ನಾನು ರಾಮು. ತಂದೆ ತಾಯಿ ಮತ್ತು ನಾನೊಬ್ಬನೇ ಇರುವ ಸಣ್ಣ ಕುಟುಂಬ ನನ್ನದು. ಅಪ್ಪ ದಿನಕೂಲಿ, ಅಮ್ಮ ಗೃಹಿಣಿ. ಪ್ರತೀ ದಿನ ಸಂಜೆ ಮನೆಗೆ ಬರುವಾಗ ಕುಡಿದುಕೊಂಡು ಬರುವ ಅಭ್ಯಾಸ ಅಪ್ಪನಿಗೆ ಇತ್ತು. ಎಷ್ಟೇ ಕುಡಿದರೂ ನನಗಾಗಲಿ ಅಮ್ಮನಿಗಾಗಲಿ ಒಂದು ದಿನವೂ ತೊಂದರೆ ಕೊಟ್ಟವರಲ್ಲ. ನನ್ನ ಬೇಕುಗಳಿಗೆ ಬ್ರೇಕ್ ಹಾಕದೆ ಪ್ರೇಮದಿಂದ ಅಕ್ಕರೆ ತೋರುತ್ತಿದ್ದ ನನ್ನ ತಂದೆಯೇ ನನ್ನ ಮೊದಲ ಹೀರೋ.
ತಂದೆಯೇ ನಿಲ್ಲಿಸಿ ಕಟ್ಟಿಸಿದ ಹಂಚಿನ ಅರಮನೆ ನನ್ನದು. ಒಳಗೆ ಗೋಡೆಗೆ ಬಣ್ಣ ಹಾಕಿಸುವ ಬದಲು ಮಗುವಿನಿಂದ ಈತನಕದ ನನ್ನ ಎಲ್ಲ ಭಾವಚಿತ್ರಗಳನ್ನು ಗೋಡೆಯ ಮೇಲೆ ಅಂಟಿಸಿದ್ದರು ನನ್ನಪ್ಪ. ಪ್ರತಿ ಭಾವಚಿತ್ರಕ್ಕೂ ಒಂದೊಂದು ಕಥೆ ಇರುತ್ತಿತ್ತು. ಆ ಎಲ್ಲಾ ಕಥೆಗಳಲ್ಲೂ ನಾನೇ ಹೀರೋ. ಹಾಗಾಗಿ ನನಗೆ ಮನೆಯಲ್ಲಿ ಮೊಬೈಲ್ ಇಲ್ಲ, ಟಿವಿ ಇಲ್ಲ, ರೇಡಿಯೋ ಇಲ್ಲ ನಿಮ್ಮ ಬೇಸರ ಎಂಬುದು ನನ್ನನ್ನು ಕಾಡಿರಲಿಲ್ಲ.
ದಿನಾ ಸಂಜೆ ಮನೆಗೆ ಬರುವ ತಂದೆಯನ್ನು ಅಪರೂಪಕ್ಕೆ ಬರುವ ನೆಂಟರಂತೆ ಸ್ವಾಗತಿಸಲು ಮನೆಯ ಎದುರಿಗಿನ ಮುರಿದ ಮರದ ಗೇಟಿನ ಮೇಲೇರಿ ಕಾಯುತ್ತಿದ್ದೆ. ನನ್ನನ್ನು ಅವರ ಹೆಗಲ ಮೇಲೆ ಕೂರಿಸಿಕೊಂಡು ಮನೆಯೊಳಗೆ ಕರೆದುಕೊಂಡು ಹೋಗುವುದು ಒಂದು ವಾಡಿಕೆಯಾಗಿತ್ತು.
