟೆನೆನ್ಸ್ ಯವರು ನೋಡಿಕೊಳ್ಳುತ್ತಾರೆ” ಎಂದು ರೂಟಿನ್ ಆಗಿ ಹೇಳಿದ ಮೇಲೆ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದ ನನ್ನ ಭಾವಮೈದುನನನ್ನು ನೋಡಿದ ಮೇಲೆ ಅರ್ಥವಾಗಿ “ಶಿಟ್” ಎಂದುಕೊಂಡೆ. ಆದರೆ ಅಭ್ಯಾಸದ ತಪ್ಪು ಇರಬಹುದು, ನನ್ನ ಹೆಂಡತಿ ಕೂಡ “ಆಯ್ತು” ಅಂದಳೇ ಹೊರತು ನನ್ನೊಂದಿಗೆ ಜಗಳಕ್ಕೆ ಇಳಿಯಲಿಲ್ಲ. ಹೋಗಿ ಮೇಡ್‌ಗೆ ಏನು ಅಡುಗೆ ಮಾಡಬೇಕು ಎಂದು ಹೇಳುತ್ತಿದ್ದಳು. ನೋಡಿದೆ. ನನ್ನ ಹೆಂಡತಿಯೂ ನನ್ನಂತೆಯೇ ತೂಕ ಹೆಚ್ಚಿಸಿಕೊಂಡಿದ್ದಾಳೆ. ‘ಚಿಕ್ಕ ವಯಸ್ಸಿನಂತೆ ಹೇಗೆ ಇರುತ್ತೇವೆ?, ವಯಸ್ಸಾದರೆ ತೂಕ ಹೆಚ್ಚಾಗಲ್ವಾ ಏನು?’ ಅವಳು ಹೇಳಿದ ಮಾತುಗಳು ನೆನಪಾದವು.
ನನ್ನ ಇಬ್ಬರು ಮಕ್ಕಳನ್ನು ಎಂದಿನಂತೆ ಎತ್ತಿಕೊಳ್ಳಲು ಹೋಗಿ ತನ್ನಿಂದಾಗದೆ ಕೆಳಗೆ ಇಳಿಸಿದ ನನ್ನ ಭಾವಮೈದುನ.
“ಮಕ್ಕಳು ದೊಡ್ಡವರಾಗುತ್ತಿದ್ದಾರೆ ಅಲ್ವಾ?” ಅಂದಳು ನನ್ನ ಹೆಂಡತಿ, ಅವರ ತಮ್ಮ ಏನೂ ಹೇಳದೆಯೇ.
ತೂಕ ಹೆಚ್ಚಾಗುತ್ತಿದ್ದೇವೆ ಎಂದುಕೊಂಡರೆ ಆಗಲೇ ನೆನಪಾದಂತೆ ಇದೆ, “ನನ್ನ ಬಿಪಿ ಥೈರಾಯ್ಡ್ ಟ್ಯಾಬ್ಲೆಟ್‌ಗಳು ಮತ್ತು ನಿಮ್ಮ ಶುಗರ್ ಟ್ಯಾಬ್ಲೆಟ್‌ಗಳು ಮುಗಿದಿವೆ…” ನನ್ನ ಹೆಂಡತಿ ಮಾತು ಮುಗಿಯುವ ಮುನ್ನವೇ ಫೋನ್ ಬಟನ್ ಒತ್ತಿದೆ. ಔಷಧಿಗಳು ಐದು ನಿಮಿಷಗಳಲ್ಲಿ ಮುಂದಿದ್ದವು.
