ಮೂಲ್ಕಿ : ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಮೂಲ್ಕಿ ತಾಲೂಕಿನ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಕತೆ ರಚನೆ ಕಾರ್ಯಾಗಾರ’ವು ದಿನಾಂಕ 04-11-2023ರಂದು ನಡೆಯಿತು.
ಈ ಕಾರ್ಯಕ್ರಮ ನಡೆಸಿಕೊಟ್ಟ ಕಥೆಗಾರ ದೇವು ಹನೆಹಳ್ಳಿ ಇವರು ಮಾತನಾಡುತ್ತಾ “ಸಮಾಜ, ಪರಿಸರ, ವಸ್ತು, ಮನುಷ್ಯರು ಹೀಗೆ ಎಲ್ಲೆಡೆಗಳ ವೈಶಿಷ್ಟ್ಯಗಳನ್ನು ಗುರುತಿಸುವ ಸಂವೇದನಾಶೀಲ ಮನಸ್ಸು, ಬಳಸುವ ಭಾಷಾಶೈಲಿ, ಸತತ ಓದುವಿಕೆಯಿಂದ ಬೆಳೆದ ಮನಸ್ಥಿತಿಯಿಂದ ಮೂಡಿಬರುವ ಕಥೆಗಳು ಬರಹಗಾರನನ್ನೂ ಓದುಗನನ್ನೂ ತಟ್ಟುತ್ತವೆ, ಆಪ್ತವಾಗುತ್ತವೆ, ಯಶಸ್ವಿಯಾಗುತ್ತವೆ. ಪತ್ರಿಕೆಗಳು, ಆಕಾಶವಾಣಿ, ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಕತೆ, ಕವನಗಳಿಗೆ ಸಾಕಷ್ಟು ಅವಕಾಶಗಳಿದ್ದು, ಬರೆಯುವ ಪ್ರಯತ್ನಗಳಾಗಲಿ. ಕಾರಂತ, ಬಾಗಲೋಡಿ, ಮಾಸ್ತಿ, ಚದುರಂಗ, ಹೀಗೆ ನೂರಾರು ಕಥೆಗಳ ಓದುವಿಕೆ ಬರವಣಿಗೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗಲಿ” ಎಂದು ಹೇಳಿದರು.
ಪ್ರೇರಣಾ ನುಡಿಗಳನ್ನಾಡಿದ ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಚಾರ್ಯ ಡಾ. ವಾಸುದೇವ ಬೆಳ್ಳೆ ಮಾತನಾಡಿ, “ವಿದ್ಯಾರ್ಥಿಗಳನ್ನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯಾಗಾರ ಯಶಸ್ವಿಯಾಗಿದೆ” ಎಂದರು.
ಬರಹಗಾರ್ತಿ ಶಕುಂತಲಾ ಭಟ್ ಹಳೆಯಂಗಡಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, “ದುಃಖ ಮತ್ತು ಸಂತಸಗಳು ಭಿನ್ನಭಿನ್ನವಾಗಿವೆ. ಮೊದಲ ಬಹುಮಾನ ಬಂದಾಗ, ಪ್ರವಾಸ ಹೋದಾಗ, ಓಟದಲ್ಲಿ ಗೆದ್ದಾಗ ಹೀಗೆ ನಾನಾ ಸಂತಸಗಳನ್ನು ಕಂಡಂತೆ ಕಥೆಗಳ ರಚನೆಯೂ ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯಾಸಕ್ತಿ ಮೂಡಿ ಬದುಕಿನ ಖುಷಿಯನ್ನು ಹೆಚ್ಚಿಸಲಿ, ಶಾಲಾ ಸಂಚಿಕೆಗಳಲ್ಲಿಯೇ ಬರೆಯುವ ಪ್ರಯತ್ನಗಳಾಗಲಿ. ಒಂದು ಕಲ್ಲನ್ನು ಒಬ್ಬನಿಗೆ ಹೊಡೆಯಲೂ ಬಳಸಬಹುದು, ಮೂರ್ತಿಯಾಗಿಸಲೂಬಹುದು, ಚಪ್ಪಡಿಯಾಗಿಸಬಹುದು ಹೀಗೆ ನಾನಾ ಉಪಯೋಗಗಳನ್ನು ಮಾಡಬಹುದು. ನಮ್ಮ ದೃಷ್ಟಿ, ಚಿಂತನೆಯಂತೆ ಸಾಹಿತ್ಯದ ಬರೆವಣಿಗೆ. ನಮ್ಮ ಬದುಕಿನ ಘಟನೆಗಳೂ ಕತೆಗಳಾಗಬಹುದು” ಎಂದರು.
ಕಸಾಪ ತಾಲೂಕು ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಜೊಸ್ಸಿ ಪಿಂಟೋ, ಹೆರಿಕ್ ಪಾಯಸ್ ವೇದಿಕೆಯಲ್ಲಿದ್ದರು.
ಪ್ರೌಢಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ ಟಿ. ನಾಯಕ್ ಸ್ವಾಗತಿಸಿ, ಉಪನ್ಯಾಸಕಿ ಗಾಯತ್ರೀ ಎನ್.ಆರ್. ನಿರೂಪಿಸಿದರು. ವಿಜಯಾ ಕಾಲೇಜಿನ ಪ್ರಜ್ಞಾ ಅಭಿಪ್ರಾಯ ವ್ಯಕ್ತಪಡಿಸಿದರು. ಮೂಲ್ಕಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಾಗಾರದಲ್ಲಿ ತಾಲೂಕಿನ 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.