ನನ್ನ ತಂದೆಗೆ ರಜಾ ಇದ್ದಾಗ ಹಗಲಿಗೆ ಕುಡಿಯುವ ಅಭ್ಯಾಸವಿತ್ತು. ರಜೆ ದಿನಗಳಲ್ಲಿ ನನ್ನ ಆಪ್ತಮಿತ್ರ ಮುನ್ನ ನನ್ನನ್ನು ಭೇಟಿಯಾಗಲು ಮನೆಗೆ ಬರುತ್ತಿದ್ದ. ನನ್ನ ತಂದೆಯ ಕುಡಿತದ ಅಭ್ಯಾಸ ಇನ್ನೊಬ್ಬರಿಗೆ ತಿಳಿಯುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಮುನ್ನನನ್ನು ಯಾವಾಗಲೂ ಗೇಟಿನ ಹೊರಗಿನಿಂದ ಭೇಟಿಯಾಗಿ ಹಾಗೆ ಕಳುಹಿಸುತ್ತಿದ್ದೆ. ಕ್ರಮೇಣ ನನ್ನ ತಂದೆಯ ಕುಡಿತ ಹೆಚ್ಚಾಗುತ್ತಾ ಬಂತು. ಯಾವ ವಿಷಯ ನಾನು ಯಾರಿಗೂ ತಿಳಿಯಬಾರದು ಎಂದು ಬಯಸಿದ್ದೇನೋ ಅದೀಗ ಊರಿಗೆ ತಿಳಿದಿದೆ !
ನಾನು ಶಾಲೆಗೆ ಹೋದಾಗ ಶಿಕ್ಷಕರಾಗಲಿ ಮಕ್ಕಳಾಗಲಿ ನನ್ನನ್ನು ದಿಟ್ಟಿಸಿ ಕಂಡಾಗಲೆಲ್ಲ, ಈಗ ಇವರು ನನ್ನ ತಂದೆಯ ಬಗ್ಗೆ ಕೇಳುವರೇನೋ ಎಂಬ ಆತಂಕ ಕಾಡುತ್ತಿತ್ತು. ನಾನು ಅವರ ಗಮನವನ್ನು ಸೆಳೆಯುವ ಸಲುವಾಗಿ ಅವರ ಮಧ್ಯೆ ಹಾಸ್ಯಗಾರನಾಗಿ ನಟಿಸುತ್ತಿದ್ದೆ. ನನ್ನ ಮನೆಯ ಕುರಿತು ಪ್ರಶ್ನೆ ಮಾಡಿದವರ ಮಧ್ಯೆ ಇರಲು ಬಯಸುತ್ತಿದ್ದೆ. ಈ ಎಲ್ಲದರ ನಡುವೆ ತಂದೆಯ ಕುಡಿತ ಕದ್ದದ್ದು ಮಾತ್ರ ನನ್ನ ನೆಮ್ಮದಿಯ ನಿದ್ದೆ !
ಅಮ್ಮ ಈಗ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾಳೆ. ಅಪ್ಪ ಕುಡಿದಾಗ ಕೆಲಸಕ್ಕೆ ಹೋಗುವುದಿಲ್ಲ. ಅವರು ಈಗ ಕುಡಿಯದೇ ಇರುವ ದಿನಗಳು ಬಹಳ ಕಡಿಮೆ. ಈಗಲೂ ನನ್ನ ಅರಮನೆ ಹಾಗೆಯೇ ಇದೆ, ಗೋಡೆಯ ಮೇಲಿನ ನನ್ನ ಭಾವಚಿತ್ರಗಳಲ್ಲಿ ಸ್ವಲ್ಪವೂ ನಗು ಕಡಿಮೆಯಾಗಿಲ್ಲ. ದಿನ ಸಂಜೆ ಮುರಿದ ಮರದ ಗೇಟಿನ ಮೇಲೆ ಕುಳಿತಿರುತ್ತೇನೆ ತಂದೆ ಬರುತ್ತಾರೆಂಬ ಭ್ರಮೆಯಿಂದಲ್ಲ ತಾಯಿ ಇನ್ನೂ ಬರಲಿಲ್ಲ ಎಂಬ ಭಯದಿಂದ !