“ಸರ್, ನೀವು ಓಕೆ ಅಂದರೆ, ಈ ಮಾಸಿಕ ಔಷಧಿಗಳನ್ನು ರೆಗ್ಯೂಲರಾಗಿ ಪ್ರಾಂಪ್ಟ್ ಆಗಿ ಕಳುಹಿಸುತ್ತೇವೆ, ನೀವು ಫೋನ್ ಕೂಡ ಮಾಡಬೇಕಾಗಿಲ್ಲ” ಅಂದ ಮೆಡಿಕಲ್ ಶಾಪ್ ಹುಡುಗ. ನಮ್ಮಿಂದ ಫೋನ್ ಮಾಡುವುದು ಕೂಡ ಕಷ್ಟ ಎಂದು ಗುರುತಿಸಿ ಗೌರವಿಸಿದ ಅವರ ಸೇವೆ ಅದು. ‘ಓ’ ಎಂದು ಉಚ್ಚರಿಸಿ ಶಕ್ತಿಯನ್ನು ವ್ಯರ್ಥ ಮಾಡದೆ “ಕೆ” ಅಂದೆ. ಅದಕ್ಕೆ ಅವನು ವಿನಯದಿಂದ ರಾಜನ ಮುಂದೆ ಸೇವಕರು ತಲೆಬಾಗಿದಂತೆ ಬಾಗಿಯೇ ಹೋದ.
ಅವಾಗಲೇ ನೆನಪಾದಂತೆ “ಹೌದು, ಆ ಹರಕೆ ಹಾಗೆಯೇ ಉಳಿದುಬಿಟ್ಟಿದೆ. ಮೊನ್ನೆಯಿಂದಲೂ ಹೇಳುತ್ತಿದ್ದೇನೆ… ಶ್ರೀಶೈಲಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು” ಅಂದಳು ನನ್ನ ಹೆಂಡತಿ,. ನಾನೊಂದು ನಗು ನಕ್ಕೆ. ನನ್ನ ನಗುವಿಗೆ ಅರ್ಥವೇನು ಎಂಬಂತೆ ನನ್ನ ಭಾವಮೈದುನನೂ ನೋಡಿದ. “ಈಗಾಗಲೇ ಪೂಜೆ ಮುಗಿದಿದೆ” ಎಂದು ಹೇಳಿದೆ. ‘ಯಾವಾಗ?’ ಎಂಬಂತೆ ನನ್ನ ಹೆಂಡತಿ ಮುಖ ಸಿಂಡರಿಸಿದಳು. “ಆನ್‌ಲೈನ್‌ನಲ್ಲಿ ಸೇವೆಗಳು ಲಭ್ಯವಿವೆ, ಹಾಗಾಗಿ…” ಎಂದು ನಿಲ್ಲಿಸಿ, ಫೋನ್ ತೆಗೆದು ಮೆಸೇಜ್ ಫಾರ್ವರ್ಡ್ ಮಾಡುತ್ತಾ “ಪೇ ಮಾಡಿರುವ ಬಿಲ್ ನೋಡಿಕೋ” ಅಂದೆ. ನನ್ನ ಹೆಂಡತಿ ಆಲೋಚನೆಯಲ್ಲಿ ಮುಳುಗಿದಂತೆ ಇರುವುದನ್ನು ನೋಡಿ “ಓ ಮೇಡಮ್… ದೇವರ ಕುಂಕುಮ, ಪ್ರಸಾದ ಪೋಸ್ಟ್ ನಲ್ಲಿ ಇವತ್ತು ಬರುತ್ತವೆ” ಎಂದು ಸ್ವಲ್ಪ ಹೆಮ್ಮೆಯಿಂದ ಹೇಳಿದೆ.
ನನ್ನ ಹೆಂಡತಿ ಆ ಕಡೆ ಹೋಗುತ್ತಿದ್ದಾಗ, “ಹಾಗಾದರೆ ಆರತಿ ಭಾವಾ?” ಎಂದು ಅಮಾಯಕ ಮುಖ ಮಾಡಿ ಕೇಳಿದ ನನ್ನ ಭಾವಮೈದುನ. “ಪೋಸ್ಟ್ ನಲ್ಲಿ ಕಳಿಸಿದರೆ ಅಂಟಿಕೊಳ್ಳುತ್ತದೆ ಅಲ್ವಾ? ಅದಕ್ಕೇ ಸ್ಕ್ರೀನ್‌ನಲ್ಲೇ ತಗೊಂಡೆ” ಎಂದು ಸಿಸ್ಟಮ್ ಅನ್ನು ಮುಟ್ಟುತ್ತಾ ಹೇಳಿದೆ.
ಅಷ್ಟರಲ್ಲಿ ರೆಸಿಡೆಂಟ್ಸ್ ಅಸೋಸಿಯೇಷನ್‌ನಿಂದ ಫೋನ್.
“ನಮಗೆ ವಿದ್ಯಾ ವಾಟಿಕೆ ಇದೆ. ವೈದ್ಯ ವಾಟಿಕೆ ಇದೆ. ಜ್ಞಾನ ವಾಟಿಕೆ (ಕ್ಲಬ್) ಇದೆ. ಧ್ಯಾನ ವಾಟಿಕೆ (ಯೋಗ) ಇದೆ. ಉದ್ಯಾನವನ ವಾಟಿಕೆ (ಗರ್ಡ ನ್) ಇದೆ. ಮಿಠಾಯಿ ವಾಟಿಕೆ ಇದೆ. ಕಲ್ಚರಲ್ ಸೆಂಟರ್ ಮೀನ್ ಸಾಂಸ್ಕೃತಿಕ ವಾಟಿಕೆ ಕೂಡ ಇದೆ. ಇಲ್ಲದಿರುವುದು ಸ್ಮಶಾನ ವಾಟಿಕೆ ಒಂದೇ…” ನಾನು “ಯಾ” ಅಂದಾಗ ಹೇಳುತ್ತಿದ್ದವರು ಉಸಿರು ತೆಗೆದುಕೊಂಡರು.
“ನಮಗೆ ಎಲ್ಲಾ ಸೌಲಭ್ಯಗಳಿವೆ ಆದರೆ ಬರಿಯಲ್ ಗ್ರೌಂಡ್ ಒಂದೇ ಇಲ್ಲ, ಅದರಿಂದ ‘ಹೆವನ್ ಆನ್ ಅರ್ಥ್’ ದಾಟಿದ ದೇಹಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ, ಜೀವನವಿಡೀ ಇಲ್ಲಿಯೇ ಬದುಕಿ ಎಲ್ಲೋ ಮಣ್ಣಾಗುವುದು, ವಿ ಕೆನ್ನಾಟ್ ಡೈಜೆಸ್ಟ್, ಸೋ ವಿ ವಾಂಟ್ ಯುವರ್ ಸಪೋರ್ಟ್” ಅಂದ.
“ಶ್ಯೂರ್” ಅಂದೆ.
ಕರೆ ಕಟ್ ಆದ ತಕ್ಷಣ ಮೆಸೇಜ್. ಬೇಸರದಿಂದ ತೆಗೆದು ನೋಡಿದೆ. ‘ನಮ್ಮ ಮಕ್ಕಳಿಗೆ ಯಾರೊಂದಿಗೆ ಹೇಗೆ ವರ್ತಿಸಬೇಕು ಎಂದು ಗೊತ್ತಾಗುತ್ತಿಲ್ಲ…’ ಎಂದು ಇನ್ನೂ ಪೂರ್ತಿಯಾಗಿ ಮೆಸೇಜ್ ಓದಿಯೇ ಇರಲಿಲ್ಲ.
ಅಷ್ಟರಲ್ಲಿ ಡೋರ್ ಬೆಲ್. ಹೋಗಿ ತೆಗೆದ ಭಾವಮೈದುನ.
“ಹದಿನೇಳನೇ ಮಹಡಿ – ಇಪ್ಪತ್ತೇಳನೇ ಫ್ಲಾಟ್ ಎಲ್ಲಿ ಬರುತ್ತದೆ?” ಎಂದು ಬಂದ ಮನುಷ್ಯ ಗೊಂದಲದ ಮುಖವಿಟ್ಟು ಕೇಳಿದ.