ನನ್ನ ತಂದೆ ಕುಡಿತದಿಂದ ಸೋತಿದ್ದಾರೆ. ಮನೆ ಜವಾಬ್ದಾರಿ ನಿಭಾಯಿಸಲು ಹೊರಗೂ ಒಳಗೂ ಕೆಲಸ ಮಾಡುವುದು ನನ್ನ ತಾಯಿಗೆ ದೊಡ್ಡ ಸವಾಲಾಗಿತ್ತು. ಈಗ ಕಸಗುಡಿಸುವುದು, ಪಾತ್ರೆ ತೊಳೆಯುವುದು ಹಾಗೂ ಮನೆ ಒರೆಸುವ ಜವಾಬ್ದಾರಿ ನಾನು ತೆಗೆದುಕೊಂಡೆ. ಪಕ್ಕದ ಮನೆಯವರು ಹೇಳಿದರು ಡೈರಿಗೆ ಹಾಲು ಕೊಟ್ಟು ಬಂದರೆ ತಿಂಗಳಿಗೆ 200 ರೂಪಾಯಿ ಕೊಡುತ್ತೇನೆ ಎಂದು. ಈ ರೂಪದಲ್ಲಾದರೂ ನಾನು ನನ್ನ ತಂದೆ ತಾಯಿಗೆ ಸಹಾಯವಾಗಬೇಕೆಂದು ಒಪ್ಪಿಕೊಂಡೆ.
ಒಂದು ದಿನ ಗುಜರಿ ವ್ಯಾಪಾರದವರು ನನ್ನ ಮನೆಗೆ ಬಂದಿದ್ದರು. ಅಮ್ಮ ಅವರಿಗೆ ಹಳೆಯ ಕಬ್ಬಿಣ, ಪೇಪರ್ ಇತ್ಯಾದಿಗಳನ್ನು ತಂದುಕೊಟ್ಟಳು. ಅವರು ಆಕೆಯ ಕೈಗೆ ಒಂದಿಷ್ಟು ಹಣ ಕೊಟ್ಟರು. ನಾನು ಆ ಗುಜರಿ ಅಜ್ಜನ ಬಳಿ ಕೇಳಿದೆ ಈ ತರಹದ ವಸ್ತುಗಳನ್ನು ನಾನು ಕೊಟ್ಟರು ದುಡ್ಡು ಕೊಡುತ್ತೀರಾ? ಓ ಖಂಡಿತ ಕೊಡುತ್ತೇನೆ ಎಂದರು. ಅಂದಿನಿಂದ ಶಾಲೆ ಬಿಟ್ಟ ತಕ್ಷಣ ಊರೂರು ತಿರುಗಿ ಹಳೆಯ ಪೇಪರ್, ಕಬ್ಬಿಣ, ಬಾಟಲಿ ಇತ್ಯಾದಿಗಳನ್ನು ಗೋಣಿಚೀಲದಲ್ಲಿ ಒಟ್ಟು ಮಾಡಿ ಮೂರ್ನಾಲ್ಕು ದಿನಗಳಿಗೊಮ್ಮೆ ಗುಜರಿ ಅಜ್ಜನಿಗೆ ಕೊಡುತ್ತಿದ್ದೆ. ನನಗೆ 200ರಿಂದ 300 ರೂಪಾಯಿಗಳು ಸಿಗುತ್ತಿದ್ದವು. ಹಣವನ್ನು ಪೂರ್ತಿಯಾಗಿ ಅಮ್ಮನಿಗೆ ತಂದು ಕೊಡುತ್ತಿದ್ದೆ. ನಾನು ಹೇಗೆ ಈ ಹಣವನ್ನು ದುಡಿದೆ ಎಂಬುದನ್ನು ಹೇಳಿದೆ. ಆಕೆಗೆ ತುಂಬಾ ಸಂತೋಷವಾಯಿತು. ದುಡಿಮೆ ಹೆಚ್ಚಿಸಿಕೊಳ್ಳುವ ಸಲುವಾಗಿ ಆಗಾಗ ಶಾಲೆಗೆ ರಜೆ ಮಾಡಿ ಈ ಕೆಲಸ ಮಾಡಲು ಶುರು ಮಾಡಿದೆ.