“ಗೊತ್ತಿಲ್ಲದೆ ಬಂದೆಯಾ? ಮೊದಲು ಒಳಗೆ ಹೇಗೆ ಬಂದೆ? ಯಾರಿಗಾಗಿ ಬಂದೆ? ಯಾರು ಒಳಗೆ ಬಿಟ್ಟರು ನಿನ್ನನ್ನು? ಗೇಟ್ ಪಾಸ್ ಯಾರು ಕೊಟ್ಟರು? ನೀನು ಹೀಗೆ ಬಂದು ತೊಂದರೆ ಕೊಡಬಹುದಾ? ಯಾವಾಗ ಬೇಕೆಂದರೆ ಆಗ ಕಾಲಿಂಗ್ ಬೆಲ್ ಒತ್ತಬಹುದಾ? ನನ್ನನ್ನು ರಿಸೆಪ್ಷನಿಸ್ಟ್ ಅಂದುಕೊಂಡಿದ್ದೀಯಾ? ಕೆಳಗೆ ರಿಸೆಪ್ಷನ್ ಅಂತ ಒಂದು ಇರುತ್ತದೆ. ಓದಿಲ್ಲವಾ? ಅಲ್ಲಿ ಕೇಳಲಿಲ್ಲವಾ? ಅವರು ಸಂಬಳ ತೆಗೆದುಕೊಳ್ಳುತ್ತಿಲ್ಲವಾ?” ಎಂದು ಹೇಳುತ್ತಲೇ ವೈರ್‌ಲೆಸ್ ಫೋನ್‌ನಲ್ಲಿ ಕರೆ ಮಾಡಿದೆ.
“ಏನಮ್ಮ ನೀನು ಸಂಬಳ ತೆಗೆದುಕೊಳ್ಳುತ್ತಿಲ್ಲವಾ? ನಿನ್ನ ಕೆಲಸ ನಾನು ಮಾಡಬೇಕಾ? ಇವತ್ತು ಡ್ಯೂಟಿಯಲ್ಲಿ ಯಾರಿದ್ದಾರೆ? ಸೆಕ್ಯುರಿಟಿ ಯಾರು? ಆ…” ನಾನು ಡಮ್ ಡೂಸ್ ಅನ್ನುತ್ತಿದ್ದಾಗ, “ಯಾರನ್ನೂ ಕಳುಹಿಸಿಲ್ಲ ಸರ್” ಅಂದಳು ರಿಸೆಪ್ಷನಿಸ್ಟ್.
“ಅಂದರೆ, ನಾನು ಸುಳ್ಳು ಹೇಳುತ್ತಿದ್ದೇನಾ?, ಪುರಸೊತ್ತಿನಲ್ಲಿ….” ನನಗೆ ಕೋಪ ಬಂತು.
“ಸಾರಿ ಸರ್..” ಆ ಕಡೆ ಫೋನ್‌ನಲ್ಲಿ ರಿಸೆಪ್ಷನಿಸ್ಟ್ ಮತ್ತು ಈ ಕಡೆ ವಿಚಾರಿಸಿದವನು ಒಮ್ಮೆಗೆ ಅಂದರು. ಹೋಗಲು ಎಂಬಂತೆ “ಸಾರಿ” ಹೇಳಿ ಬಂದವನು ಹೊರಟಾಗ, “ಏನು? ನಿನಗೆ ನೀನೇ ಬರುವುದು… ಬಂದು ಕೇಳುವುದು… ಮತ್ತೆ ಹೋಗಿಬಿಡುವುದು… ಎಲ್ಲವೂ ನಿನ್ನ ಇಷ್ಟವೇನಾ?” ನನಗೆ ಸಿಟ್ಟು ನೆತ್ತಿಗೇರಿತು. “ಸಾರಿ ಸರ್” ಬಂದವನು ಕೈಗಳನ್ನು ಉಜ್ಜಿಕೊಂಡ.
“ಇಲ್ಲಿ ಒಂದು ಕುರ್ಚಿ ಹಾಕು, ಬಂದವರಿಗೆ ಮತ್ತು ಕೇಳಿದವರಿಗೆ ವಿಳಾಸ ಹೇಳುತ್ತಾ ಕೂರುತ್ತೇನೆ” ಅಂದೆ, ನನ್ನ ಹೆಂಡತಿಗೆ ಕೂಗಿ.
“ನಿಲ್ಲು ಭಾವಾ” ನನ್ನನ್ನು ಶಾಂತಗೊಳಿಸಲು ನನ್ನ ಭಾವಮೈದುನ ನನ್ನ ಕಡೆ ಒಂದು ನೋಟ ಬೀಸಿದ.
ಆ ನೋಟವನ್ನು ಆಗಲೇ ಓದಿದೆ. ‘ನಿನಗೆ ಮೂಲವ್ಯಾಧಿ ಆಗಿದೆಯಾ ಭಾವಾ?’ ನಿಜ, ಕುಳಿತು ಕುಳಿತು ಪೈಲ್ಸ್ ಬಂದಿವೆ. ಸರ್ಜರಿ ಮಾಡಿಸಿಕೊಂಡರೂ ಮತ್ತೆ ಅದೇ ಪರಿಸ್ಥಿತಿ. ರಕ್ತಸ್ರಾವ. ತುಂಬಾ ಸೂಕ್ಷ್ಮ ನನ್ನ ಭಾವಮೈದುನ. “ನಿಮಗೆ ಯಾರು ಬೇಕು?” ಆ ಬಂದವನನ್ನು ನನ್ನ ಭಾವಮೈದುನ ಕೇಳಿದ.
“ಸುಂದರಂ, ಹದಿನೇಳನೇ ಮಹಡಿ ಇಪ್ಪತ್ತೇಳನೇ ಫ್ಲಾಟ್” ಎಂದು ಸಂದೇಹ ನಿವಾರಣೆಗೆ ಜೇಬಿನಲ್ಲಿ ಬರೆದಿಟ್ಟುಕೊಂಡ ನಂಬರ್ ತೆಗೆದು ಸರಿಯಾಗಿಯೇ ಹೇಳಿದ್ದೇನೆ ಎಂಬಂತೆ ಸಣ್ಣಗೆ ತಲೆ ಅಲ್ಲಾಡಿಸಿದ ಆ ಮನುಷ್ಯ.
“ಯಾರಾ ಸುಂದರಂ?” ಎಂದು ನಾನು ಅಂದರೆ “ನಾನೇ” ಅಂದ. “ನನ್ನ ಮನೆಗೆ ನನಗೆ ದಾರಿ ಗೊತ್ತಾಗುತ್ತಿಲ್ಲ” ಅಂದ. ‘ಕುಡಿದು ಬಂದಿದ್ದೀಯಾ?’ ಎಂದು ಬಾಯಿಗೆ ಬಂತು. ಆದರೆ ಅಷ್ಟರಲ್ಲಿ ನನ್ನ ಭಾವಮೈದುನ “ಹೊಸತರಲ್ಲಿ ಮಾತ್ರವಲ್ಲ, ಈಗಲೂ ನನಗೂ ಗೊಂದಲವೇ” ಎಂದು ಅರ್ಥಮಾಡಿಕೊಳ್ಳಲು ಅವನಿಗೆ ಅಂದ. ಅವನಿಗೆ ಗೊತ್ತಿಲ್ಲ ನನ್ನನ್ನು ತಡೆದಿದ್ದಾನೆ ಎಂದು.
ನಾನೂ, ನನ್ನ ಭಾವಮೈದುನ ಇಬ್ಬರೂ ಮುಖಾಮುಖಿ ನೋಡಿಕೊಂಡೆವು. “ಹೊಸದಾಗಿ ಸೇರಿಕೊಂಡಿದ್ದೀರಾ?” ಎಂದು ಕೇಳಿದೆ. ಹೌದೆಂಬಂತೆ ತಲೆ ಅಲ್ಲಾಡಿಸಿದ ಆ ಮನುಷ್ಯ. ಹೇಗೆ ಹೋಗಬೇಕು ಎಂದು ಹೇಳಲು ಹೋಗುತ್ತಿದ್ದೆ. “ಒಂದು ಗಂಟೆಯಿಂದ ಇಲ್ಲಿಯೇ ತಿರುಗಾಡುತ್ತಿದ್ದೇನೆ” ದೀನವಾಗಿ ಅಂದ, ಹೇಳಿದರೂ ಹೋಗಲಾರೆ ಎಂಬಂತೆ.