ಈ ಮಧ್ಯ ನನ್ನ ತಂದೆ ಸಂಪೂರ್ಣ ಕುಡಿತಕ್ಕೆ ದಾಸರಾಗಿ ಬಿಟ್ಟಿದ್ದರು. ಬೀದಿಯಲ್ಲಿ ಕುಡಿದು ಬೀಳುವುದು ಅಲ್ಲಿಂದ ಅವರನ್ನು ಮನೆಗೆ ಕರೆದುಕೊಂಡು ಬರುವುದು ನಮಗೆ ದಿನನಿತ್ಯದ ಸವಾಲಾಗಿತ್ತು. ನನ್ನ ತಂದೆಯ ಈ ಪರಿಸ್ಥಿತಿ ನನಗೆ ತುಂಬಾ ಮುಜುಗರ ಉಂಟು ಮಾಡಿ. ನಾನು ವಿದ್ಯಾವಂತನಾಗಿ ವೈದ್ಯನಾಗಬೇಕೆಂಬ ಆಸೆಯನ್ನು ಕೈ ಬಿಡುವಂತೆ ಮಾಡಿತು.
ನನಗೆ ಈಗ ವಯಸ್ಸು 26. ಇಷ್ಟು ವರ್ಷಗಳ ಕಾಲ ಎಲ್ಲ ಸಮಸ್ಯೆಗಳನ್ನು ದಿನನಿತ್ಯ ಎದುರಿಸುತ್ತಿದ್ದ ನನ್ನ ತಾಯಿಗೆ ಖಿನ್ನತೆಯಾಯಿತು. ದಿನವೊಂದಕ್ಕೆ 14ರಿಂದ 16 ತಾಸು ಬೇರೆಬೇರೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದ ನನಗೆ ಸುಮ್ಮನೆ ಕೂರಲಾಗುತ್ತಿರಲಿಲ್ಲ. ನನ್ನ ಬಳಿ ಹೇಳಿಕೊಳ್ಳುವಷ್ಟು ಸಂಪಾದನೆ ಇದೆ ಆದರೆ ಆ ಕೆಲಸಗಳಿಗೆ ಹೆಸರಿಲ್ಲ, ಭದ್ರತೆ ಇಲ್ಲ, ಸಾಮಾಜಿಕ ಬೆಲೆ ಇಲ್ಲ. ಇಂದಿಗೆ ನಾನು ಈ ಕೆಲಸಗಳನ್ನು ಮಾಡಲು ಆರಂಭಿಸಿ 14 ವರ್ಷಗಳಾದವು.
ನಾನು ಮದುವೆಯಾಗಬೇಕೆಂಬುದು ನನ್ನ ಅಮ್ಮನ ಆಸೆ. ನನಗೆ ಏನೆಂದು ಹೆಣ್ಣು ಕೊಟ್ಟಾರು. ಈಗ ನನಗೆ ಪ್ರೀತಿಸಿ ಮದುವೆಯಾಗುವ ಮನಸ್ಥಿತಿಯೇ ಇಲ್ಲ. ಒಂದು ವೇಳೆ ನಾನು ಮದುವೆಯಾದರೂ ಹೆಂಡತಿ ಬೇರೆಯವರಿಗೆ ನನ್ನನ್ನು ಏನೆಂದು ಪರಿಚಯಿಸುತ್ತಾಳೆ ? ಮುಂದೆ ಹುಟ್ಟುವ ಮಗು ‘ನಿನ್ನ ಕೆಲಸ ಏನಪ್ಪಾ’ ಎಂದು ಕೇಳಿದರೆ ನನ್ನ ಬಳಿ ಅದಕ್ಕೆ ಉತ್ತರವೇ ಇಲ್ಲ. ಹಾಸಿಗೆ ಹಿಡಿದ ಅಪ್ಪ, ಖಿನ್ನತೆಯಿಂದ ಬಳಲುತ್ತಿರುವ ಅಮ್ಮ, ಮಳೆಗಾಲದಲ್ಲಿ ಸೋರುವ ನನ್ನೀ ಅರಮನೆ, ಇದ್ದರೂ ಇಲ್ಲದಂತಿರುವ ಮುರಿದ ಮರದ ಗೇಟು ಎಲ್ಲವನ್ನು ರಿಪೇರಿ ಮಾಡಬೇಕಾದದ್ದು ನನ್ನ ಜವಾಬ್ದಾರಿ. ಇದನ್ನು ಬಿಟ್ಟು ನನ್ನ ಕಣ್ಣಿಗೆ ಬೇರೇನೂ ಕಾಣುತ್ತಿಲ್ಲ.
ಒಂದು ವೇಳೆ ನನ್ನ ತಂದೆ ಕುಡುಕನಾಗಿರದಿದ್ದರೆ. ನಾನು ಶಾಲೆ ಬಿಡುವ ಪ್ರಸಂಗ ಬರುತ್ತಿರಲಿಲ್ಲ. ನನಗೆ ಸಂಪಾದನೆ ಮಾಡಬೇಕಾದ ಅನಿವಾರ್ಯತೆ ಇರುತ್ತಿರಲಿಲ್ಲ. ಸಾಮಾಜಿಕ ಬದುಕು ನನಗೂ ಸಿಗುತ್ತಿತ್ತು. ಅಪ್ಪನ ಪ್ರೇಮ ಇನ್ನೂ ಬೇಕಿತ್ತು. ಮಗು ಅಮ್ಮ ಎಂದು ಹೇಳಲು ಕಲಿಯುವಾಗಲೇ ನಾಲಿಗೆ ಕಿತ್ತುಕೊಂಡಂತೆ ಅಪ್ಪನ ವ್ಯಸನ ನನ್ನ ಬದುಕನ್ನೇ ಕಿತ್ತುಕೊಂಡಿತು !
ರಾಮ ತಿಳಿಯಬೇಕಿದ್ದ ಸತ್ಯಗಳು
* ಕುಡಿತ ಒಂದು ಮನೋವೈದ್ಯಕೀಯ ಕಾಯಿಲೆ. ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದೇ ಹೊರತು ರಾಮು ಕುಟುಂಬದ ಜವಾಬ್ದಾರಿಯನ್ನು ಹೊರುವುದರಿಂದಲ್ಲ.
* ಇಂತಹ ಸಮಸ್ಯೆಯನ್ನು ಭಾವನಾತ್ಮಕವಾಗಿ ಭಾಷೆ ತೆಗೆದುಕೊಳ್ಳುವ ಮೂಲಕ ಅಥವಾ ನಿಮ್ಮ ಪ್ರೀತಿಯಿಂದ ಕಟ್ಟಿ ಹಾಕುವ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಸತ್ಯ ತಿಳಿದಿರಲಿ.
* ರಾಮು ತಾನು ದುಡಿಯುವುದರಿಂದ ಮನೆಗೆ ಎಷ್ಟು ಸಹಾಯವಾಗುತ್ತದೊ ಅದಕ್ಕಿಂತಲೂ ಹೆಚ್ಚು ಆತನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಮರೆತ.
* ತಂದೆಯ ವ್ಯಸನದಿಂದ ರಾಮು ಪ್ರೀತಿ ಕಾಳಜಿಯನ್ನು ಕಳೆದುಕೊಂಡದ್ದು ಸತ್ಯ. ಆದರೆ ತಾನು ತನ್ನನ್ನು ಪ್ರೀತಿಸಿಕೊಂಡು ತನ್ನ ಬಗ್ಗೆ ಕಾಳಜಿ ವಹಿಸುವುದರ ಮೂಲಕ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಆಯ್ಕೆ ಅವನಲ್ಲಿತ್ತು.