“ತೋರಿಸಿಕೊಡು ಭಾವಾ” ಎಂದು ಹೇಳಿದ ನನ್ನ ಭಾವಮೈದುನನ ಮಾತುಗಳು ಬಾಯಲ್ಲಿಯೇ ಉಳಿದುಹೋದವು. ಬೆಲ್ಟ್ ಬಾಂಬ್‌ಗಳನ್ನು ಕಟ್ಟಿಕೊಂಡ ಉಗ್ರವಾದಿಯಂತೆ ಕಾಣಿಸಿದನೇನೋ, ನನ್ನ ಭಾವಮೈದುನ ಎರಡು ಕ್ಷಣ ನನ್ನನ್ನೇ ಕಣ್ಣು ಮಿಟುಕಿಸದೆ ನೋಡಿದ. ನನ್ನ ಚಿಂತೆ ಮತ್ತು ಸಿಟ್ಟು ನನ್ನ ಭಾವಮೈದುನನಿಗೆ ಏನು ಅರ್ಥವಾಗುತ್ತವೆ? ಸೆಕ್ಯುರಿಟಿಗೆ ಕರೆ ಮಾಡಿದೆ. “ಅವರು ಬಂದು ನಿನ್ನನ್ನು ನಿಮ್ಮ ಮನೆಗೆ ತಲುಪಿಸುತ್ತಾರೆ” ಎಂದು ಆ ಗೊಂದಲದಲ್ಲಿದ್ದವನಿಗೆ ಹೇಳಿ ಡೋರ್ ಕ್ಲೋಸ್ ಮಾಡಿದೆ.
“ಹೀಗೆ ಮುಖದ ಮೇಲೆ ಡೋರ್ ಹಾಕುವುದು ಮ್ಯಾನರ್ಸ್ ಅಲ್ಲ. ಇತ್ತೀಚೆಗೆ ನಿಮ್ಮ ಭಾವಗೆ ಎಲ್ಲದಕ್ಕೂ ಅಸಹನೆ ಹೆಚ್ಚಾಗಿಬಿಟ್ಟಿದೆ” ಅಂದಳು ನನ್ನ ಹೆಂಡತಿ.
“ನಿನಗೆ ಮಾತ್ರ ಕಡಿಮೆಯಾ?” ಅಂದೆ ನಾನೂ. “ನಿಮ್ಮಷ್ಟು ನಮಗೆಲ್ಲಿಂದ?” ಅಂದಳು ನನ್ನ ಹೆಂಡತಿ. ‘ಯಾರ ಮೇಲೆ ಕೋಪವೋ ನನ್ನ ಮೇಲೆ ತೋರಿಸುತ್ತಿದ್ದೀರಿ’ ಎಂದು ಗೊಣಗಿದಳು ನನ್ನ ಹೆಂಡತಿ. “ಆ ನಿನ್ನ ಮೇಲೆ ತೋರಿಸಿದರೆ ನೀನು ಸುಮ್ಮನಿರುತ್ತೀಯಾ?” ಅಂದೆ. ಅಷ್ಟಕ್ಕೇ ನಿಲ್ಲದೆ “ಪೈಲ್ಸ್ ನನಗೋ ನಿನಗೋ ಅರ್ಥವಾಗುತ್ತಿಲ್ಲ” ಅಂದೆ, ತಡೇಯಲಾರದೆ.
ಗಂಡ-ಹೆಂಡತಿ ಜಗಳದಲ್ಲಿ ತಲೆ ಹಾಕಬಾರದೆಂದು ಪ್ರಮಾಣ ಮಾಡಿದಂತೆ ಸುಮ್ಮನಿದ್ದ ನನ್ನ ಭಾವಮೈದುನ ಮಧ್ಯಪ್ರವೇಶಿಸಲಿಲ್ಲ, ಅಷ್ಟೇ ಅಲ್ಲದೆ ನಾವು ಕೂಗಾಡುತ್ತಿದ್ದರೂ ಅಲುಗಾಡಲಿಲ್ಲ. ಹೇಳಲಿಲ್ಲ ಎಂದು ನನ್ನ ಹೆಂಡತಿ ಸುಮ್ಮನಾಗಲಿಲ್ಲ.
“ಏನೋ, ನಿನಗೇನು ಕಿವಿ ಕೇಳಿಸುತ್ತಿಲ್ಲವಾ? ನಿಮ್ಮ ಭಾವನನ್ನು ನೋಡುತ್ತಿದ್ದೀಯಾ….” ಅಂದಳು ನನ್ನ ಹೆಂಡತಿ, ಅವಳ ತಮ್ಮನೊಂದಿಗೆ.
“ಅಲ್ಲಕ್ಕಾ… ಪಕ್ಕದ ಮಹಡಿಯವರು ಕರೆದಂತೆ ಇದೆ, ಮಾತಾಡಿ ಬಾ ಹೋಗು” ಡೈವರ್ಟ್ ಮಾಡಲು ನನ್ನ ಭಾವಮೈದುನ ಅಂದಿರಬಹುದು.
“ನೀನಾದರೂ ಹಾಗೆ ಹೊರಗೆ ಹೋಗಬಹುದಲ್ಲ ಭಾವಾ?” ಎಂದು ನನ್ನನ್ನೂ ಅಂದ.
“ಇಲ್ಲಿ ಅಕ್ಕಪಕ್ಕದವರು ಯಾರೂ ಯಾರೊಂದಿಗೂ ಮಾತನಾಡಿಕೊಳ್ಳುವುದಿಲ್ಲ” ಅಂದಳು ನನ್ನ ಹೆಂಡತಿ.
“ಏನು?” ಅಂದ ಭಾವಮೈದುನ. “ಹೈ ಫೈ” ಅಂದಳು.
“ಅಕ್ಕಪಕ್ಕದ ತಲೆನೋವು ಬೇಡಾಂತಲೇ ಅಲ್ಲ ಇಲ್ಲಿಗೆ ಬಂದಿದ್ದು” ಅಂದೆ ನಾನು. ಅಸಲಿಗೆ ಒಬ್ಬರ ಡಿಸ್ಟರ್ಬೆನ್ಸ್ ಇಲ್ಲದೆ ಇರುವುದು ಎಷ್ಟು ಕಾಸ್ಟ್ಲಿ ಎಂದು ಇವರಿಗೆ ಅರ್ಥವಾಗುತ್ತಿಲ್ಲ.
“ಭಾವಾ… ಮುಡ್ಡಿ ಸವೆದು ಹೋಗುವಂತೆ ಕುಳಿತುಕೊಳ್ಳದಿದ್ದರೆ, ನೀನು ಹಾಗೆ ಕ್ಲಬ್‌ಗೆ ಹೋಗಬಹುದಲ್ಲಾ?” ಅಂದ ನನ್ನ ಭಾವಮೈದುನ. “ಕುಡುಕನಾಗಿಬಿಡುತ್ತೇನೆ ಎಂದು ನಿಮ್ಮ ಅಕ್ಕ ಹೋಗಲು ಬಿಡುವುದಿಲ್ಲ” ಇದ್ದ ವಿಷಯವನ್ನೇ ಹೇಳಿದೆ.
“ಅಕ್ಕ ನೀನಾದರೂ ಆ ಸ್ವಿಮ್ಮಿಂಗ್‌ಗೋ ಯಾವುದಕ್ಕೋ ಹೋಗಬಹುದಲ್ಲ?” ನನ್ನ ಭಾವಮೈದುನ ಆ ಕಡೆಗೂ ಹೇಳಿದ. ತಕ್ಷಣ ನನ್ನ ಹೆಂಡತಿ ನನ್ನ ಮೇಲೆ ದಾಳಿ ಮಾಡಿದಳು. “ಹೋದರೆ ನನ್ನನ್ನು ಎಲ್ಲರೂ ನೋಡುತ್ತಾರೆ… ಅಲ್ವಾ?” ಎಂದು ಮತ್ತೆ “ನಿಮ್ಮ ಭಾವನ ಪ್ರಾಣಗಳು ವಿಲಿವಿಲಿ ಒದ್ದಾಡುವುದನ್ನು ನಾನು ನೋಡಲಾರೆ” ಎಂದು ಅವರ ತಮ್ಮನನ್ನು ಉದ್ದೇಶಿಸಿ ಹೇಳಿದರೂ ನನ್ನ ಹೆಂಡತಿ ನನ್ನನ್ನೇ ನೋಡಿ ಹೇಳಿರಬಹುದು. ನಾನು ತಲೆ ತಗ್ಗಿಸಿದ್ದರೂ ಆ ವಿಷಯವನ್ನು ಖಚಿತವಾಗಿ ಹೇಳಬಲ್ಲೆ.