* ವ್ಯಸನ ತಂದೆಯದ್ದಾಗಿರಬಹುದು ಅಥವಾ ತಾಯಿಯದ್ದಾಗಿರಬಹುದು, ಇದರಿಂದ ರಾಮುವಿಗಷ್ಟೇ ಅಲ್ಲ ಯಾರಿಗಾದರೂ ತೊಂದರೆ ಉಂಟಾಗಬಹುದು. ಇಂತಹ ಸಂದರ್ಭವನ್ನು ಸ್ನೇಹಿತರಿರಬಹುದು ಅಥವಾ ಶಿಕ್ಷಕರಿರಬಹುದು ನಿಮ್ಮ ನಂಬಿಕೆಗೆ ಅರ್ಹರೆಂದಾದರೆ ಅಂತಹರೊಂದಿಗೆ ಹಂಚಿಕೊಳ್ಳುವ ಮೂಲಕ ಒತ್ತಡದಿಂದ ಹೊರಗೆ ಬರಬಹುದು.
* ಯಾವುದೇ ಮುಜುಗರವಿಲ್ಲದೆ ಮನೋವೈದ್ಯರು ಹಾಗು ಆಪ್ತ ಸಮಾಲೋಚಕರನ್ನು ಭೇಟಿಯಾಗಿ ನಿಮಗಿರುವ ಸಂದೇಹಗಳನ್ನು ಕೇಳಿ ಪರಿಹರಿಸಿಕ್ಕೊಳ್ಳಿ.
* ಸಾಧ್ಯವಾದರೆ ಒಮ್ಮೆ ಡಾ. ಪಿ.ವಿ. ಭಂಡಾರಿಯವರು ಬರೆದಿರುವ ಬಾಳುವಂತ “ಹೂವೇ ಬಾಡುವಾಸೆ ಏಕೆ” ಡಾ. ವಿರೂಪಾಕ್ಷ ದೇವರಮನೆಯವರ “ನೀನು ಒಂಟಿಯಲ್ಲ” ಪುಸ್ತಕಗಳನ್ನು ಓದಿ.
* ಸುಮಾರು 9 ವರ್ಷಗಳಿಂದ ನಿರಂತರವಾಗಿ ಮಧ್ಯವ್ಯಸನಿಗಳ ಮಕ್ಕಳಿಗೆ ವಿಶೇಷ ಕಾಳಜಿ ನೀಡುತ್ತಾ, ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅವರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣ ಗುಡ್ಡೆ, ಉಡುಪಿ ಇಲ್ಲಿಯ ಮನೋವೈದ್ಯರುಗಳಾದ ಡಾ. ಪಿ.ವಿ. ಭಂಡಾರಿ ಹಾಗೂ ಡಾ. ವಿರೂಪಾಕ್ಷ ದೇವರಮನೆ (Baliga Hospital Phone: 9242821215) ಇವರುಗಳನ್ನು ಸಂಪರ್ಕಿಸುವ ಮೂಲಕ ಪರಿಹಾರ ಪಡೆಯಬಹುದು.
* ಯಾರೊಂದಿಗೂ ಚರ್ಚಿಸಲು ಸಾಧ್ಯವಾಗುತ್ತಿಲ್ಲ, ಆತಂಕ ಹೆಚ್ಚಿ ಅಸಹಾಯಕರಾಗಿದ್ದೀರಿ ಎಂಬ ಚಿಂತೆಯನ್ನು ಬಿಟ್ಟು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ. (ಟೆಲಿ ಮನಸ್ 14416) ಪರಿಹಾರ ಪಡೆದುಕೊಳ್ಳಿ.
ಗಿರೀಶ್ ಎಂ. ಎನ್.
ಲೇಖಕರು, ಕೌನ್ಸೆಲಿಂಗ್ ಮನಸ್ಶ್ಯಾಸ್ತ್ರಜ್ಞರು.