ಏಕೋ ನನ್ನ ಭಾವಮೈದುನ ಏನೂ ಮಾತನಾಡಲಿಲ್ಲ. ನಿಶ್ಯಬ್ದ ಆವರಿಸಿತು.
“ಡ್ಯಾಡಿ… ನಮ್ಮ ಸ್ಕೂಲ್‌ನಿಂದ ಮೆಸೇಜ್ ಬಂದಿದೆಯಾ?” ಎಂದು ನನ್ನ ಮಗಳೂ ಮತ್ತು “ಸ್ಪೆಷಲ್ ಕ್ಲಾಸ್‌ಗಳು” ಎಂದು ಮಗನೂ ಹೇಳುತ್ತಿದ್ದಾಗ, ಮತ್ತೆ ಸಿಸ್ಟಮ್ ಮುಂದೆ ಕುಳಿತು ಸೆಲ್ಫೋನ್ ತೆಗೆದು ನೋಡಿದೆ.
‘ನಿಮ್ಮ ಮಕ್ಕಳಿಗೆ ಯಾರೊಂದಿಗೆ ಹೇಗೆ ವರ್ತಿಸಬೇಕು ಎಂದು ಗೊತ್ತಾಗುತ್ತಿಲ್ಲ… ಆಫ್ಟರ್ ಸ್ಕೂಲ್ ಸೈಕಾಲಜಿಸ್ಟ್ ಕ್ಲಾಸ್ ಇರುತ್ತದೆ, ವೀಕೆಂಡ್ ಎರಡು ದಿನಗಳು…’ ಎಂದು ಸ್ಕೂಲ್‌ನಿಂದ ಮೆಸೇಜ್ ಬಂದಿತ್ತು. ಅಭ್ಯಾಸದಂತೆ ಮೆಸೇಜನ್ನು ನನ್ನ ಹೆಂಡತಿಯ ಫೋನ್‌ಗೆ ಫಾರ್ವರ್ಡ್ ಮಾಡಿದೆ.
ಸಿಸ್ಟಮ್ ಕ್ಲೋಸ್ ಮಾಡಿ ಹಣೆಯ ಮತ್ತು ಕಣ್ಣುಗಳನ್ನು ಒತ್ತಿಕೊಳ್ಳುತ್ತಾ “ಭಾವಾ… ಲಾಂಗ್ ಟೂರ್ ಹೋಗಬೇಕು ಕಣೋ, ಬೋರ್ ಆಗಿದೆ” ಅಂದೆ.
“ಬೇರೆ ದಾರಿಯಿಲ್ಲವೇನೋ, ನಾವೇ ಹೋಗಬೇಕೇನೋ?!” ನನ್ನ ಭಾವಮೈದುನನ ಮಾತು ನನಗೆ ಅರ್ಥವಾಯಿತು. ನಕ್ಕೆ. ಸಮಾಧಾನದಿಂದಲೂ ಮತ್ತು ಅದಕ್ಕೂ ಹೆಚ್ಚಾಗಿ ವಿರಕ್ತಿಯಿಂದಲೂ ನೋಡಿದ ! ಒತ್ತಿಕೊಳ್ಳುತ್ತಾ
ತೆಲುಗು ಮೂಲ : ಬಮ್ಮಿಡಿ ಜಗದೀಶ್ವರರಾವು
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್